»   » ಸಂಗಾತಿ ನೀನೂ ... ಬರಿದಾಗಿದೆ! : ವಿಮರ್ಶೆ

ಸಂಗಾತಿ ನೀನೂ ... ಬರಿದಾಗಿದೆ! : ವಿಮರ್ಶೆ

Posted By: Staff
Subscribe to Filmibeat Kannada

ಇದೊಂಥರಾ ಹೊಸ ಮ್ಯಾಜಿಕ್... ಹೆಸರು ಅಬ್ರಕಡಬ್ರಾ... ಹಾಗಂತ ರಾಮ್‌ಗೋಪಾಲ್ ವರ್ಮರ ಬ್ಲ್ಯಾಕ್ ಮ್ಯಾಜಿಕ್ ಅಲ್ಲ. ಆದರೂ ಸಿನಿಮಾ ನೋಡಿ ಹೊರಬಂದವರಿಗೆ ಏನೊ ಒಂಥರಾ ಭಯ!

*ವಿನಾಯಕ ರಾಮ್ ಕಲಗಾರು

ಅದಕ್ಕೆ ಹೊಣೆ ಯಾರು?ನಾಯಕ ಚೇತನ್‌ಗಂತೂ ಅಭಿನಯದ ಗಂಧವೂ ಇಲ್ಲ, ಪಾತ್ರಪೋಷಣೆಯ ಗಾಳಿಯೂ ಇಲ್ಲ. ಏನಿದ್ದರೂ ಏಕ್ ಮಾರೊ ದೋ ತುಕುಡಾ. ಬೇಕಾದರೆ ಹತ್ತು ಜನರನ್ನು ಒಟ್ಟಿಗೇ ದಬದಬದಬ ಬಡೀತಾನೆ. ತಮಾಷೆಗೆ ಬೇಕಾದರೆ ಕನ್ನಡದ ಬ್ರೂಸ್‌ಲೀ ಎನ್ನಿ. ಆತನ  ಪಾತ್ರದ ಬಗ್ಗೆ  ಸ್ಪಷ್ಟೀಕರಣ ಕೊಡುವುದಕ್ಕಿಂತ ಒಮ್ಮೆ ತೊಗಲು ಗೊಂಬೆ ಆಟ ನೆನಪಿಸಿಕೊಳ್ಳಿ. ಜಿಂಕೆ ಮರಿ ಥರದ 'ಮಿಂಚಿನ ಓಟ'. ಜತೆಗೆ ಒಂದಷ್ಟು ಪ್ರೀತಿ ಪ್ರೇಮ ಪ್ರಣಯ. ಮತ್ತಷ್ಟು ಥಯ್ಯ ಥಯ್ಯ. ಮುಂದೇನಯ್ಯಾ? ಎಲ್ಲ ಆಯೋಮಯ...

ಒಂದು ಚಿತ್ರಕ್ಕೆ ನಿರ್ದೇಶಕರೇ ಬೆನ್ನೆಲುಬು. ಆದರೆ ಆ ಮಹಾನುಭಾವ ಅರ್ಧ ಮುಗಿಸಿ, ಮುಂದಿನ ತಯಾರಿಗೆ ಕೈ ಎತ್ತಿಬಿಟ್ಟರೇ ಏನಾಗುತ್ತೆ? ಮತ್ತೇನಾಗುತ್ತೆ? ಸಂಗಾತಿ ಚಿತ್ರದಂತಾಗುತ್ತದೆ. ಹಂಸಲೇಖಾ ಸಂಯೋಜಿತ ಮೂರು ಉತ್ತಮ ಗುಣಮಟ್ಟದ ಹಾಡುಗಳಿವೆ. ಶ್ರೀನಾಥ್, ವಿನಯಾಪ್ರಕಾಶ್  ನವಿರಾಗಿ ನಟಿಸಿದ್ದಾರೆ. ನೃತ್ಯ ಸಂಯೋಜನೆಯಲ್ಲಿ ಸಾಕಷ್ಟು ಲವ್-ಲವಿಕೆಯಿದೆ. ಸುರೇಶ್ ಅರಸ್‌ರ ಶಿಸ್ತುಬದ್ಧ  ಸಂಕಲನವಿದೆ. ಭೈರೇಗೌಡ್ರ ಭಯಂಕರ ಬಜೆಟ್ ಎಲ್ಲಾ ಕಡೆ ರಾರಾಜಿಸುತ್ತದೆ. ಆದರೂ ಸಿನಿಮಾದ ಒಟ್ಟು ಮೊತ್ತ ಮಾತ್ರ ಶೂನ್ಯ!

ಈತನಿಂದ ನಿರ್ದೇಶಕರಿಗೆ ಕೆಲಸ ತೆಗೆಸಲು ಆಗಿಲ್ಲವೋ ಗೊತ್ತಿಲ್ಲ. ಸದ್ಯಕ್ಕೆ  ವಿಚಾರಿಸಲು ಅವರೇ ಇಲ್ಲ. ಇಲ್ಲಿ ಅವರ ಮೊದಲ ಸಿನಿಮಾ ಬಿಡುಗಡೆಯಾಗಿದೆ. ಆ ತಿಮ್ಮಪ್ಪ  ತಿರುಪತಿಯಲ್ಲಿ ಚೈತ್ರಯಾತ್ರೆ' ಮಾಡುತ್ತಿದ್ದಾರೆ!

ಇದೊಂಥರಾ ಸೂತ್ರ ಹರಿದ ಗಾಳಿಪಟ. ಕೆಲವೇ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿ ಉಳಿದದ್ದೆಲ್ಲಾ ಒಂಥರಾ ಸನ್ನಿ ಇದ್ದ ಹಾಗೆ. ಏಕೆ ಬಂತು? ಬಂದು ಹೋಗಿದ್ದಾದರೂ ಏಕೆ? ಇತ್ಯಾದಿ ಇತ್ಯಾದಿ. ತೆಲುಗು ಮೂಲದಿಂದ ಬಂದ ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಕೆಲವರಿಗೆ ತಿಥಿ ಊಟ ಹಾಕಿಸಿದ್ದಾರೆ. ಕೋಟಿ ಕೋಟಿ ಹಣವನ್ನು ಗಂಗಾ-ಕಾವೇರಿಯಲ್ಲಿ ತೇಲಿಬಿಟ್ಟಿದ್ದಾರೆ. ಆದರೆ ಅವರು ಸೇಫ್ ಆಗಿಯೇ ಇದ್ದಾರೆ.

ನಾಯಕಿ ಐಶ್ವರ್ಯಾ ಕ್ಲೋಸಪ್‌ನಲ್ಲಿ ಚೆನ್ನಾಗಿ ಕಾಣುತ್ತಾರೆ. ಅಭಿನಯಕ್ಕೆ ಮೊದಲಾರ್ಧದಲ್ಲಿ ಅವಕಾಶವೇ ಇಲ್ಲ. ಇನ್ನರ್ಧದಲ್ಲಿ ಮಾತನಾಡುವ ಬೊಂಬೆ. . ಅವರಿಗಿಂತ ಪ್ರತೀಕ್ಷಾ ಶೆಟ್ಟಿ  ಪಾತ್ರಕ್ಕೆ ಹೆಚ್ಚು ಲವಲವಿಕೆಯಿದೆ. ಐಟಂ ಸಾಂಗ್ ಬೆಡಗಿ ಅರ್ಚನಾ ಐತಲಕಡಿ ಎಂದು ರಸದೌತಣ ನೀಡುತ್ತಾಳೆ. ಕಾಮಿಡಿಯ ಹೆಸರಿನಲ್ಲಿ ಹರೀಶ್ ಪ್ರೇಕ್ಷಕರನ್ನು ಕಾಡಿಸುತ್ತಾರೆ. ಅರಚಾಟ, ಕೂಗಾಟವೇ  ಹಾಸ್ಯದೂಟ ಎಂದುಕೊಂಡರೆ ಅದು ಹಾಸ್ಯದ ಪರಮಾವಯೇ ಸರಿ. 

ಚಿತ್ರಕತೆ ವಿಚಿತ್ರವಾಗಿದೆ. ಸಂಭಾಷಣೆ ರಾಜಕಾರಣಿಗಳ ಮಾರುದ್ದ ಭಾಷಣವನ್ನೇ ಮೀರಿಸುತ್ತದೆ. ದತ್ತು ಛಾಯಾಗ್ರಹಣದಲ್ಲಿ ಅದ್ಧೂರಿತನ ಮಾತ್ರ ಎದ್ದುಕಾಣುತ್ತದೆ. ನೃತ್ಯಸಂಯೋಜನೆ ಹಚ್ಚಹಸಿರಾಗಿದೆ. ಕತೆ ಹತ್ತರಲ್ಲಿ ಮತ್ತೊಂದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada