»   » ಐವತ್ತು ಕೊಲೆ : ಪ್ರೇಕ್ಷಕರೂ ಬಲಿ!

ಐವತ್ತು ಕೊಲೆ : ಪ್ರೇಕ್ಷಕರೂ ಬಲಿ!

Subscribe to Filmibeat Kannada


ನಾನಾ ಪಾಟೇಕರ್‌ ಅಭಿನಯದ ‘ಅಬ್‌ ತಕ್‌ ಛಪ್ಪನ್‌’ನ ಒಂದಿಷ್ಟು ಅಂಶಗಳನ್ನೂ ಹಾಗೂ ಸೂರ್ಯ ಅಭಿನಯದ ‘ಕಾಕ್ಕಾ ಕಾಕ್ಕಾ’ ಚಿತ್ರಗಳ ತಾಂತ್ರಿಕತೆಯನ್ನು ಕೊಲಾಜ್‌ ಮಾಡಿದರೆ ಅದನ್ನು ‘ರಾಜೀವ್‌’ ಎಂದು ಕರೆಯಬಹುದು!

ಚಿತ್ರ : ಈ ರಾಜೀವ್‌... ಗಾಂಧಿ ಅಲ್ಲ
ನಿರ್ದೇಶನ : ರವಿ ಶ್ರೀವತ್ಸ
ಛಾಯಾಗ್ರಹಣ : ದಾಸರಿ ಸೀನು
ತಾರಾಗಣ : ವಿಜಯ ರಾಘವೇಂದ್ರ, ರಕ್ಷಿತಾ, ಶೋಭರಾಜ್‌, ರವಿ ಬೆಳಗೆರೆ, ಹರೀಶ್‌ ರೈ ಮತ್ತಿತರರು.

‘ಕಿಲ್ಲಿಂಗ್‌ ವಾಸ್‌ ನಾಟ್‌ ದೇರ್‌ ಇಂಟೆನ್ಷನ್‌, ಬಟ್‌ ಎನ್‌ಕೌಂಟರ್‌ ದೇರ್‌ ಓನ್ಲಿ ಸಲ್ಯೂಷನ್‌!’ ಎನ್ನುತ್ತೆ ‘ರಾಜೀವ್‌’ ಚಿತ್ರದ ಒಂದು ವಾಕ್ಯ.

ಪಂಚಪಾಂಡವರು ಎನಿಸಿಕೊಂಡ ರಾಜೀವ್‌, ಶ್ರಾವ್ಯ, ಬಿಕ್ಕು, ಮೂಸಾ ಮತ್ತು ವಿವೇಕ್‌ ಆಚಾರ್ಯ ಎಂಬ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ಗಳಿಗೆ ಹೆಣಗಳನ್ನು ಉರುಳಿಸುವುದಕ್ಕೆ ಇಷ್ಟವಿಲ್ಲ. ಆದರೆ, ಹಾಗೆ ಮಾಡದೆ ಬೇರೆ ದಾರಿಯೇ ಇಲ್ಲ. ಹಾಗೆ ಮಾಡದಿದ್ದರೆ ಸಿಂಗಾಪೂರದಲ್ಲಿ ಕುಳಿತು ಬೆಂಗಳೂರಿನ ಅಂಡರ್‌ ವರ್ಲ್ಡ್‌ನಲ್ಲಿ ಬುಗುರಿ ಆಡಿಸುವ ಭೂಗತ ದೊರೆಗಳಾದ ಸ್ಯಾಮ್ಸನ್‌ ಹಾಗೂ ಅವನ ತಮ್ಮ ಬಚ್ಚನ್‌ನ ಆಟ ನಿಲ್ಲಿಸಲಾಗುವುದಿಲ್ಲ.

ಅತ್ಲಾಗೆ ಅವರಿಬ್ಬರೂ ಸುಮ್ಮನಿರುವುದಿಲ್ಲ. ಒಂದಲ್ಲ ಒಂದು ಕಿತಾಪತಿ ಮಾಡಿ ಈ ಐವರನ್ನು ಕೆಣಕುತ್ತಾರೆ. ಈ ಐವರೂ ಒಂದೇ ಸಮನೆ ಸ್ಯಾಮ್ಸನ್‌ನ ಹುಡುಗರ ದೇಹದೊಳಕ್ಕೆ ಬುಲೆಟ್‌ಗಳನ್ನು ನುಗ್ಗಿಸುತ್ತಾರೆ. ಇವರೆಲ್ಲರ ಅಟ್ಟಹಾಸದಿಂದ ಬೆಂಗಳೂರು ಪೂರ್ತಿ ರಕ್ತ, ಮಾಂಸದ ಓಕುಳಿ. ಎಲ್ಲಕ್ಕೂ ಒಂದು ಕೊನೆಯಿರುವಂತೆ ಚಿತ್ರವೂ ಕೊನೆಯಾಗುತ್ತದೆ. ಇದು ರವಿ ಶ್ರೀವತ್ಸ, ಅಲ್ಲಲ್ಲ ‘ರಾಜೀವ್‌‘ನ ಒಟ್ಟಾರೆ ಸಾರಾಂಶ.

ಹಾಗಂತ ಇದೆಲ್ಲದರ ಮಧ್ಯೆಯೂ ಪುಟ ಗಟ್ಟಲೆ ಭಾಷಣಗಳಿವೆ, ಪೊಲೀಸರ್‌ ಕರ್ತವ್ಯ ನಿಷ್ಠೆ, ಕಾರ್ಯ ನಿರ್ವಹಣೆಯ ಬಗ್ಗೆ ಸುದೀರ್ಘ ಬೋಧನೆಯಿದೆ, ತಾಯಿ-ಅಕ್ಕ ಸೆಂಟಿಮೆಂಟಿದೆ ಮತ್ತು ‘ಸಂದೇಶ’ವಿದೆ. ಇಂಥ ಕೆಲಸಗಳನ್ನು ಅಂಬರೀಷ್‌, ದೇವರಾಜ್‌ ಹಾಗೂ ಸಾಯಿಕುಮಾರ್‌ ಪೊಲೀಸ್‌ ಅಧಿಕಾರಿಗಳಾಗಿದ್ದಾಗ ಪ್ರತಿಯಾಂದು ಚಿತ್ರದಲ್ಲೂ ಅವ್ಯಾಹತವಾಗಿ ಮಾಡಿ ಮುಗಿಸಿದ್ದರು. ಅದೇ ಕೆಲಸವನ್ನು ವಿಜಯ್‌ ರಾಘವೇಂದ್ರ ಸ್ವಲ್ಪ ವಿಭಿನ್ನವಾಗಿ ಮಾಡಿದ್ದಾರೆ ಅಷ್ಟೇ.

ನಾನಾ ಪಾಟೇಕರ್‌ ಅಭಿನಯದ ‘ಅಬ್‌ ತಕ್‌ ಛಪ್ಪನ್‌’ನ ಒಂದಿಷ್ಟು ಅಂಶಗಳನ್ನೂ ಹಾಗೂ ಸೂರ್ಯ ಅಭಿನಯದ ‘ಕಾಕ್ಕಾ ಕಾಕ್ಕಾ ’ ಚಿತ್ರಗಳ ತಾಂತ್ರಿಕತೆಯನ್ನು ಕೊಲಾಜ್‌ ಮಾಡಿದರೆ ಅದನ್ನು ‘ರಾಜೀವ್‌’ ಎಂದು ಕರೆಯಬಹುದು. ಆದರೆ ಅಲ್ಲಿಯ ಜೀವಂತಿಕೆ ಕತೆಯಲ್ಲಿ ಇರಲಾರದ್ದೇ ಎದ್ವಾ ತದ್ವಾ ಆಗಿದೆ. ತಾಂತ್ರಿಕವಾಗಿ ಶ್ರೀಮಂತವಾಗಿದೆ. ಆದರೆ ಒಂದು ಹಂತದಲ್ಲಿ ಹುಚ್ಚೆದ್ದು ‘ಫಾಸ್ಟ್‌ ಫಾರ್ವರ್ಡ್‌’ ಎಂದು ಕೂಗಬೇಕೆನಿಸುವಷ್ಟು ಸಹನೆ ಪರೀಕ್ಷಿಸುತ್ತದೆ. ಅದಕ್ಕೆ ಕಾರಣ ಮಾಮೂಲಿ ಚಿತ್ರಕತೆ ಹಾಗೂ ಸೆನ್ಸಾರ್‌ ಕತ್ತರಿಯ ಪ್ರಭಾವ.

ಒಂದೇ ಒಂದು ಬೈಗುಳ, ಕೆಟ್ಟ ದೃಶ್ಯ ಬಾರದಂತೆ ಸೆನ್ಸಾರ್‌ ಚೆನ್ನಾಗಿ ಕತ್ತರಿ ಆಡಿಸಿದೆ. ಅಷ್ಟಾದರೂ ಐಟಂ ಸಾಂಗ್‌ನ ಪರಮ ಅಶ್ಲೀಲ ದೃಶ್ಯಗಳು ಉಳಿದಿವೆ ಎಂಬುದು ಆಶ್ಚರ್ಯ. ಇಷ್ಟೆಲ್ಲ ಆದರೂ ಚಿತ್ರ ನೋಡಿಸಿಕೊಂಡು ಹೋಗುತ್ತದೆ ಎಂದರೆ ಅದಕ್ಕೆ ಪಾಂಡವರ ಅಭಿನಯ ಹಾಗೂ ದಾಸರಿ ಸೀನು ಕ್ಯಾಮೆರಾ ಕಾರಣ. ವಿಜಯ್‌ ರಾಘ ವೇಂದ್ರ ಇಷ್ಟವಾಗುತ್ತಾರೆ.

ಮೂರು ನಿಮಿಷ ಕಾಣಿಸಿದರೂ ಮೂವತ್ತು ವರ್ಷ ನೆನಪಿನಲ್ಲಿ ಇಡಬಹುದಾದ ಸಂದೇಶವನ್ನು ರವಿ ಬೆಳಗೆರೆ ನೀಡುತ್ತಾರೆ. ರಕ್ಷಿತಾ, ನಾಗಶೇಖರ್‌ ಹಾಗೂ ವಿಜಯ್‌ ಅಭಿನಯ ಚೆನ್ನಾಗಿದೆ. ಅದ್ಯಾಕೋ ಹರೀಶ್‌ ರೈ ಒಬ್ಬರು ಹಿಂದುಳಿಯುತ್ತಾರೆ. ಸ್ಯಾಮ್ಸನ್‌ ಆಗಿ ಶೋಭರಾಜ್‌ ಗೆಲ್ಲುತ್ತಾರೆ. ಪವಿತ್ರಾ ಲೋಕೇಶ್‌, ಅನಂತ ವೇಲು ಅಭಿನಯ ಓಕೆ. ಕೊಲೆಯಾಗುವ ಪಾತ್ರಗಳನ್ನು ಲೆಕ್ಕ ಇಟ್ಟಿಲ್ಲ.

ಕೊನೆಯ ಪಾಠ : ಒಂದು ಚಿತ್ರದಲ್ಲಿ ಕತೆ ಇರದೇ ಹೆಚ್ಚು ಎನ್‌ಕೌಂಟರ್‌ಗಳಿದ್ದರೆ ಕೊನೆಗೆ ಚಿತ್ರವೇ ಎನ್‌ಕೌಂಟರ್‌ ಆಗುತ್ತದೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada