For Quick Alerts
  ALLOW NOTIFICATIONS  
  For Daily Alerts

  ಮನರಂಜನೆಗೆ ಮೋಸಮಾಡದ ರಾಧಿಕಾ 'ಲಕ್ಕಿ'

  By * ಶ್ರೀರಾಮ್ ಭಟ್
  |

  ಎಚ್ ಡಿ ಕುಮಾರಸ್ವಾಮಿ ಅರ್ಪಿಸುವ, ಶಮಿಕಾ ಎಂಟರ್ ಪ್ರೈಸಸ್ ನ, ರಾಧಿಕಾ ಕುಮಾರಸ್ವಾಮಿ ನಿರ್ಮಾಣದ 'ಲಕ್ಕಿ' ಚಿತ್ರ ಇಂದು ಬೆಂಗಳೂರಿನ ಸಾಗರ್ ಹಾಗೂ ರಾಜ್ಯಾದ್ಯಂತ ಇತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರಾಧಿಕಾರ ಪ್ರಥಮ ನಿರ್ಮಾಣದ ಚಿತ್ರ ಇದಾಗಿದ್ದು, ಯಶ್-ರಮ್ಯಾ ಜೋಡಿ ಪ್ರಮುಖ ತಾರಾಗಣದಲ್ಲಿದ್ದಾರೆ. ಡಾ ಸೂರಿ ಚಿತ್ರಕಥೆ, ನಿರ್ದೇಶನದ ಲಕ್ಕಿ ಚಿತ್ರಕ್ಕೆ ಗೌಸ್ ಪೀರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

  ಮುಹೂರ್ತದಿಂದಲೂ ಸಾಕಷ್ಟು ಕುತೂಹಲ ಮೂಡಿಸಿತ್ತು ಲಕ್ಕಿ. ಅದಕ್ಕೆ ಕಾರಣಗಳು ರಾಧಿಕಾ ನಿರ್ಮಾಣ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೊತೆ ನಾಯಕನಾಗಿ ರಾಕಿಂಗ್ ಸ್ಟಾರ್ ಯಶ್ ನಟನೆ ಹಾಗೂ ಪ್ರಸಿದ್ಧರಲ್ಲದ, ಹೊಸಬರಾದ ನಿರ್ದೇಶಕ ಡಾ. ಸೂರಿ. ಜೊತೆಗೆ ಈ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಗ್ (ಹಚ್) ನಾಯಿ. ಇಷ್ಟೆಲ್ಲಾ ನಿರೀಕ್ಷೆಗಳನ್ನಿಟ್ಟುಕೊಂಡು ಚಿತ್ರಮಂದಿರಕ್ಕೆ ಹೋದ ಜನರಿಗೆ ನಿರಾಸೆಯಾಗದೇ ಪಕ್ಕಾ ಮನರಂಜನೆ ನೀಡುವಂತಿದೆ, ಲಕ್ಕಿ ಸಿನಿಮಾ.

  ಚಿತ್ರದ ಕಥೆ ತೀರಾ ವಿಶೇಷವಾಗಿಲ್ಲದಿದ್ದರೂ ಹೊಸತನದಿಂದ ಕೂಡಿದೆ. ನಾಯಿಯೊಂದು ಮನುಷ್ಯನ ಭಾವನೆಯನ್ನು ಅರ್ಥಮಾಡಿಕೊಳ್ಳುವುದಲ್ಲದೇ ನಾಯಿಬುದ್ಧಿಯ ಜೊತೆ ಈ ಮಟ್ಟಿಗಿನ ಚಾಣಾಕ್ಷ (ಛತ್ರಿ?!) ಬುದ್ಧಿಯನ್ನು ಉಪಯೋಗಿಸಿ ಕಾರ್ಯ ನಿರ್ವಹಿಸುತ್ತದೆ ಎಂಬುವುದನ್ನು ನಂಬಲು ಕಷ್ಟವಾದರೂ ಸಿನಿಮಾದಲ್ಲಿ ನಂಬುವಂತೆ ಮಾಡಲಾಗಿದೆ. ರಮ್ಯಾ ಮತ್ತು ಅವರ ಸಾಕುನಾಯಿಯ ಬಲವಾದ ಬಾಂಧವ್ಯವೇ ಈ ಚಿತ್ರಕಥೆ ಹುಟ್ಟಲು ಕಾರಣ ಎಂಬ ಗುಟ್ಟನ್ನು ಲಕ್ಕಿ 'ಕಥೆ'ಗಾರ ಗೌಸ್ ಪೀರ್ ಬಹಿರಂಗ ಪಡಿಸಿರುವುದರಿಂದ ಪ್ರೇಕ್ಷಕರು ಇರಬಹುದೆಂದು ನಂಬಲೇಬೇಕು.

  ನೈಜತಗೆ ಸ್ವಲ್ಪ ದೂರ ಎಂಬುದನ್ನು ಬಿಟ್ಟರೆ ಕಲ್ಪನೆಯ ಮಟ್ಟಿಗೆ ಅದ್ಭುತ ಕಥೆ, ಚಿತ್ರಕಥೆ ಲಕ್ಕಿಯಲ್ಲಿದೆ. ಸಂಭಾಷಣೆ ಕೂಡ ಹಿತಮಿತವಾಗಿದ್ದೂ ಖುಷಿ ನೀಡುವಂತಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ಸಮತೋಲನ ಕಾಯ್ದುಕೊಂಡಿದ್ದಾರೆ. ನಿರೂಪಣೆಯಲ್ಲೂ ಹೊಸತನದ ಜೊತೆಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಗಮನದಲ್ಲಿಟ್ಟು ಮಾಡಿರುವುದು ಸ್ಪಷ್ಟವಾಗುವಂತಿದೆ. ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಡಾ ಸೂರಿಗೆ ಸಿನಿಮಾ ಟೇಸ್ಟ್ ಜೊತೆಗೆ ಪ್ರೇಕ್ಷಕರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಬಲ್ಲ ಬುದ್ಧಿವಂತಿಕೆಯಿದೆ. ಗೌಸ್ ಪೀರ್ ಅವರಿಗೂ ಇದೇ ಮಾತು ಅನ್ವಯಿಸುತ್ತದೆ.

  ಇನ್ನು ಅಭಿನಯದಲ್ಲಿ ನಾಯಕ ಯಶ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೊತೆ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದಾರೆ. ದ್ವಿಪಾತ್ರದಂತಿರುವ ನಾಯಕನ ಪಾತ್ರ ಲಕ್ಕಿ ಹಾಗೂ ವಿಕ್ಕಿಯಾಗಿ ಯಶ್ ಚಿತ್ರದುದ್ದಕ್ಕೂ ಸಖತ್ ಮಿಂಚಿದ್ದಾರೆ. ಯಶ್ ಡಾನ್ಸ್ ಗಳು ತೆರೆಯಲ್ಲಿ ಬಂದಾಗ ಪ್ರೇಕ್ಷಕರಿಂದ ಮೆಚ್ಚುಗೆ ಹಾಗೂ ಚಪ್ಪಾಳೆಗಳ ಸುರಿಮಳೆ. ಪೈಟ್ ಗಳಲ್ಲೂ ಮಿಂಚಿರುವ ಯಶ್ ಅವರ ಬಾಡಿ ಲಾಂಗ್ವೇಜ್, ಸಂಭಾಷಣೆ ಒಪ್ಪಿಸಿರುವ ರೀತಿ ಎಲ್ಲವೂ ಸುಲಲಿತ ಹಾಗೂ ಸೂಪರ್.

  ರಮ್ಯಾ ಬಗ್ಗೆ ಎರಡು ಮಾತಿಲ್ಲ. ನಾಯಕಿ ಗೌರಿ ಪಾತ್ರಕ್ಕೆ ರಮ್ಯಾ ಸೂಕ್ತ ಆಯ್ಕೆ ಎಂಬುದನ್ನು ಅಭಿನಯ, ಸಂಭಾಷಣೆ ಹಾಗೂ ಬಾಡಿ ಲಾಂಗ್ವೇಜ್ ಎಲ್ಲದರಲ್ಲೂ ರಮ್ಯಾ ನಿರೂಪಿಸಿದ್ದಾರೆ. ಚಿತ್ರರಂಗಕ್ಕೆ ಬಂದು ಹತ್ತು ವರ್ಷದ ನಂತರವೂ ಈಗಲೂ ಆಕೆ 'ನಂ ಒನ್' ಯಾಕೆ ಎಂಬುದಕ್ಕೆ ಉತ್ತರ ನೀಡುವಂತೆ ಚಿತ್ರದುದ್ದಕ್ಕೂ ಲವಲವಿಕೆಯ ಜೊತೆಜೊತೆಯಲ್ಲಿ ಅಭಿನಯದಲ್ಲೂ ಮಿಂಚಿದ್ದಾರೆ. ಇನ್ನು ಚಿತ್ರದಲ್ಲಿ ಅವರ ಜೀವ(ನ)ವಾಗಿ ಕಾಣಿಸಿಕೊಂಡಿರುವ ಮುದ್ದುಮುದ್ದಾಗಿರುವ ಪಗ್ ನಾಯಿ ಜೂಜೂ ಮೂಕಾಭಿನಯ ಆಕರ್ಷಕವೆನಿಸುತ್ತದೆ. ಅದು ಖಂಡಿತ ಹುಚ್ಚು ನಾಯಿಯಲ್ಲ, ಹಚ್ ನಾಯಿ.

  ಯಶ್ ಗೆಳೆಯನ ಪಾತ್ರಧಾರಿಯಾಗಿ ಶರಣ್ ಅವರದು ಸಮಯಪ್ರಜ್ಞೆಯ ಜೊತೆಗೂಡಿದ ಕಚಗುಳಿಯಿಕ್ಕುವ ಅಭಿನಯ. ತಬಲಾ ನಾಣಿ, ಸಾಧುಕೋಕಿಲ, ಬಿರಾದಾರ್, ವಿಜಯ್ ಚೆಂಡೂರ್, ಶಂಕರ್ ಭಟ್, ಪದ್ಮಾ ಕುಮಟಾ, ಎಂ ಎಸ್ ಉಮೇಶ್, ಎಂ ಎನ್ ಲಕ್ಷ್ಮೀದೇವಿ ಎಲ್ಲರ ಅಭಿನಯವೂ ಪಾತ್ರಕ್ಕೆ ತಕ್ಕಂತಿದೆ. ಹಾಡುಗಳ ಸಾಹಿತ್ಯದ ಜೊತೆ ಅರ್ಜುನ್ ಜನ್ಯ ಸಂಗೀತ, ಚಿತ್ರದ ಹಿನ್ನಲೆ ಸಂಗೀತ ಎಲ್ಲವೂ ಹೊಸತನದ ಜೊತೆ ಹಿತವೆನಿಸುತ್ತದೆ. ಚಿಂಗಾರಿ ಹರ್ಷ, ಮುರಳಿ ಹಾಗೂ ರಾಬರ್ಟ್ ನೃತ್ಯ ನಿರ್ದೆಶನದ ಸಾರ್ಥಕತೆ ನಾಯಕ ಯಶ್ ನೃತ್ಯದಲ್ಲಿ ಕಾಣಿಸುವಂತಿದೆ. ರವಿವರ್ಮ ಸಾಹಸ ನಿರ್ದೇಶನ ಕೂಡ ರೋಮಾಂಚನಕಾರಿ.

  ಒಟ್ಟಿನಲ್ಲಿ ರಾಧಿಕಾ ಕುಮಾರಸ್ವಾಮಿಯ ಪ್ರಪ್ರಥಮ ನಿರ್ಮಾಣದ ಚಿತ್ರ ಲಕ್ಕಿ, ಕೇವಲ ಮನರಂಜನೆಯನ್ನು ಮನದಲ್ಲಿಟ್ಟು ಹೋದವರಿಗೆ ಯಾವುದೇ ರೀತಿಯಲ್ಲೂ ನಿರಾಸೆ ಮೂಡಿಸುವುದಿಲ್ಲ. ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸವಿಲ್ಲ. ಆದರೆ ಲಕ್ಕಿ ಚಿತ್ರದ ಕಥೆ, ಚಿತ್ರಕಥೆಯನ್ನು ನಿಜಜೀವನದಲ್ಲಿ ಹುಡುಕಹೊರಟರೆ ಅದು ತರ್ಕಕ್ಕೆ ನಿಲುಕುವುದಿಲ್ಲ. ಹೊಸತನದಿಂದ ಕಂಗೊಳಿಸುವ ಲಕ್ಕಿ, ಯಶ್-ರಮ್ಯಾ ಗಮನಸೆಳೆಯುವ ಅಭಿನಯ ಹಾಗೂ ಪಗ್ ನಾಯಿಯ ಮೂಲಕ ಪ್ರೇಕ್ಷಕರಿಗೆ ಆಪ್ತವಾಗುವಂತಿದೆ.

  English summary
  Read Kannada movie Lucky Review. Radhika produced lucky released today, Feb 24, 2012 80 theaters in all over Karnataka. Yash and Ramya in lead role and Dr. Suri directed this lucky. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X