»   » ಮಹರ್ಷಿ ಬ್ರಹ್ಮದೇವನಿಗೆ ಕೃಷ್ಣಾರ್ಪಣ!

ಮಹರ್ಷಿ ಬ್ರಹ್ಮದೇವನಿಗೆ ಕೃಷ್ಣಾರ್ಪಣ!

By: * ವಿನಾಯಕರಾಮ್ ಕಲಗಾರು
Subscribe to Filmibeat Kannada
Prashanth and Pooja Gandhi in Maharshi
* ಕೇಳ್ರಪ್ಪೊ ಕೇಳಿ, ಇದು ಪಕ್ಕಾ ಕಮರ್ಷಿಯಲ್ ಚಿತ್ರ...ಇಲ್ಲಿ ಎಲ್ಲವೂ ಇದೆ. ಹಾಡು, ಹಗಲ ಹೊಡೆದಾಟವಿದೆ. ಬಟಾಬಯಲ ಬಡಿದಾಟವಿದೆ. ಡಿಸೈನ್ ಡಿಸೈನ್ ಲಾಂಗಿನ ಹಾರಾಟವಿದೆ. ಮಚ್ಚು ಹಿಡಿದ ಹೆಂಗಸೊಬ್ಬಳು -ನನ್ ಮಗ್ನೆ ಎಂದು ಬೊಬ್ಬೆ ಹಾಕುವ ಅಬ್ಬರಾಟವಿದೆ. ಜತೆಗೆ ನಾಯಕ ನಾಯಕಿಯ ಜೂಟಾಟವಿದೆ. ಅಲ್ಲಲ್ಲಿ ಪುಸಕ್ ಅಂತ ಬರುವ ಹಾಡುಗಳ ತೂರಾಟವಿದೆ. ಆದರೆ 'ನಮ್ಮ ಕಾಸಿಗೆ ಮೋಸವಾಯಿತು. ಏನಿದು ಮಹರ್ಷಿಯ ಮಚ್ಚಿನ ಲೀಲೆಗಳು" ಎಂದು ಪ್ರೇಕ್ಷಕರು ಕಿರಿಚುವ ಅನಿವಾರ್ಯತೆಯೂ ಇದೆ!

* ನೋಡ್ರಪ್ಪಾ ನೋಡ್ರಿ ಇದು ಪಕ್ಕಾ ಕಾಲೇಜ್ ಚಿತ್ರ... ಇಲ್ಲಿ ಏನೆಲ್ಲಾ ಇವೆ. ರ್ಯಾಗಿಂಗ್ ಇದೆ. ಪ್ರಿನ್ಸಿಪಾಲರನ್ನೂ ಲೆಕ್ಕಿಸದೆ ಹುಡುಗಿಯರನ್ನು ಚುಡಾಯಿಸುವ ದೃಶ್ಯಗಳಿವೆ. 'ಅಯ್ಯೊ ಮನೆಹಾಳ್ರ, ಕಾಲೇಜಲ್ಲೇ ಹೆಂಡ ಕುಡೀತಿರೇನ್ರೊ. ನಿಮಗೆ ಹೇಳೋರ್-ಕೇಳೋರ್ ಯಾರೂ ಇಲ್ವಾ" ಎಂದು ಮೇಡಮ್ ಬೈದರೆ ಅವರನ್ನೇ ಅಟ್ಟಾಡಿಸಿ, ಸೀರೆ ಎಳೆಯುವ ನಾನ್-ವೆಜ್ ದೃಶ್ಯಾವಳಿಗಳಿವೆ.

* ಓದ್ರಪ್ಪಾ ಓದ್ರಿ ಇದು ಪಕ್ಕಾ ಫ್ಯಾಮಿಲಿ ಚಿತ್ರ... ಇಲ್ಲಿ ಏನೇನೆಲ್ಲಾ ಇವೆ. ತಾಯಿ-ತಂಗಿಯನ್ನು ಕೊಂದರು ಎಂದು ಮಗ ಮಹರ್ಷಿಯ ಮೈಮೇಲೆ ಮಚ್ಚೇಶ್ವರ ಅಟಕಾಯಿಸಿಕೊಳ್ಳುತ್ತಾನೆ. ಆತ ಕಂಡಕಂಡೋರ ಮುಂಡ ಚೆಂಡಾಡಿ, 'ಅಂಡ ಪಿಂಡ ಬ್ರಹ್ಮಾಂಡ" ಎಂದು ಅಕಟಕಟಾ ಎನ್ನುತ್ತಾನೆ. ನಿಮಗೆ ಗೊತ್ತಿರಲಿ ಆತ ಹೀಗೆಲ್ಲಾ ಮಾಡುತ್ತಿರುವುದು ಬರೀ ಫ್ಯಾಮಿಲಿ ಸೆಂಟಿಮೆಂಟಿಗೆ ಅಷ್ಟೇ!

* ಬನ್ರಪ್ಪಾ ಬನ್ರಿ ಇದು ಪಕ್ಕಾ ಪ್ರೇಮ ಚಿತ್ರ... ನಾಯಕ ಮಧ್ಯಮವರ್ಗದವನಾದರೂ ಹೈಕ್ಲಾಸ್ ಡ್ರೆಸ್ ಹಾಕಿರುತ್ತಾನೆ. ಎಂಟ್ರಿ ಕೊಡುತ್ತಿದ್ದಂತೆ ನಾಯಕಿ ಬಂದು ಡ್ಯಾಶ್ ಹೊಡೆದು ಡ್ಯೂಯೆಟ್ಟಿಗೆ ಮುಖ ಮಾಡುತ್ತಾಳೆ. ಮತ್ತೆ ಮತ್ತೆ ಅದೇ ಮೈ ಮೈ ಟಚಿಂಗ್, ಇನ್ನಷ್ಟು ಡಿಂಗ್ ಡಾಂಗ್ ಸಿಂಗ್ ಸಾಂಗ್ ... ಚಿಂಗ್ ಚಾಂಗ್!

* ಕೇಳೀಮ್ಮಾ ಕೇಳಿ ಇದು ಪಕ್ಕಾ ಕಾಮಿಡಿ ಚಿತ್ರ... ಒಬ್ಬ ಕಾಮಿಡಿಯ ಹೆಸರಿನಲ್ಲಿ ಹುಡುಗೀರ ಹಿಂದೆ ಹೋಗುತ್ತಾನೆ. ಅವರ ಡ್ರೆಸ್ ಕೋಡ್ ಬಗ್ಗೆ ಕಾಮೆಂಟ್ ಮಾಡುತ್ತಾನೆ. ಡಂಕಣಕ ಡಂಕಣಕ ಕುಣಿಯುತ್ತಾನೆ. ಬೇಕಾಬಿಟ್ಟಿ ಲತ್ತೆ ತಿನ್ನುತ್ತಾನೆ. ಮತ್ತೆ ಕಸ ಗುಡಿಸುವ ಆಳಿನ ಹತ್ತಿರ ಹೋಗಿ ಜೀನ್ಸ್ ಪ್ಯಾಂಟ್ ಹಾಕ್ಕೊ ಎನ್ನುತ್ತಾನೆ. ಅವಳಿಂದ ಪುಕ್ಸಟೆ ಪ್ರಸಾದ ಸ್ವೀಕರಿಸುತ್ತಾನೆ.

ನಿರ್ದೇಶಕ ಕೃಷ್ಣಬ್ರಹ್ಮ ಇಲ್ಲಿ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಎಲ್ಲಿದ್ದೇವೆ? ಎಲ್ಲಿಗೆ-ಯಾಕೆ ಹೋಗಬೇಕು? ಏನು ಹೇಳಬೇಕು? ಎಂಬಿತ್ಯಾದಿ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ. ಅದು ಎಲ್ಲಿಂದಲೊ ಶುರುವಾಗುತ್ತದೆ. ಇನ್ನೆಲ್ಲೊ ನಿಲ್ಲುತ್ತದೆ. ಇದ್ದಕ್ಕಿದ್ದಂತೆ ಪೂಜಾ ಗಾಂಧಿ ಬಿಳಿ ಬೆನ್ನು ತೋರಿಸಿ, ತುಂಡು ಬಟ್ಟೆಯಲ್ಲಿ ಕುಣಿಯಲು ಆರಂಭಿಸುತ್ತಾರೆ. ಕಾಲೇಜು-ರೌಡಿಪಾಳ್ಯ, ಹಾಸ್ಯದ ಹೆಸರಲ್ಲಿ ಹಳಸು ಪಲ್ಯ. ನಾಯಕನ ಬಾಯಿ ಬತ್ತಳಿಕೆಯಿಂದ ಬರಬರ ಬರುವು ಲಂಗು-ಲಗಾಮಿಲ್ಲದ, ಪ್ರೀತಿ ಪ್ರೇಮದ ಡೈಲಾಗ್. ಅದನ್ನು ಸಂಭಾಷಣೆ ಎನ್ನುವುದಕ್ಕಿಂತ ಸಂ-ಭಾಷಣ ಎನ್ನಬಹುದು!

ರಮೇಶ್ ಆಲ್ಬೈ ಕ್ಯಾಮೆರಾ ಸಾಕಷ್ಟು ಕಡೆ ಕಣ್ಣಿಗೆ ತೊಂದರೆ ಕೊಡುತ್ತದೆ. ಇನ್ನು ಕೆಲವೆಡೆ ಫೋಕಸಿಂಗ್ ಕೈಕೊಟ್ಟಿದೆ. ಹಾಡುಗಳು ರಪರಪ ಬಂದುಹೋಗುತ್ತವೆ. ಆದರೂ ಎರಡು ಹಾಡು ಮೋಸ ಮಾಡುವುದಿಲ್ಲ. ಕಣ್ಣಲಿ ಪ್ರೀತಿ ತುಂಬಿರುವೆ... ಹಾಡು ಇಂಪೆನಿಸುತ್ತದೆ. ಸಂಕಲನ ಹೋಪ್ಲೆಸ್. ನಿರೂಪಣೆ ನೀರಸ. ಹಾಗಂತ ಅದ್ಧೂರಿತನಕ್ಕೆ ಮಾತ್ರ ನಿರ್ಮಾಪಕ ಮೋಸ ಮಾಡಿಲ್ಲ. ಹೊಡೆದಾಟದ ದೃಶ್ಯಗಳನ್ನು ಒಮ್ಮೆ ನೋಡಿ, ಮಜಾ ಮಾಡಿ.

ಇನ್ನು ಪ್ರಶಾಂತ್. ಒರಟ ಚಿತ್ರದ ಹ್ಯಾಂಗೋವರ್ ಎಲ್ಲಾ ಕಡೆ ಎದ್ದುಕಾಣುತ್ತದೆ. ಭವಿಷ್ಯದಲ್ಲಿ ಹೀರೊ ಆಗಿ ನೆಲೆ ನಿಲ್ಲುವ ಲಕ್ಷಣ ಇದಲ್ಲ. ಅದೇ ಪೋಸು, ಅದೇ ಲೂಸ್ ಲೂಸ್ ಥರದ ಪಾತ್ರ, ಅದೇ ರಾಗ ಅದೇ ತಾಳವಾದರೆ ಜನರು ಅದೇ ಜಾಗ ತೋರಿಸುತ್ತಾರೆ. ಪೂಜಾಗಾಂಧಿ ಇಲ್ಲಿ ಡ್ಯಾಶಿಂಗ್ ಸ್ಟಾರ್. ಇವರೇನಾ ಮುಂಗಾರುಮಳೆ ಹುಡುಗಿ ಎಂಬ ಅನುಮಾನ ಬಂದರೆ ಅದಕ್ಕೆ ಅವರೇ ಹೊಣೆ. ಇಂಥ ಪಾತ್ರ ಮಾಡುವ ಮುನ್ನ ಪೂಜಾ ಒಮ್ಮೆ ಯೋಚಿಸಬೇಕು. ಇಲ್ಲದಿದ್ದರೆ...

ಎರಡನೇ ನಾಯಕಿ ಪ್ರಿಯಾಂಕಾ ತಕ್ಕ ಮಟ್ಟಿಗೆ ಓಕೆ. ಕಾಮಿಡಿ ಹೆಸರಲ್ಲಿ ವಿಶ್ವನಾಥ್ ಓವರ್ ಆಕ್ಟ್ ಮಾಡುತ್ತಾರೆ. ಜಿರಲೆ ಬಿಟ್ಟವರಂತೆ ಆಡುತ್ತಾರೆ. ವಿಲನ್ ಆಗಿ ಮುನಿ ಹೆಚ್ಚು ಸ್ಕೋರ್ ಮಾಡಿಲ್ಲ. ಕಾಲೇಜು ರೌಡಿಯಾಗಿ ಲೋಹಿತ್ ಎಲ್ಲಾ ಕಡೆ ರಾಡಿ ಮಾಡಿದ್ದಾರೆ. ಹರೀಶ್ ರಾಯ್ ದೊಡ್ಡ ರೇಪಿಸ್ಟ್ ಥರ ಕಾಣುತ್ತಾರೆ. ತಾಯಿ-ತಂಗಿಯ ಪಾತ್ರಗಳು ಗೌಣ. ಒಟ್ಟಾರೆ ಗಾಂಧಿನಗರದ ಸಿದ್ಧಸೂತ್ರಕ್ಕೆ ಜೋತುಬಿದ್ದ ಕೃಷ್ಣಬ್ರಹ್ಮ, ಹಳೇ ಅನ್ನಕ್ಕೆ ಮತ್ತಷ್ಟು ಮಸಾಲೆ ಅರೆದು ನೋಡಿಕೊ ನೋಡಿಕೊ ಎಂದು ಪ್ರೇಕ್ಷಕರ ಮುಂದೆ ಸುರಿದಿದ್ದಾರೆ. ಉಳಿದದ್ದೆಲ್ಲಾ ಸೃಷ್ಟಿಕರ್ತನ ಪಾದಕ್ಕೆ ಕೃಷ್ಣಾರ್ಪಣ... ಓಂ ಮಹರ್ಷಿ ದೇವೊಭವ...

Read more about: movie, ಚಲನಚಿತ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada