»   » ವಿಮರ್ಶೆ ಲಿಫ್ಟ್ ಕೊಡ್ಲಾ: ಹೊಟ್ಟೆ ತುಂಬಾ ನಗು!

ವಿಮರ್ಶೆ ಲಿಫ್ಟ್ ಕೊಡ್ಲಾ: ಹೊಟ್ಟೆ ತುಂಬಾ ನಗು!

By: * ವಿನಾಯಕ ರಾಮ್
Subscribe to Filmibeat Kannada

ಒಂದು ಬಸ್ಸು. ಅದರಲ್ಲಿ ಒಂದಷ್ಟು ಆಶಾವಾದ ಕಳೆದು ಕೊಂಡವರು. ಬದುಕಲ್ಲಿ ಜುಗುಪ್ಸೆಗೊಂಡು, ಸಾವಿಗೆ ಶರಣಾಗ ಹೊರಟವರು. ಒಬ್ಬೊಬ್ಬರದ್ದು ಒಂದೊಂದು ದಂತ ಹಾಗೂ ದುರಂತ ಕತೆ.

ಒಬ್ಬ ಸಾಲಮಾಡಿ, ತುಪ್ಪ ತಿಂದು, ಪೆಟ್ಟುತಿನ್ನಲು ರೆಡಿಯಾದವ. ಮತ್ತೊಬ್ಬ 'ಶಾಸ್ತ್ರಿ' ಯವಾಗಿ ಚೀಟಿ ವ್ಯವಹಾರ ಮಾಡಿ, ಸಾಂಪ್ರದಾಯಿಕವಾಗಿ ಜನರ ದುಡ್ಡನ್ನು ಗೋವಿಂದಾ ಎನಿಸಿದವ.

ಇನ್ನಿಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದ ಪ್ರೇಮಿಗಳು; ಪ್ರೀತಿ ಮಾಡಿದ್ದು ಫಲಿಸಲಿಲ್ಲ ಎಂಬ ಕಾರಣಕ್ಕೆ ಸಾವಿಗೆ ಪಾಯಸ' ಉಣ್ಣಲು ಅಣಿಯಾದವರು. ವೃದ್ಧ ದಂಪತಿ ಜೀವನದಲ್ಲಿ ನೊಂದು, ಅದೇ ಬಸ್ಸು ಏರಿರುತ್ತಾರೆ...

ಇಂತಿಪ್ಪ 'ಆತ್ಮಾಹುತಿ ದಳ'ದ ಅಧ್ಯಕ್ಷ ಜಗ್ಗೇಶ್. ಉಪಾಧ್ಯಕ್ಷರು ಕೋಮಲ್ ಹಾಗೂ ಸಂಗಮೇಶ್ ಉಪಾಸೆ. ಖಜಾಂಚಿ ರಾಜು ತಾಳೀಕೋಟೆ... ಎಲ್ಲರಿಗೂ ಒಂದೇ ಗೆತ್ತಿರುವುದು-ಬಿದ್ದೂಬಿದ್ದು ನಗಿಸುವುದು. ನಕ್ಕು ನಕ್ಕು ಸುಸ್ತಾಗುವ ಹೊತ್ತಿಗೆ ಬದುಕಿನ ವಾಸ್ತವ ತೋರಿಸಿಕೊಡುವುದು. ಅಲ್ಲಲ್ಲಿ ಭಾವೋತ್ಖನನ ಮಾಡು ವುದು. ಮತ್ತೆ ಹಾಸ್ಯದ ಅಲೆ ಎಬ್ಬಿಸುವುದು...

ಇದು ರೀಮೇಕ್ ಚಿತ್ರವಾದರೂ ಕತೆಯಲ್ಲಿ ದಮ್ ಇದೆ. ನಿರ್ದೇಶಕರು ಹೇಳಬೇಕೆಂದಿದ್ದನ್ನು ರಸವತ್ತಾಗಿ, ಅಚ್ಚುಕಟ್ಟಾಗಿ ಹೇಳುತ್ತಾ ಹೋಗುತ್ತಾರೆ. ಅದೊಂಥರಾ ಜರ್ನಿ ಎನ್ನಬಹುದು. ಜಗ್ಗೇಶ್ ಚಿತ್ರದುದ್ದಕ್ಕೂ ಸುಮ್ಮನಿದ್ದೇ ನಗಿಸುತ್ತಾರೆ.

ಕೋಮಲ್ ಮಾತನಾಡುತ್ತಾ ಕಚಗುಳಿ ಇಡುತ್ತಾರೆ. ಸಂಗಮೇಶ್ ಉಪಾಸೆ ಹಾಗೂ ರಾಜು ತಾಳಿಕೋಟೆಗೆ ಬ್ರೇಕ್ ಕೊಟ್ಟು ಕೊಟ್ಟು ನಗಿಸುತ್ತಾರೆ. ಶ್ರೀನಿವಾಸಮೂರ್ತಿ ಕೆಲವೇ ಹೊತ್ತು ಬಂದುಹೋದರೂ ಚಿತ್ರದುದ್ದಕ್ಕೂ ನೆನಪಾಗುತ್ತಾರೆ. 'ಸಾಧು' ಕೋಕಿಲ ಎಂದಿನಂತೇ ಹೆಚ್ಚು ಹಾರಾಡು ತ್ತಾರೆ. ನಾಯಕಿ ಅರ್ಚನಾ ಇಲ್ಲಿ ನಾಯಕಿ ಎನ್ನುವದಕ್ಕಿಂತ ಸ್ನೇಹಪೂರ್ವಕ ತಾರೆ!

ವಿ.ಮನೋಹರ್ ಸಂಗೀತದಲ್ಲಿ ಎರಡು ಹಾಡುಗಳು ಸೂಪರ್. ರೀರೆಕಾರ್ಡಿಂಗ್‌ಗೆ ಹೆಚ್ಚು ಅಂಕ ಕೊಡ ಬಹುದು. ಚಿತ್ರದ ಗೆಲುವಿನ ಅರ್ಧ ಭಾಗ ಕ್ರೆಡಿಟ್ಟು ರಾಮ್ ನಾರಾಯಣ್ ಸಂಭಾಷಣೆಗೆ ಸಲ್ಲಬೇಕು. ಹೆಚ್ಚಿನ ಕಡೆ ನಗೆ ಟಾನಿಕ್ ಕುಡಿಸುತ್ತಾರೆ ರಾಮ್.

ಛಾಯಾಗ್ರಹಣದಲ್ಲಿ ಒಂದಷ್ಟು ಕೆಲಸ ಕಾಣುತ್ತದೆ. ಕ್ಯಾಮೆರಾವನ್ನೂ ಹೆಗಲಿಗೆ ಹೊತ್ತು, ನಿರ್ದೇಶನವನ್ನೂ ಮಾಡಿರುವ ಅಶೋಕ್ ಕಶ್ಯಪ್ ಕೈಚಳಕವನ್ನು ಮೆಚ್ಚಲೇಬೇಕು.

Please Wait while comments are loading...