»   » ಮನಸಿರೋರು ಮನಸಾರೆ ಸವಿಯಿರಿ 'ಮನಸಾರೆ'

ಮನಸಿರೋರು ಮನಸಾರೆ ಸವಿಯಿರಿ 'ಮನಸಾರೆ'

Posted By:
Subscribe to Filmibeat Kannada

ಅಚ್ಚುಕಟ್ಟಾಗಿ ನೇಯ್ದಿರುವ ಕಥೆ, ಅತ್ಯದ್ಭುತ ಸಂಭಾಷಣೆ, ಬರಿದಾದ ಗುಡ್ಡವನ್ನೂ ಸುಂದರ ಕಲಾಕೃತಿಯಂತಾಗಿಸುವ ಛಾಯಾಗ್ರಹಣ, ಇವೆಲ್ಲಕ್ಕೆ ಕಲಶವಿಟ್ಟಂತೆ ಕಥೆಯೊಂದಿಗೆ ಹರಿವ ಮಾಧುರ್ಯ ತುಂಬಿದ ಹಾಡುಗಳು... ಇವೆಲ್ಲವನ್ನು ಅದ್ಭುತ ದಿಗ್ದರ್ಶನದಿಂದ ಹಿಡಿದಿಟ್ಟು ಯೋಗರಾಜ ಭಟ್ಟರು 'ಮನಸಾರೆ'ಯಲ್ಲಿ ಒಂದೇ ಒಂದು ಮಳೆಯ ಹನಿಯಿಲ್ಲದೇ ಪ್ರೀತಿಯ ಹುಚ್ಚು ಮಳೆ ಸುರಿಸಿದ್ದಾರೆ, ತುಂತುರು ಹನಿಯಿಲ್ಲದೇ ಕಾಮನಬಿಲ್ಲಿನ ತೋರಣ ಕಟ್ಟಿದ್ದಾರೆ.

* ಪ್ರಸಾದ ನಾಯಿಕ

ಬಹುಶಃ ಪುಟ್ಟಣ್ಣ ಕಣಗಾಲರ ಮಾನಸ ಸರೋವರದ ನಂತರ ಮನಸ್ಸಿಗೆ ಸಂಬಂಧಿಸಿದ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ, ಮತ್ತು ನವಿರಾದ ಹಾಸ್ಯದಿಂದ ಯೋಗರಾಜ ಭಟ್ಟರು ಅತ್ಯಂತ ಸಮರ್ಥವಾಗಿ ಪರದೆಯ ಮೇಲೆ ತಂದಿದ್ದಾರೆ. ಮನಸು ಮನಸು ಅರಿತವರಿಗಾಗಿ ಪ್ರೀತಿಯ ಹುಚ್ಚು ಹಿಡಿಸಿದ್ದಾರೆ, ಮನಸನ್ನು ಅರಿಯದವರ ಹುಚ್ಚನ್ನು ಪ್ರೀತಿಯ ಅರಿವಿನಿಂದ ಬಿಡಿಸಿದ್ದಾರೆ.

ಹುಚ್ಚರು ಅಂದ್ರೆ ಯಾರು? ಪ್ರೀತಿ ಹುಚ್ಚು ಅನ್ನುವುದಾದರೆ ಇಡೀ ಲೋಕವೇ ಹುಚ್ಚರ ಸಂತೆ, ಪ್ರೀತಿಯನ್ನು ನೀಡದವರು ಲೋಕದಲ್ಲಿ ಇದ್ದರೂ ಸತ್ತಂತೆ. ಯಾರೋ ಯಾರನ್ನೋ ಇಷ್ಟಪಡ್ತಾರೆ ಇನ್ನಾರನ್ನೋ ಕಟ್ಟಿಕೊಳ್ಳಾರೆ, ಕಟ್ಟಿಕೊಂಡೋರು ಮತ್ತಾರನ್ನೋ ಇಷ್ಟಪಟ್ಟಿರ್ತಾರೆ... ಗಂಡು ಹೆಣ್ಣಿನ ನಡುವಿನ ಪ್ರೀತಿ ಅರಿವಾಗುವ ಹೊತ್ತಿಗೆ ಫ್ರಿಜ್ಜಿನಲ್ಲಿ ಒಣಗಿದ ಕೊತ್ತಂಬರಿಯಾಗಿರ್ತಾರೆ. "ತಲಿ ಯಾರ್ದು ರಿಪೇರಿ ಮಾಡಲಿಕ್ಕೆ ಬರ್ತದೋ ಅವರು ಹುಚ್ಚಾಸ್ಪತ್ರೆನಾಗಿರ್ತಾರ, ತಲಿ ಯಾರ್ದು ರಿಪೇರಿ ಮಾಡಲಿಕ್ಕೆ ಬರೋದಿಲ್ಲೋ ಅವರು ಹೊರಗಿರ್ತಾರ" ಹುಚ್ಚಾಸ್ಪತ್ರೆಯಲ್ಲಿ ಹುಚ್ಚ ಅಂತ ಹಣೆಪಟ್ಟಿಯಿರೋ ಶಂಕರಪ್ಪನ ಮಾತುಗಳೇ ಸಾಕ್ಷಿ ಯಾರು ಹುಚ್ಚರು ಮತ್ತು ಯಾರು ಹುಚ್ಚಿಲ್ದೇ ಇರೋರು ಅಂದುಕೊಳ್ಳೋದಕ್ಕೆ.

ಇಡೀ ಚಿತ್ರ ಪ್ರೀತಿ ಮತ್ತು ಹುಚ್ಚಿನ ಸುತ್ತವೇ ಗಿರಿಕಿಹೊಡೆಯುತ್ತದೆ. ಗಿರಿಕಿ ಹೊಡೆಯುತ್ತ ಕಥೆ ಹೀಗೇ ಸಾಗುತ್ತದೆ ಅಂದುಕೊಳ್ಳುತ್ತಿರುವಾಗಲೇ ಭಟ್ಟರು ಸಣ್ಣ ಶಾಕ್ ನೀಡಿರುತ್ತಾರೆ. ಇನ್ನೇನು ಹುಚ್ಚು ಹಿಡಿದೇಬಿಡುತ್ತದೆ ಅನ್ನುವಹೊತ್ತಿಗೆ ನಗೆಗುಳಿಗೆ ಮೂಲಕ ಮನಸು ತಿಳಿಯಾಗಿರುತ್ತದೆ. ಕಥೆಯ ನಿರೂಪಣೆಯಲ್ಲಿ ಯೋಗರಾಜ ಭಟ್ಟರು ಹಿಡಿದ ಹಿಡಿತವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.

ಭಟ್ಟರು ಬರೆದಿರುವ ಸಂಭಾಷಣೆಯೇ ಚಿತ್ರದ ಹೈಲೈಟು, ಅದೇ ಚಿತ್ರದ ನಾಯಕ, ಅದೇ ಚಿತ್ರದ ಜೀವಾಳ, ಅದೇ ಚಿತ್ರದ ಆತ್ಮ ಕೂಡ. ಆರಂಭದಲ್ಲಿ ಮುಂಗಾರು ಮಳೆಯ ಛಾಯೆ ಕಂಡರೂ, ಧಾರವಾಡದ ಭಾಷೆಯನ್ನು ಚಿತ್ರದುದ್ದಕ್ಕೂ ಬಳಸಿಕೊಂಡು ಆ ಗುಂಗಿನಿಂದ ಹೊರಬಂದಿದ್ದಾರೆ. ಗಂಡು ಮೆಟ್ಟಿನ ಹುಬ್ಬಳ್ಳಿ-ಧಾರವಾಡದ ಭಾಷೆಯ ಸೊಗಡು ಪ್ರೇಕ್ಷಕರನ್ನೇ ಹುಚ್ಚು ಹಿಡಿಸುವಷ್ಟು ಸೊಗಸಾಗಿದೆ. ಧಾರವಾಡ ಭಾಷಾಶೈಲಿಯನ್ನು ಅನೇಕ ಚಿತ್ರಗಳಲ್ಲಿ ಅನೇಕರು ಬಳಸಿಕೊಂಡಿದ್ದಾರೆ. ಹಾಸ್ಯಕ್ಕೆ ಬಳಸಿಕೊಂಡು ಅಪಹಾಸ್ಯಕ್ಕೀಡು ಮಾಡಿದ್ದಾರೆ. ಆದರೆ, ಇಲ್ಲಿ ಭಟ್ಟರು ಧಾರವಾಡ ಭಾಷೆಯನ್ನು ಬಳಸಿ ಚಿತ್ರದ ಅಂದವನ್ನು ಹೆಚ್ಚಿಸಿದ್ದಾರೆ. ಶಂಕರಪ್ಪ ಪಾತ್ರಧಾರಿಯ ಬಾಯಿಯಿಂದ ಹರಿದುಬರುವ ಧಾರವಾಡದ ಮಾತುಗಳು ಪೇಡೆ ತಿಂದಷ್ಟೇ ಸೊಗಸಾಗಿದೆ.

ನಾಯಕ, ನಾಯಕಿ ಮಾತ್ರವಲ್ಲ ಸಣ್ಣಪುಟ್ಟ ಪಾತ್ರಧಾರಿಗಳಿಂದ ಅಭಿನಯವನ್ನು ಹೊರಹೊಮ್ಮಿಸಿದ್ದಾರೆ ಭಟ್ಟರು. ಅವರಿಗೆ ಒಂದು ಕಲ್ಲುಬಂಡೆಯನ್ನು ಕೂಡ ಅಭಿನಯ ತೆಗೆಸುವ ಕಲೆಗಾರಿಕೆ ಗೊತ್ತು. ಪ್ರೀತಿ, ಪ್ರೇಮ, ದ್ವೇಷ, ಮೋಸ, ಕಾಮದ ಸಂಕೇತವಾಗಿ ಮೊಂಡು ಮೊನೆಯ ಚಾಕುವನ್ನು ಕೂಡ ಭಟ್ಟರು ಚಿತ್ರದ ಒಂದು ಪಾತ್ರಧಾರಿಯನ್ನಾಗಿಸಿದ್ದಾರೆ.

ಪ್ರಥಮ ಬಾರಿಗೆ ಭಟ್ಟರ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿರುವ ದಿಗಂತ್ ನಿಂದ ಅಭಿನಯದ ರಸವನ್ನು ಹೊಮ್ಮಿಸಿದ್ದಾರೆ ಭಟ್ಟರು. ಮೋಸ ಅಂದರೇನೆಂಬುದನ್ನು ಅರಿಯದ ಪ್ರಣಯಿಯಾಗಿ ದಿಗಂತ್ ಚಿತ್ರದುದ್ದಕ್ಕೂ ಆವರಿಸಿಕೊಂಡಿದ್ದಾರೆ. ಬಾಲ್ಯದ ಜೀವನದಿಂದ ಆಘಾತಕ್ಕೊಳಗಾಗಿರುವ ಮನಸಿನ ಸ್ಥಿಮಿತ ಕಳೆದುಕೊಂಡ ಹುಡುಗಿಯಾಗಿ ಐಂದ್ರಿತಾ ಚೆಲುವಿನ ಮೋಡಿ ಮಾಡಿದ್ದಾರೆ. ಮುಂಗುರುಳನ್ನು ಕಣ್ಣ ಮುಂದೆ ಇರಿಸಿಕೊಂಡು ಮುಗುಳ್ನಗುವಿನಿಂದಲೇ ಕೊಂದು ಹಾಕುತ್ತಾರೆ. ಅಭಿನಯಿಸುವುದೇ ಬೇಕಿಲ್ಲ ನಗುತ್ತಿದ್ದರೇ ಸಾಕು ಎನ್ನುವಷ್ಟರಮಟ್ಟಿಗೆ ಐಂದ್ರಿತಾ ಇಂದ್ರಜಾಲ ಬೀಸಿದ್ದಾರೆ.

ಯೋಗರಾಜ ಭಟ್ಟರ ನಿರ್ದೇಶನ, ಮನೋಮೂರ್ತಿಯ ಸಂಗೀತ ಮತ್ತು ಜಯಂತ ಕಾಯ್ಕಿಣಿಯ ಸಾಹಿತ್ಯದ ಕಾಂಬಿನೇಷನ್ ಇಲ್ಲಿ ಮತ್ತೊಮ್ಮೆ ಮಾಧುರ್ಯದ ಬಲೆಬೀಸಿದೆ. ಎಲ್ಲೋ ಮಳೆಯಾಗಿದೆ, ನಾ ನಗುವ ಮೊದಲೇನೆ... ಪ್ರೇಮದ ಗುಂಗು ಹಿಡಿಸುತ್ತವೆ. ನಟನೆ, ನಿರ್ದೇಶನ, ಸಂಭಾಷಣೆಗಳನ್ನು ಮೀರಿ ನಿಂತಿದ್ದು ಮಾತ್ರ ಸತ್ಯ ಹೆಗಡೆ ಸಿನೆಮಾಟೋಗ್ರಫಿ. ಸಂಡೂರು, ಸಕಲೇಶಪುರ, ಮಡಿಕೇರಿಯ ಅದ್ಭುತ ತಾಣಗಳನ್ನು ಸತ್ಯ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಅದರಲ್ಲೂ ನಾ ನಗುವ ಮೊದಲೇನೆ ಹಾಡನ್ನು ಸತ್ಯ ಮತ್ತು ಭಟ್ಟರು ಒಂದು ಸುಂದರ ಶೃಂಗಾರ ಕಾವ್ಯವನ್ನಾಗಿಸಿದ್ದಾರೆ. ಯಾವುದೇ ಅಶ್ಲೀಲತೆಯ ಸೋಂಕಿಲ್ಲದೇ ಐಂದ್ರಿತಾ ರೇ ಎಷ್ಟು ಸುಂದರವಾಗಿ ಕಾಣಿಸಬೇಕೋ ಅಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಹ್ಯಾಟ್ಸಾಫ್ ಟು ಸತ್ಯ ಹೆಗಡೆ.

ಪ್ರೀತಿಯ ಹುಚ್ಚೇನೆಂದು ಅರಿತಿರೋರು, ಅರಿಯದಿರೋರು, ಪ್ರೀತಿಯೆಂಬ ಹುಚ್ಚನ್ನು ಮನಸಾರೆ ಪ್ರೀತಿಸೋರು 'ಮನಸಾರೆ' ಚಿತ್ರವನ್ನು ಮನಸಾರೆ ನೋಡಿ ಸವಿಯಿರಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada