»   »  ಮಿ. ಪೈಂಟರ್ : ಬಾಬು ಕ್ಯಾನ್ವಾಸಿಗೆ ಶರಣ್ ಬಣ್ಣ

ಮಿ. ಪೈಂಟರ್ : ಬಾಬು ಕ್ಯಾನ್ವಾಸಿಗೆ ಶರಣ್ ಬಣ್ಣ

Posted By:
Subscribe to Filmibeat Kannada
Actor Sharan
ಶರಣ್ ಅವರೇ ಮಿ. ಪೈಂಟರ್ ಚಿತ್ರದ ನಿಜವಾದ ನಾಯಕ. ಬೇಕಾಬಿಟ್ಟಿ ಗೀಚಿದ ಚಿತ್ರಕ್ಕೂ ಒಂದು ಅರ್ಥ ತಂದುಕೊಟ್ಟವರು ಮತ್ತು ಚಿತ್ರ ಬಣ್ಣಗೆಡದಂತೆ ನೋಡಿಕೊಂಡವರು. ಶರಣ್ ಈ ಚಿತ್ರದಲ್ಲಿ ಇಲ್ಲದಿದ್ದರೆ ಅಥವಾ ಇನ್ನಾರಾದರೂ ಈ ಪಾತ್ರವನ್ನು ಮಾಡಿದ್ದರೆ ಅಥವಾ ಶರಣ್ ಅವರೇ ಬಾಬುವನ್ನು ಕೈಬಿಟ್ಟಿದ್ದರೆ ಈ ಚಿತ್ರ ಒಂದು ಬಾರಿಯೂ ನೋಡಲು ಲಾಯಕ್ಕಿಲ್ಲದ ಚಿತ್ರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಈ ದೃಷ್ಟಿಯಿಂದ ಶರಣ್ ಅವರು ದಿನೇಶ್ ಬಾಬು ಅವರ ಮಾನ ಕಾಪಾಡಿದ್ದಾರೆ.

* ಪ್ರಸಾದ ನಾಯಿಕ

ಮಿ. ಪೈಂಟರ್ ಚಿತ್ರ ಒಂದು ಬಿಳಿ ಕ್ಯಾನ್ವಾಸಿನ ಮೇಲೆ ಬಣ್ಣಗಳನ್ನು ತೋರಿಸಲೇಬೇಕು ಎಂದು ಬೇಕಾಬಿಟ್ಟಿಯಾಗಿ ಚಿತ್ರಿಸಿ ಬಣ್ಣ ಎರಚಾಡಿದ ಒಂದು ಚಿತ್ರ ಅಷ್ಟೆ. ಅಲ್ಲಿಗೆ ಒಂದಾನೊಂದು ಕಾಲದ ಸ್ಟಾರ್ ನಿರ್ದೇಶಕ ದಿನೇಶ್ ಬಾಬು ಕನ್ನಡ ಚಿತ್ರರಂಗದಲ್ಲಿ ತಲುಪಿರುವ ಮಟ್ಟ ಇಷ್ಟೆ ಎಂಬುದು ಸಾಬೀತಾಗಿದೆ.

ಒಂದು ತುಂಬಿದ ಕುಟುಂಬ. ಮಗಳ ಮದುವೆಗೆ ಸಿದ್ಧತೆ ನಡೆಸಿಕೊಂಡಿರುತ್ತಾರೆ. ಆ ಹುಡುಗಿಯೋ ಇನ್ನಾರನ್ನೋ ಪ್ರೀತಿಸಿರುತ್ತಾಳೆ, ಹೇಳಲು ಹಿಂಜರಿಕೆ. ಅಂಥ ಸಂದರ್ಭದಲ್ಲಿ ಯಜಮಾನ ಶೇರುಗಳಲ್ಲಿ ಹೂಡಿದ ಹಣವನ್ನೆಲ್ಲ ಕಳೆದುಕೊಳ್ಳುತ್ತಾನೆ. ಉಳಿದ ಮಕ್ಕಳಿಂದಲೂ ಯಜಮಾನನಿಗೆ ಸಂಕಷ್ಟ ಎದುರಾಗುತ್ತದೆ. ಆ ಮನೆಗೆ ಬಣ್ಣ ಬಳಿಯಲು ಬಂದ ಇಬ್ಬರು ಅವರ ಸಂಕಷ್ಟಗಳಿಗೆ ಪರಿಹಾರ ಹುಡುಕಿಕೊಡುತ್ತಾರೆ. ಮನೆ ಯಜಮಾನ ಉಳಿದೆಲ್ಲ ಮನೆಯವರನ್ನು ಬಿಟ್ಟು ಈ ಪೈಂಟರ್ಗಳ ಮಾತು ನಂಬುತ್ತಾನೆ. ಕೊನೆಗೆಲ್ಲವೂ ಸುಖಮಯ. ಇದಿಷ್ಟು ಕಥೆ!

ಪ್ರೇಕ್ಷಕರನ್ನು ನಗಿಸಲೇಬೇಕು ಎಂದು ಒಂದು ತಳಬುಡವಿಲ್ಲದ ಕಥೆಯನ್ನಿಟ್ಟುಕೊಂಡು ಸಗಿಸುವ ಅನೇಕ ಸನ್ನಿವೇಶಗಳನ್ನು ಬಾಬು ಸೃಷ್ಟಿಸಿದ್ದಾರೆ. ಈ ನಗೆ ಸನ್ನಿವೇಶಗಳಿಗೆ ಅನೇಕ ಪಾತ್ರಗಳನ್ನು ಬಳಸಿಕೊಂಡಿದ್ದಾರೆ. ಆದರೆ ನಗಿಸುವುದು ಕೇವಲ ಒಂದೇ ಒಂದು ಪಾತ್ರ. ದಟ್ ಈಸ್ ಶರಣ್!

ಶರಣ್ ಅವರೇ ಈ ಚಿತ್ರದ ನಿಜವಾದ ನಾಯಕ. ಬೇಕಾಬಿಟ್ಟಿ ಗೀಚಿದ ಚಿತ್ರಕ್ಕೂ ಒಂದು ಅರ್ಥವಂತಿಕೆ ತಂದುಕೊಟ್ಟವರು ಮತ್ತು ಚಿತ್ರ ಬಣ್ಣಗೆಡದಂತೆ ನೋಡಿಕೊಂಡವರು. ಶರಣ್ ಈ ಚಿತ್ರದಲ್ಲಿ ಇಲ್ಲದಿದ್ದರೆ ಅಥವಾ ಇನ್ನಾರಾದರೂ ಈ ಪಾತ್ರವನ್ನು ಮಾಡಿದ್ದರೆ ಅಥವಾ ಶರಣ್ ಅವರೇ ಬಾಬುವನ್ನು ಕೈಬಿಟ್ಟಿದ್ದರೆ ಈ ಚಿತ್ರ ಒಂದು ಬಾರಿಯೂ ನೋಡಲು ಲಾಯಕ್ಕಿಲ್ಲದ ಚಿತ್ರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಈ ದೃಷ್ಟಿಯಿಂದ ಶರಣ್ ಅವರು ದಿನೇಶ್ ಬಾಬು ಅವರ ಮಾನ ಕಾಪಾಡಿದ್ದಾರೆ.

ಅರಳು ಹುರಿದಂತೆ ಪುಂಖಾನುಪುಂಖವಾಗಿ ಶರಣ್ ಬಾಯಲ್ಲಿ ಬರುವ ಧಾರವಾಡದ ಶೈಲಿಯ ಮಾತುಗಳು, ಮ್ಯಾನರಿಸಂ, ಟೈಮಿಂಗ್ ನಗೆಯ ಅಲೆಗಳನ್ನು ತಾನಾಗಿಯೇ ಎಬ್ಬಿಸುತ್ತವೆ. ವಿಪರ್ಯಾಸವೆಂದರೆ, ಶರಣ್ ಪಾತ್ರದ ಮುಂದೆ ಮತ್ತೊಬ್ಬ ಪ್ರಮುಖ ಪಾತ್ರಧಾರಿ ರಂಗಾಯಣ ರಘು ಸೇರಿದಂತೆ ಉಳಿದೆಲ್ಲ ಪಾತ್ರಗಳು ಮಸುಕು ಬಣ್ಣದ ಚಿತ್ರಗಳಾಗಿ ಕಾಣುತ್ತವೆ. ರಂಗಾಯಣ ರಘು ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಅತ್ತ ಕಾಮಿಡಿಯೂ ಅಲ್ಲದ, ಇತ್ತ ತೂಕವಿಲ್ಲದ ಪಾತ್ರ ಅವರಿಗೆ ಹೊಂದಿಕೆಯಾಗೇ ಇಲ್ಲ.

ನಗರದ ಗೋಡೆಗುಂಟ ಅಂಟಿಸಿದ ಚಿತ್ರದ ಪೋಸ್ಟರುಗಳಲ್ಲಿ 'ಲೂಸ್ ಮಾದ' ಯೋಗೀಶ್ ಚಿತ್ರ ನೋಡಿ ಹೋದವರಿಗೆ ನಿರಾಶೆ ಗ್ಯಾರಂಟಿ. ಶರಣ್ ಸುಂದರವಾಗಿ ಬಳಿದ ಬಣ್ಣದ ಮೇಲೆ ಯೋಗೀಶ್ ಅಂಟಿಕೊಂಡ ಕಪ್ಪುಚುಕ್ಕೆ. ವಿರಾಮದ ಹೊತ್ತಿಗೆ ಭರ್ಜರಿಯಾಗಿ ಕಾಲಿಡುವ ಯೋಗೀಶ್ ನಟನೆಯಲ್ಲಿ ದೊಡ್ಡ ಸೊನ್ನೆ. ಇತ್ತ ಬಣ್ಣ ಬಳಿಯಲೂ ಬಾರದ, ಬಣ್ಣ ಬಳಿದರೂ ಅಂದ ಕಾಣದ ಕ್ಯಾರೆಕ್ಟರಿಗೆ ಯೋಗೀಶ್ ಮಿಸ್ ಫಿಟ್. ರಮಣಿತು ಚೌಧರಿ ಅವರ ಪ್ರೇಮಿಯಾಗಿ ಕೂಡ ಒಂದು ಬಣ್ಣದ ಜೊತೆಗೆ ಸೇರಿಸಲೇಬಾರದಂಥ ಇನ್ನೊಂದು ಬಣ್ಣ ಯೋಗೀಶ್. ದಿನೇಶ್ ಬಾಬು ಕಲ್ಪನೆಯೇ ತಲೆ ಚಚ್ಚಿಕೊಳ್ಳುವಂತಿದೆ.

ಯೋಗೀಶ್ ಗಾಗಿಯೇ ಸೃಷ್ಟಿಸಲಾದ ಒಂದು ಹೊಡೆದಾಟದ ಸನ್ನಿವೇಶದಲ್ಲಿ ಕೂಡ ಶರಣ್ ಅವರೇ ಮಿಂಚಿದ್ದಾರೆ. ಹೊಡೆದಾಟದ ದೃಶ್ಯದಲ್ಲಿ ಶರಣ್ ನಿಜಕ್ಕೂ ಬೊಂಬಾಟ್. ನಾಯಿಯಂತೆ ಅರಚಾಡುವ ಪರಿ ಎಂಥವರಲ್ಲೂ ನಗೆ ಉಕ್ಕಿಸುತ್ತದೆ. ಯೋಗೀಶ್ ಹೊಡೆದಾಟಗಳು ಕ್ಯಾಮೆರಾ ಕೈಚಳಕದಿಂದ ಎಗರೆಗರಿ ಒದೆಯಲಷ್ಟೇ ಸೀಮಿತ. ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ, ಜೈಜಗದೀಶ್, ಶಿವಧ್ವಜ್, ಆಶಾಲತಾ, 'ಪಯಣ' ರವಿ ಶಂಕರ್ ಮೊದಲಾದವರಿದ್ದಾರೆ. ರವಿ ಶಂಕರ್ ಚಿತ್ರರಂಗದ ಪಯಣ ಎಲ್ಲಿಗೆ ಬಂದು ನಿಂತಿದೆ ನೋಡಿ? ಪಯಣದ ರಮಣಿತು ಚೌಧರಿ ಇಲ್ಲಿ ನಾಯಕಿಯಾದರೆ, ರವಿ ಶಂಕರ್ ಗೆ ಕೆಲಸಕ್ಕೆ ಬಾರದ ಅಳಿಯನ ಪಾತ್ರ!

ಕೊನೆಯ ಮಾತು : ಯೋಗೀಶ್ ಎಂಟ್ರಿ ಕೊಟ್ಟಾಗ ಬೀಳುವ ಸಿಳ್ಳೆಗಳಲ್ಲಿ ಕೆಲವಾದರೂ ಶರಣ್ ಅವರಿಗೆ ಬಿದ್ದರೆ ಅವರ ಶ್ರಮ ಸಾರ್ಥಕ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada