twitter
    For Quick Alerts
    ALLOW NOTIFICATIONS  
    For Daily Alerts

    ಎರಡೂವರೆ ತಾಸು ಅರಳುವ ಮೊಗ್ಗಿನಮನಸು

    By Super
    |

    ಕನ್ನಡದ ಇತ್ತೀಚಿನ ಸಿನಿಮಾಗಳು: ಒಬ್ಬ ನಾಯಕ. ಆತ ಕಾಲೇಜ್ ಹುಡುಗ; ಅನಾಥ, ಅದಕ್ಕಾಗಿ ರೌಡಿಸಂ ದಂಧೆ'ಗಿಳಿದಿರುತ್ತಾನೆ. ರಸ್ತೆಯಲ್ಲಿ ಕಂಡ ಹುಡುಗಿಯನ್ನು ಪ್ರೀತಿಸುತ್ತಾನೆ. ಅವಳೂ ಅದನ್ನೇ ಮಾಡುತ್ತಾಳೆ. ಇದ್ದಕ್ಕಿದ್ದಂತೇ ಅವಳ ಅಪ್ಪ ಅಮ್ಮನಿಗೆ ನಾಯಕನ ಹರಿಪುರಾಣ' ಗೊತ್ತಾಗಿಬಿಡುತ್ತದೆ. 63ರಂತಿರುವ ಅವರಿಬ್ಬರ ಸಂಬಂಧವನ್ನು 36ರಂತೇ ಮಾಡಲು ಹೆಣಗಾಡುತ್ತಾರೆ. ಈ ಮಧ್ಯೆ ಒಬ್ಬ ವಿಲನ್ ಬರುತ್ತಾನೆ. ಅದೇ ಹುಡುಗಿಯ ಹಿಂದೆ ಬೀಳುತ್ತಾನೆ; ಚುಡಾಯಿಸುತ್ತಾನೆ. ಹೀರೊ ಕೈಯಿಂದ ಹಿಗ್ಗಾಮುಗ್ಗ ಲತ್ತೆ ತಿನ್ನುತ್ತಾನೆ... ಇತ್ಯಾದಿ ಇತ್ಯಾದಿ.

    *ವಿನಾಯಕರಾಮ್ ಕಲಗಾರು

    ಮುಂಗಾರು ಮಳೆ - ದುನಿಯಾ ಆದಮೇಲೆ ಕನ್ನಡದಲ್ಲಿ ಬರುತ್ತಿರುವ ಚಿತ್ರಗಳು ಬರಿ ಇಂಥವೇ ಎಂದರೆ ಗಾಂನಗರದ ಪಂಡಿತರು ಬೇಸರ ಮಾಡಿ ಕೊಳ್ಳಬಾರದು. ಆದರೆ ನಿರ್ದೇಶಕ ಶಶಾಂಕ್ ಅವೆಲ್ಲ ಕ್ಕಿಂತ ಭಿನ್ನವಾದ, ಹೊಸತನದಿಂದ ಕೂಡಿದ , ಎಲ್ಲರೂ ನೋಡಬಹುದಾದ' ಮೊಗ್ಗಿನ ಮನಸು ಸಿನಿಮಾ ಮಾಡಿದ್ದಾರೆ ಎಂದರೆ ಮೂಗು, ಕಿವಿ, ಕಣ್ಣುಗಳನ್ನು ಕೆಂಪು ಮಾಡಿಕೊಳ್ಳಬಾರದು.

    ಹೌದು, ಶಶಾಂಕ್ ಹದಿ'ನಾರು ಹರಯ'ದ ಹುಡುಗ/ಹುಡುಗಿಯ ಅಂತಃಕರಣದಲ್ಲಿ ಅಂತರ್ಗತ ವಾಗಿರುವ ಅನುಭವಗಳನ್ನು, ಅಂತರಂಗದ ಅಭಿಲಾಷೆಗಳನ್ನು, ಆ ಪುಟವಿಟ್ಟ ಪುಟ್ಟ ಹೃದಯಗಳಲ್ಲಿ ಉಮ್ಮಳಿಸುವ ಆಸೆ -ಆಮಿಷಗಳು, ನನಗದು ಬೇಕು, ಅದಿಲ್ಲದಿದ್ದರೆ ನಾನಿಲ್ಲ' ಎಂದುಕೊಂಡಾಗ ಅಕಸ್ಮಾತ್ ಆ ವಸ್ತು' ಕೈ ತಪ್ಪಿದಾಗ ಉಂಟಾಗುವ ಈರ್ಷೆಗಳನ್ನು... ಹೀಗೆ ಹುಚ್ಚು ಖೋಡಿ ಮನಸು' ಎಂಬ ವಿಷಯಗಳ ಮೇಲೆ ಸಾಕಷ್ಟು ಅಧ್ಯಯನ ನಡೆಸಿ, ಅದು ಒಂದು ಆಫ್‌ಬೀಟ್ ಅಥವಾ ಕಲಾತ್ಮಕ ಚಿತ್ರವೋ ಆಗದಂತೆ ನಿರ್ದೇಶಿಸಿದ್ದಾರೆ. ಇಂದಿನ ಯುವಪೀಳಿಗೆಗೆ ಏನೇನು ಬೇಕೋ ಅವೆಲ್ಲವುಗಳನ್ನೂ ಪ್ಯಾಕೇಜ್ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಶಶಾಂಕ್.
    ಒಟ್ಟಾರೆಯಾಗಿ ಹೇಳುವುದಾದರೆ: ಹುಡುಗರು ತಮ್ಮನ್ನು ಹಿಂಬಾಲಿಸುವ ನೆರಳು ಹೇಗಿರುತ್ತೆ ಎಂಬುದನ್ನು ಅರಿಯಲು ಮೊಗ್ಗಿನ ಮನಸು' ನೋಡಬೇಕು. ಹುಡುಗಿಯರು ತಮ್ಮ ರೂಪವನ್ನು ಕನ್ನಡಿಯಲ್ಲಿ ಪದೇಪದೆ ನೋಡಿಕೊಳ್ಳುವ ಬದಲು ಒಮ್ಮೆ ಈ ಸಿನಿಮಾ ನೋಡಬಹುದು. ಮಕ್ಕಳನ್ನು ಅರ್ಥಮಾಡಿಕೊಳ್ಳಲಾಗದ ಅಪ್ಪ ಅಮ್ಮ ಜಂಟಿಯಾಗಿ ಬಂದುನೋಡಬೇಕು !

    ಇಡೀ ಸಿನಿಮಾದ ಹೈಲೈಟ್ ಎಂದರೆ ಚಂದ್ರು ಛಾಯಾಗ್ರಹಣ. ಒಂದೊಂದು ದೃಶ್ಯಗಳೂ ಮಣಿರತ್ನಂರ ಸಿನಿಮಾಗಳನ್ನು ನೆನಪಿಸುವಂತಿವೆ. ಅವು ಎಲ್ಲಿಯೂ ಕಣ್ಣಿಗೆ ರಾಚುವುದಿಲ್ಲ. ನಾಲ್ಕು ಹುಡುಗ ಹುಡುಗಿಯರ ಕತೆಯನ್ನು ಎರಡೂವರೆ ತಾಸಿನಲ್ಲಿ ಹೇಳುವುದೆಂದರೆ ಸುಲಭದ ಮಾತಲ್ಲ. ಅವೆಲ್ಲವೂ ನೀಟಾಗಿ ತಲೆಯಲ್ಲಿ ನೋಟ್ ಆಗುವಂತೆ ಮಾಡಿದ್ದಾರೆ ಚಂದ್ರು. ಆದರೆ ಮೊದಲ ದೃಶ್ಯದಲ್ಲೇ ಚಿಟ್ಟೆ, ನಂತರ ಹಾವಿನ ಗ್ರಾಫಿಕ್ ಬಳಸಿದ್ದು ಸರಿಯಾಗಿಲ್ಲ. ಮನೋಮೂರ್ತಿ ಸಂಗೀತದಲ್ಲಿ ಇನ್ನಷ್ಟು ಪಂಚ್ ಇದ್ದಿದ್ದರೆ ಎನ್ನುವುದಕ್ಕಿಂತ, ಇರುವುದರಲ್ಲೇ ಮೊಗ್ಗಿನ ಮನಸಲಿ..., ಮಳೆ ಬರುವ ಹಾಗಿದೆ... ಹಾಡುಗಳು ಚೆನ್ನಾಗಿವೆ ಎನ್ನುವುದೇ ಲೇಸು. ನನಗೂ ಒಬ್ಬ ಹುಡುಗ ಬೇಕು...' ಹಾಡಿನ ಧಾಟಿಗೆ ಹಿಂದಿಯ ತಾಲ್ ಚಿತ್ರದ ಹಾಡು ಬರಿ ಸೂರ್ತಿ ಎಂದರೆ ನೀವು ನಂಬಲೇಬೇಕು! ಸಂಕಲನ ಇನ್ನಷ್ಟು ಚುರುಕಾಗಿದ್ದರೆ ಕೆಲವು ಕಡೆ ನೀರಸ ಎನಿಸುತ್ತಿರಲಿಲ್ಲ.

    ಇನ್ನು ಪಾತ್ರವರ್ಗ: ಅಲ್ಲಿ ಮಹಿಳೆಯರದೇ ಮೇಲುಗೈ'. ರಾಕಾ ಪಂಡಿತ್ ಇಡೀ ಕತೆಯ ಸೂತ್ರಧಾರಿ. ಕನ್ನಡದಲ್ಲಿ ನಾಯಕಿಯರ ಬರವಂತೇ' ಎಂಬ ಮಾತಿಗೆ ಸಕಾರಾತ್ಮಕ ಉತ್ತರ ಕೊಡಬಲ್ಲ ಸಾಮರ್ಥ್ಯ ಈಕೆಗಿದೆ. ಶುಭಾ ಪೂಂಜಾ ಅವರಲ್ಲಿರುವ ಮೊಗ್ಗಿನಂಥ ಪ್ರತಿಭೆಯನ್ನು ಅರಳಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ನಾಯಕಿಯರು ಹೂವು ಚೆಲುವೆಲ್ಲ ತಂದೆಂದಿತು' ಎನ್ನುವಹಾಗೆ ನಟಿಸಿದ್ದಾರೆ. ನಾಯಕರಲ್ಲಿ ಯಶ್‌ನನ್ನು ಒಂದು ತಕ್ಕಡಿಯಲ್ಲಿ ಹಾಕಿ, ಉಳಿದ ಮೂವರನ್ನು ಇನ್ನೊಂದು ಕಡೆ ತುಂಬಿದರೂ ಅದು ಯಶ್ ಕಡೆಗೇ ವಾಲುತ್ತೆ! ಆಕಾಶ್ ಜೂನಿಯರ್ ಗಣೇಶ್' ಆಗಲಿಕ್ಕೆ ಇನ್ನೊಂದು ಮಳೆಗಾಲವೇ ಕಳೆಯಬೇಕೇನೋ! ಶರಣ್ ಕಾಮಿಡಿ ಅಲ್ಲಲ್ಲಿ ರಿಲ್ಯಾಕ್ಸ್ ನೀಡುತ್ತೆ. ನೀನಾಸಂ ಅಚ್ಯುತರಾವ್, ಸುಧಾ ಬೆಳವಾಡಿ ಇಂದಿನ ಪೋಷಕರ ವರ್ಗವನ್ನು ಪ್ರತಿನಿಸಿದ್ದಾರೆ.

    ಕತೆಯಲ್ಲಿ ವಿಶೇಷವಾದ ಯಾವುದೇ ಅಂಶಗಳಿಲ್ಲ. ಆದಾಗ್ಯೂ ಅದನ್ನು ಹೀಗೂ ನಿರೂಪಿಸಬಹುದು ಎಂಬುದನ್ನು ಶಶಾಂಕ್ ತೋರಿಸಿದ್ದಾರೆ. ಹನಿಹನಿ' ಸೇರಿ ಹಳ್ಳ ಎನ್ನುವಂತೆ, ಹತ್ತಾರು ಪ್ರೇಮ್' ಕಹಾನಿಗಳನ್ನು ಅಭ್ಯಸಿಸಿ, ಹೊಸ ಪ್ರತಿಭೆಗಳನ್ನು ಬಳಸಿ, ಸಿನಿಮಾ ಮುಗಿಸಿ ಹೊರಬಂದ ನಂತರ ಒಂದಿಷ್ಟು ಕಾಲ ಯೋಚಿಸುವಂತೆ ಮಾಡಿದ್ದಾರೆ !

    English summary
    Kannada movie Moggina manasu review by Vinayakram kalagaru,
    Monday, July 2, 2012, 15:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X