»   »  ಬಳ್ಳಾರಿ ನಾಗ: ವಿಷ್ಣು ದಿ ರಿಯಲ್ ಶೋ ಮ್ಯಾನ್!

ಬಳ್ಳಾರಿ ನಾಗ: ವಿಷ್ಣು ದಿ ರಿಯಲ್ ಶೋ ಮ್ಯಾನ್!

Posted By: *ದೇವಶೆಟ್ಟಿ / ಕಲಗಾರು
Subscribe to Filmibeat Kannada

ಕಲರ್ ಕಲರ್ ಜುಬ್ಬಾ, ಮಿರ ಮಿರ ಪೀತಾಂಬರ ಪಂಚೆ. ಈಗ ಕೆಂಪು, ಕಟ್ ಮಾಡಿದರೆ ಹಸಿರು, ಮತ್ತೈದು ನಿಮಿಷದಲ್ಲಿ ಕಪ್ಪು, ಮತ್ತೆ ಕೆಂಪು... ಹೀಗೆ ದೃಶ್ಯದಿಂದ ದೃಶ್ಯಕ್ಕೆ, ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗುವ ಬಟ್ಟೆ... ಆತನೇ ಬೇರೆ ಆತನ ಸ್ಟೈಲೇ ಬೇರೆ...ನಿಂತರೆ ನಾಗ, ಕುಂತರೆ ಕಾಳ, ಕೈ ಎತ್ತಿದರೆ ಭೈರವ, ಚೀರಿದರೆ ಚಿರತೆ, ಹುಬ್ಬೇರಿಸಿದರೆ ಹುಲಿ, ಧಾವಿಸಿ ಬಂದರೆ ದಾದಾ...ಒಟ್ಟಾರೆ ಬಳ್ಳಾರಿ ನಾಗ ಎಂದರೆ ವರ್ಧನ ವಿಷ್ಣುವರ್ಧನ, ಬಂದನಾ ಯಜಮಾನ!

ಇಲ್ಲಿ ವಿಷ್ಣು ಆಡುವ ಪ್ರತಿ ಪದವೂ ಅಭಿಮಾನಿಗಳಿಗೆ ಮುದನೀಡುವ ಮಲ್ಲಿಗೆ. ಆ ಬಳ್ಳಾರಿ ಭಾಷೆ, ಮಾತು ಮಾತಿಗೆ ಭೇಸ್ ಆತಲೇ ಎನ್ನುವ ಗತ್ತು, ಆಡುವ ಪ್ರತೀ ಮಾತೂ ಆಣಿಮುತ್ತು... ಒಟ್ಟಾರೆ ಇಲ್ಲಿ ವಿಷ್ಣು ದಿ ರಿಯಲ್ ಶೋ ಮ್ಯಾನ್! ಜಾಗೋರೇ...

ಕಲೆಗೆ ವಯಸ್ಸಿನ ಮಿತಿಯಿಲ್ಲ, ಅದು ಅವೆಲ್ಲಕ್ಕಿಂತ ಮಿಗಿಲಾದದ್ದು...ಈ ಮಾತನ್ನು ವಿಷ್ಣು ಇಲ್ಲಿ ಮತ್ತೆ ನಿಜ ಮಾಡಿದ್ದಾರೆ. ಯಾವ ಆಂಗಲ್‌ನಲ್ಲೂ ಸಿಂಹ ಸೋಲು ವುದಿಲ್ಲ. ಗೆಲ್ಲುವ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ಇಡೀ ಕತೆ ನಾಯಕನ ಸುತ್ತ ಗಿರಕಿ ಹೊಡೆಯುತ್ತದೆ. ಆರಂಭದಿಂದ ಅಂತ್ಯದವರೆಗೆ ನಾಗ ನಗಾರಿ ಬಾರಿಸುತ್ತಾನೆ. ಮಾತಿನ ಮೂಲಕ ಚಾಟಿ ಬೀಸುತ್ತಾನೆ. ಬಯಲು ಸೀಮೆಯಿಂದ ಬಂದು, ಕೇಡಿಗಳ ಷಡ್ಯಂತ್ರ ಬಯಲು ಮಾಡುತ್ತಾನೆ. ಬಳ್ಳಾರಿ ಭಾಷೆಯಲ್ಲಿ ಭಾಷಣ ಬಿಗಿಯುತ್ತಾನೆ. ಎದುರು ಮಾತನಾಡಿದರೆ ಎರಡು ಬಿಗಿಯುತ್ತಾನೆ, ಹೊಸ ವರಸೆ ತೆಗೆಯುತ್ತಾನೆ.

ಇದು ಮಲಯಾಳಂನ ರಾಜಮಾಣಿಕ್ಯಂ ಚಿತ್ರದ ಕನ್ನಡ ರೂಪ. ಅದನ್ನು ಬಳ್ಳಾರಿ ನಾಗನ ಭಾಷೆಗೆ ರೂಪಾಂತರ ಮಾಡಿದ್ದಾರೆ ಸಂಭಾಷಣೆಕಾರ ಕೇಶವಾ ದಿತ್ಯ. ವಿಷ್ಣು ಬಳಸುವ ಪ್ರತಿ ಪದವೂ ಬಲು ಸೊಗಸು. ಆ ಕ್ರೆಡಿಟ್ ಕೇಶವಾದಿತ್ಯ ಬತ್ತಳಿಕೆಗೆ ಸಲ್ಲಬೇಕು... ಕತೆ ಹಾಗೂ ಚಿತ್ರಕತೆಯಲ್ಲಿ ಮಾದಕತೆ ಇಲ್ಲವಾದರೂ ನ್ಯೂನತೆ ಇಲ್ಲ. ನಿರ್ದೇಶಕ ದಿನೇಶ್ ಬಾಬು ಆ ಮಟ್ಟಿಗೆ ಗೆದ್ದಿದ್ದಾರೆ. ಅತೀ ಸಾಮಾನ್ಯ ಕತೆಯಾದರೂ ಅದನ್ನು ಅತಿರೇಕ ಎನಿಸದಂತೆ ನಿಭಾಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಕೈಚಳಕ ಇಷ್ಟವಾಗುತ್ತದೆ.

ರೀರೆಕಾರ್ಡಿಂಗ್ ಇಡೀ ಕತೆಯ ಜೀವಾಳ. ಪಕ್ಕಾ ಮಾಸ್ ಚಿತ್ರಕ್ಕೆ ಶಾಸ್ತ್ರಿ'ಯ ಸಂಗೀತ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಶೀರ್ಷಿಕೆ ಗೀತೆ- ಜಾಗೋರೆ ಜಾಗೋ... ಹಾಡಿನಲ್ಲಿ ಜೋಶ್ ಇದೆ. ಛಾಯಾಗ್ರಹಣದಲ್ಲಿ ಇನ್ನಷ್ಟು ತಾಕತ್ತು ಬೇಕಿತ್ತು.ಅದ್ದೂರಿತನತನಕ್ಕೆ ಕೆ. ಮಂಜು ಮೋಸ ಮಾಡಿಲ್ಲ. ಹೊಡೆದಾಟದ ದೃಶ್ಯಗಳಲ್ಲಿ ಶ್ರೀಮಂತಿಕೆ ಎದ್ದುಕಾಣುತ್ತದೆ. ಕತೆಗೆ ತಕ್ಕ ಪಾತ್ರವರ್ಗ ಆಯ್ಕೆ ಮಾಡುವಲ್ಲಿ ಬಾಬು ಗೆದ್ದಿದ್ದಾರೆ... ಪಾತ್ರವನ್ನೇ ಅರೆದು ಕುಡಿಯುವ ಅವಿನಾಶ್, ವಿಲನ್ ಪಾತ್ರಕ್ಕೆ ಇನ್ನಷ್ಟು ಖದರ್ ನೀಡುವ ಶೋಭರಾಜ್, ವಯಸ್ಸಿಗೆ ಮೀರಿದ ಪಾತ್ರಕ್ಕೂ ಜೀವ ತುಂಬುವ ಚಿತ್ರಾ ಶೆಣೈ,ಹಾಸ್ಯಕ್ಕೆ ಹೊಸ ಲೇಪನ ನೀಡುವ ನಾಗಶೇಖರ್ ಮೊದಲಾದವರು ಕತೆಯ ಓಘಕ್ಕೆ ಹೊಂದಿಕೊಳ್ಳುತ್ತಾರೆ.

ನಟ ರಾಜೇಶ್ ನಿಜವಾಗಿಯೂ ಪ್ರತಿಭಾವಂತ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಕನ್ನಡದಲ್ಲಿ ಖಳನಟರಿಲ್ಲ ಎಂಬ ಅಲಿಖಿತ ಸಿದ್ದಾಂತಕ್ಕೆ ಸಡ್ಡು ಹೊಡೆದು ಅಭಿನಯಿಸಿದ್ದಾರೆ. ಇಲ್ಲಿಯವರೆಗಿನ ವಿಷ್ಣು ಸಿನಿಮಾಗೆ ಹೋಲಿಸಿದರೆ ಇಲ್ಲಿರುವ ಹೊಸ ಅಂಶಗಳು ಎಂದರೆ: ವಿಷ್ಣು ಇಲ್ಲಿ ನಾಯಕಿಯ ಜತೆ ಥೈಯಾರೆ ಥೈಯ್ಯಾ ಎನ್ನುವುದಿಲ್ಲ. ಕಣ್ಣಲ್ಲೇ ಜಗತ್ತನ್ನು ಕೊಲ್ಲುವ ಶಕ್ತಿಯಿದ್ದರೂ ಕನ್ನಡಕ ತೆಗೆಯುವುದಿಲ್ಲ,ಹೀಗಿದ್ದೂ ಗೆಲ್ಲುತ್ತಾರೆ, ಕೊಲ್ಲುತ್ತಾರೆ. ಎಲ್ಲೆಲ್ಲೂ ಗುಲ್ಲುಎಬ್ಬಿಸುತ್ತಾರೆ! ವಿಷ್ಣು ಅಭಿಮಾನಿಗಳಿಗೆ ಬಳ್ಳಾರಿ ನಾಗ ದಸರಾ, ದೀಪಾವಳಿ ಹಬ್ಬದಂತೆ ಬಂದಿದ್ದಾನೆ. ನೋಡಿ, ಎಂಜಾಯ್ ಮಾಡಲು ನೀವು ತಯಾರಿರಬೇಕು ಅಷ್ಟೇ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada