twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಸ್‌ನಲ್ಲಿ ಸಖತ್ತಾಗಿ 'ರೈಲು' ಬಿಟ್ಟಿರುವ ದಯಾಳ್

    By Super
    |

    'ಅದ್ಭುತ'ವಾಗಿ ಸರ್ಕಸ್ ಚಿತ್ರಕಥೆ ಹೆಣೆದಿರುವ ದಯಾಳ್ ಪದ್ಮನಾಭನ್ ನಿರೂಪಣೆಯಲ್ಲಿ ಸಾಕಷ್ಟು ಹೆಣಗಿದ್ದಾರೆ. ಬೋಗಿಗಳನ್ನು ಎಳೆದುಕೊಂಡು ಹೋಗುವ ಇಂಜಿನ್ನಿನಂತೆ ಗೋಲ್ಡನ್ ಸ್ಟಾರ್ ಗಣೇಶ್ ಸರಾಗವಾಗಿ ಗುರಿ ಮುಟ್ಟಿಸಿದ್ದಾರೆ. ಒಟ್ಟಿನಲ್ಲಿ ಸರ್ಕಸ್ ಪಕ್ಕಾ ಎಂಟರ್ಟೇನರ್. ಹಾಕಿದ ದುಡ್ಡಿಗೆ ನಿರ್ಮಾಪಕರಿಗೂ, ಪ್ರೇಕ್ಷಕರಿಗೂ ಮೋಸವಿಲ್ಲ.

    'ಸರ್ಕಸ್' ಚಿತ್ರದ ಸಂಭಾಷಣೆಯನ್ನೂ ಬರೆದು ನಿರ್ಮಿಸಿ ನಿರ್ದೇಶಿಸಿರುವ ದಯಾಳ್ ಪದ್ಮನಾಭನ್ ಅವರ 'ಚಿತ್ರಕಥೆ'ಯಿಂದಲೇ ಸರ್ಕಸ್ ಗೆದ್ದಿದೆ ಎಂದು ನೀವು ಊಹಿಸಿದರೆ, ನಿಮ್ಮ ಊಹೆ ಭಾಗಶಃ ಸುಳ್ಳು. ಆದರೆ, ಗೋಲ್ಡನ್ ಸ್ಟಾರ್ ಗಣೇಶ್ ಪ್ರಮುಖ ಭೂಮಿಕೆಯಲ್ಲಿರುವ ಸರ್ಕಸ್ ಚಿತ್ರ ಗೆದ್ದಿರುವುದು ಚಿತ್ರಕಥೆಯಿಂದಲೇ ಅಂತ ಊಹಿಸಿದರೆ ನಿಮ್ಮ ಊಹೆ ನಿಜ. ಉತ್ತಮ ನಿರೂಪಣೆಯಿಂದಲೇ ಚಿತ್ರಗಳೆಲ್ಲ ಗೆಲ್ಲುತ್ತವೆಂದು ನೀವು ಊಹಿಸಿದ್ದರೆ, ನಿಮ್ಮ ಊಹೆ ತಪ್ಪು. ಆದರೆ, ಸರ್ಕಸ್ ಚಿತ್ರ ಗೆದ್ದಿರುವುದು ದಯಾಳ್ ನಿರೂಪಣೆಯಿಂದ ಅಂತ ನೀವು ಊಹಿಸಿದರೆ ನಿಮ್ಮ ಊಹೆ ಖಂಡಿತ ಸರಿ.

    ಹೌದು, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಎಸ್ ಮಹೇಂದರ್ ಹೇಳಿದ್ದ ಕಥೆಯಿಂದ ಪ್ರೇರಿತರಾಗಿ ಚಿತ್ರಕಥೆ ಬರೆದಿರುವ ದಯಾಳ್ ಪದ್ಮನಾಭನ್ ಚಿಂದಿ ಉಡಾಯಿಸಿದ್ದಾರೆ. ದಯಾಳ್ ಕಥಾ ನಿರೂಪಣೆಗೆ ಗಣೇಶ್ ಎಂದಿನ ಸ್ಪರ್ಶ ನೀಡಿರದಿದ್ದರೆ ಸರ್ಕಸ್‌ನಂತೆ ಚಿತ್ರವೂ ಡೋಲಾಯಮಾನವಾಗುವ ಸಾಧ್ಯತೆಯಿತ್ತು. ಓಡುತ್ತಿರುವ ರೈಲಿನಂತೆ ಎಲ್ಲೂ ನಿಲ್ಲದೆ ಸಾಗುವ ಕಥೆ ಅಲ್ಲಲ್ಲಿ ಸಿಗುವ ಸುರಂಗ, ಬ್ರಿಜ್ಜುಗಳಂತೆ ರೋಚಕತೆಯನ್ನು ಹೊಂದಿದೆ.

    ಚಿತ್ರಕಥೆಯೆಂಬ ಬಿಡಿಬಿಡಿ ಬೋಗಿಗಳನ್ನು ಬಿಗಿಯಾಗಿ ಹಿಡಿದಿರುವ ಸಂಕಲನ, ರೈಲಿನ ಓಟಕ್ಕೆ, ಕಥೆಯ ಓಘಕ್ಕೆ ಇಂಧನ ತುಂಬಿರುವ ಹಿನ್ನೆಲೆ ಸಂಗೀತ, ಕಣ್ಣಿಗೆ ಹಬ್ಬವನ್ನುಂಟು ಮಾಡುವ ಶೇಖರ್ ಚಂದ್ರು ಛಾಯಾಗ್ರಹಣ ಚಿತ್ರವನ್ನು ಸಲೀಸಾಗಿ ಓಡಿಸಿವೆ. ಈ ಚಿತ್ರವೇನಾದರೂ ಯಶಸ್ಸಿನ ಗುರಿ ತಲುಪಿದರೆ ಅದರ ಕ್ರೆಡಿಟ್ ಈ ಎಲ್ಲ ವಿಭಾಗಗಳಿಗೂ ಸಲ್ಲಬೇಕು.

    ಚಿತ್ರಕ್ಕೆ ಸರ್ಕಸ್ ಗಿಂತ ಓಡುವ ರೈಲು ಎಂದಿದ್ದರೆ ಇನ್ನೂ ಚೆನ್ನಾಗಿತ್ತು. ಜೀವನವೇ ಒಂದು ಸರ್ಕಸ್ ಹೌದಾದರೂ ಜೀವನ ಒಂದು ರೈಲು ಅನ್ನುವುದೂ ಅಷ್ಟೇ ಸರಿ. ಸ್ವಲ್ಪ ಹಳಿ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ತಪ್ಪದು. ಹುಡುಗಾಟದ ಹುಡುಗರು ಮಾಡಿದ ಎಡವಟ್ಟು ಕೆಲಸಕ್ಕೆ ತಮ್ಮ ಜೀವನ ಮಾತ್ರವಲ್ಲ ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರೂ ಜೀವ ಕಳೆದುಕೊಳ್ಳುವಂಥ ಪರಿಸ್ಥಿತಿ ಎದುರಾಗುತ್ತದೆ. ಗಣೇಶ್ ತನ್ನ ಸ್ನೇಹಿತರೊಡಗೂಡಿ ಆ ಎಡವಟ್ಟಿನ ಕೆಲಸವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ಕಥೆಯ ತಿರುಳು.

    ರೈಲು ನಿಲ್ದಾಣದಲ್ಲಿ ಅಸಂಖ್ಯ ಜನ ಓಡಾಡುವಂತೆ ಚಿತ್ರದಲ್ಲಿಯೂ ಜನಸಾಗರವೇ ತುಂಬಿದೆ. ಆದರೆ, ಎಲ್ಲ ಪಾತ್ರಗಳನ್ನು ಸಮರ್ಪಕವಾಗಿ ಬಳಸಲು ವಿಫಲವಾಗಿರುವ ದಯಾಳ್ ಓಡುತ್ತಿದ್ದ ರೈಲಿನ ಚೈನನ್ನು ಅಲ್ಲಲ್ಲಿ ತಾವೇ ಎಳೆದಿದ್ದಾರೆ. ನಾಯಕನ ಸುತ್ತಲಿರುವ ನಾಲ್ವರು ಸ್ನೇಹಿತರು, ರೈಲಿನ ದಿಕ್ಕನ್ನೇ ತಪ್ಪಿಸಲೆತ್ನಿಸುವ ಭಯೋತ್ಪಾದಕರು, ನಾಯಕನ ಮನವನ್ನು ಅರ್ಥಮಾಡಿಕೊಳ್ಳಲಾರದ ಪ್ರೇಯಸಿ, ಸಾಧು ಕೋಕಿಲಾ, ಅವಿನಾಶ್... ನಿಲ್ದಾಣದಲ್ಲಿ ಅಲೆದಾಡುವ ಜನರಿದ್ದಂತೆ. ಇಂಜಿನ್ ಒಂದಿದ್ದರೆ ಸಾಕು ಉಳಿದ ಬೋಗಿಗಳನ್ನು ತಾನಾಗಿಯೇ ಎಳೆದುಕೊಂಡು ಹೋಗುತ್ತದೆ ಎನ್ನುವಂತೆ ಗಣೇಶ ಪಾತ್ರವನ್ನು ದಯಾಳ್ ರೂಪಿಸಿದ್ದಾರೆ.

    ಗಣೇಶ್ ಇಲ್ಲಿ ವಿಭಿನ್ನವಾಗಿ ಕಂಡಿದ್ದಾರೆ. ಯಾವುದೇ ಆಡಂಬರವಿಲ್ಲದ ಸಂಯಮದ ನಟನೆ ಚಿತ್ರಕ್ಕೆ ಪೂರಕವಾಗಿದೆ. ಚಿತ್ರಕಥೆಯ ಓಘಕ್ಕೆ ತಕ್ಕಂತೆ ಬದಲಾಗುವ ಮುಖದ ಭಾವನೆಗಳಿಗೆ ಶೇಖರ್ ಚಂದ್ರು ಅದ್ಭುತವಾಗಿ ಕ್ಯಾಮೆರಾ ಹಿಡಿದಿದ್ದಾರೆ. ಮುಖ್ಯವಾಗಿ ದಯಾಳ್ ಸಂಭಾಷಣೆ ಬರೆದಿದ್ದರೂ ಯೋಗರಾಜ್ ಭಟ್ ಮಾತಿನ ಮಿಂಚು ಅಲ್ಲಲ್ಲಿ ಗುರುತಿಸಬಹುದು ಕಣ್ರೀ.

    ಸೂತ್ರದ ಗೊಂಬೆಯಂತಿರುವ ಆಮದು ನಟಿ ಅರ್ಚನಾ ಗುಪ್ತಾಗೆ ಕನ್ನಡ ಮಾತಾಡಲೂ ಬರುವುದಿಲ್ಲ, ಸುತ್ತಲಿನ ಪಾತ್ರಗಳು ಮಾತಾಡಿದಾಗಲೂ ಅರ್ಥವಾಗುತ್ತಿರಲಿಲ್ಲ ಎಂಬುದು ಆಕೆಯ ಹಾವಭಾವಗಳಿಂದಲೇ ವ್ಯಕ್ತವಾಗುತ್ತದೆ. ಆಕೆ ನಾಯಕನಿಗೆ ಪ್ರೇಮ ನಿವೇದಿಸಿದಾಗ, ನಾಯಕ ಅದನ್ನು ತಿರಸ್ಕರಿಸಿದಾಗ ನೋವಿನ ಭಾವನೆಗಳನ್ನು ಹೊರಹೊಮ್ಮಿಸಲು ವಿಫಲವಾಗಿರುವುದು ಆಕೆಯ ತಪ್ಪಲ್ಲ, ಅದು ದಯಾಳ್ ವೈಫಲ್ಯ. ಆಕೆ ಒಂಥರ ಬೆಂಗಳೂರು-ಮೈಸೂರು ನಡುವೆ ಬರುವ ಸಣ್ಣಪುಟ್ಟ ಗುಡ್ಡಗಳಂತೆ. ಅಂದ ಹಾಗೆ, ಬೆಂಗಳೂರು ಮೈಸೂರು ನಡುವೆ ಟನೆಲ್ಲು, ಕಂದಕಗಳನ್ನು ಕಂಡಿರದಿದ್ದರೆ ಈ ಚಿತ್ರನೋಡಿ.

    ಉಳಿದಂತೆ ಹಾಡುಗಳಲ್ಲಿ ಯಾವುದೇ ಜೀವಂತಿಕೆ ಇಲ್ಲ. ಆಕಾಶಕೆ ಏಣಿ, ಬಾರೋ ಗೆಳೆಯ, ಪಿಸುಗುಡದೆ... ಹಾಡುಗಳು ಕಾಡುವುದೂ ಇಲ್ಲ. ಡಾ. ರಾಜಕುಮಾರ್ ಹಾಡಿದ್ದ ಅಮರ ಗೀತೆ 'ಜೀವ ಹೂವಾಗಿದೆ' ರಿಮಿಕ್ಸ್ ಇಲ್ಲಿ ಏನಾಗಿದೆ ಎಂದು ಪ್ರೇಕ್ಷಕರೇ ಹೇಳಬೇಕು. 'ಜಿಂಕೆ ಮರಿ' ಖ್ಯಾತಿಯ ಎಮಿಲ್ ಸಂಗೀತ ರೈಲಿನ ಚುಕುಬುಕು ಚುಕುಬುಕು ಏಕತಾನತೆಯಿಂದ ಕೂಡಿದೆ. ಧ್ವನಿ ಮುದ್ರಣ ಉತ್ತಮವಾಗಿದೆಯಾದರೂ, ಹಿನ್ನೆಲೆ ಸಂಗೀತ ಅಲ್ಲಲ್ಲಿ ಮಾತುಗಳನ್ನು ಮುಚ್ಚಿಹಾಕುತ್ತದೆ.

    ಕೃತಕ ಕಥೆಯೆಂದು ಅನಿಸದ ಚಿತ್ರಕಥೆಗೆ ನೈಜತೆಯ ಟಚ್ ದಯಾಳ್ ನೀಡಿದ್ದರೆ ಚಿತ್ರದ ಚಿತ್ರಣವೇ ಬದಲಾಗುತ್ತಿತ್ತು. ಬದಲಾಗಿ, ದಯಾಳ್ ಯಶಸ್ಸಿನ ಫಾರ್ಮುಲಾಗೆ ಜೋತುಬಿದ್ದಿದ್ದಾರೆ. ಇದೊಂದು ಪಕ್ಕಾ ಎಂಟರ್ಟೇನರ್ ಎಂಬುದರಲ್ಲಿ ಎರಡು ಮಾತೇ ಇಲ್ಲ. ನೋಡಿ ಮಜಾ ಮಾಡಿ.

    ಕೊನೆಯ ಮಾತು : ಹ್ಯಾಟ್ಸಾಫ್ ಟು ಎಸ್ ಮಹೇಂದರ್!

    English summary
    Circus Kannada movie review by Prasad Naik. Golden Star Ganesh, Archana Gupta, are in the lead. Dayal Padmanabhan has directed the thriller.
    Friday, November 15, 2013, 13:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X