For Quick Alerts
  ALLOW NOTIFICATIONS  
  For Daily Alerts

  ಚಿತ್ರವಿಮರ್ಶೆ: ತಾಜ್ ಮಹಲ್.ಎಂಥಾ ಸ್ವಾದ!

  By Super
  |

  ಆತ ಅಜಯ್, ಬಿಇ ವಿದ್ಯಾರ್ಥಿ; ಬಡತನ ಅವನ ಆಸ್ತಿ. ಅಪ್ಪ ಅಮ್ಮ- ಮಗ ಓದಿ ಉದ್ಧಾರ ಆಗಲಿ' ಎಂದು ಊರೆಲ್ಲ ಸಾಲ ಮಾಡಿ, ಪ್ಯಾಟೆಯ ಕಾಲೇಜಿಗೆ ಕಳುಹಿಸಿರುತ್ತಾರೆ. ಆದರೆ ಮಗ, ಶ್ರುತಿ ಎಂಬ ಹುಡುಗಿಯೊಬ್ಬಳ ಹಿಂದೆ ಬಿದ್ದಿರುತ್ತಾನೆ. ಅವಳ ಮಂದಸ್ಮಿತ, ಮುಗುಳ್ನಗೆಯ ಮುಖದರ್ಶನಕ್ಕಾಗಿ ತಾನೇ ಬೈಕ್ ಪಂಕ್ಚರ್ ಮಾಡಿಕೊಂಡು, ಬಸ್‌ಸ್ಟ್ಯಾಂಡ್ ಬಳಿ ಕಾದುಕುಳಿತಿರುತ್ತಾನೆ. ಶ್ರುತಿ, ಕುಮಾರ್' ಎಂಬ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ ಅವನ ಕುಲಗೋತ್ರ ಗೊತ್ತಿರುವುದಿಲ್ಲ. ಬರಿ ಫೋನಿನಲ್ಲೇ ಯಾರೋ ನೀನು ಚೆಲುವಾ' ಎನ್ನುತ್ತಿರುತ್ತಾಳೆ.

  *ವಿನಾಯಕರಾಮ್ ಕಲಗಾರು

  ಆ ನಂಬರ್(9845911415)ಅಚಾನಕ್ ಆಗಿ ಸಿಕ್ಕಿರುತ್ತೆ. ಆ ಹುಡುಗ ಇವಳಪ್ಪನಿಗೆ ಒಂದು ಸಹಾಯ ಮಾಡಿರುತ್ತಾನೆ. ಅವನ ನಿಷ್ಠೆ ಇವಳಿಗೆ ಇಷ್ಟವಾಗಿ, ಅದು ಪ್ರೀತಿಯಾಗಿ ಬದಲಾಗಿರುತ್ತೆ. ಆದರೂ ಅಜಯ್‌ನ ಜತೆ ಸುತ್ತಾಡುತ್ತಾಳೆ. ಹಾಗಂತ ಅದು ಅವಳ ವೀಕ್‌ನೆಸ್ಸಾ ಅಂತ ಕೇಳಬೇಡಿ. ತಾನು ಮಾತನಾಡಿಸದಿದ್ದರೆ ಆತ ತಲೆಕೆಡಿಸಿಕೊಂಡು, ಕಾಲೇಜಿನ ಕಡೆ ತಲೆಹಾಕದಿದ್ದರೆ ಕಷ್ಟ. ತನ್ನಿಂದ ಅವನ ಓದು ಹಾಳಾಗಬಾರದು' ಎಂಬ ಸದುದ್ದೇಶ ಅವಳದ್ದು. ಕೊನೆಗೆ ಅಜಯ್ ಪ್ರೀತಿಯ ಪರಾಕಾಷ್ಠೆ ತಲುಪುತ್ತಾನೆ. ಅದನ್ನು ಅವಳ ಮುಂದೆ ಅರುಹುತ್ತಾನೆ.

  ಅವಳು ಇವನ ಕಪಾಳಕ್ಕೆ ಬಿಗಿದು ಮನೆ ಸೇರುತ್ತಾಳೆ. ಅಜಯ್ ಕಾಲೇಜು ಬಿಟ್ಟು ಹಳ್ಳಿ ಸೇರುತ್ತಾನೆ.... ಆದರೆ ಆ ಫೋನ್ ನಂಬರಿಗೂ ಅಜಯ್‌ಗೂ ಲಿಂಕ್ ಇರುತ್ತೆ. ಏನದು ? ಸಿನಿಮಾ ನೋಡಿ ಅಥವಾ ಆ ನಂಬರಿಗೆ ಕಾಂಟ್ಯಾಕ್ಟ್ ಮಾಡಿ!ಇದು ತಾಜ್ ಮಹಲ್' ಸಿನಿಮಾದ ಕತೆಯ ಎಳೆ. ನಿರ್ದೇಶಕ ಚಂದ್ರು ಈ ಸಿಂಪಲ್ ಎಳೆ ಇಟ್ಟುಕೊಂಡು ಮನಸ್ಸಿಗೆ ತಟ್ಟುವ/ ಹೃದಯಕ್ಕೆ ಮುಟ್ಟುವ ದೃಶ್ಯಗಳನ್ನುಅಚ್ಚುಕಟ್ಟಾಗಿ ಹೆಣೆದಿದ್ದಾರೆ. ಒಂದು ಚಿತ್ರದಲ್ಲಿ ನಿರೂಪಣೆ ಹಾಗೂ ಸಂಕಲನ ಎಲ್ಲಕ್ಕಿಂತ ಮುಖ್ಯ' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪ್ರತೀ ಶಾಟ್ ಕೂಡ ತಾಜಾತನದಿಂದ ತುಳುಕುವಂತೆ ಚಿತ್ರಿಸಿದ್ದಾರೆ. ಸಿನಿಮಾ ಶುರುವಾದ ಹತ್ತು ನಿಮಿಷ ಒಂದು ಕತೆ ಬರುತ್ತದೆ. ಅದಕ್ಕೆ ಅಲ್ಲೇ ಕ್ಲೈಮ್ಯಾಕ್ಸ್ ಕೊಟ್ಟು, ಮತ್ತೊಂದು ಕತೆಬಿಚ್ಚಿಕೊಳ್ಳು ತ್ತದೆ.

  ಮೊದಲಾರ್ಧ ಅಜಯ್ ಹಾಗೂ ಪೂಜಾ ಗಾಂ ನಡುವೆ ನಡೆಯುವ ಚೆಲ್ಲಾಟಗಳು, ಅದು ಕೆಲವೆಡೆ ಅತಿರೇಕ ಎನಿಸಿದರೂ ಹುಡುಗ/ಹುಡುಗರಿಗೆ ಎಂಜಾಯಬಲ್. ದ್ವಿತೀಯಾರ್ಧ ತೆರೆದುಕೊಳ್ಳುವುದೇ ತಡ. ಕತೆ ಕುಳಿತವರನ್ನು ಮತ್ತೊಂದು ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಹೆತ್ತವರ ಸೆಂಟಿಮೆಂಟ್ ಕಣ್ಣಂಚಿನಲ್ಲಿ ಸೋನೆ ಮಳೆ'ತರಿಸುತ್ತೆ. ಎರಡನೇ ಕ್ಲೈಮ್ಯಾಕ್ಸ್ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಅದನ್ನು ಕನ್ನಡ ಚಿತ್ರರಂಗದ ಅದ್ಭುತಗಳಲ್ಲಿ ಒಂದು ಎನ್ನಬಹುದೇನೊ!

  ಅಡುಗೆ ಭಟ್ಟ ಶಂಕರಣ್ಣನ ಪಾತ್ರಕ್ಕೆ ಜೀವತುಂಬಲು ರಂಗಾಯಣ ರಘುಗೆ ಮಾತ್ರ ಸಾಧ್ಯ. ಅವರ ಅಳುಮಿಶ್ರಿತ ನಗು, ನೋವಿನ ನಡುವೆ ನಗುವಿನ ಲಹರಿ ಸೂಸುವ ಪಾತ್ರಕ್ಕೆ ಲಕ್ಷ ರೂ. ಸಂಭಾವನೆ ಕೊಟ್ಟರೂ ನೋ ಲಾಸ್. ನಟ ಅಜಯ್ ಮೊದಮೊದಲು ಹದಿನಾರರ ಪೋರನಂತೆ ಕಾಣುತ್ತಾನೆ.

  ಕೊನೆಕೊನೆಗೆ ಅವನ ಹಾವಭಾವದಲ್ಲಿ ಉಂಟಾಗುವ ದಿಢೀರ್ ಬದಲಾವಣೆಗಳು ಅಚ್ಚರಿಮೂಡಿಸುತ್ತವೆ. ಮುದಿ ಅಜ್ಜಿಯ ಎದೆಯ ಮೇಲೆ ತಲೆ ಇಟ್ಟು , ಕಣ್ಣೀರು ಸುರಿಸುವ ದೃಶ್ಯದ ಹಿಂದೆ ಚಂದ್ರು ಬಂದು ನಿಂತಿರುವ ಅನುಭವ ಆಗುತ್ತದೆ. ಇದೇ ಅಜಯ್ ಕಳೆದ ತಿಂಗಳು ಬಿಡುಗಡೆಯಾದ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಚಿತ್ರದಲ್ಲೂ ಚೆಲ್ಲು, ಚೆಲ್ಲಾಗಿ ಅಭಿನಯಿಸಿದ್ದರು. ಆ ಪಾತ್ರ ನೋಡಲೊಂಥರಾಥರಾ ಎನ್ನುವಂತಿತ್ತು. ಅದೇ ಮ್ಯಾನರಿಸಂ ಹೋಲುವ ಪಾತ್ರವನ್ನೇ ತಾಜ್'ನ ಮೊದಲಾರ್ಧದಲ್ಲಿ ಮಾಡಿದ್ದಾರೆ. ಆದರೆ ಅದು ಎಲ್ಲಿಯೂ ಅಭಾಸವೆನಿಸಿಲ್ಲ. ಕಾರಣ ನಿರ್ದೇಶಕರ ಕೈಚಳಕ. ನೀವು ಇಷ್ಟು ಮಾತ್ರ ಮಾಡಿ' ಎಂದು ಕಂಡೀಷನ್ ಹಾಕಿ, ಅವರಿಂದ ಕೆಲಸ ತೆಗೆಸಿದ್ದಾರೆ ಚಂದ್ರು. ಮಾತುಮಾತಿಗೆ ಉದ್ಧಾರ...' ಎಂದು ರಾಗ ಎಳೆಯುವ ಅಜಯ್ ಸ್ನೇಹಿತನ ಪಾತ್ರಧಾರಿಗೆ ಉತ್ತಮ ಭವಿಷ್ಯವಿದೆ.

  ಅಶೋಕ್ ಕುಮಾರ್ ನೈಜ ಅಭಿನಯ ಇಷ್ಟವಾಗುತ್ತೆ. ಪೂಜಾ ಗಾಂ ಸದ್ಯದ ಮಟ್ಟಿಗೆ ಕನ್ನಡದಲ್ಲಿ ನಾನೇ ನಂಬರ್ ಒನ್ ನಟಿ' ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣದ ಬಗ್ಗೆ ವಿಮರ್ಶೆ ಅನಗತ್ಯ. ಆತನ ಬಗ್ಗೆ ಒಟ್ಟಾರೆ ಹೇಳುವುದಾದರೆ: ಚಂದ್ರು + ಚಂದ್ರ = ತಾಜ್ ಮಹಲ್ !

  ಇನ್ನು ಸಂಗೀತ: ಖುಷಿಯಾಗಿದೆ ಏಕೋ...' ಹಾಡು ಮುದ್ದಾಗಿದೆ. ಕೊಲ್ಲುವುದಾದರೆ ಕೊಂದುಬಿಡು...'ಹಾಡು ಬಿ.ಆರ್.ಲಕ್ಷ್ಮಣ್‌ರಾವ್ ಅವರ ಭಾವಗೀತೆಯೊಂದರ ರೀಮಿಕ್ಸ್ ಥರ ಇದೆ ಎಂದರೆ ಮಂಜು ಹೊನ್ನಾವರ್ ಬೇಸರಮಾಡಿಕೊಳ್ಳಬಾರದು! ಅಭಿಮನ್ ಸಂಗೀತದಲ್ಲಿ ಇನ್ನಷ್ಟು ಸ್ವಾದ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಒಟ್ಟಾರೆ ತಾಜ್ ಮಹಲ್ ಚಿತ್ರದಿಂದ ಕನ್ನಡಕ್ಕೆ ಮತ್ತೊಬ್ಬ ಸಮರ್ಥ ನಿರ್ದೇಶಕ ಸಿಕ್ಕಂತಾಗಿದೆ. ಇದನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲದವರು ಇನ್ನೂ ನಾಲ್ಕು ಬಾರಿ ಸಿನಿಮಾ ನೋಡಬೇಕು. ಆಗ ತಪ್ಪು -ಒಪ್ಪು'ಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

  ಇನ್ನೊಂದು ಮಾತು: ತಾಜ್ ಮಹಲ್'ನ ಮೊದಲಾರ್ಧ ನೋಡಿದ ಹುಡುಗರಿಗೆ, ದ್ವಿತೀಯಾರ್ಧ ನೋಡಿದ ಹುಡುಗಿಯರಿಗೆ ಹೃದಯಾಘಾತವಾಗುವ ಸಾಧ್ಯತೆ ಇದೆ !

  English summary
  Kannada movie tajmahal starring ajay and poojagandhi review by vinayakaram kalagaru,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X