For Quick Alerts
ALLOW NOTIFICATIONS  
For Daily Alerts

ಮೈಲಾರಿ ವಿಮರ್ಶೆ; ಹ್ಯಾಟ್ರಿಕ್ ಹೀರೋ ಗೆದ್ದಿದ್ದಾರೆ ಆದರೆ

By * ಉದಯರವಿ
|

ಹೆಸರಿನಿಂದಲೇ ಗಮನಸೆಳೆದ'ಮೈಲಾರಿ' ಚಿತ್ರದ ಕತೆ ಸೊಗಸಾಗಿದೆ. ಆದರೆ ಅದನ್ನು ತೋರಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಈ ಕಾರಣಕ್ಕೆ ಚಿತ್ರದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದರೂ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತದೆ. ಶಿವರಾಜ್ ಕುಮಾರ್ ಅವರ ಅಭಿಮಾನಿಗಳನ್ನು ಉದ್ದೇಶವಾಗಿಟ್ಟುಕೊಂಡು ಕತೆ ಹೆಣೆದಂತಿದೆ ಎಂಬ ಅನುಮಾನ ಬಾರದೆ ಇರದು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ್ಮ ಪಾತ್ರಕ್ಕೆ ಜೀವ ತುಂಬಲು ಶ್ರಮಿಸಿರುವುದು ಎದ್ದು ಕಾಣುವ ಅಂಶ. ಆದರೆ ಬಿಗಿ ನಿರೂಪಣೆಯಿಲ್ಲದ ಕಾರಣ ಚಿತ್ರ ಪೇಲವವಾಗಿ ಕಾಣುತ್ತದೆ. ಪರದೆ ಮೇಲೆ ಚಿತ್ರಕತೆ ಸಾಗುತ್ತಿದ್ದಂತೆ ಚಿತ್ರದ ಬಗೆಗಿನ ಒಂದೊಂದೇ ನಿರೀಕ್ಷೆಗಳು ಹುಸಿಯಾಗುತ್ತಾ ಹೋಗುತ್ತವೆ. ನಟನಾಗಿ ಶಿವರಾಜ್ ಕುಮಾರ್ ಗೆದ್ದಿದ್ದಾರೆ. ಆದರೆ ನಿರ್ದೇಶಕರಾಗಿ ಆರ್ ಚಂದ್ರು ಸೋತಿದ್ದಾರೆ.

ಚಿತ್ರದಲ್ಲಿ 'ಮಠ' ಗುರುಪ್ರಸಾದ್ ಹೇಳುವಂತೆ "ಕಾಲ ಬದಲಾದರೂ ಅಪ್ಪಂದಿರು ಮಾತ್ರ ಬದಲಾಗಲ್ಲ" ಎಂಬ ಮಾತಿನ ಮೇಲೆ ಇಡೀ ಚಿತ್ರಕತೆ ನಿಂತಿದೆ. ಮೈಲಾರಿ (ಶಿವರಾಜ್ ಕುಮಾರ್) ಬರೆದ "ಮಳೆ...ನೆನಪುಗಳ ಮಾಲೆ" ಪುಸ್ತಕವನ್ನು ಅನಿತಾ (ಸದಾ) ಓದುವ ಮೂಲಕ ಕತೆ ಆರಂಭವಾಗುತ್ತದೆ. ಅಲ್ಲಿಂದ ಫ್ಲ್ಯಾಶ್ ಬ್ಯಾಕ್ ಗೆ ಹೊರಳುವ ಕತೆ ಕಲಸುಮೇಲೋಗರದಂತೆ ಸಾಗುತ್ತದೆ.

ತನ್ನ ಮಗ ಪೊಲೀಸ್ ಅಧಿಕಾರಿ ಆಗಬೇಕು ಎಂದು ಮೈಲಾರಿ ಅಪ್ಪ ಕನಸು ಕಾಣುತ್ತಾನೆ. ಆದರೆ ಅಪ್ಪನ ಆಸೆಯನ್ನು ಮೈಲಾರಿ ಮಣ್ಣುಪಾಲು ಮಾಡುತ್ತಾನೆ. ಗೋಮುಖವ್ಯಾಘ್ರನಂತಿರುವ ರಾಜಕಾರಣಿಯೊಬ್ಬನನ್ನು ಬರ್ಬರವಾಗಿ ಹಾಡುಹಗಲೆ ಕೊಚ್ಚಿ ಕೊಲ್ಲುವ ಮೂಲಕ ಮೈಲಾರಿ ಜೈಲು ಪಾಲಾಗುತ್ತಾನೆ. ಮೈಲಾರಿಗೆ ಮರದಂಡನೆ ವಿಧಿಸಲಾಗುತ್ತದೆ.

ಆ ರಾಜಕಾರಣಿಯನ್ನು ಕೊಲೆ ಮಾಡಲು ಬಲವಾದ ಕಾರಣ ಏನು? ಹಳ್ಳಿ ಹುಡುಗ ಮೈಲಾರಿ ಯಾಕೆ ಹೀಗಾದ ಎಂಬ ಪ್ರಶ್ನೆಗಳ ಹುಡುಕಾಟವೇ ಚಿತ್ರದ ಕಥಾಹಂದರ. ಇದಕ್ಕಾಗಿ ಚಿತ್ರವನ್ನು ನೀವೊಮ್ಮೆ ನೋಡಬೇಕು. ಇಂಟರೆಸ್ಟಿಂಗ್ ವಿಚಾರ ಎಂದರೆ, ಮೈಲಾರಿ ಜರ್ನಲಿಸ್ಟ್. ಹಳ್ಳಿ ಬಿಟ್ಟು ಬೆಂಗಳೂರಿಗೆ ಬರುವ ಮೈಲಾರಿ 'ಹರಿತ ಖಡ್ಗ' ಎಂಬ ದಿನಪತ್ರಿಕೆಯಲ್ಲಿ ಕೆಲಸಕ್ಕೆ ಸೇರುತ್ತಾನೆ.

ತನ್ನ ಗೆಳೆಯ ಹಾಗೂ ಪತ್ರಿಕೆಯ ಉಪಸಂಪಾದಕ (ಮಠ ಗುರುಪ್ರಸಾದ್) ರೌಡಿಗಳ ಮಚ್ಚಿಗೆ ಬಲಿಯಾಗುತ್ತಾನೆ. ಅಲ್ಲಿಂದ ಮೈಲಾರಿ 'ಖಡ್ಗ' ಮತ್ತಷ್ಟು ಹರಿತವಾಗುತ್ತದೆ. ಅಡ್ದಬಂದವರ ರುಂಡಗಳನ್ನು ಚೆಂಡಾಡುತ್ತಾನೆ. ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೆ ಅಷ್ಟೊಂದು ಆರ್ಭಟ ಬೇಕಾಗಿರಲಿಲ್ಲ ಅನ್ನಿಸುತ್ತದೆ. ಆದರೂ ಏನು ಮಾಡುವುದು ಶಿವಣ್ಣನ ಕೈಗೆ ಮಚ್ಚು ಕೊಟ್ಟ ಮೇಲೆ ಅಷ್ಟು ತಲೆಗಳು ಉರುಳಲೇ ಬೇಕು ಎಂದು ನಿರ್ದೇಶಕರು ತೀರ್ಮಾನಿಸಿದಂತಿದೆ.

ಸುದೀರ್ಘ ಸಮಯದ ಬಳಿಕ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್ ಅವರನ್ನು ಕಾಣಬಹುದು. ಮಠ ಗುರುಪ್ರಸಾದ್ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಚಿತ್ರದ ಕೊನೆಗೆ ಬರಗೂರು ರಾಮಚಂದ್ರಪ್ಪ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೂಡ ದರ್ಶನ ನೀಡುತ್ತಾರೆ. ಚಿತ್ರದಲ್ಲಿ ಕಾಲ ಬದಲಾದರೂ ಅಪ್ಪಂದಿರು ಮಾತ್ರ ಬದಲಾಗಲ್ಲ ಎಂಬ ಸಂದೇಶವಿದೆ.

ಚಿತ್ರದ ಗಮನಾರ್ಹ ಅಂಶ ಎಂದರೆ ಹಾಡುಗಳು ಹಾಗೂ ಅದರ ಚಿತ್ರೀಕರಣ. ಆದರೆ ಇದೇ ಹಾಡುಗಳು ಒಮ್ಮೊಮ್ಮೆ "ಅಡಚಣೆಗಾಗಿ ಕ್ಷಮಿಸಿ" ಎಂಬಂತಿವೆ. ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವನ್ನು ಮೆಚ್ಚಲೇಬೇಕು. ಥ್ರಿಲ್ಲರ್ ಮಂಜು ಅವರ ಸಾಹಸ ಮೈನವಿರೇಳಿಸುವಂತೇನು ಇಲ್ಲ.ಗುರುಕಿರಣ್ ಸಂಗೀತ ಓಕೆ ಎನ್ನಬಹುದು.

ಚಿತ್ರದಲ್ಲಿನ ಹಾಸ್ಯ ಊಟದಲ್ಲಿನ ಉಪ್ಪಿನಕಾಯಿ ತರಹ ಇದೆ. ರಂಗಾಯಣ ರಘು, ಬುಲೆಟ್ ಪ್ರಕಾಶ್ ಕಚಗುಳಿಯಿಡುತ್ತಾರೆ. ಜೈಲರ್ ಆಗಿ ಅಭಿನಯಿಸಿರುವ ರವಿಕಾಳೆ ಅಭಿನಯದಲ್ಲಿ ವಿಶೇಷವೇನು ಇಲ್ಲ. ಚಿತ್ರದ ಮತ್ತೊಬ್ಬ್ಬ ನಾಯಕಿ ಸಂಜನಾ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದಾರೆ. ಮೈಲಾರಿಯ ಪ್ರೇಮ್ ಕಹಾನಿ ಸದಾ ಪಾತ್ರಕ್ಕೆ ಒಂಚೂರು ಹೆಚ್ಚು ಒತ್ತು ಕೊಡಲಾಗಿದೆ. ಸದಾ ಅಭಿನಯ ಹೇಳಿಕೊಳ್ಳುವಂತಿಲ್ಲದಿದ್ದರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಕತೆಯಲ್ಲಿ ವೇಗವಿಲ್ಲದ ಕಾರಣ ಚಿತ್ರದ ಮೊದಲಾರ್ಧ ಪ್ರೇಕ್ಷಕ ನಿದ್ದೆಗೆ ಹೊರಳುವಂತೆ ಮಾಡುತ್ತದೆ. ದ್ವಿತೀಯಾರ್ಧದಲ್ಲಿ ಒಂಚೂರು ವೇಗ ಪಡೆದುಕೊಳ್ಳುವ ಕತೆ ಕೊಂಚ ಸಮಾಧಾನ ಮೂಡಿಸುತ್ತದೆ. ಚಿತ್ರದಲ್ಲಿ ಹೊಸತನದ ಕೊರತೆ ಎದ್ದು ಕಾಣುತ್ತದೆ. ಚಂದ್ರು ಮತ್ತೆ ಅದೇ ಗಾಂಧಿನಗರದ ಹಳೆ ಫಾರ್ಮುಲಾಗೆ ಮರಳಿರುವುದು ವಿಚಿತ್ರ, ವಿಸ್ಮಯ.

'ಬಂಗಾರದ ಪಂಜರ' ಚಿತ್ರದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಮುದ್ದಿನ ಟಗರು 'ಮೈಲಾರಿ' ಇಲ್ಲಿನ ಮೈಲಾರಿಗೂ ಅಜಗಜಾಂತರ ವ್ಯತ್ಯಾಸವಿದೆ. ಚಿತ್ರದಲ್ಲಿ ಟಗರಿನ ಸನ್ನಿವೇಶವಿದೆಯಾದರೂ 'ಬಂಗಾರದ ಪಂಜರ' ಚಿತ್ರದಲ್ಲಿನ ಮುಗ್ಧ, ಮನಮಿಡಿಯುವ , ಸೂಕ್ಷ್ಮದೃಷ್ಟಿಕೋನ ಆರ್ ಚಂದ್ರು ಮೈಲಾರಿಯಲ್ಲಿಲ್ಲ. ಸವಕಲು ನಾಣ್ಯಕ್ಕೆ ಹೊಸ ರೂಪ ಕೊಟ್ಟಂತಿದೆ. [ಚಿತ್ರ ವಿಮರ್ಶೆ]

English summary
Here is the review of Kannada movie Mylari. The movie is message oriented but failed in direction. It features Shivarajkumar, Sada, Sanjana Galrani, Rangayana Raghu, Bullet Prakash, Ravi Kale, Matha Guruprasad, Suresh Heblikar. The movie is directed by R Chandru.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more