twitter
    For Quick Alerts
    ALLOW NOTIFICATIONS  
    For Daily Alerts

    ಉಸಿರಾಡೋರೆಲ್ಲ ನೋಡಲೇಬೇಕಾದ ಚಿತ್ರ

    |

    Banada neralu Kannada movie Review
    ಚಿತ್ರ:ಬನದ ನೆರಳು
    ಕಥೆ: ಕೋಟಗಾನಹಳ್ಳಿ ರಾಮಯ್ಯ, ಉಮಾಶಂಕರಸ್ವಾಮಿ
    ನಿರ್ದೇಶನ: ಉಮಾಶಂಕರಸ್ವಾಮಿ
    ನಿರ್ಮಾಪಕ: ಚಂದ್ರಕಾಂತ. ವಿ
    ಸಂಭಾಷಣೆ: ಬಸವರಾಜ ಸೂಳೇರಿಪಾಳ್ಯ
    ಸಂಗೀತ:ಪಿಚ್ಚಳ್ಳಿ ಶ್ರೀನಿವಾಸ
    ಸಂಕಲನ: ಗುಣ
    ಮೇಕಪ್ : ರಾಮಕೃಷ್ಣ
    ಕಲೆ: ಶಶಿಧರ ಅಡಪ
    ವಸ್ತ್ರವಿನ್ಯಾಸ: ಛಾಯಾ ಭಾರ್ಗವಿ
    ಕಥಾ ವಿಸ್ತರಣೆ, ಸಂಭಾಷಣೆಗೆ ಸಹಾಯ:
    ಕೇಶವ ಮಳಗಿ
    ಛಾಯಾಗ್ರಹಣ: ರಾಮಚಂದ್ರ ಐತಾಳ
    ತಾರಾಗಣ:
    ಬಿ ಜಯಶ್ರೀ, ಹರೀಶ್ ರಾಜ್, ಗಂಗಾಧರ, ಪಿಚ್ಚಳ್ಳಿ ಶ್ರೀನಿವಾಸ, ರಾಜೇಶ್ವರಿ, ನಿರುಪದಿ ನಾಯಕ್, ಜಯಲಕ್ಷ್ಮಿಪಾಟೀಲ, ಶಿವಲಿಂಗ ಪ್ರಸಾದ್..ಇನ್ನು ಅನೇಕರು.

    "ಬನವ್ವನ ಕಾಟ ಬಾಳ್ ಹಾಯ್ತು ನೋಡಪ್ಪ, ಸಾಯೋ ಆಟ ಹೂಡಿ ಊರ್ ಮಂದಿಯೆಲ್ಲಾ ಅಂಜೋ ಹಾಂಗೆ ಮಾಡ್ತಾಳೆ" ಎಂದು ಊರು ಮಂದಿ ಸಿಟ್ಟುಗೊಂಡು ಬೈಯುತ್ತಿದ್ದರೂ ಅದು ಆಕೆಯ ಬಗ್ಗೆ ಉಂಟಾದ ಅಸಹ್ಯದಿಂದಲ್ಲ. ಆಕೆಯ ಬಗ್ಗೆ ಇದ್ದ ಕಾಳಜಿಯಿಂದ.. ಪರಿಸರ ಕಾಳಜಿ, ಗ್ರಾಮೀಣ ಭಾಗದಜನಜೀವನದ ದರ್ಶನ ಮಾಡಿಸುವ ಸುಂದರ ಕಥಾನಕ ಬನದ ನೆರಳು....

    *ಮಲೆನಾಡಿಗ

    ಚಿತ್ರನೋಡಿ ಹೊರಬಂದಮೇಲೆ ನಗರವಾಸಿ ಯುವಕರಲ್ಲಿ ಕಟ್ಟ ಕಡೆಗೆ ಮೂಡಿದ ಪ್ರಶ್ನೆ ಹೀಗೂಉಂಟೆ?ಹೌದು . ಚಿತ್ರವನ್ನು ನೋಡಿದವರಿಗೆ ಈ ಕಾಲದಲ್ಲಿ ಈ ರೀತಿಯ ಜನರಿದ್ದರಾ, ಇದ್ದರೂ ಇಂಥ ಒಂದು ಹಿರಿಜೀವದೊಡನೆ ಸಾತ್ವಿಕ ಮುನಿಸಿನೊಂದಿಗೆ ಸಹಬಾಳ್ವೆ ಮಾಡುವ ಊರು ಮಂದಿ ಕಾಣಸಿಗ್ತಾರಾ ಎಂಬ ಪ್ರಶ್ನೆ ಮೂಡುವುದು ಸಹಜ . ಆದರೆ, ಇದೆಲ್ಲಾ ಸತ್ಯ. ಕರ್ನಾಟಕದ ಹಳ್ಳಿಗಳ ನಿತ್ಯ ದರ್ಶನವಾಗುತ್ತದೆ ಈ ಚಿತ್ರದಲ್ಲಿ. ಚಿತ್ರದ ಕಥೆ ಎಲ್ಲೂ ಜಾರಿಲ್ಲ. ಅನಗತ್ಯ ದೃಶ್ಯಗಳು ನುಸುಳಿಲ್ಲ. ನಿರೂಪಣೆ ಕೂಡನಿಧಾನಗತಿ ಎನಿಸಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಇದರ ಪೂರ್ಣಫಲ ನಿರ್ದೇಶಕ ಉಮಾಶಂಕರಸ್ವಾಮಿ ಅವರ ತಂಡಕ್ಕೆ ಸಲ್ಲಬೇಕು.

    ಇನ್ನು ನಟನೆಯ ವಿಷಯಕ್ಕೆ ಬಂದರೆ ಅಭಿನಯದಲ್ಲಿ ಪಕ್ವತೆ ಪಡೆದಿರುವ ಕಲಾವಿದರಾದ ಬಿ ಜಯಶ್ರೀ, ಹರೀಶ್ ರಾಜ್, ಗಂಗಾಧರ್ ಮುಂತಾದ ಕಲಾವಿದರ ನಟನೆಯಲ್ಲಿ ತಪ್ಪು ಹುಡುಕ ಹೋದರೆ ಶಿವ ಮೆಚ್ಚಲ್ಲ. ರಾಯಚೂರಿನ ಲಿಂಗಸೂಗೂರಿನಲ್ಲಿ ಚಿತ್ರಣಗೊಂಡಿರುವ ಈಚಿತ್ರ ಮೊದಲಿಗೆ ಇಷ್ಟವಾಗುವುದು ಇಲ್ಲಿ ಬಳಸಿರುವ ಭಾಷೆ, ಎಲ್ಲೂ ಅತಿರೇಕವಿಲ್ಲ, ಆರ್ಭಟವಿಲ್ಲ. ಸಂದರ್ಭೋಚಿತವಾದ, ಸ್ಪಷ್ಟವಾದ ಮಾತುಕತೆ ಆಪ್ತವೆನಿಸುತ್ತದೆ. ಅಲ್ಲಲ್ಲಿ ಬಂದು ಹೋಗುವ ತತ್ವಪದಗಳು, ಹಾಡು ಹಸೆ ಜನರನ್ನು ಗುನುಗುವಂತೆ ಮಾಡದೆ ಬಿಡುವುದಿಲ್ಲ. ಹಿನ್ನೆಲೆ ಸಂಗೀತ ಕೂಡಸೂಕ್ತವಾಗಿ ಬಳಸಲಾಗಿದೆ.

    ಚಿತ್ರದಲ್ಲಿ ಎಲ್ಲವೂ ಪೂರಕವಾಗಿ ಮೂಡಿದೆ. ಆದರೆ ಕೆಲವೆಡೆಯಲ್ಲಿ ಸುಂದರ ಪರಿಸರವನ್ನು ಸೆರೆ ಹಿಡಿಯುವಲ್ಲಿ ಹಿರಿಯ ಸಿನಿಮಾಟೋಗ್ರಾಫರ್ (ಕ್ಯಾಮರಾಮೆನ್) ಸೋತಿದ್ದಾರೆ ಎನ್ನಬಹುದು. ಮರಗಿಡಗಳ ದಟ್ಟವಾಗಿ ಕಾಣಿಸುವಲ್ಲಿ, ಮಗುವಿನ ಅಳುವಿನಲ್ಲಿ, ಗ್ರಾಮದ ಗಲ್ಲಿ ಗಲ್ಲಿಗಳನ್ನು ಇನ್ನಷ್ಟು ಸಮರ್ಪಕವಾಗಿ ತೋರಿಸಬಹುದಿತ್ತು. ಅದರಲ್ಲೂ ಬನವ್ವ ಮಾತು ಕಳೆದುಕೊಂಡ ನಂತರ ಅಲ್ಲಿ ಛಾಯಾಗ್ರಾಹಕರ ಕೆಲಸಕ್ಕೆ ಹೆಚ್ಚು ಒತ್ತು ಸಿಗಬೇಕಿತ್ತು. ಇರಲಿ, ನಿರ್ದೇಶಕರ ಮೊದಲ ಪ್ರಯತ್ನ. ಮನ್ನಿಸಿ ಬಿಡಿ. ರಾಮಕೃಷ್ಣರ ಪ್ರಸಾಧನ ನೋಡುವಂತಿದೆ. ಶಶಿಧರ ಅಡಪ ಅವರಿಗೆ ಹೆಚ್ಚು ಕೆಲಸವಿಲ್ಲ. ಏಕೆಂದರೆ ಕಥೆಯಲ್ಲಿ ಹೊರಾಂಗಣವೇ ಹೆಚ್ಚು ಪ್ರಧಾನವಾಗಿದೆ .ವಸ್ತ್ರವಿನ್ಯಾಸ ಮಾಡಿರುವ ಛಾಯಾ ಭಾರ್ಗವಿ ಅವರನ್ನು ಭೇಷ್ ಅನ್ನಬೇಕು.

    ಕಥೆ ಇಷ್ಟು: ಇಳಿವಯಸ್ಸಿನ ವಿಧವೆ ಬನವ್ವನಿಗೆ ಇರುವ ಏಕೈಕ ಆಸ್ತಿ 12 ಎಕರೆ ಜಮೀನು ಮತ್ತು ಅದರಲ್ಲಿ ಬೆಳೆದಿರುವ ವಿವಿಧ ಬಗೆಯ ಮರ ಗಿಡಗಳು. ಮಕ್ಕಳು ಮರಿಗಳನ್ನು ಕಾಣದ ಬನವ್ವ ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ, ಪೋಷಿಸುತ್ತ ಬಂದಿರುತ್ತಾಳೆ. ಆದರೆ, ಕಂಟ್ರಾಕ್ಟರ್ ವೃತ್ತಿ ಬಿಟ್ಟು ನಗರದಿಂದ ಹಳ್ಳಿಗೆ ಬಂದ ಯುವಕ ಅಮರೇಶ , ತನ್ನ ಮಾವನವರ ಜಮೀನನ್ನು ಹಸನು ಮಾಡುವ ಕಾಯಕಕ್ಕೆ ಇಳಿಯುತ್ತಾನೆ. ಆ ಜಾಗದಲ್ಲಿನ ಮರಗಳನ್ನು ಕೊಡಲಿಗೆ ಆಹುತಿ ಮಾಡಿ, ತೋಟ ಮಾಡಲು ಪ್ರಯತ್ನಿಸುತ್ತಾನೆ. ಆದರೆ, ಮರಕ್ಕೆ ಹಾನಿಯಾದರೆ ನಾನು ಪ್ರಾಣ ಕಳೆದುಕೊಳ್ಳುವೆ ಎಂದು ಬನವ್ವ ಹೆದರಿಸಿ, ಒಂದೆರಡು ಬಾರಿ ಸಾಯೋ ಆಟ ಹೂಡುತ್ತಾಳೆ. ಇತ್ತ ತೋಟ ಮಾಡಲು ಬ್ಯಾಂಕ್ ಇಂದ ಸಾಲ ಪಡೆದ ಅಮರೇಶ ಚಿಂತಾಕ್ರಾಂತನಾಗುತ್ತಾನೆ. ಈ ಮಧ್ಯೆ ಯಲಗೂರಿ ಎಂಬ ಗ್ರಾಮಸ್ಥ, ಬನವ್ವನಿಂದ ಜಮೀನನ್ನು ಪಡೆಯುವ ಹುನ್ನಾರ ಹೂಡುತ್ತಾನೆ. ಹಣದ ಆಮಿಷ ಒಡ್ಡುತ್ತಾನೆ. ಅಮರೇಶ ಬಿರಾದರ್ ಎಂಬುವವನ ಸಹಾಯದಿಂದ ಅರಣ್ಯಾಧಿಕಾರಿಗಳಿಂದ ಅನುಮತಿ ಪತ್ರ ಪಡೆದು ಮರ ಕತ್ತರಿಸಲು ಬಂದರೂ ಬನವ್ವ ಜಗ್ಗುವುದಿಲ್ಲ. ಕಡೆಗೆ ಮರಗಳ ರಕ್ಷಣೆಗಾಗಿ ಸದಾ ಹೋರಾಡುತ್ತಾ ಬಂದ ಬನವ್ವ ತನ್ನ ದನಿಯನ್ನು ಕಳೆದುಕೊಂಡಾಗ, ಆಮರೇಶನೆ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾನೆ. ಆದರೆ, ಆಕೆ ದನಿ ಮತ್ತೆ ಹಳ್ಳಿ ಜನರ ಕಿವಿಗೆ ಬೀಳುವುದಿಲ್ಲ.... ಮುಂದೆ ಆಕೆಯ ಮರಗಳ ಕಥೆ ಏನಾಗುತ್ತದೆ. ಅಕೆಯದು ಅರಣ್ಯರೋದನವಾಗುತ್ತದೆಯೇ? ಬನವ್ವನ ಸ್ಥಿತಿ ಕಂಡು ಅಮರೇಶ ಮನಸ್ಸು ಬದಲಿಸುತ್ತಾನ? ಆ ಮರಗಳನ್ನು ಉಳಿಸಿಕೊಳ್ಳಲು ಹಳ್ಳಿಜನ ಬನವ್ವನಿಗೆ ಸಹಾಯ ಮಾಡುತ್ತಾರಾ? ಬನವ್ವನ ಕಥೆ ಸುಖಾಂತ್ಯವೋ, ದುಃಖಾತ್ಯವೋ ತೆರೆಯ ಮೇಲೆ ನೋಡಿದರೆ ಚೆನ್ನ

    ಧನಾತ್ಮಕ ಅಂಶಗಳು : ಪರಿಸರ ಕಾಳಜಿ, ಹಳ್ಳಿಜನರ ಸಹಬಾಳ್ವೆ, ಯುವ ಜನರ ಹುಚ್ಚು ಪ್ರಯತ್ನಗಳು.. . ಇತ್ಯಾದಿ. ನಿರ್ದೇಶನ, ನಿರೂಪಣೆ, ನಟನೆ, ಹಾಡು ಹಸೆ ,ವಸ್ತ್ರ ವಿನ್ಯಾಸ,ಸಾಹಿತ್ಯ, ಸಂಗೀತ ಎಲ್ಲಾಓಕೆ. "ಭೂಮಿ ಮಾರಿರಬಹುದು ಆದರೆ ಮರ ಗಿಡ ಮಾರಿಲ್ಲ".. "ಸರ್ವೆ ಮಾಡ್ತಾರಂತೆ ಸರ್ವೆ, ಭೂಮಿ ಅಳೆಯಬಹುದು ಆದರೆ ಗಿಡ ನೀಡೊ ನೆರಳಿನ ಅಳತೆ ಮಾಡ್ತಿರಾ" ಮುಂತಾದ ವಾಕ್ಯಗಳು ಮನಸ್ಸಿನಲ್ಲಿ ಉಳಿದು ಬಿಡುತ್ತವೆ.

    ಋಣಾತ್ಮಕ ಅಂಶಗಳು:
    ಬಹಳಕಮ್ಮಿ, ಆದರೂ ಕೆಲವು ಕಡೆ ಕೈ ಕೊಟ್ಟ ಛಾಯಾಗ್ರಹಣ, ಸಂಕಲನ.. ಒಟ್ಟಾರೆ ದೋಷರಹಿತ.

    ಗಮನಿಸಿ: ಬನದನೆರಳು ಚಿತ್ರವನ್ನು ನಗರದಲ್ಲಿ ನಡೆದಿರುವ 3ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಅಂಗವಾಗಿ ವಿಷನ್ ಸಿನಿಮಾಸ್ ನಲ್ಲಿ ಪ್ರದರ್ಶನ ಮಾಡಲಾಯಿತು.ಇದು ಬಹುಶಃ ಕರ್ನಾಟಕದಲ್ಲಿ ಮೊದಲ ಪ್ರದರ್ಶನ. ಸದ್ಯಕ್ಕಂತೂ ಈ ಭಾಗದಲ್ಲಿ ಚಿತ್ರ ಬಿಡುಗಡೆ ಭಾಗ್ಯ ಕಾಣುವುದಿಲ್ಲ. ಉತ್ತರ ಕರ್ನಾಟಕ ಭಾಗದ ಜನರಿಗೆ ತೋರಿಸಲು ಸಿದ್ಧತೆ ನಡೆದಿದೆ ಎನ್ನುತ್ತಾರೆ ನಿರ್ದೇಶಕ ಉಮಾಶಂಕರ ಸ್ವಾಮಿ.ಇಂಥ ಅರ್ಥಪೂರ್ಣ ಚಿತ್ರಕ್ಕೆ 'ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂದು ಪರಿಗಣಿಸಿ ಈ ಸಾಲಿನ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ.

    ಜನರ ಮನಪರಿವರ್ತನೆಯಿಂದ ಎಲ್ಲಾ ಸಾಧ್ಯ. ಬರೀ ಗೋಡೆ ಕಟ್ಟಡಗಳ ನಿರ್ಮಾಣದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಹತ್ತಿರದಿಂದ ಗಮನಿಸಿದ್ದೀನಿ. ಸಾಂಸ್ಕೃತಿಕ ಹಿನ್ನೆಲೆಯಲ್ಲಿ ದೇಸಿ ಸೊಗಡನ್ನು ಉಳಿಸಿಕೊಂಡು ಜನಕ್ಕೆ ಸಂದೇಶವನ್ನು ನೀಡುವಂತಹ ಚಿತ್ರ ಮಾಡುವುದು ನನ್ನ ಗುರಿಯಾಗಿತ್ತು. ಅದನ್ನು ತಕ್ಕ ಮಟ್ಟಿಗೆ ಸಾಧಿಸಿದ್ದೀನಿ ಎಂಬ ತೃಪ್ತಿಯಿದೆ. ಕಥೆಯಲ್ಲಿ ಬರುವ ಬನವ್ವನ ಹಠಕ್ಕೂ, ಮಹಾತ್ಮ ಗಾಂಧಿಜೀಯ ಸತ್ಯಾಗ್ರಹಕ್ಕೂ ಸಾಮ್ಯವಿದೆ ಎನ್ನುತ್ತಾರೆ ನಿರ್ದೇಶಕ ಉಮಾಶಂಕರಸ್ವಾಮಿ.

    ಪೂರಕ ಓದಿಗೆ:

    ಸಿನಿಮಾ ನೋಡುವ ಸುಖದ ಕುರಿತು...ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ

    Thursday, October 29, 2009, 16:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X