»   » ಮಿಸ್ಟರ್ ಭುಜಬಲ ಪರಾಕ್ರಮಿ! ಅರ್ಜುನ್

ಮಿಸ್ಟರ್ ಭುಜಬಲ ಪರಾಕ್ರಮಿ! ಅರ್ಜುನ್

Posted By: Super
Subscribe to Filmibeat Kannada

'ಗಜ' ಹಾಗೂ 'ಇಂದ್ರ' ಗೆದ್ದ ಮೇಲೆ ದರ್ಶನ್ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಆ ಸಿನಿಮಾದಲ್ಲಿ ಕತೆ ಇರಲೇಬೇಕು ಎಂದಿಲ್ಲ. ಒಂದಿಷ್ಟು ಹೊಡೆದಾಟ, ಕಿಕ್ಕೇರಿಸುವ ಸಂಭಾಷಣೆ, ನಾಯಕಿಯ ಜತೆ ಐತಲಕಡಿ' ಎನ್ನುವ ಡ್ಯಾನ್ಸ್, ಒಂದು ಐಟಂ ಸಾಂಗ್ ಇದ್ದರೆ ಸಾಕು. ಅದು ಗೆಲ್ಲುವುದು ಗ್ಯಾರಂಟಿ !

ವಿಮರ್ಶೆ : ವಿನಾಯಕರಾಮ್ ಕಲಗಾರು

ಈ ಸಿಂಪಲ್ ಸತ್ಯ ನಿರ್ದೇಶಕ ಶಾಹುರಾಜ್ ಸಿಂಧೆಗೂ ಗೊತ್ತು. ಇಂತಿಪ್ಪ ಮೇಲ್ಕಂಡ ಎಲ್ಲಾ ದೃಶ್ಯಗಳನ್ನೂ ಅವರು ಅರ್ಜುನ್ ಚಿತ್ರದಲ್ಲಿ ಹೂತಿಟಿದ್ದಾರೆ. ಅದನ್ನು ಅಭಿಮಾನ' ಎಂಬ ಪಿಕಾಸಿ ಬಳಸಿ, ಅಗೆದು ತೆಗೆಯುವುದು ಮಾತ್ರ ಪ್ರೇಕ್ಷಕರಿಗೆ ಬಿಟ್ಟ ವಿಷಯ !

ಆದರೆ ಒಂದತೂ ಸತ್ಯ, ದರ್ಶನ್ ಅಭಿಮಾನಿಗಳಿಗೆ ಇಲ್ಲಿ ವರಮಹಾಲಕ್ಷ್ಮಿ ಹಬ್ಬದ ಭೂರಿಬೋಜನ ಕಾದಿದೆ. ಇನ್ನಷ್ಟು ಆಕ್ಷನ್ ಇರಬೇಕಿತ್ತು. ಮತ್ತಷ್ಟು ಕುಣಿತ ಇದ್ದಿದ್ದರೆ ಮಸ್ತ್ ಆಗಿರುತ್ತಿತ್ತು...' ಇತ್ಯಾದಿ ಅಭಿಮಾನಿಗಳ ಬೇಡಿಕೆಗಳಿಗೆ ಸಿಂಧೆ ಅನುಮೋದನೆ ನೀಡಿದ್ದಾರೆ. ಇಲ್ಲಿ ಏನಿದ್ದರೂ ಚೇಸಿಂಗು, ಡ್ಯಾನ್ಸಿಂಗು; ದರ್ಶನ್ ಮಿಂಚಿಂಗೋ ಮಿಂಚಿಗು. ದೈತ್ಯಾಕಾರದ ದರ್ಶನ್ ಎಂಟ್ರಿ ಕೊಟ್ಟು ಅರ್ಜುನ ಎನ್ನುತಾರೆ ನನ್ನ...' ಎಂದು ಹಾಡುತ್ತಾ, ಸೊಂಟ ಕುಣಿಸುತ್ತಿದ್ದರೆ ಅಭಿಮಾನಿಗಳ ಆಕ್ರಂದನ' ಆಕಾಶ ಮುಟ್ಟುತ್ತದೆ. ಇಂದ್ರ, ಗಜದಲ್ಲಿ ಏನೇನು ಮಿಸ್ ಆಗಿತ್ತೊ ಅವೆಲ್ಲವೂ ಇಲ್ಲಿ ಡಿಟೈಲಾಗಿ ಸೇರಿಕೊಂಡಿವೆ.

ಸಿನಿಮಾದ ಇನ್ನೊಂದು ಹೈಲೈಟ್ ಎಂದರೆ ಅದ್ಧೂರಿತನ. ಆಸ್ಟ್ರಿಯಾ, ಜರ್ಮನಿ, ಬ್ಯಾಂಕಾಕ್, ಧನುಷ್ಕೋಟಿಯನ್ನು ಬರೀ ಒಂದು ಟಿಕೆಟ್ ಹಣದಲ್ಲಿ ನೋಡಬಹುದು. ಅಷ್ಟೇ ಅಲ್ಲ, ನಾವು ಕೊಟ್ಟ ಕಾಸು ಇಷ್ಟಕ್ಕಾದರೂ ಉಪಯೋಗಕ್ಕೆ ಬಂತಲ್ಲ ದೇವರೇ' ಎಂದು ನೀವು ಸಮಾಧಾನದ ನಿಟ್ಟುಸಿರು ಬಿಟ್ಟರೂ ಆಶ್ಚರ್ಯವಿಲ್ಲ. ಸಾಹಸ ನಿರ್ದೇಶಕ ರವಿವರ್ಮಗೆ ಇದು ನೂರನೇ ಚಿತ್ರ. ಅದಕ್ಕಾಗಿ ಅವರು ಸಾಕಷ್ಟು ಬೆವರು ಹರಿಸಿರುವುದು ಎದ್ದುಕಾಣುತ್ತದೆ. ಹೊಡೆದಾಟದ ಒಂದೊಂದು ದೃಶ್ಯಗಳೂ ಚಿಂದಿ ಆಗಿವೆ.

ಏನ್ ಕತೆ: ಇದೊಂದು ಪಕ್ಕಾ ಪೊಲೀಸ್ ಸ್ಟೋರಿ'. ಅರ್ಜುನ್ ಅಂತಿಂಥ ಪೊಲೀಸ್ ಅಲ್ಲ. ಹರಾಮಿಗಳ ಜಾತಕವನ್ನೇ ನುಂಗಿ ನೀರು ಕುಡಿಯಬಲ್ಲ ಅಸಾಮಿ. ಒಂಥರಾ ಸೂಪರ್ ಮ್ಯಾನ್, ಹೀಮ್ಯಾನ್ ಇದ್ದಹಾಗೆ. ಕರೆಂಟ್ ವೈರನ್ನು ನಾಯಿ ಬಾಲ ಹಿಡಿದ ಹಾಗೆ ಹಿಡಿದುಕೊಳ್ಳುತ್ತಾನೆ. ಆದರೆ ಅವನಿಗೆ ಏನೂ ಆಗುವುದಿಲ್ಲ. ಏಕೆಂದರೆ ಅವನು ಆರೂವರೆ ಅಡಿ ಇರುವ ಅರ್ಜುನ್! ಅವನ ಸುತ್ತಲೇ ಕತೆ ಎಂಬ ಪ್ರಾಣಿ ಬಾಲ ಸುಟ್ಟ ಬೆಕ್ಕಿನ ಥರ ಗಿರಕಿ ಹೊಡೆಯುತ್ತಿರುತ್ತದೆ. ಅರ್ಜುನ್ ಒಬ್ಬ ಸಾಮಾನ್ಯ ಸಿಟಿಜನ್' ಇದ್ದಹಾಗೆ. ಅವನಿಗೆ ಹಣ, ಹೆಸರು ಮಾಡುವ ಉದ್ದೇಶ ಖಂಡಿತಾ ಇರುವುದಿಲ್ಲ. ಏನಿದ್ದರೂ ಕರ್ತವ್ಯ ಕರ್ತವ್ಯ ಹಾಗೂ ಕರ್ತವ್ಯ! ನಾಲ್ಕು ಜನ ಲಂಫಂಗರನ್ನು ಮಟ್ಟ ಹಾಕುವುದು ಅವನ ಗುರಿ. ತಲೆಹಿಡುಕತನವನ್ನೇ ತಮ್ಮ ವೃತ್ತಿಯನ್ನಾಗಿ ಸ್ವೀಕರಿಸಿರುವ ಆ ನಾಲ್ಕು ತಲೆಗಳನ್ನು ಉರುಳಿಸಲು ಅರ್ಜುನ್ ತನ್ನ ಪಿಎಸ್‌ಐ ಪಾಶುಪತಾಸ್ತ್ರ ಬಳಸುತ್ತಾನೆ. ಅದು ಚಿತ್ರದ ಎಲ್ಲಾ ಆಂಗಲ್ ಸ್ಟೋರಿ.

ದರ್ಶನ್ ಅಯ್ಯ', ಸ್ವಾಮಿ', ಚಿತ್ರಗಳ ಪೊಲೀಸ್ ಪಾತ್ರಕ್ಕಿಂತ ಇಲ್ಲಿ ಹೆಚ್ಚು ಫ್ರೆಷ್ ಆಗಿ ಕಾಣುತ್ತಾರೆ. ಆದರೆ ಹಾಡೊಂದರಲ್ಲಿ : ಅದ್ಭುತ ಎನ್ನುತಾರೆ ನನ್ನ' ಎಂದಾಗ, ಇದು ಸುಳ್ಳಿರಬಹುದಾ? ಎಂಬ ಅನುಮಾನ ನಿಮ್ಮನ್ನು ಕಾಡಿದರೆ ಅದಕ್ಕೆ ನಿರ್ದೇಶಕರು ಹೊಣೆಯಾಗುತ್ತಾರೆ. ನಾಲ್ಕು ಜನ ಖಳನಾಯಕರಲ್ಲಿ ಸುಮನ್, ಅಜಯ್ ಹಾಗೂ ಅಮಿತ್ ನಾಲಾಯಕ್ಕು. ಶರತ್ ಲೋಹಿತಾಶ್ವ ಕಡಿಮೆ ಹೊತ್ತು ಬಂದುಹೋದರೂ ಹೆಚ್ಚುಕಾಲ ಮನಸ್ಸಿನಲ್ಲಿ ಉಳಿಯುತ್ತಾರೆ. ಅನಂತ್‌ನಾಗ್ ಕೂಡ ಅಷ್ಟೇ. ಅವರ ಅಭಿನಯದಲ್ಲಿ ನಾಲ್ಕಾಣಿಯಷ್ಟೂ ದೋಷ ಹುಡುಕುವುದು ಕಷ್ಟ. ಊರ್ವಶಿಯ ಮಾತಿನ ಟೈಮಿಂಗ್ ಮೆಚ್ಚಲೇಬೇಕು. ಕಾಮಿಡಿಯಲ್ಲಿ ಲವಲವಿಕೆ ಇಲ್ಲ. ಸಾಧುಕೋಕಿಲಾ ರೇಖಾದಾಸ್ ಜೋಡಿ, 15ವರ್ಷದ ಹಿಂದಿನ ಹಾಸ್ಯ ಮಾಡಿ, ಅಪಹಾಸ್ಯಕ್ಕೀಡಾಗಿದ್ದಾರೆ.

ನಾಯಕಿ ಮೀರಾ ಚೋಪ್ರಾ ತಾನೇ ಮಿಸ್ ವರ್ಲ್ಡ್ ಎನ್ನುವಂತೆ ನುಲಿಯುತ್ತಾಳೆ. ಅಭಿನಯ' ಎಂಬ ಪದಕ್ಕೆ ಆಕೆಯ ಪದಕೋಶದಲ್ಲಿ ಜಾಗವೇ ಇಲ್ಲ. ಅದರ ತುಂಬಾ ವಯ್ಯಾರ, ಶೃಂಗಾರ ಪದಗಳೇ ತುಳುಕುತ್ತಿವೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆಗಿಂತ ಅವರ ಬ್ಲ್ಯಾಕ್ ಟಿಕೆಟ್ ಮಾರುವ ಪಾತ್ರವೇ ಚೆನ್ನಾಗಿದೆ ! ದಾಸ್ ಛಾಯಾಗ್ರಹಣ ಆಕ್ಷನ್ ಚಿತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಹರಿಕೃಷ್ಣ ಸಂಗೀತದಲ್ಲಿ ನೀನು ಮುತ್ತು ಕೊಟ್ಟಾಗ...' ಹಾಡು ಮಧುರವಾಗಿದೆ. ಉಳಿದದ್ದು ಡಾಂ ಡೂಂ ಡುಸ್ ಪುಸ್. ಸುಂಟರಗಾಳಿ ಸುಂಟರಗಾಳಿ... ಶೈಲಿಯ ಹಾಡಿನಲ್ಲಿ ದಮ್ ಇದೆ.

ದರ್ಶನ್‌ಗೆ ಒಂದು ಮಾತು: ತಾವು ಇಲ್ಲಿಯವರೆಗೆ ಮಾಡಿರುವ ಎಲ್ಲ ಆಕ್ಷನ್ ಚಿತ್ರಗಳಿಗೂ ಹೊರತಾದ, ಭಿನ್ನವಾದ ಅಂಶಗಳು ಅರ್ಜುನ್'ನಲ್ಲಿ ಇದೆಯಾ? ಈ ಪ್ರಶ್ನೆಗೆ ನೀವು ಆದಷ್ಟು ಬೇಗ ಉತ್ತರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಭೂಪತಿ' ಸಿನಿಮಾದ ನಂತರದ ದಿನಗಳು ಮರುಕಳಿಸುವ ಸಾಧ್ಯತೆಗಳಿವೆ !

ಸಿಂಧೆ ಸಾಹೇಬ್ರಿಗೆ ಇನ್ನೊಂದು ಮಾತು: ತಾವು ಸಿನಿಮಾ ಹೆಸರಿನ ಕೆಳಗೆ ದರ್ಶನ್ ಅಭಿಮಾನಿಗಳಿಗೆ ಮಾತ್ರ' ಎಂದು ಬರೆಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada