»   »  ಚಿತ್ರವಿಮರ್ಶೆ: ದಿಗಂತ, ಹೇಮಂತರ ಹೌಸ್‌ಫುಲ್

ಚಿತ್ರವಿಮರ್ಶೆ: ದಿಗಂತ, ಹೇಮಂತರ ಹೌಸ್‌ಫುಲ್

Posted By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಇದು ಮೊಮ್ಮಗ, ಮೊಮ್ಮಗ ತಾತ, ಮೊಮ್ಮಗ ತಾತ, ತಾತ ಮೊಮ್ಮಗ... ಇಡೀ ಕತೆ ಈ ಎರಡು ಬಾಡಿಗಳ ನಡುವೆ ಸಾಗುತ್ತದೆ. ತಾತ ಅಮೆರಿಕ, ಮೊಮ್ಮಗ ಸಿಂಗಳಿಕ. ತಾತನಿಗೆ ಮೊಮ್ಮಗನ ಚಿಂತೆ ಮೊಮ್ಮಗನಿಗೆ ಸಿನಿಮಾ ಚಿಂತೆ. ಆಕ್ಟರ್ ಆಗ್ತೀನಿ ಅಂತ ಒಬ್ಬ ಡೈರೆಕ್ಟರ್‌ನ ಮನೆಗೆ ಕರೆತಂದು ಇಟ್ಟುಕೊಳ್ಳುತ್ತಾನೆ. ಅವನೋ ದಂಡಪಿಂಡ.ಅವನಿಗೆ ಹೆಂಡತಿ ಎಂಬ ಇನ್ನೊಂದು ದಂಡಪಿಂಡ. ಮೊಮ್ಮಗನ ಅಟ್ಟಹಾಸ ತಾಳಲಾರದೇ ತಾತ ಪಾಕೆಟ್ ಮನಿ ಕಟ್ ಮಾಡುತ್ತಾನೆ. ಮನೆಯಿಂದ ಆಚೆ ಹೋಗು ಮುಠ್ಠಾಳ, ನಿನಗೆ ಬುದ್ಧಿ ಬರುತ್ತೆ... ಎಂದು ಫೋನ್ ಕಟ್ ಮಾಡುತ್ತಾನೆ. ಇವರು ಇನ್ನೇನು ಬೀದಿಗೆ ಬರಬೇಕುಎನ್ನುವಷ್ಟರಲ್ಲಿ ಮೂವರೂ ಐಡ್ಯಾ ಮಾಡ್ತಾರೆ. ಏನದು? ನೋಡ್ರೀ ಹೌಸ್ ಫುಲ್ಲು ...

ಇದೊಂಥರಾ ಕನ್‌ಫ್ಯೂಸ್ ಕತೆ. ದಿಗಂತ್ ಹಾಗೂ ಹೇಮಂತ್ ಹೆಗಡೆ ಪ್ರಮುಖ ಪಾತ್ರಧಾರಿಗಳು. ದಿಗಂತ್ ಮೊಮ್ಮಗ, ಹೆಗಡೆ ನಿರುದ್ಯೋಗಿ ನಿರ್ದೇಶಕ. ಇಬ್ಬರೂ ಸೇರಿ ಒಂದು ಸಣ್ಣ ಗೇಮ್ ಆಡುತ್ತಾರೆ. ತಾತನಿಗೆ ಚಳ್ಳೆ, ಸೀಬೆ, ಚೇಪೆ, ಅಂಜೂರ ಇತ್ಯಾದಿ ಹಣ್ಣು ತಿನ್ನಿಸಲು ಯತ್ನಿಸುತ್ತಾರೆ. ಕೆಲವು ಕಡೆ ಪೇಚಿಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಾರೆ. ಮೊದಲಾರ್ಧದಲ್ಲಿ ಹೇಳುವಂತ ನಗು ವಿಲ್ಲ. ಅಲ್ಲಲ್ಲಿ ಛಮ ಅಷ್ಟೇ. ಉಳಿದದ್ದು ಕಮಕ್, ಕಿಮಕ್, ತುಟಿಕ್, ಪಿಟಿಕ್ ಏನೂ ಇಲ್ಲ. ವಿರಾಮದ ನಂತರ ಶುರುವಾಗುತ್ತದೆ ನೋಡಿ, ಹೌಸ್‌ಫುಲ್ ಹಂಗಾಮ... ಇವರಿಬ್ಬರಿಗೆ ಸರಿಯಾಗಿ ಹೊಂದುಕೊಳ್ಳುವ ನಾಯಕಿಯರು ಗಿರಿಜಾ ಓಕ್ ಹಾಗೂ ವಿಶಾಖಾ ಸಿಂಗ್. ಇಬ್ಬರಲ್ಲಿ ಯಾರು ಯಾರನ್ನು ಮದುವೆಯಾಗುತ್ತಾರೆ.

ತಾತನಿಗೆ ಯಾಮಾರಿಸಲು ಯಾರು ಯಾರ್‍ಯಾರಾಗಿ ಬದಲಾಗುತ್ತಾರೆ ಎನ್ನುವ ದೃಶ್ಯಗಳಲ್ಲಿ ಲವಲವಿಕೆಯಿದೆ. ಹೆಗಡೆ ನಿರ್ದೇಶನದ ಜತೆ ನಟನೆಯನ್ನೂ ಮಾಡಿಕೊಂಡು, ಅಲ್ಲಲ್ಲಿ ಪಂಚ್ ಕೊಡುತ್ತಾ, ನಗಿಸುತ್ತಾ, ಕೆಲವು ಕಡೆ ಕುತೂಹಲ ಕೆರಳಿಸುತ್ತಾ, ನಲಿಸುತ್ತಾ ಸಾಗುವ ಪರಿಯನ್ನು ಮೆಚ್ಚಲೇಬೇಕು. ಹಾಗಂತ ಹೋ ಹೋ ಎನ್ನುವಂಥ ಚಿತ್ರಕತೆ ಇದೆ ಎಂದಲ್ಲ. ಬದಲಾಗಿ ಅದರ ನಿರೂಪಣೆಗೆ ಹೆಗಡೆ ಖಂಡಿತ ಮೋಸ ಮಾಡಿಲ್ಲ. ಎರಡು ಹಾಡುಗಳು ಮುದ್ದಾಗಿವೆ. ದಿಗಂತ್ ಮತ್ತಷ್ಟು ಚಲುವ ಚೆನ್ನಿಗರಾಯನಂತೆ ಕಾಣುತ್ತಾನೆ, ಆದರೆ ನಟನೆಯಲ್ಲಿ ಮಾತ್ರ ಅದೇ ವರಸೆ ಮುಂದುವರಿಯುತ್ತದೆ.

ಆ ಮಟ್ಟಿಗೆ ಹೆಗಡೆಯೇ ಒಂದು ಕೈ ಮೇಲು. ಗಿರಿಜಾ ಓಕ್ ಎಲ್ಲಾ ಹಂತದಲ್ಲೂ ಓಕೆ. ಸೀರೆ ಉಟ್ಟಾಗಲಂತೂ ಇನ್ನೂ ಓಕೆ. ಸ್ಮೈಲ್ ಕೊಟ್ಟಾಗ ಡಬಲ್ ಓಕೆ. ನ್ನೊಬ್ಬಾಕೆ ವಿಶಾಖಾ ಸಿಂಗ್ ಸ್ವಲ್ಪ ವೀಕೇ. ಒಟ್ಟಾರೆ ಸಿನಿಮಾದಲ್ಲಿ ಒಂದಷ್ಟು ಅಂಶ, ದೃಶ್ಯ, ಸನ್ನಿವೇಶ, ಮಾತು, ಪಾತ್ರಗಳು ಇಷ್ಟವಾಗುತ್ತವೆ. ನಗು ತನ್ನಿಂತಾನೇ ಮೂಡುತ್ತದೆ. ಲೋಕನಾಥ್ ಅಂಕಲ್ ಅಭಿನಯವನ್ನು ಮತ್ತೊಮ್ಮೆ ನೋಡಬೇಕೆನಿಸುತ್ತದೆ. ಛಾಯಾಗ್ರಹಣದಲ್ಲಿ ಹೊಸತನ ಎಂದರೆ ಹೆಚ್ಚಿನ ದೃಶ್ಯಗಳು ಕ್ಲೋಸ್‌ಅಪ್‌ನಲ್ಲೇ ಇವೆ. ಅದೊಂಥರಾ ಕನ್ನಡದ ಹೊಸ ಪ್ರಯೋಗ ಎನ್ನಬಹುದೇನೊ. ಅದನ್ನು ಹೆಗಡೆ ಮಾಡಿದ್ದಾರೆ. ಉಳಿದಂತೆ ಹಾಡುಗಳಿಗೆ ಬಳಸಿಕೊಳ್ಳಲಾದ ಹಿನ್ನೆಲೆ ದೃಶ್ಯಗಳು ಇಷ್ಟವಾಗುತ್ತವೆ. ಹೌಸ್‌ಫುಲ್ ಆಗಲು ಬೇಕಿದ್ದ ಕೆಲವು ಅಂಶಗಳ ಕೊರತೆ ಎದ್ದುಕಾಣುತ್ತವೆ. ಅವು ಯಾವುದು? ಉತ್ತರಿಸಲು ಚಿತ್ರಮಂದಿರ ತೆರೆದಿದೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada