For Quick Alerts
  ALLOW NOTIFICATIONS  
  For Daily Alerts

  ತೀರ್ಥವೇ ಇಲ್ಲದ ಅರ್ಜುನ್ ಸರ್ಜಾರ 'ಪ್ರಸಾದ'

  By *ಜೀವನ್ ಸೂರ್ಯ
  |

  ಕಳೆದ ಶುಕ್ರವಾರ, ಮಾರ್ಚ್ 23, 2012ರಂದು ರಾಜ್ಯಾದ್ಯಂತ ತೆರೆಕಂಡಿರುವ, ಅಶೋಕ್ ಖೇಣಿ ನಿರ್ಮಾಣ ಹಾಗೂ ಮನೋಜ್ ಸತಿ ನಿರ್ದೆಶನದ ಚಿತ್ರ ಪ್ರಸಾದ್. ಏಕಕಾಲಕ್ಕೆ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ಕೇಂದ್ರೀಕರಿಸಿ ಮಾಡಿದ ಈ ಚಿತ್ರ ಅರ್ಜುನ್ ಸರ್ಜಾ ಸ್ಟಾರ್ ಗಿರಿಯನ್ನು ಬಳಸಿಕೊಳ್ಳದೇ, ಮಾಧುರಿ ಬಟ್ಟಾಚಾರ್ಯ ಗ್ಲಾಮರ್ ಬದಿಗೊತ್ತಿ ಪ್ರೇಕ್ಷಕರಿಗೆ ಒಂದೊಳ್ಳೆಯ ಮನಕಲಕುವ ಚಿತ್ರ ಕೊಡುವ ಪ್ರಯತ್ನವಾಗಿದೆ. ಆದರೆ ಪ್ರಯತ್ನ ಒಳ್ಳೆ ಫಲಿತಾಂಶ ಆಗುವಲ್ಲಿ ಎಡವಿದೆ.

  ನಿರ್ದೇಶಕ ಮನೋಜ್ ಸತಿಯವರಿಗೆ ಕಥೆಯನ್ನು ದೃಶ್ಯವಾಗಿಸಲು ಬೇಕಾದ ಪ್ರತಿಭೆ ಅಥವಾ ತಯಾರಿ ಇಲ್ಲವೆನಿಸುತ್ತದೆ. ಅವರೇ ಬರೆದ ಒಳ್ಳೆಯ ಕಥೆಯನ್ನು ದೃಶ್ಯಗಳಲ್ಲಿ ನಿರೂಪಿಸುವಲ್ಲಿ ಅವರು ಸೋತುಹೋಗಿದ್ದಾರೆ. ಪ್ರಸಾದ್ ಪಾತ್ರವನ್ನು ಇನ್ನಷ್ಟು ಬೆಳೆಸಿದ್ದರೆ ಶೀರ್ಷಿಕೆಗೂ, ಚಿತ್ರಕ್ಕೂ ಪ್ಲಸ್ ಆಗುತ್ತಿತ್ತು. ಲಾಟರಿಯಲ್ಲಿ ಕೋಟಿ ಪಡೆಯುವ ನಿರ್ದೇಶಕರ ಯೋಚನೆಯೇ ಬಾಲಿಶ. ಜೊತೆಗೆ ಪಾತ್ರಧಾರಿಗಳಿಗೆ ಅಷ್ಟೊಂದು ಮೇಕಪ್ ಯಾಕೆ ಬೇಕಿತ್ತು ಎಂದು ಎಲ್ಲರೂ ಪ್ರಶ್ನಿಸುವಂತಿದೆ.

  ಸಾಮಾಜಿಕ ಕಳಕಳಿಯ ಕಥೆ ಎಲ್ಲರಿಗಲ್ಲದಿದ್ದರೂ ಸಾಕಷ್ಟು ಜನರಿಗೆ ಇಷ್ಟವಾಗುವಂತಿದೆ. ಅನುಭವದ ಆಧಾರದಿಂದಲೇ ಬಂದಂತಿರುವ ಕಥೆ, ಸಂಭಾಷಣೆ ಚಿತ್ರದ ನಿಜವಾದ ಹೈಲೈಟ್ಸ್. ಆದರೆ ನಿರೂಪಣೆ ಚೆನ್ನಾಗಿಲ್ಲ. ದೃಶ್ಯ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ ಬಹುಶಃ ಅತ್ಯುನ್ನತ ಚಿತ್ರವಾಗಿಸಬಹುದಿತ್ತು. ಆದರೆ ಆ ಅವಕಾಶವನ್ನು ಸ್ವತಃ ತಪ್ಪಸಿಕೊಂಡಿದ್ದಾರೆ ಮನೋಜ್. ತೀರ್ಥವೇ ಇಲ್ಲದ ಪ್ರಸಾದದಂತೆ ನಿರೂಪಣೆ ಸರಿಯಾಗಿಲ್ಲದ ಚಿತ್ರವಾಗಿದೆ. ಕೊನೆಯಲ್ಲಿ ಬರುವ ಬಾಷಣವಂತೂ ಪ್ರೇಕ್ಷಕರು ಎದ್ದುಹೋಗಲು ಸೂಚನೆ.

  ಅಭಿನಯದ ವಿಷಯಕ್ಕೆ ಬಂದರೆ ನಟ ಅರ್ಜುನ್ ಸರ್ಜಾರದು ಸಹಜ, ಅನುಭವಿ ಅಭಿನಯ. ಮಾಧುರಿ ಬಟ್ಟಾಚಾರ್ಯ ಅಭಿನಯಕ್ಕಿಂತ ತಾನು ಹೆಚ್ಚು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಪ್ರಯತ್ನಿಸಿದಂತಿದೆ. ಕೆಲವು ಕಡೆ ಚೆನ್ನಾಗಿ ಅಭಿನಯಿಸಿದ್ದರೂ ಸಂಪೂರ್ಣವಾಗಿ ಚಿತ್ರಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ಪ್ರಸಾದ್ ಪಾತ್ರದ 'ಸಂಕಲ್ಪ್' ನಿಜವಾದ ನ್ಯೂನತೆಯನ್ನು ಮರೆತು ಪಾತ್ರವೇ ಆಗಿ ಗಮನಸೆಳೆಯುತ್ತಾರೆ.

  ಈ ಮೂವರ ಸುತ್ತಲೇ ಸುತ್ತುವ ಚಿತ್ರದ ಮಧ್ಯೆ ಬರುವ ರಾಮಕೃಷ್ಣ, ನೀನಾಸಂ ಅಶ್ವಥ್ ಹಾಗೂ ಶಮಾ ಅವರ ಅಭಿನಯ ಲೆಕ್ಕಕ್ಕೆ ಸಿಗುವುದಿಲ್ಲ. ಬಹುದಿನಗಳ ನಂತರ ಕನ್ನಡಕ್ಕೆ ಮತ್ತೆ ಬಂದ ಇಳೆಯರಾಜಾ ಸಂಗೀತ, ಹಾಡುಗಳು ಇಷ್ಟವಾಗುವಂತಿವೆ. ಸಂಜಯ್ ಮಲ್ಕರ್ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಆದರೆ ಪಾತ್ರಧಾರಿಗಳ ಮೇಕಪ್ ಅವರ ಆಟ ಕೆಡಿಸಿದೆ. ಸಂಕಲನ ಚಿತ್ರಕ್ಕೆ ಪೂರಕವಾಗಿದೆ.

  ಸಾಮಾನ್ಯ ಜನರ ಜೀವನದಲ್ಲಿ ನಡೆಯಬಹುದಾದ ಕಥೆಯ ಮೂಲಕ ಈ ಚಿತ್ರ ನೋಡುತ್ತಿರುವವರನ್ನು ಹತ್ತಿರಕ್ಕೆ ತಂದು ಕೂರಿಸಿಕೊಳ್ಳುವುದು ಖಾತ್ರಿ. ಆದರೆ ನಿರೂಪಣೆಯ ಗೊಂದಲದಿಂದಾಗಿ 'ಈ ಗೋಳು ಮುಗಿದರೆ ಸಾಕಪ್ಪಾ..' ಎನಿಸಿ ಚಿತ್ರಮಂದಿರದಲ್ಲಿದ್ದಾಗಲೇ ಪ್ರೇಕ್ಷಕರು ಮನೆಯಲ್ಲಿ ಮಾಡಬಹುದಾದ ಕೆಲಸಕಾರ್ಯಗಳತ್ತ ಯೋಚಿಸುವಂತೆ ಮಾಡುವಂತಿದೆ. ಒಟ್ಟಿನಲ್ಲಿ ನೋಡಿದರೆ ಸ್ವಲ್ಪಹೊತ್ತು ಮನಕಲಕಿದರೂ ಮರೆತುಬಿಡುವ, ನೋಡದಿದ್ದರೆ ಏನೂ ಕಳೆದುಕೊಳ್ಳದ ಚಿತ್ರ ಅರ್ಜುನ್ ಸರ್ಜಾರ ಪ್ರಸಾದ್ ಎನ್ನಬಹುದು.

  English summary
  Arjun Sarja Movie Prasad Review. Manoj Sati Directed this movie and Ashok Kheni Production. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X