»   » ಘಮ್ಮೆನ್ನುತ್ತಿರುವ ಚಿಕ್ಕಮಗಳೂರ ಚಿಕ್ಕಮಲ್ಲಿಗೆ

ಘಮ್ಮೆನ್ನುತ್ತಿರುವ ಚಿಕ್ಕಮಗಳೂರ ಚಿಕ್ಕಮಲ್ಲಿಗೆ

By: ವಿಮರ್ಶೆ : ವಿನಾಯಕರಾಮ್ ಕಲಗಾರು
Subscribe to Filmibeat Kannada

ಇಡೀ ಸಿನಿಮಾ ತುಂಬ ಹಚ್ಚ ಹಸಿರು. ನೋಡುಗರಿಗೆ ಏನೋ ಒಂದು ಹೊಸ ಅನುಭವ. ಮಲೆನಾಡಿನ ಮಧ್ಯದಲ್ಲೇ ಓಡಾಡುತ್ತಿದ್ದೇವೆ ಎಂಬ ಖುಷಿ. ಎಲ್ಲೆಲ್ಲೂ ನಿತ್ಯ ಹರಿಧ್ವರ್ಣ. ಔಟ್‌ಡೋರ್‌ನಲ್ಲಿ ಚಿತ್ರೀಕರಿಸಲಾದ ಪ್ರತಿ ದೃಶ್ಯಗಳೂ ಕಣ್ಣಿಗೆ ಮುತ್ತಿಡುತ್ತವೆ. ಮನಸಿಗೆ ಮುದ ನೀಡುತ್ತವೆ. ಇತ್ತೀಚೆಗೆ ಇಂಥದ್ದೊಂದು ಸಿನಿಮಾ ಬಂದಿದ್ದು ಬಹಳ ವಿರಳ. ಕಿವಿ-ಕಣ್ಣಿಗೆ ರಾಚುವ ಕರ್ಕಶ ದೃಶ್ಯಗಳಿಲ್ಲ. ಸುಮ್ಮನೆ ನೋಡಬೇಕು, ನೋಡಿ ಎದ್ದುಬರಬೇಕು. ಮತ್ತೆ ಮತ್ತೆ ಜೆ.ಜಿ ಕೃಷ್ಣ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದ ವಸುಂಧರೆಯ ಒಡಲಾಳವನ್ನು ಮೆಲುಕು ಹಾಕಬೇಕು. ಈ ಕಿವಿಯಲ್ಲಿ ಕೇಳಿದ ಕೆ.ಕಲ್ಯಾಣ್‌ರ ಸಾಹಿತ್ಯ-ಸಂಗೀತದ ಸವಿ ಆ ಕಿವಿಯಿಂದ ನುಣುಚಿ ಹೋಗದಂತೆ ನಿಗಾವಹಿಸಬೇಕು!

ಇದು ವಿಕ್ರಮಸಿಂಹ ಎಂಬ ಅಸಹಾಯಕ ಮಾಜಿ ಮಹಾರಾಜನ ಕತೆ. ಸ್ಪೂರ್ತಿ ರವೀಂದ್ರನಾಥ ಠಾಕೂರರ ಕವಿತೆ. ತುಪ್ಪದಲ್ಲಿ ಕೈತೊಳೆದ ಆತ, ಎಲ್ಲವನ್ನೂ ಕಳೆದುಕೊಂಡು ತೆಪ್ಪಗೆ ಮೂಲೆ ಸೇರುತ್ತಾನೆ. ಆದರೆ ರಾಯರಗತ್ತು, ಠೀವಿ, ಗಜಗಾಂಭೀರ್ಯ ಮಾತ್ರ ಅವನ ಹೆಗಲಿಂದ ಇಳಿದಿರುವುದಿಲ್ಲ. ಈ ಮಧ್ಯೆ ಕೋಟ್ಯಂತರ ಬೆಲೆಬಾಳುವ ವಜ್ರದ ವ್ಯಾಜ್ಯ ಕೋರ್ಟ್ ಕಟಕಟೆ ಏರಿರುತ್ತದೆ. ಆಸ್ತಿ ಆಸೆಗೆ ಸ್ವಂತ ಮಗಳ ಗಂಡ, ಸತ್ಯೇಂದ್ರ ವರ್ಮ ಅನಾಚಾರಕ್ಕಿಳಿದು ಯುವರಾಜ- ರಾಣಿಯನ್ನೇ ಕೊಂದಿರುತ್ತಾನೆ. ಈ ನಡುವೆ ರಾಜನ ಋಣ ತೀರಿಸಲು ರಿಯಲ್ ಎಸ್ಟೇಟ್ ಮಾಲೀಕನೊಬ್ಬ ಅವರಿಗೆ ಆಶ್ರಯ ನೀಡಿರುತ್ತಾನೆ. ಆತನಿಗೊಬ್ಬ ಮಗ-ಸೂರ್ಯ. ರಾಜನಿಗೊಬ್ಬ ಮೊಮ್ಮ ಗಳು-ವಸುಂಧರಾ. ಇಬ್ಬರ ನಡುವೆ ಪ್ರೇಮಾಂಕುರ. ಒಂದಿಷ್ಟು ಸಲ್ಲಾಪ, ಸಂಗೀತದ ಆಲಾಪ. ಇನ್ನೇನು ಇಬ್ಬರೂ ಮದುವೆ ಆಗಬೇಕು. ಕೋರ್ಟ್ ತೀರ್ಪು ರಾಜನ ಪರವಾಗುತ್ತದೆ. ವಜ್ರ ಎಸ್ಟೇಟ್ ಸೇರುತ್ತದೆ. ಸೂರ್ಯ-ವಸುಂಧರಾಳ ನಡುವೆ ಸತ್ಯೇಂದ್ರ ವರ್ಮ ಎಂಬ ಗ್ರಹ ವಕ್ಕರಿಸಿಕೊಳ್ಳುತ್ತದೆ. ಕತೆ ಮತ್ತೊಂದು ದಿಕ್ಕಿಗೆ ಹೊರಳಿಕೊಳ್ಳುತ್ತದೆ...

ನಿರ್ದೇಶಕ ಚೆನ್ನಗಂಗಪ್ಪ ಈ ಹಿಂದೆ ಮಾಡಿದ ತಪ್ಪುಗಳನ್ನು ಚಿಕ್ಕಮಗಳೂರ ಚಿಕ್ಕಮಲ್ಲಿಗೆಯಲ್ಲಿ ತಿದ್ದಿಕೊಂಡಿದ್ದಾರೆ. ಒಂದು ಸಿನಿಮಾದಲ್ಲಿ ಒಬ್ಬ ಜನಪ್ರಿಯ ನಟ ಇದ್ದರೆ ಅವನ ಹಳೇ ಹ್ಯಾಂಗೋವರ್ ಕಾಡದೆ ಇರಲಾರದು. ಅದಕ್ಕಾಗಿ ನಾಯಕ- ನಾಯಕಿಯ ಆಯ್ಕೆಯಲ್ಲಿ ತುಂಬಾ ನಿಗಾವಹಿಸಿದ್ದಾರೆ. ಇಲ್ಲಿ ಇಬ್ಬರೂ ಹೊಸಬರು. ವಸುಂಧರೆ-ರಾಧಿಕಾ ಗಾಂಧಿ. ಬೆಣ್ಣೆ ಮುದ್ದೆ ಯಂತಿರುವ ಮೈಕಟ್ಟು. ಎಲ್ಲೆಲ್ಲೂ ಕ್ಲೋಸಪ್ ಹೂ ನಗು. ಕುಣಿತದಲ್ಲೂ ಮುಂದು. ಅಭಿನಯದಲ್ಲಿ ಮಾತ್ರ ತುಸು ಹಿಂದೆ ಅನ್ನುವುದನ್ನು ಬಿಟ್ಟರೆ ಉಳಿದೆಲ್ಲ ಕಡೆ ಥೇಟ್ ಚಿಕ್ಕಮಗಳೂರ ಚಿಕ್ಕಮಲ್ಲಿಗೆ. ಆದರೆ ಆಕೆಗೆ ಹೋಲಿಸಿದರೆ ನಾಯಕ ಶ್ರವಂತ್ ತುಂಬಾ ವೀಕ್. ನಗು-ಅಳು ಇವೆರಡರ ವ್ಯತ್ಯಾಸವೊಂದನ್ನು ಬಿಟ್ಟು ಉಳಿದಿದ್ದೆಲ್ಲಾ ಓಕೆ. ಅದರೆ ಫೈಟಿಂಗ್ ಮಾಡುವಾಗ ಇಷ್ಟವಾಗುತ್ತಾನೆ. ರಂಗಭೂಮಿ ನಟ ಸಿ.ಆರ್. ಸಿಂಹರ ವಿಕ್ರಮ ಸಿಂಹ' ಗರ್ಜನೆ, ರಾಜ ಪರಾಕ್ರಮ, ಗಾಂಭೀರ್ಯ ಮೆಚ್ಚುವಂತದ್ದು. ಅವರು ಅಸಹಾಯಕ ನಂತೆ ಒದ್ದಾಡುವಾಗ ಎದೆ ಭಾರವಾಗುತ್ತದೆ. ಇನ್ನೊಬ್ಬ ನಾಯಕ ಜಗದೀಶ್ ಕಲಿಯುವುದು ಸಾಕಷ್ಟಿದೆ. ಅವಿನಾಶ್ ಖದರ್ ಹಾಗೇ ಇದೆ. ವಿಜಯಸಾರಥಿ ನಗು-ಅಳು ಎರಡನ್ನೂ ಒಟ್ಟೊಟ್ಟಿಗೇ ತರಿಸುತ್ತಾರೆ. ಕೃಷ್ಣೇಗೌಡರು ಕೊನೆಯಲ್ಲಿ ಬಂದರೂ ಮನಸ್ಸಿನಲ್ಲಿ ಉಳಿಯುತ್ತಾರೆ.

ಜೆ.ಜಿ.ಕೃಷ್ಣ ಕ್ಯಾಮರಾ ಬಳಕೆಯ ಹಲವು ಹೊಸ ಸಾಧ್ಯತೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಕಲ್ಯಾಣ್ ಸಂಗೀತ ಹೊಸ ಗಾಯಕರನ್ನು ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಕೆಲವು ದೋಷಗಳನ್ನು ಬದಿಗಿಟ್ಟು, ಮೂರು ತಾಸು ಮನಸ್ಸು ಕೊಟ್ಟು ನೋಡಿದರೆ ಮೋಸ ಇಲ್ಲ. ಇತ್ತೀಚಿನ ಸಿನಿಮಾಗಳಂತೆ ಅದೇ ರಾಗ, ಅದೇ ತಾಳ, ಅದೇ ಹಿಮ್ಮೇಳ'ದ ಕ್ಯಾಟಗರಿಗೆ ಈ ಮಲ್ಲಿಗೆಯನ್ನು ಖಂಡಿತ ಸೇರಿಸಲಾಗುವುದಿಲ್ಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada