»   »  ವಿಮರ್ಶೆ: ಮುನಿಯಾ ಮಯೂರ್ ಮಜಾಕಾ !

ವಿಮರ್ಶೆ: ಮುನಿಯಾ ಮಯೂರ್ ಮಜಾಕಾ !

By: *ಮಹೇಶ್ ದೇವಶೆಟ್ಟಿ
Subscribe to Filmibeat Kannada

ಹೌದು ಇದೊಂಥರಾ ಹಾಗೇ. ಇಲ್ಲಿ ಒಂದು ಹುಡುಗಿಗಾಗಿ ಹುಡುಗ ಹೊಡೆದಾಡುತ್ತಾನೆ. ಅವಳ ಇರುವಿಗಾಗಿ ಹಗಲಿರುಳು ದುಡಿಯುತ್ತಾನೆ. ಕಷ್ಟ ತಿನ್ನುತ್ತಾನೆ. ನಷ್ಟ ಉಣ್ಣುತ್ತಾನೆ... ಅವನೇ ಮುನಿಯಾ, ಹಳ್ಳಿಯಿಂದ ಪಟ್ಟಣಕ್ಕೆ ಬಂದ ಪುಟ್ಟ... ಇಲ್ಲಿ ಮಯೂರ್ ಪಟೇಲ್ ಪಕ್ಕಾ ಆಕ್ಷನ್ ಕಮ್ ಸೆಂಟಿಮೆಂಟ್ ಹೀರೊ. ಈ ಹಿಂದಿನ ಎಷ್ಟೋ ಚಿತ್ರಗಳನ್ನು ಮೀರಿ ಮಯೂರ್ ನಿಂತಿದ್ದಾರೆ. ಮರದಿಂದ ಮರಕ್ಕೆ ಜಿಗಿಜಿಗಿದು ಹಾರುವಾಗ ಇನ್ನೂ ಮಸ್ತ್ ರೇ.

ಮಯೂರ್ ಮೈ ಚಳಿ ಬಿಟ್ಟು ಅಭಿನಯಿಸಿದ್ದಾರೆ. ಹೊಡೆದಾಟಕ್ಕೆ ಸೈ, ತುಂಟಾಟಕ್ಕೆ ಜೈ. ಮಾತಿನ ಧಾಟಿ ಕೂಡ ಬದಲಾಗಿದೆ. ಅದಕ್ಕೆ ಕಾರಣ ಚಿತ್ರಕತೆ ಇದ್ದರೂ ಇರಬಹುದು. ಇಡೀ ಕತೆ ಒಂದು ಫ್ಲೋನಲ್ಲಿ ಸಾಗುತ್ತದೆ. ಇನ್ನೇನು ಮುಗಿಯಿತು ಎನ್ನುವ ಹೊತ್ತಿಗೆ ಹಾಡು ಗಬಕ್ ಅಂತಹಾಜರಾಗುತ್ತೆ. ಹಾಗಂತ ಅತಿಯಾದ ಹೊಡೆದಾಟ ಇಲ್ಲಿಲ್ಲ. ಅತಿರೇಕದ ರಕ್ತಪಾತವೂಇಲ್ಲ. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಮುನಿಯಾ ಹೊಸ ದುನಿಯಾವನ್ನು ಹೇಗೆಎದುರಿಸುತ್ತಾನೆ ಎಂಬುದನ್ನು ನಿರ್ದೇಶಕ ನಾಗಚಂದ್ರ ಕಟ್ಟುಮಸ್ತಾಗಿ ಕಟ್ಟಿಕೊಟ್ಟಿದ್ದಾರೆ.

ನಾಗಚಂದ್ರ ಕೂಡ ಹಿಂದೆ ವಿದ್ಯಾರ್ಥಿ' ಚಿತ್ರದಲ್ಲಿ ಮಾಡಿದ ಹಲವಾರು ತಪ್ಪುಗಳನ್ನು ಇಲ್ಲಿ ತಿದ್ದಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರದಿಂದ ಕೆಲಸ ತೆಗೆಸಿರುವುದು ಗೊತ್ತಾಗುತ್ತದೆ. ನಾಯಕಿ ಸಾಹಿತ್ಯ ಹಳ್ಳಿ ರಂಭೆ , ಬೆಳ್ಳಿ ಬೊಂಬೆ. ನೋಡಲು ಮುದ್ದಾಗಿದ್ದಾರೆ. ನಟನೆಯಲ್ಲಿ ನಾಜೂಕಿದೆ. ಮಾತಿನ ಧಾಟಿಯಲ್ಲಿ ಧಾವಂತ ಎದ್ದುಕಾಣುತ್ತದೆ. ಹಲವು ಹೊತ್ತು ಪ್ರೇಕ್ಷಕರನ್ನು ಕಾಡುತ್ತದೆ. ಹಳ್ಳಿ ಸೊಗಡಿನ ಭಾಷೆ ಆಡುವಾಗ ಚಂದವೋ ಚಂದ. ಇನ್ನೊಬ್ಬ ನಾಯಕಿ ಶೀತಲ್ ಅಭಿನಯ=ಒಂದಷ್ಟು ಹೊತ್ತು ನಾನ್‌ಸ್ಟಾಪ್ ನಗು, ಮೈ'ಸೂರೇ ಬರೆದುಬಿಡುವೆ ಎಂಬಂತೆ ಕುಣಿಯುವುದು' ಎಂದುಕೊಂಡಿದ್ದರೆ ಅದು ತಪ್ಪು ತಪ್ಪು... ಗ್ಲ್ಯಾಮರ್‌ಗೂ ಗ್ರಾಮರ್ ಗೂ ಬೋ ಯತ್ವಾಸ ಐತೆ ಕಣಕ್ಕೋ...

ಛಾಯಾಗ್ರಹಣದಲ್ಲಿ ಸಾಹಸ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ. ರವಿವರ್ಮ ಸಾಹಸ ಮೆಚ್ಚಲೇಬೇಕು. ಇಲ್ಲಿಯವರೆಗೆ ಮಚ್ಚಿನಿಂದ, ಕೈಯಿಂದ, ಬಾಯಿಂದ,
ದೊಣ್ಣೆಯಿಂದ ಹೊಡೆದಾಡಿದ್ದನ್ನು ನೋಡಿ ನೋಡಿ ಸುಸ್ತಾದವರಿಗೆ ಮರದ ಮೇಲೆ ಹೊಡೆದಾಡುವ ದೃಶ್ಯ ತೋರಿಸುವ ಮೂಲಕ ಹೊಸತನ ತೋರಿದ್ದಾರೆ ರವಿವರ್ಮ. ಅಭಿಮನ್ ರಾಯ್ ಸಂಗೀತದಲ್ಲಿ ಹೇಳುವಂಥ ಸುಗಂಧವೇನಿಲ್ಲ. ಎರಡು ಹಳೇ ಹಾಡುಗಳನ್ನು ರಿಮಿಕ್ಸ್ ಮಾಡಿ, ತಮ್ಮ ಟ್ಯಾಲೆಂಟ್' ಮೆರೆದಿದ್ದಾರೆ.

ನೃತ್ಯ ಸಂಯೋಜನೆಯಲ್ಲಿ ನವೋಲ್ಲಾಸವಿದೆ. ಕೋಮಲ್ ಆಗಾಗ ಬಂದು ಕೆಲವೊಮ್ಮೆ ನಗು ಮೂಡಿಸುತ್ತಾರೆ. ಆದರೆ ಅವರಿಗೆ ಹೆಚ್ಚು ಅವಕಾಶ ಇಲ್ಲ. ಪೋಷಕ ಪಾತ್ರಗಳಲ್ಲಿ ಜೀವವಿದೆ. ರಂಗಾಯಣ ರಘು ಮತ್ತೊಮ್ಮೆ ಇಷ್ಟವಾಗುತ್ತಾರೆ. ಹಳ್ಳಿ ಗೌಡ್ರ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಪುಂಗಾ ಹಾಗೂ ಸ್ನೇಹಿತರು ಕತೆಗೆ ಹೊಂದಿಕೊಳ್ಳುತ್ತಾರೆ. ಕೆಲ ದೃಶ್ಯಗಳಲ್ಲಂತೂ ನಿಜವಾದ ರೌಡಿಗಳನ್ನೇ ಕರೆಸಲಾಗಿದೆ ಎಂಬ ಅನುಮಾನ ಕಾಡುತ್ತದೆ. ಅದು ಸುಳ್ಳಾದರೂ ಸತ್ಯ ಎನಿಸಿದರೆ ಅದು ನಿರ್ದೇಶಕರಿಗೆ ಸಲ್ಲಬೇಕಾದ ಗೌರವ. ಮೊದಲಾರ್ಧದಲ್ಲಿ ಮಜಾ ಇಲ್ಲ, ಸಂಭಾಷಣೆಯಲ್ಲಿ ಸತ್ವವಿಲ್ಲ, ಕೆಲವು ದೃಶ್ಯಗಳಲ್ಲಿ ನೈಜತೆಯಿಲ್ಲ... ಇಂಥ ಕೆಲ ಕಾಮೆಂಟ್‌ಗಳ ನಡುವೆಯೂ ಮುನಿಯಾ ಇಷ್ಟವಾಗುತ್ತಾನೆ. ಏಕೆಂದರೆ ಇದು ಪಕ್ಕಾ ಮಾಸ್ ಮುನಿಯಾ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada