twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಹೀಗೊಂದು ಬ್ಲ್ಯಾಕ್ ಕಾಮಿಡಿ

    By Staff
    |

    ಇದೊಂಥರಾ ಬ್ಲ್ಯಾಕ್ ಅಂಡ್ ವೈಟ್ ಕಾಲದ ಕಲಸುಮೇಲೋಗರಾ. ಇಲ್ಲಿನ ಕತೆಗೆ ಸ್ಫೂರ್ತಿ ಅಂಬರೀಷ್ ಜಮಾನದ ಆಪರೇಷನ್ ಅಂತ ಚಿತ್ರ. ಸಮಾಜದಲ್ಲಿ ಅದೆಷ್ಟೋ ಭ್ರಷ್ಟರಿದ್ದಾರೆ, ಇರುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿದ್ದ ಔಷಧವನ್ನು ತರಕಾರಿಯಂತೆ ಮಾರಿಕೊಂಡು, ಜೇಬು ತುಂಬಿಸಿಕೊಳ್ಳುವ ವೈದ್ಯ, ನೌಕರಿ ಸೇರಲು ಬಂದ ಬಡ ಹುಡುಗ ರಿಂದ ಲಂಚ ಕೇಳುವ ಅಧಿಕಾರಿ, ಜನರ ದುಡ್ಡನ್ನು ನುಂಗುವ ಮಂತ್ರಿ, ರೈತರಿಗೆ ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ ಕೊಡುತ್ತೇವೆ ಎಂದು ಲಕ್ಷ ಲಕ್ಷ ನುಂಗಿಹಾಕುವ ಮೋಸ ಗಾರರು... ಹೀಗೆ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಊದುವ ತಂಡವೇ ಬ್ಲ್ಯಾಕ್‌ಗ್ಯಾಂಗ್.

    *ವಿನಾಯಕರಾಮ್ ಕಲಗಾರು

    ಇವರೆಲ್ಲಾ ಅಸಹಾಯಕರು, ನೊಂದು, ಬೆಂದವರು. ಸೋತು, ಸುಣ್ಣವಾದವರು. ನಿರ್ದೇಶಕ ಮಹೇಂದ್ರ ಅಂಥ ಐದು ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಇಲ್ಲಿ ಒಬ್ಬ ನಾಯಕ/ ನಾಯಕಿ ಇಲ್ಲ. ಎಲ್ಲ ಸೇರಿ, ಕೊಲೆ ಮಾಡುತ್ತಾರೆ. ಎಲ್ಲ ಸೇರಿ ಕತೆ ಹೇಳುತ್ತಾರೆ. ಆದರೆ ನಿರೂಪಣೆಯಲ್ಲಿ ನೀರಸತ್ವ ಎದ್ದುಕಾಣುತ್ತದೆ. ಗ್ರಾಂಥಿಕ ಸಂಭಾಷಣೆ ಕಪ್ಪು ಚುಕ್ಕೆ. ಕತೆಯಲ್ಲಿ ಹೊಸತನ ಇಲ್ಲದಿದ್ದರೂ ಸಂಭಾಷಣೆ ಚುರುಕಾಗಿದ್ದರೆ ಅದನ್ನು ಮರೆಮಾಚಬಹುದು.ಅದಕ್ಕೆ ತಕ್ಕಂತೆ ನಟರ ಅಭಿನಯ ಕೂಡ ಇರಬೇಕು.

    ಆದರೆ ಇಲ್ಲಿ ಎಲ್ಲ ಹೊಸಬರು. ಒಬ್ಬರ ಪಾತ್ರವೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಸಾಮಾನ್ಯದಲ್ಲಿ ಸಾಮಾನ್ಯ ಎನಿಸುವ ನಟನೆಯಿಂದ ಇಡಿ ಕತೆಯೇ ಜೊಳ್ಳು ಜೊಳ್ಳು ಎನಿಸುತ್ತದೆ. ವಿಶೇಷ ಪೊಲೀಸ್ ಪಡೆಯ ಕಡೆಯಿಂದ ಬರುವ ಕಿಶೋರ್ ಮಾತ್ರ ಕೆಲ ಹೊತ್ತು ಸದ್ದು ಮಾಡುತ್ತಾರೆ. ಅಭಿನಯದಲ್ಲೂ ಸ್ಕೋರ್ ಮಾಡುತ್ತಾರೆ. ಐವರಲ್ಲಿ ಒಬ್ಬಾಕೆ ಮಾನ್ಸಿಯ ಪಾತ್ರವನ್ನು ಕೆಲ ಹೊತ್ತು ಸಹಿಸಿಕೊಳ್ಳಬಹುದು.

    ಇನ್ನೊಬ್ಬ ನಾಯಕಿ ಜಯಶ್ರೀ ನಗುವ ನೋಡಲೆರಡು ಕಣ್ಣು ಸಾಲದಣ್ಣಾ... ಸಂಗೀತದಲ್ಲಿ ಸತ್ವವಿಲ್ಲ, ಸಾಹಿತ್ಯ ಅರ್ಥ ಆಗಬೇಕಾದರೆ ಸಿನಿಮಾ ಇನ್ನೊಂದು ಬಾರಿ ನೋಡಬೇಕು. ಹೊಡೆದಾಟದ ದೃಶ್ಯಗಳು ಮಕ್ಕಳಾಡುವ ಐಸ್‌ಪೈಸ್ ಆಟದಂತಿದೆ. ಸಂಕಲನಕಾರರಿಗೆ ಹೊಸತನವೇ ಗೊತ್ತಿಲ್ಲವೇನೋ ಗೊತ್ತಿಲ್ಲ. ಮುಂದಿನ ದೃಶ್ಯ ಹೀಗೇ ಇರುತ್ತೆ ಎಂದು ಪ್ರೇಕ್ಷಕ ಅದಾಗಲೇ ಭವಿಷ್ಯ ಹೇಳಿಬಿಡುತ್ತಾನೆ. ಪೆಟ್ರೊಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್ ಮೊದಲಾದವರು ಬಂದು ಹೋಗಿದ್ದೇ ಗೊತ್ತಾಗುವುದಿಲ್ಲ.

    ಮಿಸ್ಟರ್ ಮಹೇಂದ್ರ ಅವರೇ... ಸಿನಿಮಾದಲ್ಲಿ ಕೇವಲ ಫ್ಯಾಷನ್ ಇದ್ದರೆ ಸಾಲದು. ಅದಕ್ಕೆ ಅದರದ್ದೇ ಆದ ಫ್ಯಾಷನ್ ಇದೆ. ಜನ ಥೇಟರ್‌ಗೆ ಬರುವುದು ನಿಮ್ಮ ಹೊಸ ಪ್ರಯತ್ನ ನೋಡಿ, ಪರವಾಗಿಲ್ಲಪ್ಪಾ, ಮೊದಲನೇ ಯತ್ನ, ಸಹಿಸಿಕೊಳ್ಳೋಣ. ಮುಂದೆ ಸರಿ ಮಾಡಿಕೊಳ್ಳಬಹುದು... ಎನ್ನುವಷ್ಟು ಕರುಣಾಮಯಿಗಳಲ್ಲ. ಏಕೆಂದರೆ ಅವರು ಸಿನಿಮಾ ಬರುವ ಮುನ್ನ ಐವತ್ತು, ನಲವತ್ತು ರೂ. ತೆತ್ತು ಬಂದಿರುತ್ತಾರೆ. ಅದಕ್ಕೆ ತಕ್ಕ ತುಷ್ಠಿಗುಣ ಸಿಗದಿದ್ದರೆ ಖಂಡಿತ ಅವರು ಅದಕ್ಕೆ ಸೊಪ್ಪು ಹಾಕುವುದಿಲ್ಲ. ಈ ಸತ್ಯ ನಿಮಗೆ ಮುಂದಿನ ಚಿತ್ರ ಮಾಡುವಾಗ ಗೊತ್ತಾದರೆ ಒಳ್ಳೆಯದು!

    Sunday, June 21, 2009, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X