For Quick Alerts
ALLOW NOTIFICATIONS  
For Daily Alerts

ನಾನಲ್ಲ ಚಿತ್ರವಿಮರ್ಶೆ: ಬಾಬು ಲಾಜಿಕ್ ತರುಣ್ ಮ್ಯಾಜಿಕ್

By * ಶ್ರೀರಾಮ್ ಭಟ್
|

Tarun Shubha
ದಿನೇಶ್ ಬಾಬು ಬದಲಾಗಿದ್ದಾರೆ. 'ಮತ್ತೊಂದ್ ಮದುವೇನಾ?' ಅಂತ ಕೇಳಿ ಪ್ರೇಕ್ಷಕರ 'ತಾಳ್ಮೆಗೆಡಿಸಿದ್ದ' ದಿನೇಶ್ ಬಾಬು ಅದು "ನಾನಲ್ಲ" ಎನ್ನುತ್ತಾ ಮತ್ತೆ ಬಂದಿದ್ದಾರೆ. ಅದೂ ಒಂದು ಒಳ್ಳೆಯ ಸಿನಿಮಾದೊಂದಿಗೆ. ಇದೀಗ ತೆರೆಯ ಮೇಲೆ ಪ್ರದರ್ಶನ ಕಾಣುತ್ತಿರುವ ದಿನೇಶ್ ಬಾಬು ನಿರ್ದೇಶನದ ಚಿತ್ರ "ನಾನಲ್ಲ" ನೋಡುತ್ತಿದ್ದರೆ ಪ್ರೇಕ್ಷಕ ಕುಳಿತಲ್ಲೇ ಕಣ್ಮರೆಯಾಗುತ್ತಾನೆ, ಸಿನಿಮಾ ಮೇನಿಯಾದಲ್ಲಿ ತೇಲಾಡುತ್ತಾನೆ.

ಹೀಗೆ ಹೇಳಿದರೆ ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಬಾಬು ಒಳ್ಳೆಯ ಸಿನಮಾ ಕೊಡುವ ಪ್ರಯತ್ನವನ್ನಂತೂ ಮಾಡಿದ್ದಾರೆ. ಒಂದು ಒಳ್ಳೆಯ ಕಥೆಯನ್ನೆತ್ತಿಕೊಂಡು ಚಿತ್ರಕಥೆ ಮಾಡಿ ಕೇವಲ 25 ದಿನಗಳಲ್ಲಿ ಶೂಟಿಂಗ್ ಮುಗಿಸಿ ಸದ್ದು-ಗದ್ದಲವಿಲ್ಲದೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ನಾನಲ್ಲ ಚಿತ್ರ ಹೊಸತನ ಹಾಗೂ ಬಿಗಿಯಾದ ನಿರೂಪಣೆಯಿಂದ ಗಮನ ಸೆಳೆಯುವಂತಿದೆ.

ಹಳ್ಳಿಯ ಮುಗ್ಧನೊಬ್ಬ ಪಟ್ಟಣದಲ್ಲಿರುವ ತನ್ನ ಪ್ರೇಯಸಿಯ ಆತ್ಮಹತ್ಯೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಪಟ್ಟಣಕ್ಕೆ ಬರುತ್ತಾನೆ. ಅದೇ ದಿನವೇ ಕಾಲೇಜ್ ಪ್ರೊಫೆಸರ್ ಒಬ್ಬರ ಬರ್ಬರ ಹತ್ಯೆ ನಡೆಯುತ್ತದೆ. ಈ ಕೊಲೆಯ ಆರೋಪವನ್ನು ನಾಯಕ ಸಿದ್ಧಾರ್ಥನ ಮೇಲೆ ಹೊರಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ತಳ್ಳಲಾಗುತ್ತದೆ.

ಅಲ್ಲ ನಾಯಕ ಹೇಗೆ ತನ್ನ ನಾಟಕ ಹಾಗೂ ಬುದ್ದಿವಂತಿಕೆ ಬಳಸಿ ರಹಸ್ಯವನ್ನು ಬೇಧಿಸುತ್ತಾನೆ ಮತ್ತು ಶಿಕ್ಷೆಯಿಂದ ಪಾರಾಗುತ್ತಾನೆ ಎಂಬುದೇ ಈ 'ನಾನಲ್ಲ' ಕಥೆಯ ತಿರುಳು. ಆದರೆ ಚಿತ್ರಕಥೆಯನ್ನು ಹೆಣೆದಿರುವ ದಿನೇಶ್ ಬಾಬು ಈ ಕಥೆಗೊಂದು ಚಿನ್ನದ ಫ್ರೇಮ್ ಇಟ್ಟು, ಚೆಂದದ ಆದಿ, ಅಂತ್ಯ ಕೊಟ್ಟು ಸಿನಿಮಾ ಮಾಡಿ ಪ್ರೇಕ್ಷಕರ ಕೈಗಿಟ್ಟಿದ್ದಾರೆ. 'ಮತ್ತೊಂದು ಮದುವೆ'ಯ ಬಾಬು ನಾನಲ್ಲ ಎಂದಿದ್ದಾರೆ.

ಕಾಲೇಜಿನಲ್ಲಿ ಹುಡುಗಿಯರನ್ನು 'ಬ್ಲೂಫಿಲಂ' ದಂಧೆಗೆ ಬಳಸಿಕೊಳ್ಳುವ ಪ್ರೊಫೆಸರ್ ಪಾತ್ರವೊಂದರ ಮೂಲಕ ಕಾಲೇಜಿನಲ್ಲಿ ನಡೆಯಬಹುದಾದ ಅನೈತಿಕ, ಅವ್ಯವಹಾರಕ್ಕೆ ಕನ್ನಡಿ ಹಿಡಿದು ಸಾಮಾಜಿಕ ಜವಾಬ್ದಾರಿಯನ್ನೂ ಮೆರೆದಿದ್ದಾರೆ. ಜೊತೆಗೆ ಮನೋವೈಜ್ಞಾನಿಕ ಅಂಶಗಳನ್ನು ಸಿನಿಮಾದಲ್ಲಿ ತಂದು ಪ್ರೇಕ್ಷಕರನ್ನು ಚಿಂತನೆಗೂ ಹಚ್ಚಿದ್ದಾರೆ. ಆದರೆ ಅದರಲ್ಲಿ ಅಲ್ಲಲ್ಲಿ ಸ್ವಲ್ಪ ಎಡವಿದ್ದಾರೆ ಕೂಡ.

ಎಲ್ಲದಕ್ಕಿಂತ ಹೆಚ್ಚಾಗಿ ಬಾಬು ಗೆದ್ದಿರುವುದು ಪಾತ್ರಪೋಷಣೆಗೆ ಸರಿಯಾದ ತಾರಾಗಣದ ಆಯ್ಕೆಯಲ್ಲಿ. ಅನಂತ್ ನಾಗ್, ಖುಷ್ಬೂ, ರಂಗಾಯಣ ರಘು, ಮುಖ್ಯಮಂತ್ರಿ ಚಂದ್ರು, ರಮೇಶ್ ಭಟ್, ಸಂಗೀತಾ ಇಂಥ ಮಹಾನ್ ಕಲಾವಿದರು ಇಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ. ಅವರುಗಳ ಮೂಲಕ ದಿನೇಶ್ ಬಾಬು ಚಿತ್ರಕಥೆಯನ್ನು ಪ್ರೇಕ್ಷಕರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಗೆದ್ದಿದ್ದಾರೆ.

ಇಡೀ ಚಿತ್ರಕಥೆಯನ್ನೇ ತನ್ನ ಹೆಗಲ ಮೇಲೆ ಹೊತ್ತು ಸಾಗುವ ನಾಯಕ ಸಿದ್ಧಾರ್ಥನ ಪಾತ್ರದಲ್ಲಿ ನಟ 'ತರುಣ್' ಗಮನಾರ್ಹವಾಗಿ ಅಭಿನಯಿಸಿದ್ದಾರೆ. ಹೇಳಿ ತರುಣ್.., ಡಬ್ಬಿಂಗ್ ಮಾಡುವಾಗ ತೊದಲು ನುಡಿಯುವಲ್ಲಿ ವೀಕ್ ಆಗಿದ್ದು ಯಾಕೆ...? ಆದರೂ ತರುಣ್ ಗ್ರೇಟ್. ಎರಡು ಶೇಡ್ ಇರುವ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿರುವ ತರುಣ್, ಆ 'ಚಾಕೊಲೇಟ್ ಬಾಯ್' ತರುಣ್ ಇವರೇನಾ? ಅನ್ನುವಷ್ಟರ ಮಟ್ಟಿಗೆ ಆಶ್ಚರ್ಯ ಹುಟ್ಟಿಸುತ್ತಾರೆ. ಯಾವ 'ಇಮೇಜ್' ಹಂಗಿಲ್ಲದೇ ನಟಿಸಿ 'ಅದ್ಭುತ ನಟ' ಎಂಬ ಇಮೇಜಿಗೆ ಅನಾಯಾಸವಾಗಿ ಜಿಗಿದಿದ್ದಾರೆ.

ಅವರೊಂದಿಗೆ ನಾಯಕಿಯಾಗಿ ನಟಿಸಿರುವ ಶುಭಾ ಪೂಂಚಾ ಕೂಡ ತಮ್ಮ ಮುಗ್ಧ ಹಾಗೂ ಹಿತವಾದ ಅಭಿನಯದಿಂದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ದೇಹ ದಪ್ಪಗಾಗಿ ಶುಭಾ ತೆರೆಯನ್ನೆಲ್ಲಾ ತುಂಬಿಕೊಳ್ಳದಿದ್ದರೆ ಇನ್ನಷ್ಟು ಸ್ಕೋರ್ ಮಾಡಬಹುದಿತ್ತು. ಆದರೂ ನಟನೆಯಲ್ಲಿ ಯಾರಿಗೂ ಕಡಿಮೆಯಿಲ್ಲ ಎಂದು ಪ್ರೂವ್ ಮಾಡಿದ್ದಾರೆ.

ಬಹಳ ದಿನಗಳ ನಂತರ ಕನ್ನಡಕ್ಕೆ ಮರಳಿರುವ ಖುಷ್ಬೂ ಬಗ್ಗೆ ಹೇಳದಿದ್ದರೆ ಹೇಗೆ? ಪಾತ್ರ ಚಿಕ್ಕದಾದರೂ ಅದ್ಭುತವಾಗಿ ಪೋಷಿಸಿ ಇನ್ನೂ ಬಹಳಷ್ಟು ಕಾಲ ಕನ್ನಡದ ಪ್ರೇಕ್ಷಕರು ಮರೆಯಲು ಸಾದ್ಯವೇ ಇಲ್ಲದಂತೆ ನಟಿಸಿದ್ದಾರೆ. ಅನಂತ್ ನಾಗ್ ಜೋಡಿಯಾಗಿ ನಟಿಸಿ ಗೆಲ್ಲವುದೆಂದರೆ ಅದು ಸಾಮಾನ್ಯ ಸಾಧನೆಯೇ? ಭೇಷ್ ಖುಷ್ಬೂ...

ಇಷ್ಟೆಲ್ಲಾ ಒಳ್ಳೆಯ ಅಂಶಗಳನ್ನಿಟ್ಟು ಚಿತ್ರ ಮಾಡಿ 'ಫುಲ್ ಮೀಲ್ಸ್ ಪ್ಯಾಕೇಜ್' ನಲ್ಲಿ ಪ್ರೇಕ್ಷಕರ ಮುಂದಿಟ್ಟಿರುವ ದಿನೇಶ್ ಬಾಬು ಅಲ್ಲಲ್ಲಿ ರುಚಿ ಕೆಡಿಸಿದ್ದಾರೆ ಕೂಡ. ಸರಿಯಾಗಿಯೇ ಇದ್ದೆನೆಂದು ಕೊನೆಯಲ್ಲಿ ದಾಖಲೆ ಸಮೇತ ಸಮರ್ಥಿಸಿಕೊಳ್ಳುವ ನಾಯಕ ಎರಡು ವರ್ಷ ಮಾನಸಿಕ ಕಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ ಅನ್ನುವುದರ ನಿರೂಪಣೆಯಲ್ಲಿ ಹಾಸ್ಯಾಸ್ಪದವಾಗಿದೆ. ಮ್ಯಾಜಿಕ್ ಮಾಡಲು ಹೋಗಿ ಲಾಜಿಕ್ ತಪ್ಪಿದೆ.

ಕೋರ್ಟ್ ಒಳಗಡೆ ಹಾಗೂ ಹೊರಗಡೆ ನಡೆಯುವ ಹಾಸ್ಯ ಸನ್ನಿವೇಶಕ್ಕೆ ಸಾಕಷ್ಟು ಕತ್ತರಿ ಪ್ರಯೋಗವನ್ನು ಮಾಡಬೇಕಿತ್ತು. ನಗುವ ಬದಲು ಪ್ರೇಕ್ಷಕ ಕೋಪಗೊಳ್ಳುವಂತಾಗಿದೆ ಅದು. ಮಿಕ್ಕೆಲ್ಲ ಅಂಶಗಳೂ ಸಿನಿಮಾಗೆ ಪೂರಕವಾಗಿದ್ದುದರಿಂದ ಸಿನಿಮಾ ಲೋಪಗಳನ್ನು ಮರೆಯುವಂತೆ ಮಾಡುತ್ತದೆ. ವೇಗವಾದ ಮತ್ತು ಬಿಗಿಯಾದ ನಿರೂಪಣೆಯೇ ಎಲ್ಲ ಲೋಪದೋಷಗಳನ್ನೂ ಬದಿಗೆ ತಳ್ಳಿ ಸೀಟಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ.

ದಿನೇಶ್ ಬಾಬು ಯಶಸ್ಸಿಗೆ ಕೈಜೋಡಿಸಿದ್ದಾರೆ ಕ್ಯಾಮೆರಾಮನ್ ಸುರೇಶ್ ಭೈರಸಂದ್ರ. ಹೋರಾಂಗಣ ದೃಶ್ಯವನ್ನು ಕಣ್ಣಿಗೆ ಹಬ್ಬವಾಗಿಸಿ ಒಳಾಂಗಣಕ್ಕೂ ಸೈ ಎಂದಿದ್ದಾರೆ. ಗಿರಿಧರ್ ದಿವಾನ್ ಸಂಗೀತ ಚೆನ್ನಾಗಿ ಚಿತ್ರಕ್ಕೆ ಹೊಂದಿಕೆಯಾಗಿದೆ. ಜೊತೆಗೆ 'ಓ ಮನಸೇ ಉಳಿಯಲಿ ಸದಾ' ಹಾಗೂ 'ನನ್ನಾ ನಿನ್ನ ರಾಗದಲ್ಲಿ', ರಾಗ-ತಾಳಬದ್ಧವಾಗಿದ್ದು ಗಿರಿಧರ್ ದೀವಾನರಿಗೆ ಸಂಗೀತ ನಿರ್ದೇಶನದಲ್ಲಿ ಉಜ್ವಲ ಭವಿಷ್ಯವಿದೆ ಎಂಬುದನ್ನು ಸಾರುವಂತಿದೆ.

ಹಿತಮಿತವಾದ ಸಂಕಲನ, ಕೋರಿಯೋಗ್ರಫಿ, ಹಾಗೂ ಲೊಕೇಶನ್ ಆಯ್ಕೆ ಎಲ್ಲವೂ ಓಕೆ. ಕೊನೆಯಲ್ಲಿ ಉಳಿಯುವುದು ದಿನೇಶ್ ಬಾಬು ಒಳ್ಳೆಯ ಸಿನಿಮಾ ಕೊಟ್ಟಿದ್ದಾರೆ ಎಂಬ ಭಾವ. 'ಅಮೃತ ವರ್ಷಿಣಿ' ನಂತರ ಕಳೆದೇ ಹೋಗಿದ್ದ ಬಾಬು 'ಎರಡನೇ ಮದುವೆ' ಮೂಲಕ ನಾನಿದ್ದೇನೆ ಎಂದಿದ್ದರು. ಈಗ ಇರುವಿಕೆಯನ್ನು ಮತ್ತಷ್ಟು ಸಮರ್ಥಿಸಿಕೊಂಡಿದ್ದಾರೆ.

ಕನ್ನಡದ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಬೇಕು ಅಷ್ಟೇ. 'ನಾನಲ್ಲ' ಸಿನಿಮಾವನ್ನು ಪ್ರೇಕ್ಷಕರು 'ಒಪ್ಪಿ, ಅಪ್ಪಿ'ಕೊಂಡರೆ ಬಾಬು ಗೆದ್ದಂತೆ. ಈಗಲೇ ಬಾಬು ಗೆದ್ದಿದ್ದಾರೆ ಎಂದು ಹೇಳಲಾಗದಿದ್ದರೂ ಸಿನಿಮಾ ಚೆನ್ನಾಗಿದೆ ಎಂದು ಹೇಳಬಹುದು. ಈಗ ಮಾಡಿರುವ 'ತಪ್ಪನ್ನು' ಸರಿಪಡಿಸಿಕೊಂಡು 'ಮತ್ತೊಂದು ತಪ್ಪು' ಮಾಡದಿದ್ದರೆ ಇನ್ನೊಂದು 'ಅಮೃತವರ್ಷಿಣಿ'ಯನ್ನು ಈ ದಿನೇಶ್ ಬಾಬು ಖಂಡಿತ ಕೊಡಬಲ್ಲರು.

ಚಿತ್ರ: ನಾನಲ್ಲ

ತಾರಾಗಣ: ತರುಣ್, ಶುಭಾ ಪೂಂಜಾ, ಅನಂತ್ ನಾಗ್, ಖುಷ್ಬೂ, ರಂಗಾಯಣ ರಘು, ಸಂಗೀತಾ, ಮುಖ್ಯಮಂತ್ರಿ ಚಂದ್ರು, ರಮೇಶ್ ಭಟ್, ಮುಂತಾದವರು

ನಿರ್ಮಾಪಕರು: ಡಿ ಬಿ ಕುಮಾರಸ್ವಾಮಿ

ಸಂಗೀತ: ಗಿರಿಧರ್ ದಿವಾನ್

ಛಾಯಾಗ್ರಹಣ: ಸುರೇಶ್ ಭೈರಸಂದ್ರ

ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ದಿನೇಶ್ ಬಾಬು

English summary
Read Kannada movie Nanalla review. The movie has been directed by Dinesh Babu which leads tarun and shubha poonja. The film has captivating story and is about an innocent from the village taking revenge for reasons behind the suicide of his fiance in city and duping the judiciary with his cleverness.
 
 

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more