»   » ಕೃಷ್ಣನ್ ಲವ್ ಸ್ಟೋರಿ: ನೋಡಬೇಕಾದ ತಾಜಾ ಮಾಲ್!

ಕೃಷ್ಣನ್ ಲವ್ ಸ್ಟೋರಿ: ನೋಡಬೇಕಾದ ತಾಜಾ ಮಾಲ್!

By: * ವಿನಾಯಕ ರಾಮ್
Subscribe to Filmibeat Kannada

ಪ್ರೀತಿ ವರ್ಸಸ್ ಆತ್ಮ ಸಾಕ್ಷಿ!ಆಕೆಗೆ ಪ್ರೀತಿಗಿಂತ ಮಿಗಿಲಾದ್ದು ಇನ್ನೊಂದಿಲ್ಲ. ಆದರೆ, ಆತ್ಮಸಾಕ್ಷಿ ಮಾಡುವ ದ್ರೋಹಕ್ಕಿಂತ ಮೋಸ ಮತ್ತೊಂದಿಲ್ಲ. ಹೀಗಿದ್ದೂ ಆಕೆ ಸತ್ಯದ ಅರಿವು ಮೂಡಿಸುತ್ತಾರೆ. ಬಡತನ ರೇಖೆಯಲ್ಲಿ ನಿಂತು, ಅಂಗೈಗೆ ಎಟುಕದ ಆಕಾಶದಲ್ಲಿ ಬಣ್ಣದ ಬದುಕಿನ ಚಿತ್ತಾರ ಬರೆಯಲು ಮುಂದಾಗುತ್ತಾಳೆ.

ಒಮ್ಮೆ ಎಡವುತ್ತಾಳೆ. ನೋವಿನ ಮಡುವಿನಲ್ಲಿ ಮಲಗುತ್ತಾಳೆ. ತಾನು ಪ್ರೀತಿಸಿದ ವ್ಯಕ್ತಿ ತನ್ನಿಂದ ಅದೆಷ್ಟೋ ಯೋಜನ ಮುಂದಿದ್ದಾನೆ ಎಂಬ ಯೋಚನೆಯಲ್ಲಿ ವಿಮೋಚನೆಯ ಹಾದಿ ತುಳಿಯುವ ಹಂತ ತಲುಪುತ್ತಾಳೆ. ಅಲ್ಲಿಗೆ ನಿರ್ದೇಶಕ ಶಶಾಂಕ್ ದೂರದಲ್ಲೆಲ್ಲೋ ನಿಂತು ಪ್ರೀತಿ ನೀತಿ ಪಾಠ ಹೇಳಿದಂತೆ ಭಾಸವಾಗುತ್ತದೆ. ಕತೆ ಕವಿತೆಯಾಗುತ್ತದೆ.

ಕವಿತೆಯಲ್ಲೊಂದು ನೀತಿ ಸಂಹಿತೆ ಸೃಷ್ಟಿಯಾಗುತ್ತದೆ. ದಟ್ ಈಸ್ ಶಶಾಂಕ್ ಹಾಗೂ ಕೃಷ್ಣನ್ ಚೆಲುವಿನ ಚಿತ್ತಾರ! ಇದು ಎಂದಿನ ಸಿನಿಮಾಗಳಂತೆ ನಿರೀಕ್ಷೆಯನ್ನೇ ನಿಜ ಮಾಡುತ್ತಾ ನಿರಾಳವಾಗಿ ಸಾಗುವುದಿಲ್ಲ. ನೀವು ಹೀಗಾಗುತ್ತದೆ ಎಂದುಕೊಂಡರೆ ಅದು ಹಾಗೆ ಆಗುತ್ತದೆ. ಹಾಗಾಗುವ ಹೊತ್ತಿಗೆ ಹೀಗಾದರೆ ಚೆನ್ನಾಗಿರುತ್ತದೆ ಎಂದುಕೊಂಡರೆ ಅದು ಸುಳ್ಳೇ ಸುಳ್ಳು!

ಹಾಗಂತ ನಿಮ್ಮನ್ನು ಚಿತ್ರ ಎಲ್ಲಿಯೂ 'ಕನ್‌ಫ್ಯೂಷನ್ ಆಫ್ ಇಂಡಿಯಾ' ಮಾಡುವುದಿಲ್ಲ. ಇದು ಹೀಗಿದ್ದರೇ ಚೆನ್ನ ಎಂದು ಕತೆಯ ಪ್ರತೀ ಹಂತವೂ ಸ್ಪಷ್ಟೀಕರಣ ಕೊಡುತ್ತಾ ಹೋಗುತ್ತದೆ. ಅದು ನಿಜವಾದ ಮೇಕಿಂಗ್. ಶಶಾಂಕ್ ಎಂದಿನಂತೇ ಇಲ್ಲಿಯೂ ಒಂದಷ್ಟು ವಿಷಯಗಳನ್ನು ಕುತೂಹಲ ಎಂಬ ಕನ್ನಡಿಯಲ್ಲಿ ಬಚ್ಚಿಡುತ್ತಾ ಹೋಗುತ್ತಾರೆ. ಮತ್ತೆ ಒಂದಿಷ್ಟನ್ನು ಪ್ರೇಕ್ಷಕರಿಗೇ ಬಿಡುತ್ತಾರೆ.

ಕ್ಲೈಮ್ಯಾಕ್ಸ್ ಹೊತ್ತಿಗೆ ಕತೆ- ಕತೆಯಲ್ಲ ಜೀವನವಾಗುತ್ತದೆ... ಇದು ಖಂಡಿತ ನಿರ್ದೇಶಕರ ಸಿನಿಮಾ ಎನ್ನುವುದನ್ನು ನಾಯಕಿ ರಾಧಿಕಾ ಪಂಡಿತ್ ನಿರೂಪಿಸಿದ್ದಾರೆ. ಆಕೆಯಿಂದ ಶಶಾಂಕ್ ನಿರೀಕ್ಷೆಗೂ ಮೀರಿ ಅಭಿನಯ ಹೊರಹಾಕಿಸಿದ್ದಾರೆ.

ಇತ್ತೀಚೆಗೆ ಬಂದ ಯಾವುದೇ ಚಿತ್ರದಲ್ಲೂ ನಾಯಕಿಯಿಂದ ಈ ಮಟ್ಟದ ನಟನೆ ನೋಡಿದ ನೆನಪಾಗುತ್ತಿಲ್ಲ. ಹಾಗಾಗಲು ಕತೆಯೂ ಕಾರಣ ಎಂದರೆ ತಪ್ಪಾಗಲಾರದು. ಯಥಾ ರಾಜ ತಥಾ ಪ್ರಜಾ...ಅಜಯ್ ರಾವ್ ಇನ್ನಷ್ಟು ಮಾಗಬೇಕು. ಮೈ ಚಳಿ ಬಿಟ್ಟು ನಟಿಸಬೇಕು. ಅದು ಸಾಧ್ಯವಾಗಿಲ್ಲ ಎನ್ನುವುದು ಎರಡನೇ ಮಾತು.

ಹತ್ತು ಕೇಜಿ ಹೊರುವವನ ತಲೆ ಮೇಲೆ ಐವತ್ತು ಕೇಜಿ ಇರಿಸಿದರೆ ಏನಾಗಲಿಕ್ಕಿಲ್ಲ?! ಉಮಾಶ್ರೀ ಪಾತ್ರಕ್ಕೂ ಹಾವಭಾವಕ್ಕೂ ಹೊಂದಾಣಿಕೆಯಾಗಿಲ್ಲ. ಅಚ್ಯುತ, ಪದ್ಮಜರಾವ್ ಎಲ್ಲರೂ ಸೀದಾ- ಸಾದಾ-ಸ್ವಾದ. ರಾಧಿಕಾ ಅಣ್ಣನ ಪಾತ್ರ ಮಾಡಿರುವ 'ಸ್ವಯಂವರ' ಚಂದ್ರು ತಾನು ಅವಕಾಶವಾದಿ ಎಂಬುದನ್ನು ಅಚ್ಚುಕಟ್ಟು ನಟನೆಯಿಂದ ಇನ್ನೊಮ್ಮೆ ನಿರೂಪಿಸಿದ್ದಾರೆ.

ಶ್ರೀಧರ್ ಸಂಗೀತದ ಮೂರು ಹಾಡುಗಳಿಗೆ ಹತ್ತಕ್ಕೆ ಹತ್ತು ಅಂಕ. ಚಂದ್ರಶೇಖರ್ ಛಾಯಾಗ್ರಹಣಕ್ಕೆ ಹತ್ತಕ್ಕೆ ಒಂಬತ್ತು! ದ್ವಿತೀಯಾರ್ಧ ಇನ್ನು ಸ್ವಲ್ಪ ಚುರುಕಾಗಬೇಕಿತ್ತು. ಅಲ್ಲಲ್ಲಿ ಮನರಂಜನೆಯ ಅಂಶ ತುಂಬಬೇಕಿತ್ತು.

ನಾಯಕಿಯ ನಟನೆಗೆ ಪೈಪೋಟಿ ನೀಡುವ ನಾಯಕ ಇರಬೇಕಿತ್ತು ಎನ್ನುವುದನ್ನು ಹೊರತಾಗಿ ಉಳಿದಂತೆ ಕೃಷ್ಣನ ಲವ್ ಸ್ಟೋರಿ ನಿಜಕ್ಕೂ ನಡೆದಾಡುವ ತಾಜ್‌ಮಹಲ್. ನೋಡಲೇಬೇಕಾದ ತಾಜಾ ಮಾಲ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada