»   »  ದುಬಯ್ ಬಾಬು; ಎಲ್ಲೆಲ್ಲೂ ಉಪೇಂದ್ರಾವತಾರ

ದುಬಯ್ ಬಾಬು; ಎಲ್ಲೆಲ್ಲೂ ಉಪೇಂದ್ರಾವತಾರ

Posted By: *ದೇವಶೆಟ್ಟಿ ಮಹೇಶ್
Subscribe to Filmibeat Kannada
Dubai Babu Movie still
ಮಲ್ನಾಡ್ ಮಂಜು, ಮೈಸೂರು ಮೋಹನ್, ಬಾಂಬೆ ದಾದಾ, ಬಳ್ಳಾರಿ ನಾಗ, ಶ್ರೀನಗರ ಕಿಟ್ಟಿ... ಹೀಗೆ ತಮ್ಮ ಹೆಸರಿನ ಹಿಂದೆ ಊರಿನ ಹೆಸರು ಸೇರಿಸಿಕೊಳ್ಳುವುದೂ ಒಂಥರಾ ಕ್ರೇಜ್. ಅದೇ ಥರ ಈ ದುಬಯ್ ಬಾಬು...

ಊರು ಕೆಂಗೇರಿ, ಆದರೂ ಹಂಗೇರಿಯಾ ಎಂದು ರೀಲು ಸುತ್ತಿಸುವ ಬಾಬು. ಬಾಯಿ ತೆರೆದರೆ ದುಬಾಯಿ, ಊರೆಲ್ಲಾ ಅದೇ ಶಹನಾಯಿ, ಮಾತೆತ್ತಿದ್ದರೆ ಬಂಡಲ್ ಬಡಾಯಿ... ಸರಿ, ದುಬಾಯಿ ಕನಸು ಹೊತ್ತು, ಸ್ನೇಹಿತರ ಜತೆ ಬಾಂಬೆ ಬಜಾರ್ ಸೇರುತ್ತಾನೆ. ಅಲ್ಲಿ ಒಬ್ಬ ದುಬಾಯಿ ಶೇಖ್ ನಮ್ಮ ಖಾಸಾ ಬೀಸಾ ಅಂತ ತಲೆ ಮೇಲೆ ಮಂಕಿ ಟೋಪಿ ಇಟ್ಟು, ಮಾಯವಾಗುತ್ತಾನೆ. ಅಲ್ಲಿಗೆ ಬಾಬು ಕನಸು ನುಚ್ಚು ನೂರು. ಏನು ಮಾಡೋದು? ಬಾಬು ಪಾವ್ ಬಾಜಿ ಮಾರುವ ಕೆಲಸಕ್ಕೆ ಇಳಿಯುತ್ತಾನೆ. ಅಲ್ಲಿಗೆ ಒಬ್ಬ ಬಿನ್ನಾಣದ ಬೆಡಗಿ ಬರುತ್ತಾಳೆ. ಅವಳಿಗೂ ಇವನಿಗೂ ಕುಚ್ ಕುಚ್ ಹೋತಾಹೈ, ದಿಲ್ ತೊ ಪಾಗಲ್ ಹೈ...

ಈ ಮಧ್ಯೆ ಬಾಬು ಮುಖದ ಇನ್ನೊಬ್ಬ ಡಾನ್ ಜಿನ್ನಾಬಾಯಿ ಚೋಟಾ ಬಾಯಿ ಬಾಯಿಗೆ ಗುಂಡಿಟ್ಟು ಕೊಲ್ಲುತ್ತಾನೆ. ಆ ಬಾಬುಗೂ ಈ ಬಾಬುಗೂ ಏನಪ್ಪಾ ಸಂಬಂಧ? ಇದು ಜನ್ಮ ಜನ್ಮದ ಅನುಬಂಧ... ಗೋವಿಂದ ಗೋವಿಂದ ಎನ್ನುತ ಬರುತ್ತಾನೆ ಕುಮಾರ್ ಗೋವಿಂದ...

ಇದು ಉಪ್ಪಿ ಚಿತ್ರ, ಚಿತ್ರ ಚಿತ್ರಾನ್ನವಾಗಿ, ಆ ಅನ್ನ ಪಕ್ವಾನ್ನವಾಗಿ, ಪಕ್ವಾನ್ನ ಪರಮಾನ್ನವಾಗುವ ಹೊತ್ತಿಗೆ ಪ್ರೇಕ್ಷಕನ ಅನ್ನನಾಳ, ಜೀವ ಕೋಶ, ಕಿಡ್ನಿ, ಹೃದಯ ಮುಂತಾದ ಭಾಗ ಚುರುಕಾಗುತ್ತದೆ. ಉಪ್ಪಿ ಹಿಪ್ಪಿಯಲ್ಲಿ ನಾಯಕಿಯನ್ನು ಅಪ್ಪಿಕೊಳ್ಳುತ್ತಿದ್ದರೆ...ಇಲ್ಲಿ ಉಪ್ಪಿ ಅದನ್ನೇ ಮಾಡಿದ್ದಾರೆ. ಮಾತಿನಲ್ಲಿ ಓಘ, ಗತ್ತಿನಲ್ಲಿ ವೇಗ, ಕುಣಿತದಲ್ಲಿ ಮೇಘ... ಎಲ್ಲೆಲ್ಲೂ ಉಪೇಂದ್ರಾವತಾರ. ಹತ್ತಾರು ಗೆಟಪ್ಪು, ಒಮ್ಮೆ ಮೀಸೆ, ಮತ್ತೊಮ್ಮೆ ಅದು ಇಲ್ಲ ಕೂಸೆ... ಅದೊಂಥರಾ ಉಪ್ಪಿ ಮೀಮಾಂಸೆ...

ಉಪ್ಪಿ ಮೈಮೇಲೆ ಮಾತುಗಳ ಮಲ್ಲಿಗೆ ಹಾರ ಹಾಕಿದ್ದಾರೆ ಸಂಭಾಷಣೆಕಾರ ಕೇಶವಾದಿತ್ಯ. ಅದರ ಕೆಲ ತುಣುಕುಗಳು- ದುಬೈನಲ್ ಬರ್ಗರ್ ತಿಂತೀನಿ ಅಂತೀಯಾ, ಒಳ್ಳೆ ಬರಗೆಟ್ಟೋನ್ ಥರ ಇದ್ದೀಯಾ? ಕಿಚನ್‌ನಲ್ಲಿ ಚಿಕನ್ ಮಾಡೋದು, ಟ್ಯಾಲೆಂಟ್ - ಟಾಯ್ಲೆಟ್, ದೇಹದಲ್ಲಿರುವ ಗಾಯಗಳು ಸವಿನೆನಪು ಇದ್ದಹಾಗೆ, ತಾತಾಜಿ, ನೇತಾಜಿ, ಅಣ್ಣಾಜಿ, ತಮ್ಮಾಜಿ..., ಡ್ಯಾನ್ಸ್ ಮಾಡುವ ಹೊಸ ಸ್ಟೆಪ್- ಗೋಡೆ ಮೇಲೆ ಎರಡೂ ಕೈಯಲ್ಲಿ ಬೆರಣಿ ತಟ್ಟೋದು!

ನಿರ್ದೇಶಕ ನಾಗಣ್ಣ ರೀಮೇಕ್ ಕತೆ ಆಯ್ಕೆ ಮಾಡಿಕೊಂಡಿದ್ದಾರೆ, ನಿಜ. ನಿರೂಪಣೆಯಲ್ಲಿ ಹೊಸತನವಿದೆ ಎನ್ನೋದೂ ಅಷ್ಟೇ ಸತ್ಯ. ಆದರೆ ಕೆಲ ಭಾಗಗಳು ತುಸು ಅತಿ ಎನಿಸುತ್ತವೆ. ಹಾಸ್ಯ ಅಪಹಾಸ್ಯಕ್ಕೆ ಮುನ್ನುಡಿ ಬರೆಯುತ್ತವೆ. ಕೆಲ ಕಡೆ ಅನಗತ್ಯ ಹಾಡುಗಳು ತೂರಿಕೊಳ್ಳುತ್ತವೆ. ಕ್ಲೈಮ್ಯಾಕ್ಸ್‌ನಲ್ಲಿ ಕೈ ಸುಟ್ಟ ಅನುಭವ. ನಾಗಣ್ಣ ಇನ್ನಷ್ಟು ಸಾಧ್ಯತೆ ಬಳಸಿಕೊಳ್ಳಬಹುದಿತ್ತು. ಉಪ್ಪಿಗೂ ಅದೇ ಮಾತು ಅನ್ವಯಿಸುತ್ತದೆ!

ಮುಸ್ಸಂಜೆ ಮಾತು ಶ್ರೀಧರ್ ಸಂಗೀತ ಅಲ್ಲೋಲ ಕಲ್ಲೋಲ, ಲೈಲಾ ಓ ಲೈಲಾ... ಎಲ್ಲಾ ಪೆಪ್ಪೆಪ್ಪಾ ಡುಂಡುಂಡುಂ... ಹಿಂದಿನ ಚಿತ್ರಕ್ಕೂ ಇಂದಿನ ಮಂತ್ರಕ್ಕೂ ಅಜ-ಗಜ-ಇದು ನಿಜ. ಅನಿಲ್ ಜೇವಿಯರ್ ಬಾಲಿವುಡ್‌ನಿಂದ ಬಂದು ಕ್ಯಾಮೆರಾ ಹಿಡಿದಿದ್ದು ಪ್ರಯೋಜನವಾಗಿಲ್ಲ. ಆದರೆ ಪಾತ್ರವರ್ಗ ಆಯ್ಕೆಯಲ್ಲಿ ನಾಗಣ್ಣ ಗೆದ್ದಿದ್ದಾರೆ-ಎಮ್.ಎನ್.ಲಕ್ಷ್ಮೀದೇವಿ ಮಾತಿನ ಮಹಲು ಕಟ್ಟುತ್ತಾರೆ. ಕುಮಾರ್ ಗೋವಿಂದ್ ಕಣ್ಣಲ್ಲೇ ಕೊಲ್ಲುತ್ತಾರೆ. ಸಂಗೀತಾ ಸೌಂದರ್ಯದ ಗಣಿ. ರಾಜೇಶ್ ಪೊಲೀಸ್ ಪಾತ್ರಕ್ಕೆ ಪಕ್ಕಾಫಿಟ್. ರಮೇಶ್ ಪಂಡಿತ್ ಹಾಸ್ಯದಲ್ಲಿ ಹೊಸ ವರಸೆ ತೋರುತ್ತಾರೆ.

ವಿಲನ್ ಜಿನ್ನಾ ಭಾಯಿ ಪಾತ್ರಧಾರಿ ಥೇಟ್ ನಾಸಿರುದ್ದಿನ್ ಶಾ ಥರ ಕಾಣುತ್ತಾರೆ. ದ್ವಾರಕೀಶ್ ಈ ವಯಸ್ಸಿನಲ್ಲೂ ಡಮ್ಮಾರೆ ಡಮ್ಮಮ್ಮ... ರಘುರಾಮ್, ಸತ್ಯಜಿತ್, ಸುಂದರ್‌ರಾಜ್, ಟೆನ್ನಿಸ್‌ಕೃಷ್ಣ, ಉಮೇಶ್, ಸಾಧುಕೋಕಿಲಾ ಎಲ್ಲ ಕಿಲಕಿಲ ಕೋಕಿಲ...ನಿಖಿತಾ ಆಗತಾನೇ ಐಸ್ ಬಾಕ್ಸ್‌ನಿಂದ ತೆಗೆದ ಚೋಕೋಬಾರ್. ನಡುಗೆಯಲ್ಲಿ ನಿಂಬೆ ಹಣ್ಣಿನಂತ ಹುಡುಗಿ... ಕುಣಿತದಲ್ಲಿ ಬಿಂಕದ ಸಿಂಗಾರಿ, ನಟನೆಯಲ್ಲಿ ಮಾತ್ರ ಒಣಗಿದ ಕೊತ್ತುಂಬರಿ!

ನಿರ್ಮಾಪಕರು ಅದ್ಧೂರಿತನದ ಬಗ್ಗೆ ನಾಲ್ಕಾಣೆಯಷ್ಟೂ ತಲೆ ಕೆಡಿಸಿಕೊಂಡಿಲ್ಲ. ಈಗ ಮುಂಬಯಿ, ಐದು ನಿಮಿಷದ ನಂತರ ದುಬೈ, ಮತ್ತೆ ಮೂರು ನಿಮಿಷದಲ್ಲಿ ಇನ್ನೊಂದೂರು ಭಾಯಿ...ಆದರೆ ಉಪ್ಪಿ ಕತೆ ಆಯ್ಕೆ ಮಾಡಿಕೊಳ್ಳುವ ಮುನ್ನ ಕೊಂಚ ಯೋಚಿಸಬೇಕು, ಕಡೇಪಕ್ಷ ಅದಕ್ಕೆ ಟೈಮ್ ಇರದಿದ್ದರೂ ಒಳ್ಳೇ ರೀಮೇಕ್ ಕತೆಯನ್ನಾದರೂ ಆಯ್ಕೆ ಮಾಡಿಕೊಳ್ಳಲಿ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X