»   »  ಚಿತ್ರವಿಮರ್ಶೆ : ಕಳೆಗುಂದಿದ ಬಳೆಗಾರ!

ಚಿತ್ರವಿಮರ್ಶೆ : ಕಳೆಗುಂದಿದ ಬಳೆಗಾರ!

Subscribe to Filmibeat Kannada

ಸಾಯಿ ಪ್ರಕಾಶ್ ಸೆಂಟಿಮೆಂಟ್ ಚಿತ್ರಗಳು... ಒಂದು ಕಡೆ ತವರು ಮನೆ.ಇನ್ನೊಂದು ಕಡೆ ಗಂಡನ ಮನೆ. ಊರ ಗೌಡರು. ಅವರ ನೆಂಟರು, ಬಂಟರು, ಇಷ್ಟರು, ಶಿಷ್ಟರು, ಶೆಟ್ಟರು, ಭಟ್ಟರು, ಗೌಡರು, ಪಟೇಲರು...ಅಲ್ಲೊಬ್ಬ ಹುಡುಗ, ಅವನಿಗೊಂದಿಷ್ಟು ಬಿಲ್ಡಪ್, ಅವನಿಗೊಬ್ಬ ತಂಗಿ. ಅವಳನ್ನು ಕಂಡರೆ ಇವನಿಗೆ ಪಂಚಪ್ರಾಣ. ಜತೆಗೊಬ್ಬ ಪ್ರೇಯಸಿ, ಒಂದಾ ಆಕೆಯನ್ನು ಈತ ಪ್ರೀತಿಸುತ್ತಾನೆ, ಎರಡಾ ಈಕೆ ಆತನನ್ನು ಪ್ರೇಮಿಸುತ್ತಾಳೆ. ಇನ್ನೇನು ಮದುವೆಯಾಗಿ, ಶಿವಪೂಜೆ ಮಾಡಬೇಕು; ಅದೇ ಹೊತ್ತಿಗೆ ಗಂಡಾಂತರ, ರೂಪಾಂತರ, ಅವಾಂತರ, ಜಂತರ ಮಂತರ... ಈ ಮಧ್ಯೆ ಇನ್ನೊಂದಿಷ್ಟು ಹಳ್ಳಿ ಸೊಗಡು, ಸಂಪ್ರದಾಯ ಸಾರುವ ದೃಶ್ಯ, ಹಾಡು, ಮತ್ತೆ ಸೆಂಟಿಮೆಂಟ್, ಪೆಪ್ಪರ್‌ಮೆಂಟ್, ಆಯಿಂಟ್‌ಮೆಂಟ್...

*ವಿನಾಯಕರಾಮ್ ಕಲಗಾರು

ಇದೇ ಸಾಲಿಗೆ ಈಗ ಹೊಸ ಸೇರ್ಪಡೆ ಭಾಗ್ಯದ ಬಳೆಗಾರ. ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು ಒಳಗೆ ಬರಲಪ್ಪಣೆಯೆ ದೊರೆಯೆ... ರಸಿಂಹಸ್ವಾಮಿಯವರ ಈ ಗೀತೆಗೂ ಸಾಯಿಪ್ರಕಾಶ್ ಚಿತ್ರಕ್ಕೂ ಸಂಬಂಧವಿಲ್ಲ. ಇಲ್ಲಿ ಬಳೆಗಾರ ಗೆಣೆಕಾರ ನಾಗಿರುತ್ತಾನೆ. ಮದುವೆ ಆಗುವ ಹುಡುಗಿಯನ್ನು ಬಿಟ್ಟು ಉಳಿದೆಲ್ಲವರೂ ಇವನ ಅಕ್ಕ ತಂಗಿಯರು, ತಾಯಿ, ಚಿಕ್ಕಮ್ಮ, ದೊಡ್ಡಮ್ಮಂದಿರು. ಅದೇ ಭಾಗ್ಯದ ಬಳೆಗಾರ ಪ್ರೀತಿಯಲ್ಲಿ ಬೀಳುತ್ತಾನೆ. ಇನ್ನೇನು ಮದುವೆ ಆಗಬೇಕು; ಆ ಕಡೆಯಿಂದ ಒಂದಷ್ಟು ಅಡ್ಡಿ ಆತಂಕ ಎದುರಾಗುತ್ತದೆ. ಬಳೆಗಾರ ಏನು ಮಾಡು ತ್ತಾನೆ. ಆಕೆಯ ಕೈಗೆ ಬಳೆ ತೊಡಿಸುತ್ತಾನಾ? ಓವರ್ ಟು ಭಾಗ್ಯದ ಬಳೆಗಾರ...

ಕನ್ನಡ ಚಿತ್ರಗಳು ಏಕೆ ಸೋಲುತ್ತಿವೆ? ಹಿಂದೆ ಏನು ಮಾಡಿದ್ದೆವೊ ಅದನ್ನೇ ಮತ್ತೆ ಮತ್ತೆ ಮಾಡಿದರೆ ಅದನ್ನು ಯಾರೂ ಒಪ್ಪುವುದಿಲ್ಲ. ಅದಕ್ಕಿಂತ ಭಿನ್ನ, ಬಿನ್ನಾಣವಾಗಿ ಮಾಡಿದರೆ ಖಂಡಿತ ಜನ ನೋಡುತ್ತಾರೆ. ಇಲ್ಲಿ ಆಗಿರುವ ಯಡವಟ್ಟೇ ಅದು. ತವರಿಗೆ ಬಾ ತಂಗಿ ಚಿತ್ರದಲ್ಲಿ ತಂಗಿ ರಾಧಿಕಾ ಪಾತ್ರಕ್ಕೆ ವಿಷ ಕುಡಿಸಿ, ಸಾಯಿಸಲಾಗಿತ್ತು. ಇಲ್ಲಿ ಅದೇ ಪ್ರಯೋಗವನ್ನು ನಾಯಕಿಯ ಮೇಲೆ ಮಾಡಲಾಗುತ್ತದೆ. ಬೇಕಾದರೆ ಅಳಿಯ ಅಲ್ಲ, ಮಗಳ ಗಂಡ ಎನ್ನಬಹುದು! ಈ ಸೊಬಗಿಗೆ ಇಷ್ಟೊಂದು ಖರ್ಚು ವೆಚ್ಚ, ಅದ್ದೂರಿತನ ಬೇಕಿತ್ತೇ? ಒಂದು ನವಿರಾದ, ನಯವಾದ ಕತೆ ಮಾಡುವ ಯೋಗ್ಯತೆ ಚಿತ್ರದ ಕ್ಯಾಪ್ಟನ್ ಅಜಯ್ ಕುಮಾರ್‌ಗೆ ಇಲ್ಲವೇ? ಪಾಪ ಸಾಯಿಪ್ರಕಾಶ್ ಇಲ್ಲಿ ಕೇವಲ ನಿರ್ದೇಶನ ಮಾತ್ರ ಮಾಡಿದ್ದಾರೆ. ಹಾಗಾಗಿ ಎಲ್ಲಾ ತಪ್ಪುಗಳನ್ನು ಅವರ ಮೇಲೆ ಹೊರಿಸಿದರೆ ಆ ಮಾದೇಶ್ವರ ಮೆಚ್ಚುವುದಿಲ್ಲ. ಕಡೇ ಪಕ್ಷ ಕತೆ ಕೇಳುವಾಗ ಶಿವರಾಜ್‌ಕುಮಾರ್ ಸಾಹೇಬ್ರು ಒಂದು ಮಾತು ಹೇಳಿ, ಕೆಲವು ತಿದ್ದುಪಡಿ ಮಾಡಬಹುದಿತ್ತೇನೋ.
ಹಾಗಂತ ಸಿನಿಮಾ ಚೆನ್ನಾಗಿಲ್ಲ ಎಂದಲ್ಲ.

ಕೆಲವು ವಿಭಾಗದಲ್ಲಿ ಬಳೆಗಾರ ಇಷ್ಟವಾಗುತ್ತಾನೆ. ಇಳಯರಾಜ ಸಂಗೀತದಲ್ಲಿ ಮೂರು ಹಾಡುಗಳನ್ನು ಮನಸಾರೆ ಕೇಳಬಹುದು. ಕಣ್ಣಲ್ಲೇ ಕಾಡುವನು... ಆಹಾ ಮಿಂಚುಳ್ಳಿ ಮಿಂಚುಳ್ಳಿ... ಹಾಡುಗಳು ಸೂಪರ್. ಗುಣಮಟ್ಟದ ಕಲಾವಿದರನ್ನು ಬಳಸಿಕೊಳ್ಳುವಲ್ಲಿ ಸಿನಿಮಾ ಗೆದ್ದಿದೆ. ದೊಡ್ಡಣ್ಣ, ಸಾಧು ಕಾಮಿಡಿ ಪರವಾಗಿಲ್ಲ. ಸುರೇಶ್ಚಂದ್ರ ನಿಜಕ್ಕೂ ಊರಗೌಡನಾಗಿ ಇಷ್ಟವಾಗುತ್ತಾರೆ. ಪ್ರಕಾಶ್ ಹೆಗ್ಗೋಡು ಮತ್ತೊಮ್ಮೆ ಮಿಂಚಿದ್ದಾರೆ. ಕಿರುತೆರೆ ನಟ ಮೈಕೋ ಶಿವು ಮೈ ಚಳಿ ಬಿಟ್ಟು ನಟಿಸಿದ್ದಾರೆ. ಶೋಭಾ ರಾಘವೇಂದ್ರ ಗಯ್ಯಾಳಿ ಪಾತ್ರದಲ್ಲಿ ಧೂಳೆಬ್ಬಿಸುತ್ತಾರೆ. ಉಳಿದಂತೆ ಅನುಪ್ರಭಾಕರ್, ಸುಧಾರಾಣಿ, ರಮೇಶ್ ಭಟ್ ಮೊದಲಾದವರು ಹೀಗೆ ಬಂದು ಹಾಗೆ ಹೋಗುತ್ತಾರೆ.

ಶಿವಣ್ಣ ದಿನದಿಂದ ದಿನಕ್ಕೆ ಹುಡುಗಾಗುತ್ತಿದ್ದಾರಾ? ಹೀಗೊಂದು ಪ್ರಶ್ನೆ ಅವರ ಪಾತ್ರ ನೋಡಿದಾಗ ಏಳುತ್ತದೆ. ವಯಸ್ಸು ನಲವತ್ತರ ಗಡಿ ದಾಟಿದ್ದರೂ ಇನ್ನೂ ಶಿವಣ್ಣ ಕುಣಿ ಯುತ್ತಾರೆ. ಹಾರುತ್ತಾರೆ. ಹೊಡೆದಾಡುತ್ತಾರೆ. ಅದೇ ಹಳೇ ವರಸೆಯ ನ್ನು ಮುಂದುವರಿ ಸುತ್ತಾರೆ. ಬಹುಶಃ ಅವರು ಹುಟ್ಟಿದ್ದೇ ನಟಿಸುವ ಸಲುವಾಗಾ? ಉತ್ತರ ಭಾಗ್ಯದ ಬಳೆಗಾರ! ನಾಯಕಿ ನವ್ಯಾ ನಾಯರ್ ಬಗ್ಗೆ ಹೇಳಲೇಬೇಕು. ಆಕೆ ಖಂಡಿತ ನಟಿಸುವುದಿಲ್ಲ. ಬದಲಾಗಿ ಪಾತ್ರವೇ ತಾನಾಗುತ್ತಾಳೆ. ಇಡೀ ಚಿತ್ರದಲ್ಲಿ ಆಕೆಯೇ ಹೈಲೈಟ್. ನಗುತ್ತಾಳೆ. ನಗಿಸುತ್ತಾಳೆ. ಅಳುತ್ತಾಳೆ. ಅಳಿಸುತ್ತಾಳೆ. ಸುಮ್ಮನಿದ್ದೇ ಕೊಲ್ಲುತ್ತಾಳೆ. ಮತ್ತಷ್ಟು ಮುದನೀಡುತ್ತಾಳೆ... ಒಟ್ಟಾರೆ ಬಳೆಗಾರ ಭಲೇ ಎನ್ನುವಂತೆ ಇಲ್ಲದಿದ್ದರೂ ಒಂದಷ್ಟು ದೃಶ್ಯ, ಸನ್ನಿವೇಶ, ಹಾಡು ಅದು ಇದು ಇಷ್ಟವಾಗುತ್ತದೆ. ಉಳಿದದ್ದೆಲ್ಲಾ ಶಿವನೇ ಶಂಭುಲಿಂಗಾ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada