twitter
    For Quick Alerts
    ALLOW NOTIFICATIONS  
    For Daily Alerts

    ಕಾದಂಬರಿ ಆಧಾರಿತ ಕನ್ನಡದ 'ಪರಿ' ಚಿತ್ರವಿಮರ್ಶೆ

    By * ಶ್ರೀರಾಮ್ ಭಟ್
    |

    Rakesh Nivedita
    ಕಾದಂಬರಿ ಆಧಾರಿತ 'ಪರಿ' ಹೆಸರಿನ ಕನ್ನಡ ಚಿತ್ರ ಕರ್ನಾಟಕ ಮಾತ್ರವಲ್ಲದೇ ಕ್ಯಾಲಿಪೋರ್ನಿಯಾ, ಚೆನ್ನೈ, ಮುಂಬೈ ಹಾಗೂ ದೆಹಲಿಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಪೂರ್ವದಲ್ಲಿ ಪರಿಪರಿಯಾಗಿ ಸುದ್ದಿಮಾಡಿದ್ದ ಈ ಚಿತ್ರವೀಗ ಯಾವ ಪರಿಯಲ್ಲೂ ಹೇಳಲು ಆಗದಂತೆ, ಜನರನ್ನು ತಲುಪುವಲ್ಲಿ ಅರ್ಧಂಬರ್ಧ ಯಶಸ್ವಿಯಾಗಿದೆ ಎನ್ನಬಹುದು. ಕಾದಂಬರಿ ಆಧಾರಿತ ಚಿತ್ರವೆಂಬ ಹಣೆಪಟ್ಟಿ ಹೊತ್ತು ಬಂದಿರುವ ಇದು ಕಾದಂಬರಿಯೊಂದು ಚಿತ್ರವಾಗಬೇಕೆ, ಬೇಡವೇ, ಚಿತ್ರವಾದರೆ ಹೇಗಿರಬೇಕು ಮುಂತಾದ ಪ್ರಶ್ನೆಗಳ ಸರಮಾಲೆಯನ್ನೇ ಹೊತ್ತು ತಂದಿದೆ ಎನ್ನಬಹುದು.

    ಅರುಣ್ ತಮಾಟಿ ನಿರ್ಮಾಣದ ಈ ಚಿತ್ರ ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಮೂಡಿಬಂದಿದೆ. ಸಂಪನ್ನ ಮುತಾಲಿಕ್ ಬರೆದಿರುವ ಕಥೆಯನ್ನು ಚಿತ್ರಕಥೆ ಬರೆದು ನಿರ್ದೇಶಿಸಿರುವ ಸುಧೀರ್ ಉದ್ದೇಶ ಹಾಗೂ ಕಾರ್ಯವೈಖರಿ ಶ್ಲಾಘನೀಯ. ಆದರೆ ಕಾದಂಬರಿಯೊಂದನ್ನು ಪರಿಣಾಮಕಾರಿಯಾಗಿ ತೆರೆಗೆ ತರುವಾಗ ತೆಗೆದುಕೊಳ್ಳಬೇಕಾದ ರಿಸ್ಕ್, ಪರಿಣಾಮಗಳು ಹಾಗೂ ಫಲಿತಾಂಶಗಳನ್ನು ಲೆಕ್ಕಾಚಾರ ಹಾಕುವಲ್ಲಿ ಸಾಕಷ್ಟು ವಿಫಲವಾಗಿದ್ದಾರೆ ಸುಧೀರ್.

    ಬ್ರಾಹ್ಮಣತ್ವ ಹಾಗೂ ಪ್ರೀತಿಯ ಮಧ್ಯೆ ನಡೆವ ಮಾನಸಿಕ ಸಂಘರ್ಷ ಹಾಗೂ ಸಂದಿಗ್ಧತೆ ಈ ಚಿತ್ರದ ಕಥೆಯ ಮೂಲ ತಿರುಳು. ಅದಕ್ಕೆ ಲಿಕ್ಕರ್ ಮತ್ತು ಕಳ್ಳಭಟ್ಟಿ ದಂಧೆ ಜೊತೆಯಾಗಿದೆ. ಬೇಕಾದಲ್ಲಿ ಹಾಗೂ ಬೇಡವಾದಲ್ಲೂ ಎಳೆದು, ತಿರುಚಿ ಮಾಡಲಾದ ಚಿತ್ರಕಥೆಗೆ ಇನ್ನೂ ವೇಗ ಬೇಕಿತ್ತು. ಜೊತೆಗೆ ಅಲ್ಲಲ್ಲಿ ಕತ್ತರಿ ಪ್ರಯೋಗ ಮಾಡಬೇಕು ಎನ್ನಿಸುವಂತೆ ದೃಶ್ಯಗಳು ಉದ್ದದ್ದ ಹೆಬ್ಬಾವಿನಂತೆ ಗೋಚರಿಸುತ್ತವೆ. ವಿಜಯ ಭರಮಸಾಗರ ಸಂಭಾಷಣೆ ಅಲ್ಲಲ್ಲಿ ಮಾತ್ರ ಚುರುಕಾಗಿದ್ದು ಮಿಕ್ಕ ಕಡೆ ಲೆಕ್ಕಕ್ಕೆ ಸಿಗುವುದಿಲ್ಲ. ಪ್ಲಾಷ್ ಬ್ಯಾಕ್ ಕೊಟ್ಟ ರೀತಿ ಕೆಲವೊಮ್ಮೆ ವರ್ಕೌಟ್ ಆಗಿದೆ.

    ಆದರೆ ಸಿನಿಮಾದ ಒಟ್ಟಾರೆ ಗುಣಮಟ್ಟಕ್ಕೆ, ಪ್ಯಾಕೇಜಿಗೆ ಪ್ಲಸ್ ಎನ್ನಬಹುದಾದದ್ದು ಕ್ಯಾಮರ್, ಕಲಾ ನಿರ್ದೇಶನ ಹಾಗೂ ಕೆಲವು ಇಂಪಾದ ಹಾಡುಗಳು. ವೀರ್ ಸಮರ್ಥ್ ಸಂಗೀತ ಹಾಗೂ ರೀರೆಕಾರ್ಡಿಂಗ್ ಕಿವಿ ಹಾಗೂ ಮನಸ್ಸಿಗೆ ಅಬ್ಬಾ!...ಅನ್ನುವಂತಿಲ್ಲದ ಹಬ್ಬ. ಲಂಬಾಣಿ ತಾಂಡಾಗಳು, ಬ್ರಾಹ್ಮಣರ ಮನೆಗಳು ನೋಡದವರಿಗೆ ನೋಡಲು ಅಚ್ಚುಮೆಚ್ಚು; ನೋಡಿದವರಿಗೆ ಹಳೆಯ ನೆನಪು ಮರುಕಳಿಸುವ ಸಾಧ್ಯತೆ ಹೆಚ್ಚು.

    ಇನ್ನು ಅಭಿನಯದ ವಿಷಯಕ್ಕೆ ಬಂದರೆ, ಮುದ್ದುಮುಖದ ನಟ ರಾಕೇಶ್, 'ಭಾರದ್ವಾಜ' ಪಾತ್ರದಲ್ಲಿ ಸಂಪೂರ್ಣ ತಲ್ಲೀನರಾಗಿ ಬಂದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಸಾಕಷ್ಟು ಯಶಸ್ವಿಯೂ ಆಗಿದ್ದಾರೆ. ಆದರೆ ಕೆಲವು ಕಡೆ ಇನ್ನೂ ಚೆನ್ನಾಗಿ ಅಭಿನಯಿಸಬಹುದಿತ್ತು. ನಿವೇದಿತಾ (ಸ್ಮಿತಾ) ಪಾತ್ರ ಅಷ್ಟಕಷ್ಟೇ ಆದರೂ ಅಭಿನಯ ಪರವಾಗಿಲ್ಲ. ನಾಗಕಿರಣ್ ಹಾಗೂ ಹರ್ಷಿಕಾ ಪೂಣಚ್ಚ ಅವರಿಗೆ ಸಿಕ್ಕ ಪಾತ್ರ ಮೌಲ್ಯಯುತವಾಗಿಲ್ಲ, ಹಾಗಾಗಿ ಅಭಿನಯದ ಬಗ್ಗೆ ಹೇಳುವುದು ಕಷ್ಟ. ಇಬ್ಬರೂ ತೆರೆಯ ಮೇಲೆ ಮುದ್ದಾಗಿ ಕಾಣುತ್ತಾರೆ ಎಂಬುದೊಂದೇ ಸಮಾಧಾನ.

    ಇನ್ನು ಪೋಷಕ ವರ್ಗದಲ್ಲಿ, ಹಿರಿಯ ನಟ ಶ್ರೀನಿವಾಸ ಪ್ರಭು ಮಿಂಚಿದ್ದಾರೆ. ಸರ್ದಾರ್ ಸತ್ಯರ ನೃತ್ಯ, ಫೈಟ್ ಎಲ್ಲವೂ ಅದ್ಭುತ. ಆದರೆ ಚಿತ್ರದ ಕಥೆ, ಚಿತ್ರಕಥೆ ಕಾದಂಬರಿ ಆಧಾರಿತವಾಗಿದ್ದರಿಂದ ಎಲ್ಲೋ ಒಂದು ಕಡೆ ಎಲ್ಲವೂ ಗೊಂದಲದ ಕಡೆ ದೂಡಿದಂತಾಗಿ ಪ್ರೇಕ್ಷಕರನ್ನು ತೆರೆಯ ಕಡೆ ಸಂಪೂರ್ಣವಾಗಿ ಸೆಳೆಯಲು ವಿಫಲವಾಗುವಂತೆ ಮೂಡಿಬಂದಿದೆ ಪರಿ ಎನ್ನಬಹುದು. ಒಟ್ಟಾರೆ, ಪರಿಪರಿಯಾಗಿ ತಮ್ಮ ಚಿತ್ರ ವಿಭಿನ್ನ, ತುಂಬಾ ಚೆನ್ನಾಗಿದೆ ಎಂದು ಹೇಳಿಕೊಂಡ ಚಿತ್ರತಂಡದ ಹೇಳಿಕೆಯನ್ನು ಅರ್ಧ ಸುಳ್ಳು ಎನ್ನಬಹುದು.

    English summary
    This is Kannada Movie Pari Review. Sudhir Attavar Directed this movie. Rakesh and Nivedita performed in lead role and Nagkiran, Harshika Poonachcha also acted in this. 
 
    Monday, April 30, 2012, 17:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X