»   » ಚಿತ್ರವಿಮರ್ಶೆ : ಆಕಾಶಗಂಗೆ ಎಲ್ಲರ ಅಚ್ಚುಮೆಚ್ಚು

ಚಿತ್ರವಿಮರ್ಶೆ : ಆಕಾಶಗಂಗೆ ಎಲ್ಲರ ಅಚ್ಚುಮೆಚ್ಚು

Posted By: Staff
Subscribe to Filmibeat Kannada

ದಿನೇಶ್ ಬಾಬು ಚಿತ್ರ ಎಂದಮೇಲೆ ಅಲ್ಲಿ ಕಿರುಚಾಟ, ಕೂಗಾಟ, ರಂಪಾಟ... ಗಳು ಖಂಡಿತ ಇರುವುದಿಲ್ಲ ಎಂದು ಮತ್ತೆ ಹೇಳುವ ಅಗತ್ಯವಿಲ್ಲ. ಅದು ಸಿಂಪಲ್ ಹಾಗೂ ಸ್ವೀಟ್. ಈ ಮಾತು ನೂರಕ್ಕೆ ನೂರು ಸತ್ಯ ಎಂದು ನಿರೂಪಿಸಲು ಈ ವಾರ ಅವರ ಆಕಾಶಗಂಗೆ ಎಂಬ ಚಿತ್ರ ಬಂದಿದೆ. ಹೆಸರೇ ಹೇಳುವಂತೆ ಇದೊಂದು ಹೆಣ್ಣಿನ ಕತೆ. ಸೌಮ್ಯ ಹಾಗೂ ಸಾಧಾರಣ ಕತೆ.

*ವಿನಾಯಕರಾಮ್ ಕಲಗಾರು

ಅನಾಥ ಹುಡುಗಿ ತನ್ನ ಬದುಕಿನ ಹಾದಿ ರೂಪಿಸಿಕೊಳ್ಳಲು ಪಡುವ ಪಾಡಿನ ಕತೆ. ಆ ಪಾಡಿನಲ್ಲೂ ಒಂದು ಸುಖವಿದೆ ಎಂಬ ಸಂದೇಶ ಸಾರುವ ಕತೆ. ಹಾಗಂತ ದುರಂತ ಕತೆಯಲ್ಲ. ಅವಳ ಛಾಯಾಸಿಂಗ್ ಬದುಕಿನಲ್ಲಿ ಅಂಥದ್ದೊಂದು ಘಟನೆ ನಡೆದಿರುತ್ತದೆ. ಆಗವಳನ್ನು ಕ್ರಿಶ್ಚಿಯನ್ ಮಹಿಳೆಯೊಬ್ಬಳು ತಂದು ಸಾಕಿರುತ್ತಾಳೆ. ಬೆಳೆದು ದೊಡ್ಡವಳಾಗುತ್ತಾಳೆ. ಕಾಲೇಜಿನಲ್ಲಿ ಸೋನು(ಮಿಥುನ್ ತೇಜಸ್ವಿ) ಎಂಬ ಹುಡುಗನನ್ನು ಪ್ರೀತಿಸುತ್ತಾಳೆ. ಅವನ ಪ್ರೀತಿ ಪಡೆಯಲು ದೊಡ್ಡ ಸವಾಲೊಂದನ್ನು ಎದುರಿಸುತ್ತಾಳೆ. ಸಂಗೀತ ಶಿಕ್ಷಕಿಯಾಗಿ ಸೋನು ಮನೆಗೆ ಸೇರಿಕೊಳ್ಳುತ್ತಾಳೆ. ತನ್ನ ಬೀನಾ ಎಂಬ ಹೆಸರನ್ನು ಲಕ್ಷ್ಮಿ ಎಂದು ಬದಲಿಸಿಕೊಳ್ಳುತ್ತಾಳೆ.

ಸೋನು ಕುಟುಂಬದವರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾಳೆ. ಮನೆ ಒಡತಿ (ಜಯಂತಿ)ಯ ಮನ ಒಲಿಸಿಕೊಳ್ಳಲು ಹೆಣಗಾಡುತ್ತಾಳೆ. ಈ ಮಧ್ಯೆ ಬೀನಾ-ಸೋನು ಒಂದಾಗಿ' ಬೀನಾ ವಾಂತಿಮಾಡಿಕೊಳ್ಳುತ್ತಾಳೆ... ! ...ಬೀನಾ ಯಹಾ ಸೋನೂ ವಹ... ಇದು ಕತೆ.

ಹಾಗಂತ ಇದನ್ನು ಹೀಗೆಯೇ ನಿರೂಪಿಸಿದರೆ ಮಾತ್ರ ಅದು ಚೆಂದ ಎಂಬುದನ್ನು ದಿನೇಶ್ ಬಾಬು ನಿರೂಪಿಸಿದ್ದಾರೆ. ಎಲ್ಲೆಲ್ಲಿ ಏನು ಬೇಕು? ಅದು ಹೇಗಿರಬೇಕು? ಉದಾಹರಣೆಗೆ ಒಂದಿಷ್ಟು ದೃಶ್ಯಗಳು, ಜತೆಗೆ ಕಾಮಿಡಿ. ಅದು ಹೆಚ್ಚಾಯಿತು ಎನಿಸಿದಾಗ ಪಟ್ ಅಂತ ಹಾಡು. ಮತ್ತೆ ಸೆಂಟಿಮೆಂಟ್... ಹೀಗೆ ಇಡೀ ಮನೆ ಮಂದಿಗೆ ಬೇಕಾದ ಪ್ಯಾಕೇಜ್‌ಅನ್ನು ಅವರು ನಿಷ್ಠೆಯಿಂದ ಒದಗಿಸಿದ್ದಾರೆ. ಅವರ ಕಲ್ಪನೆಗೆ ಮೂರ್ತರೂಪ ಕೊಟ್ಟವರು ಕೆ. ಕಲ್ಯಾಣ್. ಕತೆಗೆ ತಕ್ಕ ಅವರ ಸಾಹಿತ್ಯ ಅಪ್ಪಟ ಅಮೃತವರ್ಷಿಣಿ'. ಚಿತ್ರಾ ಹಾಗೂ ಎಸ್ಪಿ ಬಾಲಸುಬ್ರಹ್ಮಣ್ಯಂ ನಡುವೆ ನಡೆಯುವ ಜುಗಲ್‌ಬಂದಿ, ಸಾಹಿತ್ಯ ಹಾಗೂ ತಬಲಾದ ನಡುವಿನ ಜಪಾಪಟಿ'ಈಸ್ ರಿಯಲಿ ವಂಡರ್‌ಫುಲ್.

ಕುಹೂ ಕೋಗಿಲೆ..., ಮನಸೇ ಪ್ರೀತಿಯ ಮನಸೇ... ಹಾಡುಗಳು ಆಗತಾನೇ ಪಟಪಟ ಎನ್ನುತ್ತಿರುವ ಮಳೆಯಲ್ಲಿ ಮಿಂದೆದ್ದ ಅನುಭವ ನೀಡುತ್ತದೆ. ಕ್ಯಾಮೆರಾಮನ್ ರವಿ ಸುವರ್ಣ ಮಾತಿನಲ್ಲಿ ಹೇಳಲಾಗದ್ದನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ತೋರಿಸಿಕೊಟ್ಟಿದ್ದಾರೆ. ಇಡೀ ಚಿತ್ರದ ಹೈಲೈಟ್ ಎಂದರೆ ನಕ್ಕು ನಕ್ಕು ಸಾಯುವಂತೆ ಮಾಡುವ ಕೋಮಲ್ ಮಹಾಶಯ. ನಾನು ಶರ... ಬಾಣ... ಆರೊ...' ಎನ್ನುತ್ತ ಹೊಟ್ಟೆ ಹುಣ್ಣಾಗಿಸುತ್ತಾನೆ.

ಅವರ ಮಾತಿನ ಟೈಮಿಂಗ್, ಡೈಲಾಗ್ ಡಿಲೆವರಿ ಪ್ರತಿಯೊಂದೂ ಅದ್ಭುತ. ಜಯಂತಿ ನಾನು ಯಾವತ್ತಿದ್ದರೂ ಅಭಿಯನ ಶಾರದೆಯೇ ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ. ಛಾಯಾಸಿಂಗ್‌ಗೆ ಒಳ್ಳೆಯ ನಾಯಕಿ ಆಗಲು ಬೇಕಾದ ಅಡಿಪಾಯ ಹಾಕಿಕೊಟ್ಟಿದ್ದಾರೆ ದಿನೇಶ್‌ಬಾಬು. ಆದರೆ ನಾಯಕ ಮಿಥುನ್ ತೇಜಸ್ವಿ ಪಾತ್ರಕ್ಕೆ ಸರಿಯಾಗಿ ಹೊಂದಿಕೊಂಡಿಲ್ಲ. ಪ್ರತೀ ದೃಶ್ಯದಲ್ಲೂ ಬೆಳಗ್ಗೆ ಎದ್ದವರು ಅರ್ಜಂಟ್' ಆದಾಗ ಹೇಗಿರುತ್ತಾರೋ ಹಾಗೆ ಅಭಿನಯಿಸಿದ್ದಾನೆ! ದೊಡ್ಡಣ್ಣ ಮಧ್ಯದಲ್ಲಿ ಅನಗತ್ಯವಾಗಿ ಬಂದರೂ ಅದು ವೇಸ್ಟ್ ಆಗಿಲ್ಲ. ಓಂಪ್ರಕಾಶ್‌ರಾವ್, ಪಿ. ಸತ್ಯಾ, ಅನಂತ್‌ರಾಜ್, ಧರ್ಮ... ಹೇಳಿದ್ದನ್ನಷ್ಟೇ ಮಾಡಿದ್ದಾರೆ.

ಆದರೆ ಮೊದಲಾರ್ಧದ ಜೋಶ್ ದ್ವಿತಿಯಾರ್ಧದಲ್ಲಿಲ್ಲ. ಅದಕ್ಕೆ ಕೋಮಲ್ ನಾಪತ್ತೆಯಾಗಿದ್ದೂ ಕಾರಣವಿರಬಹುದು. ಅದೇರೀತಿ ಕೊನೆಯ ದೃಶ್ಯದಲ್ಲಿ ಉರಿಬಿಸಿಲಿನಲ್ಲಿಯೂ ಆಕಾಶದಿಂದ ಗಂಗೆ ಸುರಿಯುತ್ತಾಳೆ. ಅಲ್ಲಿ ಕ್ಯಾಮೆರಾ ಕೈಚಳಕ ಕೈಕೊಟ್ಟಿದೆಯೇನೋ ಎಂದೆನಿಸುತ್ತದೆ. ಇವೆಲ್ಲವನ್ನೂ ಬದಿಗಿಟ್ಟು ಸಿನಿಮಾ ನೋಡಿದರೆ ಕೊಟ್ಟ ಕಾಸಿಗಂತೂ ಖಂಡಿತ ಮೋಸವಿಲ್ಲ. ಏಕೆಂದರೆ ಎಲ್ಲವೂ ಅಚ್ಚುಕಟ್ಟಾಗಿದೆ; ಅಚ್ಚುಮೆಚ್ಚೆನಿಸುತ್ತದೆ.

English summary
Kannada movie Akashagange review by Vinayaka ram kalagaru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada