For Quick Alerts
  ALLOW NOTIFICATIONS  
  For Daily Alerts

  ಬುದ್ಧಿವಂತ 'ಉಪ್ಪಿ'ಗಿಂತ ರುಚಿ ಬೇರೆ ಇಲ್ಲ...

  By Super
  |

  ನೋಡಿ ಜಡ್ಜಮ್ಮ, ಸತ್ಯಮಾಡಿ ಹೇಳುತ್ತೇನೆ. ನಾನವಲ್ಲ, ನಾನವನಲ್ಲ, ನಾನವನಲ್ಲ... !
  ಜಡ್ಜಮ್ಮ ಒಮ್ಮೆ ಮುಸಿಮುಸಿ ನಕ್ಕು, ತೀರ್ಪಿನ ಲೆಕ್ಕಾಚಾರ ಹಾಕಲು ಶುರುಮಾಡುತ್ತಾರೆ. ಆತ ಪಂಚಾಮೃತ. ಬಿಳಿ ಪಂಚೆ, ಅದೇ ಬಣ್ಣದ ಶರ್ಟು. ಲಕಲಕ ಮೈ ಮಾಟ. ಪಟಪಟ ಮಾತುಗಾರಿಕೆ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದು ಕೇಳಿದರೆ ನಿಮಗೆಂತಾ ಮಳ್ಳು ಮಾರಾಯ್ರೆ' ಎಂದು ಮಾತು ಮರೆಸುತ್ತಾನೆ. ಕಾರಣ ಈತ ನಾಲ್ಕು ಮಳ್ಳಿಯಂಥ ಮಳ್ಳಿಯರಿಗೆ ಚಳ್ಳೆಹಣ್ಣು ತಿನ್ನಿಸಿರುತ್ತಾನೆ! ಆ ಗುಟ್ಟು ಎಲ್ಲಿ ರಟ್ಟಾಗುತ್ತೊ ಎಂದು ಹೀಗೆಲ್ಲಾ ಹರುಕುಮುರುಕಾಗಿ ಮಾತನಾಡಿ, ತನ್ನ ಅತಿಬುದ್ಧಿವಂತಿಕೆ ತೋರಿಸುತ್ತಾನೆ.

  *ವಿನಾಯಕ ರಾಮ್ ಕಲಗಾರು

  1-ರೇಖಾ: ಮಾಡೆಲ್ ಆದ ಈಕೆಗೆ ವಿಜಯ್ ಮಿತ್ತಲ್ ಎಂಬಾತ ಚೀಟ್ ಮಾಡಿ, ಕೈಗೆ ಸೋಡಾಚೀಟಿ ಕೊಟ್ಟಿರುತ್ತಾನೆ. ಅವಳ ಅಣ್ಣನಿಗೆ ಯಾಮಾರಿಸಿ, 25 ಲಕ್ಷ ನುಂಗಿರುತ್ತಾನೆ. ಆಕೆ ಕೋರ್ಟ್‌ನಲ್ಲಿ ನಿಂತು ಕೂಗುತ್ತಿರುತ್ತಾಳೆ: ಇವನೇ ಅವನೂ... ಆದರೆ ಪಾಪ ಪಂಚಾಮೃತಂದು ಒಂದೇ ಮಾತು: ನಾನವನಲ್ಲ....'

  2-ಶಾಂತಿ: ಈಕೆಗೆ ಸಿನಿಮಾ ಹುಚ್ಚು. ಗಂಡ ಧೂಮ್ ಪಿಕ್ಚರ್‌ನ ಜಾನ್ ಅಬ್ರಹಾಮ್ ಥರ ಇರಬೇಕು. ಕ್ರಿಶ್ ಥರದ ಮುಖವಾಡ ಧರಿಸಿ, ಹೃತಿಕ್ ರೋಷನ್ ಥರ ಓಡಿ ಬರಬೇಕು ಎಂಬ ಹಂಬಲ. ಅವಳ ಆ ವೀಕ್‌ನೆಸ್ ತಿಳಿದ ಒಬ್ಬಾತ, ಅದೇ ಥರದ ಗೆಟಪ್‌ನಲ್ಲಿ ಬಂದು, ತಾನು ಸಮರಸಿಂಹರೆಡ್ಡಿ ಎಂದು ತಲೆಗೆ ಸಮೋಸಾ ಹಚ್ಚಿ, ಚಿನ್ನಾಭರಣ ದೋಚಿ, ಮೋಸ ಮಾಡುತ್ತಾನೆ. ಆಕೆಯದ್ದೂ ಅದೇ ಕಂಪ್ಲೇಂಟ್... ಅದಕ್ಕೆ ಇವನ ಏಕೈಕ ಉತ್ತರ: ನಾನವನಲ್ಲ ಒಂದು ಸಾರಿ, ನಾನವನಲ್ಲ ಎರಡು ಸಾರಿ, ನಾನವನಲ್ಲ ಮೂರು ಸಾರಿ!

  ಹೀಗೆ 3-ರಾಣಿ, 4-ಮೋನಿಕಾ ಎಂಬ ಹುಡುಗಿಯರಿಗೂ ರಂಜನೀಶ ಸ್ವಾಮೀಜಿ, ಸೆಕ್ರೆಟರಿ ಶ್ಯಾಂ ಪ್ರಸಾದ್ ಹೆಸರಲ್ಲಿ ಹಳಸಲು ಚಿತ್ರಾನ್ನ'ವನ್ನು ಮೃಷ್ಟಾನ್ನ ಎಂದು ತಿನ್ನಿಸುತ್ತಾನೆ. ಕೊನೆಗೆ ಜಡ್ಜಮ್ಮನ ಮಗಳಿಗೂ ಮಕ್ಮಲ್‌ಟೋಪಿ ಹಾಕಿರುತ್ತಾನೆ ಆ ಬುದ್ಧಿವಂತ. ಆದರೆ ಅವನೇ ಬೇರೆ ನಾನೇ ಬೇರೆ ಎಂದು ಎಲ್ಲರ ಹಾದಿ ತಪ್ಪಿಸುತ್ತಾನೆ ಈ ಪಂಚಾಮೃತ..

  ಇದು ಉಪೇಂದ್ರನ ಬುದ್ಧಿವಂತಾವತಾರ. ಅಥವಾ ತಮಿಳಿನ ನಾನವನಲ್ಲೈ ಚಿತ್ರದ ಕನ್ನಡಾವತಾರ ಎನ್ನಿ. ಆದರೆ ಇಲ್ಲಿ ಕೆಲವು, ಅಲ್ಲಲ್ಲ ಹಲವು ಬದಲಾವಣೆಗಳಿವೆ. ಅದು ಕತೆ ಆಧಾರಿತ ಸಿನಿಮಾ. ಇದು ನಾಯಕ ಆಧಾರಿತ ಚಿತ್ರ. ಎಲ್ಲೆಲ್ಲೂ ಉಪೇಂದ್ರ ಉಮೇದುವಾರಿಕೆಯೇ ಎದ್ದುಕಾಣುತ್ತದೆ. ಶರವೇಗದಲ್ಲಿ ಸಾಗುವ ಚಿತ್ರಕತೆ, ಉಪೇಂದ್ರ ಹಾಗೂ ಕೋರ್ಟ್ ಸುತ್ತಲೇ ಸುತ್ತುವ ಸುರುಸುರು ಸಂಭಾಷಣೆ. ಅಲ್ಲಲ್ಲಿ ಎದೆಯಲ್ಲಿ ಐಸ್ ಇಟ್ಟ ಅನುಭವ ನೀಡುವಂತೆ ಕುಣಿಯುವ ಪಂಚತಾರೆಯರು. ಮತ್ತೆ ಪಂಚೆಯಲ್ಲಿ ನಿಂತು ಪಂಚ್ ಮಾಡುವ ಪಂಚಾಮೃತ... ಹೀಗೆ ಇಡೀ ಸಿನಿಮಾ ಉಪೇಂದ್ರಮಯ. ನೀವೂ ಉಪ್ಪಿ ಅಭಿಮಾನಿ ಸಂಘದ ಸದಸ್ಯರಾಗಿದ್ದರೆ ಹೀಗೆನ್ನಬಹುದು: ಎಲ್ಲಾ ಓಕೆ, UB ಇದ್ದಮೇಲೆ ಉಳಿದಿದ್ದು ಯಾಕೆ?(Uಫಾರ್ ಉಪೇಂದ್ರ, B ಫಾರ್ ಬುದ್ಧಿವಂತ)

  ಉಪೇಂದ್ರ ಬಹಳ ವರ್ಷಗಳ ನಂತರ ಮತ್ತೆ ಹಳೇ ಮುಖವಾಡ' ತೊಟ್ಟಿದ್ದಾರೆ. ಒಂದೇ ಉಸಿರಿನಲ್ಲಿ ಮಾರುದ್ದದ ಡೈಲಾಗ್ ವಗಾಯಿಸುವ ಪ್ರತೀ ದೃಶ್ಯದಲ್ಲೂ ಗಮನ ಸೆಳೆಯುತ್ತಾರೆ. ಒಂಬತ್ತು ನಾನಾ ಗೆಟಪ್‌ನಲ್ಲಿ ಪ್ರೇಕ್ಷಕರನ್ನೇ ಕನ್‌ಫ್ಯೂಸ್ ಮಾಡುತ್ತಾರೆ! ಉಪ್ಪಿಯ ಪಾತ್ರಪೋಷಣೆಯ ಜತೆ ಕಾಮಿಡಿ, ಹೊಡೆದಾಟ, ಅದ್ಧೂರಿತನ ಎಲ್ಲವನ್ನೂ ಎರಡೂವರೆ ತಾಸಿನಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಮನಾಥ್ ಋಗ್ವೇದಿ.

  ಸಂಗೀತ ಮತ್ತೊಂದು ಹೈಲೈಟ್. ಕವಿರಾಜ್ ಬರೆದ ಚಿತ್ರಾನ್ನ ಚಿತ್ರಾನಾ... ಹಾಡು ಕೇಳಲು, ನೋಡಲು ವಿಚಿತ್ರವಾಗಿದೆ. ಉಳಿದಂತೆ ಓಪನಿಂಗ್ ಸಾಂಗ್‌ನ ನೃತ್ಯ ಸಂಯೋಜನೆ ಇಷ್ಟವಾಗುತ್ತದೆ. ಆದರೆ ಸೊಸೆ ತಂದ ಸೌಭಾಗ್ಯ ಚಿತ್ರದ ರವಿ ವರ್ಮನಾ ಕುಂಚದಾ... ಹಾಡನ್ನು ಇಷ್ಟೆಲ್ಲಾ ಕುಲಗೆಡಿಸಿ, ಬಳಸಿಕೊಳ್ಳಬಹುದು ಎನ್ನುವುದಕ್ಕೆ ಸಂಗೀತ ನಿರ್ದೇಶಕ ವಿಜಯ್ ಆಂಟನಿಯೇ ಸಾಕ್ಷಿ! ಅಲ್ಲಿ ಬರುವ ವೋವ್, ವೋವ್ ಆಲಾಪನೆ ವಾಕರಿಕೆ ಬರಿಸುತ್ತದೆ. ನಾಯಕಿಯರಲ್ಲಿ ಒಬ್ಬರಿಗಿಂತಾ ಒಬ್ಬರು ತಾಮುಂದು ನಾಮುಂದು. ಎಲ್ಲರಿಗಿಂತ ಸುಮನ್ ರಂಗನಾಥ್ ವಯಸ್ಸಿನಲ್ಲಿ, ಅಭಿನಯದಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ.

  ಉಳಿದಂತೆ ತೆಲುಗು ಹುಡುಗಿಯಾಗಿ ಸಲೋನಿ ಇಷ್ಟವಾಗುತ್ತಾರೆ. ನತನ್ಯಾ, ಪೂಜಾಗಾಂಧಿ ಎಲ್ಲರೂ ಅಚ್ಚು ಕಟ್ಟಾಗಿ ಅಭಿನಯಿಸಿದ್ದಾರೆ. ಛಾಯಾಗ್ರಹಣ ಹೆಚ್ಚಾಗಿ ನೃತ್ಯಸಂಯೋಜನೆಯಲ್ಲಿ ಫಳಫಳಿಸುತ್ತದೆ.

  ಆದರೆ ಹುಡುಗಿಯರನ್ನು ಯಾಮಾರಿಸುವ ಬುದ್ಧಿವಂತಿಕೆ, ಅವರು ಮೋಸ ಮೋಸ ಎನ್ನುತ್ತಿರುವಾಗ ಈತ ಎಂಥ ತಂಗಿ, ನಿನ್ನ ಪಿರಿಪಿರಿ, ನಿನಗೆ ತಲೆ ಸರಿ ಇಲ್ಲವೋ ಎಂದು ಕಣ್ಣಾಡಿಸುವ ಬೂಟಾಟಿಕೆ ಎಲ್ಲ ವರ್ಗದ ಜನರನ್ನೂ ತಲುಪುತ್ತಾ ಅಂತ ಮಾತ್ರ ಕೇಳಬೇಡಿ! ಬದಲಾಗಿ ಅದನ್ನು ಉಪೇಂದ್ರ ಅಭಿಮಾನಿ ಬಳಗದವರಲ್ಲಿ ಕೇಳಿ ಮಾರಾಯ್ರೆ...
  ದುಬೈ ಬಾಬು ಉಪ್ಪಿಗೆ ಜೋಡಿಯಾದ ನಿಕಿತಾ
  ಬುದ್ಧಿವಂತ'ನ 80 ಅಡಿ ಕಟೌಟ್
  ಅಡಕತ್ತರಿಯಲ್ಲಿ ಬುದ್ಧಿವಂತ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X