For Quick Alerts
  ALLOW NOTIFICATIONS  
  For Daily Alerts

  ಚಂದ್ರು, ಕಿಟ್ಟಿ-ಪ್ರಿಯಾಮಣಿ 'ಕೋ ಕೋ' ಚಿತ್ರವಿಮರ್ಶೆ

  By * ಶ್ರೀರಾಮ್ ಭಟ್
  |

  ಬಹುನಿರೀಕ್ಷೆಯ, ಆರ್ ಚಂದ್ರು ನಿರ್ದೇಶನದ ಚಿತ್ರ 'ಕೋ ಕೋ' ಇಂದಿನಿಂದ (ಜನವರಿ 13, 2012) ರಾಜ್ಯಾದ್ಯಾಂತ ಪ್ರದರ್ಶನ ಕಾಣುತ್ತಿದೆ. ಈ ಮೊದಲು ತಾಜ್ ಮಹಲ್, ಪ್ರೇಮ್ ಕಹಾನಿ ಹಾಗೂ ಮೈಲಾರಿಯಂತಹ ಹಿಟ್ ಚಿತ್ರಗಳನ್ನು ಕನ್ನಡ ಸಿನಿಪ್ರೇಕ್ಷಕರಿಗೆ ನೀಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಚಂದ್ರು 'ಕೋ ಕೋ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಿದ್ದಾರೆ.

  ಚಿತ್ರದ ನಾಯಕಿ ಕಮೀಷನರ್ 'ತಂಗಿ' ಎಂದು ತಿಳಿಯದೇ ಪರಿಚಯ, ಸ್ನೇಹಪಾಶದಲ್ಲಿ ಸಿಕ್ಕಿಬೀಳುವ ಹಾಗೂ ಎಸಿಪಿ ಆಗಬೇಕೆಂಬ ಗುರಿ ಇಟ್ಟುಕೊಂಡಿರುವ ನಾಯಕ ಒಬ್ಬ 'ಕಾಮನ್ ಮ್ಯಾನ್'. ಆದರೆ ಸಮಯಕ್ಕೆ ಸಿಕ್ಕಿಹಾಕಿಕೊಂಡ ನಾಯಕ ಪೊಲೀಸ್ ಪವರ್ ಹೊಂದಿರುವ ಕಮೀಷನರ್ ಹಾಗೂ ಅವರ ತಂಗಿಯ ಜೀವನದಲ್ಲಿ ಹೇಗೆ ಪಾಲುದಾರನಾಗುತ್ತಾನೆ ಎನ್ನುವುದು ಕಥೆ.

  ಮುಂದೆ ಆತನಿಗೆ ನಾಯಕಿ ಸಿಗುತ್ತಾಳೊ ಅಥವಾ ನಾಯಕ ತ್ಯಾಗರಾಜನಾಗಿ ಎಲ್ಲರ 'ಶಹಬ್ಬಾಸ್' ಗಿಟ್ಟಿಸಿ ಹೀರೋ ಎನಿಸಿಕೊಳ್ಳುತ್ತಾನೋ ಎಂಬುದನ್ನು ಚಿತ್ರ ವೀಕ್ಷಿಸಿ ತಿಳಿದುಕೊಂಡರೇನೇ ಚೆಂದ. ಎಲ್ಲವನ್ನೂ ಇಲ್ಲಿಯೇ ಹೇಳಿದರೆ ಚಿತ್ರಮಂದಿರಕ್ಕೆ ಹೋಗಿ ನೋಡುವುದೇನು?

  'ಕೋ ಕೋ' ಎಂಬ ಚಿತ್ರದ ಶೀರ್ಷಿಕೆಗೆ ನ್ಯಾಯ ಸಲ್ಲಿಸುವ ಉದ್ದೇಶದಿಂದ ಮಧ್ಯಂತರದ ನಂತರ ನಾಟಕೀಯವಾಗಿ ಸ್ಪಷ್ಟೀಕರಣ ನೀಡಿರುವುದು 'ಗ್ರಾಫಿಕ್ಸ್ ಚಂದಮಾಮ' ಕಥೆ ನೋಡಿದಂತಾಗುತ್ತದೆ. ಈ ಮೊದಲು ಚಿತ್ರತಂಡ ಹೇಳಿಕೊಂಡಂತೆ ಕಥೆಯಲ್ಲಿ ಕೋಳಿ ಮತ್ತು ಕೋತಿ ಮಹತ್ವದ ಪಾತ್ರ ವಹಿಸಿರುವುದು ಹಾಗಿರಲಿ, ಅನಾವಶ್ಯಕ ಎಳೆದುತಂದು 'ಓಬಿರಾಯನ ಕಾಲ'ವನ್ನು ನೆನಪಿಸಿ ನಗೆಪಾಟಲಿಗೀಡಾಗಿದ್ದಾರೆ ಚಂದ್ರು.

  ಕಥೆಯಲ್ಲಿ ಲವ್, ಸೆಂಟಿಮೆಂಟ್ ಜೊತೆ ಮೊದಲಬಾರಿಗೆ 'ಆಕ್ಷನ್' ಕಡೆ ಕೂಡ ಮುಖ ಮಾಡಿರುವ ಚಂದ್ರು, ಕಥೆಯನ್ನು ತೀರಾ ಮಾಮೂಲಿ ಎನ್ನುವಂತೆ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಸಾಕಷ್ಟು ಹಿಡಿತವಿದ್ದರೂ ಯಾವುದೇ ಸ್ಪೆಷಾಲಿಟಿ ಕೊಡುವಲ್ಲಿ ಚಂದ್ರು ಸೋತಿದ್ದಾರೆ. ಅಲ್ಲಲ್ಲಿ ಈ ಮೊದಲು ಬಂದ ಕನ್ನಡದ 'ಚಿರು' ಚಿತ್ರದ ಛಾಯೆ ಇಣುಕುತ್ತದೆ. ಜೊತೆಗೆ ಎಲ್ಲಾ ವರ್ಗದ ಜನರನ್ನು ಮೆಚ್ಚಿಸುವ 'ಸೂತ್ರ'ಕ್ಕೆ ಕಟ್ಟುಬಿದ್ದಿರುವುದು ಕಂಡುಬರುತ್ತದೆ.

  ಚಿತ್ರದ ಯಶಸ್ಸಿಗೆ ಮತ್ತು ಓಟಕ್ಕೆ ಕಡಿವಾಣ ಹಾಕುವುದು ಮೊದಲನೆಯದಾಗಿ ಮಧ್ಯೆ ಅನಾವಶ್ಯಕವಾಗಿ ತೂರಿಕೊಳ್ಳುವ ಹಾಡು. ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತವೂ ಅಷ್ಟಕಷ್ಟೇ. ವೇಗವನ್ನು ಬಯಸುವ ಚಿತ್ರಕಥೆ ನಿಧಾನಗತಿ ಅನುಸರಿಸಿವುದು ಇನ್ನೊಂದು 'ಮೈನಸ್ ಪಾಯಿಂಟ್'. ಆದರೆ ಎಲ್ಲೂ ತೀರಾ ಬೋರಾಗದಂತೆ ಚಿತ್ರವನ್ನು ನಿರೂಪಿಸಿ ಅರ್ಧಕ್ಕೆ ಪ್ರೇಕ್ಷಕ ಸೀಟುಬಿಟ್ಟು ಹೋಗದಂತೆ ಮಾಡುವಲ್ಲಿ ಚಂದ್ರು ಯಶಸ್ವಿಯಾಗಿದ್ದಾರಷ್ಟೇ.

  ಇನ್ನು ಚಿತ್ರದ ಪಾತ್ರವರ್ಗದಲ್ಲಿ, ನಾಯಕನಾಗಿ ಅಭಿನಯಿಸಿರುವ ಕಿಟ್ಟಿ ಲವ್, ಸೆಂಟಿಮೆಂಟ್ ನಲ್ಲಿ ಲೀಲಾಜಾಲ. ಆದರೆ ಆಕ್ಷನ್ ದೃಶ್ಯಗಳಲ್ಲಿ, ಡೈಲಾಗ್ ಹಾಗೂ ಬಾಡಿಲಾಂಗ್ವೇಜ್ ನಲ್ಲಿ ಮಿಂಚುವ ಕಿಟ್ಟಿ, ಮುಖದಲ್ಲಿ ಅದರಲ್ಲೂ ಮುಖ್ಯವಾಗಿ ಕಣ್ಣಿನಲ್ಲಿ ಕೋಪವನ್ನು ವ್ಯಕ್ತಪಡಿಸುವುದರಲ್ಲಿ ತುಂಬಾ ವೀಕ್. ನಾಯಕಿ ಪ್ರಿಯಾಮಣಿ ನಟನೆ ಪ್ರತಿ ದೃಶ್ಯದಲ್ಲೂ ಸೂಪರ್. ಒಂದು ಹಾಡಿನಲ್ಲಿ ಬಂದುಹೋಗುವ ಸಂಜನಾ ಹಾಗೂ ಚಿಕ್ಕ ಪಾತ್ರವೊಂದನ್ನು ಪೋಷಿಸಿರುವ ಹರ್ಷಿಕಾ ಪೂಣಚ್ಚ ಅವರಿಗೆ ಚಿತ್ರದಲ್ಲಿ ಹೆಚ್ಚಿನ ಕೆಲಸವೇನೂ ಇಲ್ಲ.

  ಪೊಲೀಸ್ ಕಮೀಷನರ್, ಚಿತ್ರದ ವಿಲನ್ ಪಾತ್ರಧಾರಿ ತೆಲುಗಿನ ಖ್ಯಾತ ಖಳನಟ 'ಶ್ರೀಹರಿ' ಇಡೀ ಚಿತ್ರದಲ್ಲಿ ಅಕ್ಷರಶಃ ಮಿಂಚಿದ್ದಾರೆ. ಅವರ ಪಾತ್ರಕ್ಕಿರುವ ಗತ್ತು, ಗಮ್ಮತ್ತು ಅವರ ನಟನೆಯಲ್ಲೂ ವ್ಯಕ್ತವಾಗಿದೆ. 'ಮೇಷ್ಟ್ರು' ಪಾತ್ರದ ರಂಗಾಯಣ ರಘು ಹಾಗೂ ಕಮೀಷನರ್ ಹೆಂಡತಿ ಪಾತ್ರಧಾರಿ ಅನು ಪ್ರಭಾಕರ್ ಪಾತ್ರಗಳಿಗೆ ಅಂತಹ ಮಹತ್ವವೇನೂ ಇಲ್ಲ. ಆದರೆ ಬುಲೆಟ್ ಪ್ರಕಾಶ್ ಪಾತ್ರ ಹಾಗೂ ನಟನೆ ಗಮನಸೆಳೆಯುವಂತಿದೆ.

  ಭಾಸ್ಕರ್ ನಿರ್ಮಾಣದ ಈ ಚಿತ್ರಕ್ಕೆ ಕ್ಯಾಮರಾ ಹಿಡಿದಿರುವ ಕೆ.ಎಸ್. ಚಂದ್ರಶೇಖರ್ ಕೆಲಸ ಚೆನ್ನಾಗಿದೆ. ರಮಣ ಗೋಕುಲ ಸಂಗೀತ ಅಷ್ಟಕಷ್ಟೇ. ಸಾಹಿತ್ಯ ಹಾಗೂ ಹಾಡುಗಳು ಥಿಯೇಟರ್ ಗೇಟು ದಾಟಿದಮೇಲೆ ನೆನಪಾಗುವುದಿಲ್ಲ. ಒಟ್ಟಿನಲ್ಲಿ ನಿರ್ದೇಶಕ ಚಂದ್ರು ಕನ್ನಡದ ಪ್ರೇಕ್ಷಕರು ಹಾಗೂ ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದ್ದಾರೆ. ಮಸಾಲೆದೋಸೆ ಬದಲು ಮಾಮೂಲಿ ದೋಸೆ ಕೊಟ್ಟಿದ್ದಾರೆ.

  ಚಿತ್ರ: ಕೋ ಕೋ
  ನಿರ್ಮಾಣ: ಭಾಸ್ಕರ್
  ನಿರ್ದೆಶನ: ಆರ್ ಚಂದ್ರು
  ತಾರಾಗಣ: ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಶ್ರೀಹರಿ, ಹರ್ಷಿಕಾ ಪೂಣಚ್ಚ, ರಂಗಾಯಣ ರಘು, ಅನು ಪ್ರಭಾಕರ್, ಸಂಜನಾ, ಬುಲೆಟ್ ಪ್ರಕಾಶ್, ರವಿ ಕಾಳೆ ಹಾಗೂ ಇತರರು
  ಛಾಯಾಗ್ರಹಣ: ಕೆ ಎಸ್ ಚಂದ್ರಶೇಖರ್
  ಸಂಗೀತ: ರಮಣ ಗೋಕುಲ
  ಸಂಕಲನ: ಕೆ ಎಮ್ ಪ್ರಕಾಶ್

  English summary
  This is Review of Kannada movie Ko Ko. Srinagar Kitty and Priyamani in lead role and R Chndru directs this. Movie is average in its story and narration.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X