»   » ಕ್ರೇಜಿ ಕುಟುಂಬ: ತೆರಿಗೆ ರಹಿತ ಫ್ಯಾಮಿಲಿ ಪ್ಯಾಕೇಜ್

ಕ್ರೇಜಿ ಕುಟುಂಬ: ತೆರಿಗೆ ರಹಿತ ಫ್ಯಾಮಿಲಿ ಪ್ಯಾಕೇಜ್

Posted By:
Subscribe to Filmibeat Kannada

ಒಬ್ಬ ಪೆಟ್ರೋಲ್ ತುಂಬಿಸುವ ಕ್ಯಾನ್‌ನಲ್ಲಿ ಸಾರಾಯಿ ತುಂಬಿಕೊಂಡು, ಹೊಟ್ಟೆ ತುಂಬಾ ಕುಡಿಯುವ ಕುಡುಕ. ಮಾತು ಮಾತಿಗೆ 'ಡ್ರಂಕ"ಣಕ, ಕೊನೆತನಕ. ಇನ್ನೊಬ್ಬ 'ಕೇಜಿ" ಸ್ಟಾರ್. ದಿನಕ್ಕೆ 12 ಮೊಟ್ಟೆ, ಎರಡು ತಟ್ಟೆ ಅನ್ನವನ್ನು ಗುಳುಂ ಎನಿಸುತ್ತಾನೆ. ಕುಸ್ತಿ ಪಟು ಆಗುವ ಹಂಬಲ,ಗೊಂದಲ, ತೊಡೆಯಲ್ಲಿ ಭೀಮಬಲ. ಮತ್ತೊಬ್ಬ ಚೋರ ಚಿಲ್ಲರೆ ಚೋರ. ಕದಿಯೋದೇ ಅವನ ಬಿಜಿನೆಸ್ಸು, ವೀಕ್‌ನೆಸ್ಸು. ಅವನ ಪಕ್ಕ ಮಗದೊಬ್ಬ 'ಸುಂದರಿ" ಪುರುಷ. '9"ನೇ ಮನೆಯಲ್ಲಿ ಕುಳಿತು, 'ಹಾಂಯ್, ಹಾಂಯ್"ಎನ್ನುತ್ತಾನೆ.

ಇವರ ನಡುವೆ ಒಬ್ಬ ಎಡವಟ್ಟು ಯಜಮಾನ. ಹೊಸ ಗಾನ ಬಜಾನಾ.ಕಂತೆಗೆ ತಕ್ಕ ಬೊಂತೆ ಎಂಬಂತೆ ಅನುಕೂಲಕ್ಕೊಬ್ಬ ಹೆಂಡತಿ... ಹೀಗೆ ಇಡೀ ಮನೆಯೇ ಹಾಸ್ಯಾಲಯ. ನಗುವೇ ದೇವಾಲಯ. ನಗುತ್ತಾರೆ, ನಗಿಸುತ್ತಾರೆ, ಅಳುತ್ತಾರೆ, ಅಳಿಸುತ್ತಾರೆ.ಅತ್ತು ನಗಿಸುತ್ತಾರೆ. ನಕ್ಕು ಅಳಿಸುತ್ತಾರೆ. ಒಮ್ಮೆ ಕಾಮಿಡಿ. ಮತ್ತೊಮ್ಮೆ ಹಿಡಿತಕ್ಕೆ ಸಿಗದ ಸೆಂಟಿಮೆಂಟ್. ಒಟ್ಟಾರೆ ಇಡೀ ಸಿನಿಮಾ ಒಂದು ಕಾಮಿಡಿ ಕತೆ!

ಇದು ಮರಾಠಿ ಮೂಲದ ಕತೆ. ಅದನ್ನು ನಮ್ಮ ನೇಟಿವಿಟಿಗೆ ಭಟ್ಟಿ ಇಳಿಸಿದ್ದಾರೆ ನಿರ್ದೇಶಕರಾಮಮೂರ್ತಿ. ಉತ್ತರ ಕರ್ನಾಟಕ ಭಾಷೆಯ ಸೊಗಡು ಸೊಗಸಾಗಿದೆ. ರಮೇಶ್ ಅದನ್ನು ಹೇಳುವುದೇ ಚೆಂದ. ಅನಂತನಾಗ್ ಅಜ್ಜನಾಗಿ ಸವಿ ಸಜ್ಜೆ ನೀಡುತ್ತಾರೆ. ಕ್ಯಾನ್‌ಗಟ್ಟಲೇ 'ರಾಮ ರಸ" ಹೀರುತ್ತಾ, ಕುಡುಕರಿಗೇ ಸವಾಲು ಹಾಕುತ್ತಾರೆ.

ರಜನಿಕಾಂತ್ ಎಂಬ ಹೊಸ ಹುಡುಗನ ಕಾಮಿಡಿಯಲ್ಲಿ ಹಿಡಿತವಿದೆ. ಇಡೀ ಚಿತ್ರದಲ್ಲಿ ರಜನಿ ಟ್ರ್ಯಾಕ್ ನಿಜಕ್ಕೂ ಹೈಲೈಟ್. ಪುಟಾಣಿ ಧನ್ಯಾ 'ಆಹಾ" ಮುದ್ದು ಕಂದ. ಚಿಂದೋಡಿ ಲೀಲಾ ಮೊಮ್ಮಗ 'ಭೀಮ್ಸ್" ಬ್ಯಾಂಗ್ ಬ್ಯಾಂಗ್ ಕಿಡ್. ನಾಯಕಿ ಸನಾತನಿ ಸ್ವಲ್ಪ ಸಪ್ಪೆ ಸಪ್ಪೆ. ಚಿತ್ರದುದ್ದಕ್ಕೂ ಬಳಸಿಕೊಂಡಿರುವ ಟಂ ಟಂ ಆಟೊ ಮಜಬೂತಾಗಿದೆ. ನಗುನಗುತ್ತಾ ಕಣ್ಣು ಒದ್ದೆಯಾಗುತ್ತದೆ.

ಕ್ಲೈಮ್ಯಾಕ್ಸ್‌ನಲ್ಲಿ ನಗು ನಿಲ್ಲುತ್ತದೆ. ನೀರು ಮುತ್ತಾಗುತ್ತದೆ! ಕೆಲವೆಡೆ ಸಂಕಲನಕಾರರ ಕತ್ತರಿ ಕೈ ಕೊಟ್ಟಿದೆ. ಒಂದಷ್ಟು ಸಂಭಾಷಣೆ ರಿಪೀಟ್ ಆಗುತ್ತದೆ. ರಿಕ್ಕಿ ಕೇಜ್ ಸಂಗೀತದಲ್ಲಿ ಕನ್ನಡ ಕವಿಗಳ ಗೀತೆಗಳನ್ನು ಬಳಸಿರುವುದು ಪ್ಲಸ್ ಪಾಯಿಂಟ್. ಮಾಮೂಲಿಛಾಯಾಗ್ರಹಣ. ಅದೇನೇ ಇದ್ದರೂ ಮನೆಮಂದಿಗೆ ಕ್ರೇಜಿ ಕುಟುಂಬ ಒಂದು ತೆರಿಗೆ ರಹಿತಫ್ಯಾಮಿಲಿ ಪ್ಯಾಕೇಜ್. (ಸ್ನೇಹಸೇತು: ವಿಜಯಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada