»   » ನಗೆಹಬ್ಬದ ದಿಬ್ಬಣವೇರಿ...

ನಗೆಹಬ್ಬದ ದಿಬ್ಬಣವೇರಿ...

Posted By:
Subscribe to Filmibeat Kannada

ದೇವಶೆಟ್ಟಿ ಮಹೇಶ್‌

ಚಿತ್ರದಲ್ಲಿ ಸುರಸುರ ಬತ್ತಿ, ಅಟಂ ಬಾಂಬ್‌, ಭೂಚಕ್ರ...ವೆರೈಟಿ ವೆರೈಟಿ ನಗೆ ಪಟಾಕಿಗಳಿವೆ. ಒಂದು ಆರುವಷ್ಟರಲ್ಲಿ ಮತ್ತೊಂದು ಕಿಡಿ ಹಾರಿಸುತ್ತದೆ. ಬಾಯಿ ಮುಚ್ಚಲು ಪುರುಸೊತ್ತಿಲ್ಲ, ಹೊಟ್ಟೆ ಹುಣ್ಣಾದರೆ ನಿರ್ಮಾಪಕ ಜವಾಬ್ದಾರನಲ್ಲ.

ಕನ್ನಡಕ್ಕೊಂದು ಡೀಸೆಂಟ್‌ ಕಾಮಿಡಿ ಚಿತ್ರದ ಟ್ರೆಂಡ್‌ ಇದರಿಂದ ಶುರುವಾದರೆ ಆ ಕ್ರೆಡಿಟ್‌ ನಿರ್ದೇಶಕ ರಮೇಶ್‌ಗೆ ಸಲ್ಲಬೇಕು. ಇವರು ನಿರ್ದೇಶಿಸಿದ ಮೊದಲ ಚಿತ್ರವಿದು. ಹಾಗಂತ ಅವರೇ ಹೇಳಬೇಕು. ಯಾಕೆಂದರೆ ಆ ಮೊದಲನ್ನು ಅವರು ದಾಟಿ ಬಂದವರಂತೆ ಕ್ಯಾಮೆರಾ ಹಿಡಿದಿದ್ದಾರೆ. ಯಾವ ದೃಶ್ಯವನ್ನೂ ಡಲ್‌ ಆಗಲು ಬಿಟ್ಟಿಲ್ಲ.

ನಗಿಸುವುದೊಂದೆ ಅವರ ಉದ್ದೇಶವಲ್ಲ, ಅದರ ಜತೆ ಚೆಂದದ ಕತೆ, ಅದಕ್ಕಿಷ್ಟು ಸೆಂಟಿಮೆಂಟಿನ ಪೆಪ್ಪರ್‌ಮಸಾಲಾ, ಪಕ್ಕದ ಮನೆ ಸೇಬಿಗೆ ಬಾಯಿ ಬಿಡುವ ಪುರುಷ ಪುಂಗವರಿಗಿಷ್ಟು ಪಾಠ, ಹುಡುಗನ ಬಾಲ್ಡ್‌ ತಲೆ ನೋಡದೆ ಆತನ ಕಾರು ನೋಡುವ ಹುಡುಗಿಯರಿಗೆ ಪ್ರವಚನ....ಕೊನೆಗೆ ಹಳೆಯ ಹೆಂಡತಿ ಪಾದವೇ ಗತಿ ಎಂಬ ಗಾಂಧಿನಗರದ ಕಾನೂನಿಗೇ ಷರಾ.

ಕತೆಯಲ್ಲಿ ಅಂಥ ಹೊಸತನವಿಲ್ಲ. ಹಳ್ಳಿ ಹುಡುಗಿ, ಮೈ ತುಂಬಾ ಕುಂಬಳಕಾಯಿ ಹೊತ್ತ ಪತ್ನಿಯಿದ್ದರೆ ಬಳ್ಳಿಯಂಥ ಹುಡುಗಿ ಸಿಕ್ಕರೆ ಬಿಟ್ಟಾನು ? ಈ ನಾಯಕನೂ ಹಂಗೇಯಾ. 'ಹಗ್ಗ ಕಡಿಯಲು ಶುರು ಮಾಡುತ್ತಾನೆ. ಹೆಂಡತಿಗೆ ಮೋಸ ಮಾಡುತ್ತಾ ಮಾಡುತ್ತಾ ಹೇಗೊ ಗಾಡಿ ತಳ್ಳುತ್ತಾನೆ. ಕೊನೆಗೆ ಸಿಕ್ಕಿಬೀಳುತ್ತಾನೆ. ಮನೆ ರಣರಂಗ. ಮನಸು ಮೆಜೆಸ್ಟಿಕ್‌. ತವ್ವಿ ಸಾರನ್ನು ಪಕ್ಕಕ್ಕೆ ಸರಿಸಿ ಬಟರ್‌ಚಿಕನ್ನೇ ಬಾಯಿಗಿಡುತ್ತಾನೆ. ಹೆಂಡತಿಯನ್ನು ಬಿಟ್ಟು ಅವಳ ಮನೆಯಲ್ಲಿ ಸೆಟಲ್‌ ಆಗುತ್ತಾನೆ. ಗಂಡನನ್ನು ಹೆಂಡತಿ ಹೇಗೆ ಮತ್ತೆ ಸರಿದಾರಿಗೆ ತರುತ್ತಾಳೆ ಅನ್ನುವುದನ್ನು ತೆರೆ ಮೇಲೆ ನೋಡಿ.

ಯಶವಂತ್‌ ಸರದೇಶ ಪಾಂಡೆ ಬರೆದ ಧಾರವಾಡ ಕನ್ನಡ ಮತ್ತು ರಾಜೆಂದ್ರ ಕಾರಂತ ಹೊಸೆದ ಮಾತುಗಳು ಇಡೀ ಚಿತ್ರಕ್ಕೆ ನಗೆ ಚೌಕಟ್ಟು ಹಾಕುವಲ್ಲಿ ಯಶಸ್ವಿಯಾಗಿವೆ. ಹೊಸ ಹೊಸ ರೂಪಕಗಳು ಕಾರಂತ ಲೇಖನಿಯಿಂದ ಹರಿದು ಬಂದಿವೆ. ' ದೀಪಾವಳಿಗೆ ಬರ್ತಾರೆ ಅನ್ನೋದಕ್ಕೆ ಆತ ಹಸಬಂಡಾ ಇಲ್ಲಾ ಬೋನಸ್ಸಾ..." ಅನ್ನೋದು ಪುಟ್ಟ ಸ್ಯಾಂಪಲ್‌.

ಕಮಲಹಾಸನ್‌ ನೀರು ಕುಡಿದಂತೆ ಧಾರವಾಡ ಕನ್ನಡ ಮಾತಾಡಿದ್ದಾರೆ. ಅಷ್ಟೇ ಸಲೀಸಾಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಇದು ರಮೇಶ್‌ಗೂ ಅನ್ವಯಿಸುತ್ತದೆ. ಊರ್ವಶಿ ಆಕಾರದಲ್ಲಿ ಬದಲಾದರೂ ಇನ್ನೂ ಯಾಕೆ ಚಾಲ್ತಿಯಲ್ಲಿದ್ದಾರೆ ಅನ್ನೋದು ಅವರ ಅಭಿನಯದಿಂದ ಗೊತ್ತಾಗುತ್ತದೆ. ನಗು ಮತ್ತು ಅಳು ಎರಡನ್ನೂ ಮಜಬೂತಾಗಿ ನೀಡಿದ್ದಾರೆ.

ಶ್ರುತಿ, ಡೈಸಿ ಬೋಪಣ್ಣ ಪಕ್ಕದ ಮನೆಯವರಂತೆ ಆಪ್ತರಾಗುತ್ತಾರೆ. ಅನಿರುದ್ಧ ಇಷ್ಟವಾಗುತ್ತಾನೆ. 'ಜೋಪಾನ ರಾತ್ರಿಯಾಯ್ತು.. ಹಾಡಿನಲ್ಲಿ ಗುರುಕಿರಣ್‌ ಮಿಂಚಿದ್ದಾರೆ. ಆದರೆ ಕೊನೆಯ ಹತ್ತು ನಿಮಿಷ ಕಮಲ್‌ ಮತ್ತು ಶ್ರುತಿಯ ಸರ್ಕಸ್‌ ಅಗತ್ಯವಿರಲಿಲ್ಲ. ಅದೊಂದು ಬೆದರು ಗೊಂಬೆ ಬಿಟ್ಟರೆ ರಮೇಶ್‌ ನಿಮ್ಮನ್ನು ಎರಡೂವರೆ ಗಂಟೆ ನಗೆ ಹಬ್ಬದಲ್ಲಿ ಮೈ ಮರೆಸುತ್ತಾರೆ. ಕೊಟ್ಟ ಕಾಸಿಗೆ ಬೋನಸ್‌.

(ಸ್ನೇಹ ಸೇತು : ವಿಜಯ ಕರ್ನಾಟಕ )

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada