»   » ಎಲ್ಲ ಅಪ್ಪ ಅಮ್ಮಂದಿರು ನೋಡಲೇಬೇಕಾದ ಚಿತ್ರ

ಎಲ್ಲ ಅಪ್ಪ ಅಮ್ಮಂದಿರು ನೋಡಲೇಬೇಕಾದ ಚಿತ್ರ

Posted By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಪ್ರಕಾಶ್ ರೈ ತಾನೊಬ್ಬ ಅನುಭವಿ ನಟನಷ್ಟೇ ಅಲ್ಲ ತಮ್ಮಲ್ಲೊಬ್ಬ ಪ್ರಬುದ್ಧ ನಿರ್ದೇಶಕನೂ ಅಡಗಿದ್ದಾನೆ ಎಂಬುದನ್ನು 'ನಾನು ನನ್ನ ಕನಸು' ಚಿತ್ರದ ಮೂಲಕ ನಿರೂಪಿಸಿದ್ದಾರೆ. ನಟನೆಯೊಂದಿಗೆ ನಿರ್ದೇಶನವನ್ನೂ ಮುಂದುವರಿಸುವ ಸೂಚನೆಯನ್ನು ಪ್ರಕಾಶ್ ರೈ ಕೊಟ್ಟಿದ್ದಾರೆ. ಈ ಚಿತ್ರ ಎಲ್ಲಾ ಅಪ್ಪ ಅಮ್ಮಂದಿರಿಗೂ ಮರೆಯಲಾಗದ ಅನುಭವ ನೀಡುತ್ತದೆ. ''ಒಂದು ಮಗು ಹುಟ್ಟಿದಾಗ ಅಪ್ಪನೂ ಹುಟ್ಟುತ್ತಾನೆ'' ಎಂಬ ನಂಬಿಕೆಯೊಂದಿಗೆ ಕತೆ ಕುತೂಹಲಭರಿತವಾಗಿ ಸಾಗುತ್ತದೆ.

ಚಿತ್ರ ಮುಂಜಾನೆಯ ಚುಮು ಚುಮು ಚಳಿಯ ವಾಕಿಂನೊಂದಿಗೆ ಆರಂಭವಾಗುತ್ತದೆ. ಅಲ್ಲೊಂದು ಮಗು ಯಾರನ್ನೋ ಕಾತುರದಿಂದ ನಿರೀಕ್ಷಿಸುತ್ತಿರುತ್ತದೆ. ಉತ್ತಪ್ಪನಿಗೂ (ಪ್ರಕಾಶ್ ರೈ)ಗೂ ಕುತೂಹಲ. ಮಗು ಅವರಪ್ಪ ಜಯಂತ್ ಗಾಗಿ (ರಮೇಶ್ ಅರವಿಂದ್) ನಿರೀಕ್ಷಿಸುತ್ತಿರುವುದು ಗೊತ್ತಾಗುತ್ತದೆ. ಒಬ್ಬರು ಎದೆಮಟ್ಟಕ್ಕೆ ಬೆಳೆದ ಮಗಳ ತಂದೆ. ಮತ್ತೊಬ್ಬರು ಎರಡು ವರ್ಷದ ಮಗುವಿನ ತಂದೆ. ಇಬ್ಬರ ನಡುವೆ ಬೆಳಗಿನ ಚಹಾ ಸೇವನೆಯೊಂದಿಗೆ ಮಾತುಕತೆ ಸಾಗುತ್ತದೆ. ಕಥೆ ಹಿಂದಕ್ಕೆ ಹೊರಳುತ್ತದೆ.

ಪ್ರಕಾಶ್ ರೈ ತಮ್ಮ ಮಗಳು ಕನಸು ಬಗ್ಗೆ ಹೇಳುತ್ತಾ ಹೋಗುತ್ತಾರೆ. ಅವಳು ಹುಟ್ಟಿದಾಗಿನಿಂದ ಒಂದೊಂದೆ ಹೆಜ್ಜೆ ಇಡುವ ತನಕ, ಅವಳೊಂದಿಗೆ ಆಟವಾಡುವ, ಶಾಲೆಗೆ ಸೇರಿಸುವ ತನಕ ಮಗಳೆಂದರೆ ಪ್ರಕಾಶ್ ರೈಗೆ ಅಕ್ಕರೆ. ಒಂದು ಕ್ಷಣವೂ ಅವಳನ್ನು ಬಿಟ್ಟಿರಲಾರದಷ್ಟು ಪ್ರೀತಿ. ಕಡೆಗೆ ಮಗಳನ್ನು ಶಾಲೆಗೆ ಕಳುಹಿಸಬೇಕಾದರೂ ಅದು ಎಲ್ಲಿ ತನ್ನಿಂದ ದೂರವಾಗುತ್ತದೋ ಎಂಬ ಅಳುಕು ತಂದೆಗೆ ಕಾಡುತ್ತಿರುತ್ತದೆ.

ಆದರೆ ಕನಸು ತಾಯಿ ಕಲ್ಪನಾ(ಸಿತಾರಾ)ತಂದೆ ಪ್ರಕಾಶ್ ರೈ ಅವರಂತೆ ಅಲ್ಲ. ಮಗಳಿಗೆ ಏನು ಬೇಕು ಏನು ಬೇಡ ಎಂಬ ಆಯ್ಕೆ ಸ್ವಾತಂತ್ರ ಆಕೆಗೆ ಬಿಟ್ಟಿರುತ್ತಾಳೆ. ಮಗಳ ಬಗ್ಗೆ ಮಮಕಾರವಿದ್ದರೂ ಅಪ್ಪನಂತೆ ಸದಾ ಮಗಳ ಹಿಂದೆ ಬಿದ್ದಿರುವುದಿಲ್ಲ. ಒಂದು ಸನ್ನಿವೇಶದಲ್ಲಿ ಮಗು ಶಾಲೆಗೆ ಹೋಗಲು ಸೈಕಲ್ ಬೇಕು ಎನ್ನುತ್ತದೆ. ಸೈಕಲ್ ಬೇಡ, ಶಾಲೆಗೆ ನಾನೇ ಬಿಡುತ್ತೇನೆ. ಬಿದ್ದು ಬಿಡುತ್ತೀಯಾ ಎಂಬ ಅಳುಕು ತಂದೆಗೆ ಕಾಡುತ್ತಿರುತ್ತದೆ. ಆದರೆ ಮಗಳಿಗೆ ಎಲ್ಲರಂತೆ ತಾನೂ ಸೈಕಲ್ ನಲ್ಲಿ ಶಾಲೆಗೆ ಹೋಗಬೇಕೆಂಬ ಆಸೆ. ಸೈಕಲ್ ಹೊಡೆಯುವುದು ಹೇಗೆ ಎಂದು ಮಗಳಿಗೆ ಪಾಠ ಹೇಳಿಕೊಡಲು ಹೋಗಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ ಅಪ್ಪ.

ಕಡೆಗೆ ಮಗಳು ಸೈಕಲ್ ತುಳಿದುಕೊಂಡು ಶಾಲೆಗೆ ಹೊರಡುತ್ತಾಳೆ. ತನ್ನ ಮಗಳಿಗೆ ಎಲ್ಲಿ ಹೆಚ್ಚುಕಡಿಮೆಯಾಗುತ್ತದೋ ಎಂಬ ಅಳುಕಿನಲ್ಲಿ ಪ್ರಕಾಶ್ ರೈ ಆಕೆಯನ್ನು ಹಿಂಬಾಲಿಸುತ್ತಾನೆ. ಇದು ಆಕೆಗೆ ಗೊತ್ತಾಗಿ ಸೈಕಲ್ ನಿಲ್ಲಿಸಿ, ಅಪ್ಪ ನನ್ನನ್ಯಾಕೆ ಫಾಲೋ ಮಾಡುತ್ತೀರಾ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ. ''I Know What I Do'' ಎನ್ನುತ್ತಾಳೆ. ಅಲ್ಲಿಗೆ ತನ್ನ ಮಗಳು ಇನ್ನೂ ಚಿಕ್ಕಮಗು ಅಲ್ಲ ಎಂಬುದು ಅಪ್ಪನ ಅರಿವಿಗೆ ಬರುತ್ತದೆ.

ಕಡೆಗೆ ಮಗಳು ದೊಡ್ಡವಳಾಗಿ ದೆಹಲಿಯ ಪ್ರತಿಷ್ಠಿತ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಸೀಟು ಗಿಟ್ಟಿಸುತ್ತಾಳೆ. ಇಲ್ಲೂ ಅಪ್ಪನಿಗೆ ಮತ್ತೊಮ್ಮೆ ತಮ್ಮ ಮಗಳು ದೂರವಾಗುತ್ತಾಳೆ ಎಂಬ ಪ್ರಜ್ಞೆ ಜಾಗೃತವಾಗುತ್ತದೆ. ದೆಹಲಿಗೆ ಹೋಗುವುದು ಬೇಡ. ಅಲ್ಲಿನ ವೆದರ್ ನಿನಗೆ ಅಡ್ಜಸ್ಟ್ ಆಗಲ್ಲ ಎಂಬಂತಹ ನೆಪಗಳನ್ನು ಹೇಳಿ ಇಲ್ಲೇ ಮಣಿಪಾಲ್ ನಲ್ಲಿ ಓದುಕೋ ಎನ್ನುತ್ತಾನೆ. ಆದರೆ ಮಗಳು ಇವೆಲ್ಲಾ ಅರ್ಥವಾಗಷ್ಟು ದಡ್ಡಿಯಲ್ಲ.

ಕಡೆಗೂ ಅಪ್ಪನನ್ನು ಹೇಗೋ ಒಪ್ಪಿಸುತ್ತ್ತಾಳೆ. ಆದರೆ ಶಿಕ್ಷಣ ಮುಗಿಸಿಕೊಂಡು ಬರುವ ವೇಳೆ ಅಪ್ಪನಿಗೆ ಆಘಾತ ಕಾದಿರುತ್ತದೆ. ತಾನೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಾಳೆ. ಅಪ್ಪ ಅಷ್ಟಕ್ಕೆ ಸಿಟ್ಟಾಗಿ ಮಗಳ ಮೇಲೆ ಮುನಿಸಿಕೊಂಡು ಹೊರಟು ಹೋಗುತ್ತಾನೆ. ಕಾಲೇಜಿನ ದಿನಗಳಲ್ಲಿ ಯಾರೋ ಒಬ್ಬ ಪ್ರೇಮಪತ್ರ ಕೊಟ್ಟಾಗ ಅಪ್ಪ. ಇಂತಹ ವಿಚಾರಗಳಲ್ಲೆಲ್ಲಾ ಹೇಗೆ ನಿಭಾಯಿಸಬೇಕು ಎಂದು ಹೇಳಿಕೊಟ್ಟಿರುತ್ತಾರೆ. ನೀನೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಹುಡುಗ ಇಷ್ಟ ಇಲ್ಲ ಎಂದರೆ ಅವನೊಂದಿಗೆ ಮಾತನಾಡಿ ವಿಷಯ ಹೇಳು. ಇಷ್ಟಕ್ಕೆಲ್ಲಾ ಪ್ರಾಂಶುಪಾಲರಿಗೆ ಹೇಳಿ ವಿಷಯ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಅಪ್ಪ ಮಗಳಿಗೆ ಬುದ್ಧಿ ಹೇಳಿರುತ್ತಾನೆ.

ಆದರಿಲ್ಲಿ ಪ್ರೀತಿಸಿದ್ದೇನೆ ಎಂದು ಹೇಳಿದಾಗ ಅಪ್ಪ ಕೋಪಿಸಿಕೊಳ್ಳುತ್ತಾನೆ. ಅಪ್ಪ ಮಗಳ ನಡುವೆ ಭಾವನೆಗಳ ಸಂಘರ್ಷ ಶುರುವಾಗುತ್ತದೆ. ತನ್ನ ಮಗಳು ಪ್ರೀತಿಸಿರುವ ಹುಡುಗ ಯಾವ ಜಾತಿಯೋ ಎಂದು ಯೋಚಿಸುತ್ತಿರುವ ತಂದೆಗೆ ಆತ ಪಂಜಾಬಿನ ಸಿಖ್ ಜನಾಂಗದವ ಎಂದು ತಿಳಿದು ಮತ್ತಷ್ಟು ಕುಗ್ಗಿ ಹೋಗುತ್ತಾನೆ.ಆದರೆ ಬರುಬರುತ್ತಾ ತನ್ನ ಮಗಳ ಕೈಹಿಡಿಯುವಾತ ಬುದ್ಧಿವಂತ ಎಂಬುದು ಪ್ರಕಾಶ್ ರೈಗೆ ಮನವರಿಕೆಯಾಗುತ್ತದೆ. ಕಥೆ ಆಸಕ್ತಿ ಕೆರಳಿಸುತ್ತಾ ಸಾಗುತ್ತದೆ.

ಚಿತ್ರದಲ್ಲಿ ಯಾರೊಬ್ಬರ ಅಭಿನಯವನ್ನೂ ಪ್ರಶ್ನಿಸುವಂತಿಲ್ಲ. ಅಷ್ಟೊಂದು ಚೆನ್ನಾಗಿ ಎಲ್ಲರೂ ಹೊಂದಿಕೊಂಡಿದ್ದಾರೆ. ಸುದೀರ್ಘ ಸಮಯದ ಬಳಿಕ ಸಿತಾರಾ ಕನ್ನಡಕ್ಕೆ ಮರಳಿದ್ದಾರೆ. ತಾಯಿಯ ಪಾತ್ರದಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನು ಮಗಳಾಗಿ ಅಭಿನಯಿಸಿರುವ ಅಮೂಲ್ಯ ಪಾತ್ರ ಆಪ್ತವೆನ್ನಿಸುತ್ತದೆ. ಹಂಸಲೇಖ ಅವರ ಸಂಗೀತ ಸಾಹಿತ್ಯ ಖುಷಿಕೊಡುತ್ತದೆ.ಒಂದು ಮಾಮರ ಮಾಮರದಲ್ಲೊಂದು ಗುಬ್ಬಿ ಗೂಡು...ಎಂಬ ಹಾಡು ಕೇಳಲು ಇಂಪಾಗಿದೆ. ರಮೇಶ್ ಅರವಿಂದ್ ಅವರದು ಅತಿಥಿ ಪಾತ್ರವಾದರೂ ನೆನಪಿನಲ್ಲಿ ಉಳಿಯುವಂತಹ ಪಾತ್ರ.

ವಿಶೇಷವಾಗಿ ಅನಂತ ಅರಸ್ ಅವರ ಛಾಯಾಗ್ರಹಣದ ಬಗ್ಗೆ ಹೇಳಲೇಬೇಕು. ಕಾವೇರಿಯ ಉಗಮ ಸ್ಥಳವಾದ ಭಾಗಮಂಡಲ, ಚಿಕ್ಕಮಗಳೂರಿನ ಬಾಬಾಬುಡನಗಿರಿ, ಕೆಳಗೂರು ಟೀ ಎಸ್ಟೆಟ್, ಸಕಲೇಶಪುರ, ಶನಿವಾರಸಂತೆ ಹಾಗೂ ಮಡಿಕೇರಿಯ ಸೊಬಗಿನ ತಾಣಗಳು ಕ್ಯಾನ್ವಾಸ್ ಮೇಲಿನ ಸುಂದರ ಕಲಾಕೃತಿಗಳಂತೆ ಮೂಡಿಬಂದಿವೆ. ಅರಸ್ ಅವರ ಕ್ಯಾಮೆರಾ ಕೈಚಳಕ ಗಮನಸೆಳೆಯುತ್ತದೆ. ರೀಮೇಕ್ ಚಿತ್ರವಾದರೂ ಪ್ರಕಾಶ್ ರೈ ಕನ್ನಡ ಜಾಯಮಾನಕ್ಕೆ ತಕ್ಕಂತೆ ತೆಗೆದಿದ್ದಾರೆ.

ಚಿಕ್ಕಂದಿನಿಂದಲೇ ಮಕ್ಕಳನ್ನು ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ. ಅದು ಮುಟ್ಟಬೇಡ. ನಿನಗೆ ಗೊತ್ತಾಗಲ್ಲ. ಹೀಗೆ ಎಲ್ಲಾ ಇಲ್ಲಗಳನ್ನು ಅವರ ಮನಸ್ಸಿನಲ್ಲಿ ತುಂಬಬೇಡಿ. ಮಕ್ಕಳು ಮಕ್ಕಳಂತೆ ಬೆಳೆಯಲು ಬಿಡಿ. ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಬೆಳೆಸಿ. ತಂದೆಯ ಜವಾಬ್ದಾರಿಯೇನು? ತಾಯಿಯಾದವಳು ಹೇಗಿರಬೇಕು. ಮಕ್ಕಳ ಬೇಕು ಬೇಡಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ 'ನಾನು ನನ್ನ ಕನಸು'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada