»   » ನೂರು ಜನ್ಮಕು: ಹಸಿದ ಪ್ರೇಕ್ಷಕರಿಗೆ ಬಿಸಿ ಬಿಸಿ ಲಾಡು!

ನೂರು ಜನ್ಮಕು: ಹಸಿದ ಪ್ರೇಕ್ಷಕರಿಗೆ ಬಿಸಿ ಬಿಸಿ ಲಾಡು!

Posted By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

ಇದು ಶುದ್ಧ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರ! ಹೌದು. ಅದಕ್ಕೆ ಇಲ್ಲಿ ಒಂದಷ್ಟು ಪುರಾವೆಗಳಿವೆ. 'ನೂರೂ ಜನ್ಮಕು' ಚಿತ್ರದ ಮೇಕಿಂಗೇ ಹಾಗಿದೆ. ಅಲ್ಲಿ ಏನೈತಿ ಎನ್ನುವ ಬದಲು ಇದು ನಾಗತಿ ಸ್ಪೆಷಲ್ ಎಂದರೆ ಸಿನಿಮಾ ಹಾಗೂ ಬದುಕು ಸಾರ್ಥಕ. ಅವರ ಚಿತ್ರಗಳೇ ಹಾಗೆ-ಶುರು ನಿಧಾನಗತಿ. ಹೋಗುತ್ತಾ ಹೋಗುತ್ತಾ ಅದು ತ್ವರಿತಗತಿ.

ಕೊನೆಯಲ್ಲಿ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಅದಕ್ಕೆ ಉತ್ತರ ಹುಡುಕುವ ಬದಲು ಇಂತಿ ನಿಮ್ಮ ಪ್ರೀತಿಯ ಹುಡುಗ... ಎಂದು ಎದ್ದು ಬರುವುದು ಉತ್ತಮ! ಇದು ಅಮೆರಿಕ ಅಮೆರಿಕ ಚಿತ್ರದ ಹಾಡಿನ ಸಾಲಿನ ಚಿತ್ರ. ಅಂತೆಯೇ ವಿದೇಶದ ಸೊಗಡನ್ನೂ ಕಾಣಬಹುದಾಗಿದೆ.

ನಾಗತಿ ಗೆದ್ದಿರುವುದೇ ಇಲ್ಲ. ಅದೇ ಕಾಲೇಜು, ಅದೇ ಕಾಟೇಜು, ಅದೇ ವಿಲೇಜು, ಅದೇ ನೈಸರ್ಗಿಕ ಹಸಿರು ನೋಡಿದವರಿಗೆ ನಾಗತಿ ಇಲ್ಲಿ ಹಡಗು ಪ್ರಯಾಣ ಮಾಡಿಸುತ್ತಾರೆ. ಸಂತೋಷ್ ರೈ ಪತಾಜೆ ಗೆಲುವಿನ ಪತಾಕೆ ಹಾರಿಸುತ್ತಾರೆ. ನೀರ ಮಧ್ಯೆ ನಾವೂ ಸಾಗುತ್ತಿದ್ದೇವೇನೋ ಎಂಬ ಫೀಲ್ ಕೊಡುತ್ತಾರೆ.

ನಿರ್ದೇಶಕರು ಈ ಬಾರಿ ವಿಶ್ವ ಆರ್ಥಿಕ ಅಸಮತೋಲನದಿಂದ ಮಂದಿ ಎಂಥ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದನ್ನು ನವಿರಾಗಿ ಚಿತ್ರಿಸಿದ್ದಾರೆ. ಇದ್ದಕ್ಕಿದ್ದಂತೆ ಕೆಲಸದಿಂದ ಕಿತ್ತು ಹಾಕುವ ಮಲ್ಟಿನ್ಯಾಷನಲ್ ಕಂಪನಿಗಳ ಕುರಿತು ಬೆಳಕು ಚೆಲ್ಲುತ್ತಾರೆ. ಜತೆ ಜತೆಗೆ ಸಾಧನೆಯ ಹಾದಿಯನ್ನು ತೆರೆದಿಡುತ್ತಾರೆ.

ಈ ಮಧ್ಯೆ ನಾಯಕನ ಪ್ರೇಮಾಂಕುರ, ನಾಯಕಿ ನಡೆಯುವ ಚಿಟಪಟ ಸದ್ದನ್ನು ತೋರಿಸುತ್ತಾ ಹೋಗುತ್ತಾರೆ! ಮೊದಲಾರ್ಧ ನೋಡಿಸಿಕೊಂಡು ಹೋಗುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಕೊಂಡಿಯಂತೆ ನಿಲ್ಲುತ್ತಾರೆ ಶರಣ್. ನಾಯಕ ಸಂತೋಷ್ ಅಭಿನಯಕ್ಕಿಂತ ಹಾಸ್ಯ ಭಾಗವೇ ಇಷ್ಟವಾಗುತ್ತದೆ.

ನಾಯಕನೊಬ್ಬನಿಗೆ ಇರಬೇಕಾದ ಕ್ವಾಲಿಟಿಯಲ್ಲಿ ಹತ್ತು ಭಾಗವೂ ಸಂತೋಷ್‌ಗೆ ಇಲ್ಲ ಎಂದರೆ ಅವರು ನೊಂದುಕೊಳ್ಳಬಾರದು. ಪೊಲೀಸರಿಂದ ವಿಮಾನ ಹತ್ತಿಸಿಕೊಳ್ಳುವಾಗ ಕೆಲವರು ಹೇಗೆ ಮುಖ ಮಾಡುತ್ತಾರೋ ಹಾಗೆ ಮಾಡುತ್ತಾರೆ ಕನ್ನಡ ಚಿತ್ರರಂಗದ 'ಪಿಂಪಲ್ ಸ್ಟಾರ್' ಸಂತೋಷ್!

ಐಂದ್ರಿತಾ ಎಂದಿನಂತೆ ಮುದ್ದಾಗಿ ನಟಿಸಿದ್ದಾರೆ. ಮನೋಮೂರ್ತಿ ಬತ್ತಳಿಕೆಯಲ್ಲಿ ಹೊಸ ಟ್ಯೂನ್‌ಗಳಿಗೆ ಬರ ಬಂದಂತಿದೆ. ಹಳೇ ಹಾಡು-ನೂರು ಜನ್ಮಕೂ... ನೂರಾರು ಜನ್ಮಕೂ... ಒಂದನ್ನು ಹೊರತಾಗಿ ಮತ್ತಾವುದೂ ರಿಜಿಸ್ಟರ್ ಆಗುವುದಿಲ್ಲ. ಒಟ್ಟಾರೆ ನೂರು ಜನ್ಮಕು... ಹಸಿದ ಪ್ರೇಕ್ಷಕರಿಗೆ ಬಿಸಿ ಬಿಸಿ 'ಲಾಡು' ತಿನ್ನಿಸುತ್ತದೆ. ಆದರೆ, ಅದರಿಂದ ಹೊಟ್ಟೆ ತುಂಬುತ್ತಾ ಅಂತ ಮಾತ್ರ ಕೇಳಬೇಡಿ!(ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada