»   » ವಿಮರ್ಶೆ: ಶೋಷಿತ ಸಮಾಜವನ್ನು 'ಶುದ್ಧಿ'ಕರಿಸುವ ಮಹಿಳೆಯ ನಿಗೂಢ ಪಯಣ

ವಿಮರ್ಶೆ: ಶೋಷಿತ ಸಮಾಜವನ್ನು 'ಶುದ್ಧಿ'ಕರಿಸುವ ಮಹಿಳೆಯ ನಿಗೂಢ ಪಯಣ

Posted By:
Subscribe to Filmibeat Kannada

ಸಮಾಜದ ಕೆಲವೊಂದು ಸಮಸ್ಯೆಗಳನ್ನು ಯಾರು ಎಷ್ಟೇ ಹೋರಾಡಿದರು, ಕೂಗಾಡಿದರು ಸರಿಪಡಿಸಲು ಆಗುವುದಿಲ್ಲ. ಆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇದಕ್ಕೆ ಕಾರಣ ಸಮಾಜದ ವ್ಯವಸ್ಥೆ ಇರಬಹುದು. ರಾಜಕೀಯ ವ್ಯವಸ್ಥೆ ಇರಬಹುದು. ಅಧಿಕಾರ ವರ್ಗದಲ್ಲಿ ಇರುವ ಪ್ರಮುಖರ ದುರಾಡಳಿತ ಇರಬಹುದು. ಇಂತಹ ಹಲವು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ 'ಶುದ್ಧಿ'.

ಚಿತ್ರಕ್ಕೆ ಕಳೆದ ದಶಕದಲ್ಲಿ ನಡೆದ ಹಲವು ಘಟನೆಗಳು ಪ್ರೇರಣೆಯಾಗಿವೆ. ಅವುಗಳಲ್ಲಿ ಪ್ರಮುಖವಾಗಿ ದೆಹಲಿ ಗ್ಯಾಪ್ ರೇಪ್ ಪ್ರಕರಣದಲ್ಲಿ ಬಾಲಾಪರಾಧಿಗೆ ಆದ ಶಿಕ್ಷೆ, ಮಂಗಳೂರಿನಲ್ಲಿ ಪಬ್ ಗಳ ಮೇಲೆ ನಡೆದ ದಾಳಿಗಳು ಪ್ರಮುಖವಾಗಿವೆ. ಈ ಘಟನೆಗಳ ಪ್ರೇರಣೆಯಿಂದ ಕಾಲ್ಪನಿಕ ಕಥೆಯೊಂದನ್ನು ರಚಿಸಿ ನಿರ್ದೇಶಕ ಆದರ್ಶ್ ಎಚ್.ಈಶ್ವರಪ್ಪ 'ಶುದ್ಧಿ' ನಿರ್ಮಿಸಿದ್ದಾರೆ.

Rating:
4.0/5

ಚಿತ್ರ : ಶುದ್ಧಿ
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಆದರ್ಶ್ ಎಚ್. ಈಶ್ವರಪ್ಪ
ನಿರ್ಮಾಣ: ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್
ಛಾಯಾಗ್ರಹಣ: ಆಂಡ್ರು ಆಯಿಲೋ
ಸಂಗೀತ : ಜೆಸ್ಸಿ ಕ್ಲಿಂಟನ್
ತಾರಾಗಣ : ನಿವೇದಿತಾ, ಲಾರೆನ್ ಸ್ಪಾರ್ಟನೊ, ಅಮೃತಾ ಕರಗದ, ಸುಧಾ ಬೆಳವಾಡಿ ಮತ್ತು ಇತರರು.
ಬಿಡುಗಡೆ : ಮಾರ್ಚ್ 17, 2017

'ಶುದ್ಧಿ'ಯ ಪೂರ್ವಾಪರ

ಯುವ ಪತ್ರಕರ್ತೆಯರಾದ ಜ್ಯೋತಿ(ನಿವೇದಿತಾ) ಮತ್ತು ದಿವ್ಯ(ಅಮೃತ ಕರಗದ) ರೇಪ್ ಪ್ರಕರಣದಲ್ಲಿ ಬಾಲ ಅಪರಾಧಿಗಳಿಗೆ 3 ವರ್ಷ ಶಿಕ್ಷೆಗೆ ಬದಲಾಗಿ ಕಠಿಣ ಶಿಕ್ಷೆ ಆಗಬೇಕೆಂದು ಹೋರಾಡುವುದು, ಅಮೆರಿಕದಿಂದ ಬೆಂಗಳೂರಿಗೆ ಬಂದ ಫೋಟೋ ಜರ್ನಲಿಸ್ಟ್ ಕ್ಯಾರೊಲಿನ್(ಲಾರೆನ್ ಸ್ಪಾರ್ಟನೊ) ತಪ್ಪು ಮಾಡಿದವರ ಹಿಂದೆ ಬಿದ್ದು ಕೊಲ್ಲುತ್ತಾ ಹೋಗುವುದು, ಇನ್ನೊಂದು ಕಡೆ ಸ್ಪೆಷಲ್ ಕ್ರೈ ಬ್ರ್ಯಾಂಚ್ ಪೊಲೀಸ್ ಆಫೀಸರ್ ಗಳು, ಎಟಿಎಂ ಗಳಲ್ಲಿ ಹಣಬಿಡಿಸಲು ಹೋಗಿ ಹತ್ಯೆಗೀಡಾದವರ ಕೊಲೆಗೆ ಕಾರಣಕರ್ತರನ್ನು ತನಿಖೆಮಾಡುವುದು. ಈ ಮೂರು ಕಥೆಯ ಎಳೆಗಳಿಗೆ ಅಂತ್ಯ ಏನು? ಎಂಬುದು 'ಶುದ್ಧಿ'.

ಧೈರ್ಯದಿಂದ ಮುನ್ನುಗುವ ಮಹಿಳಾ ಪ್ರಧಾನ ಸ್ಟೋರಿ

ಜ್ಯೋತಿ(ನಿವೇದಿತಾ) ಮತ್ತು ದಿವ್ಯ(ಅಮೃತ ಕರಗದ) ರೇಪ್ ಪ್ರಕರಣದಲ್ಲಿ ಬಾಲ ಅಪರಾಧಿಗಳಿಗೆ ಆಗುವ ಶಿಕ್ಷೆ ಪ್ರಮಾಣಕ್ಕೆ ತಿದ್ದುಪಡಿ ತಂದು ಕಠಿಣ ಶಿಕ್ಷೆ ಆಗಬೇಕು ಎಂದು ಅರಿವು ಮೂಡಿಸಲು ಬೀದಿ ನಾಟಕಗಳ ಮೋರೆ ಹೋಗುತ್ತಾರೆ. ಇವರಿಗೆ ಯಶಸ್ಸು ಸಿಗುತ್ತಾದಾ?, ಅಸಲಿಗೆ ಕ್ಯಾರೊಲಿನ್ (ಲಾರೆನ್ ಸ್ಪಾರ್ಟನೊ) ಕೊಲ್ಲುತ್ತಿರುವುದು ಯಾರನ್ನ? ಏಕೆ? ಮತ್ತು ಎಟಿಎಂ ಗೆ ಹೋದವರನ್ನು ಕೊಂದಿದ್ದು ಯಾರು? ಎಂಬ ಥ್ರಿಲ್ಲಿಂಗ್ ಪಯಣದ ಪ್ರಶ್ನೆ ಪ್ರತಿ ಹಂತದಲ್ಲೂ ಪ್ರೇಕ್ಷಕನನ್ನು ಕಾಡುತ್ತದೆ. ಅದಕ್ಕೆ ಉತ್ತರವನ್ನು ಚಿತ್ರಮಂದಿರಕ್ಕೆ ಭೇಟಿ ನೀಡಿಯೇ ತಿಳಿಯಿರಿ.

ಟ್ವಿಸ್ಟ್ ಇರುವುದೇ ಕೊನೆಯ ಅರ್ಧಗಂಟೆಯಲ್ಲಿ

ಆರಂಭದಿಂದಲೇ ಸಸ್ಪೆನ್ಸ್ ನಿಂದ ಸಾಗುವ 'ಶುದ್ಧಿ', ಪ್ರೇಕ್ಷಕರು ಎಲ್ಲೂ ಕಣ್ಣು ಮಿಟುಕಿಸದಂತೆ ನೋಡಿಸಿಕೊಳ್ಳುತ್ತದೆ. ಆದರೆ ಮುಂದೇನಾಗುತ್ತದೇ ಎಂದು ಕಾದು ಕುಳಿತ ಪ್ರೇಕ್ಷಕನ ಎಲ್ಲಾ ಪ್ರಶ್ನೆಗಳಿಗೆ ಉತ್ತರಸಿಗುವುದು ಚಿತ್ರದ ಕೊನೆಯ ಅರ್ಧಗಂಟೆಯ ಟ್ವಿಸ್ಟ್ ನಲ್ಲಿ ಮಾತ್ರ.

ಆದರ್ಶ್ ಎಚ್.ಈಶ್ವರಪ್ಪ ಅವರಿಂದ ಆದರ್ಶ ಚಿಂತನೆಯ ಸಿನಿಮಾ

ಆದರ್ಶ್ ಎಚ್.ಈಶ್ವರಪ್ಪ ತಮ್ಮ ಮೊದಲ ಸಿನಿಮಾದಲ್ಲೇ ಸಮಾಜದಲ್ಲಿ ನಡೆಯುತ್ತಿರುವ ಮಹಿಳಾ ಶೋಷಣೆ, ಪ್ರತಿಕಾರಕ್ಕೆ ಮುಂದಾದಲ್ಲಿ ಎದುರಾಗುತ್ತಿರುವ ರಾಜಕೀಯ ಧೋರಣೆಗಳು, ಮಹಿಳೆಯರ ಸೂಕ್ಷ್ಮ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಉತ್ತಮ ಸಿನಿಮಾವನ್ನು ಸರಳವಾಗಿ ತಮ್ಮದೇ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರಿಗೆ ಧೈರ್ಯ ತುಂಬುವ ಲಾರೆನ್ ಸ್ಪಾರ್ಟನೊ ಪಾತ್ರ

ಶೋಷಣೆ ವಿರುದ್ಧ ತಿರುಗಿ ಬಿದ್ದು, ಪ್ರತಿಕಾರಕ್ಕಾಗಿ ಹೋರಾಡುವ ದಿಟ್ಟ ಮನಸ್ಸಿನ ಧೈರ್ಯವಂತೆಯಾಗಿ ಲಾರೆನ್ ಸ್ಟಾರ್ಟನೊ ಅಭಿನಯ ನೈಜವಾಗಿ ಮೂಡಿಬಂದಿದೆ. ಅಮೆರಿಕ ಮಹಿಳೆಯಾಗಿ ಬೆಂಗಳೂರಿಗೆ ಬರುವ ಇವರ ಪಾತ್ರ ಕೊನೆವರೆಗೂ ಕುತೂಹಲವನ್ನು ಕಾಪಾಡಿಕೊಳ್ಳುವ ಥ್ರಿಲ್ಲಿಂಗ್ ಜರ್ನಿಯಲ್ಲಿ ಸಾಗುತ್ತದೆ.

ನಿವೇದಿತಾ ಮತ್ತು ಅಮೃತಾ ಕರಗದ ಪಾತ್ರ ಹೇಗಿದೆ?

ಪತ್ರಕರ್ತೆಯರಾಗಿ ಬಣ್ಣ ಹಚ್ಚಿರುವ ನಿವೇದಿತಾ ಮತ್ತು ಅಮೃತಾ ಕರಗದ ವೃತ್ತಿಗೆ ತಕ್ಕಂತೆ ಧೈರ್ಯವಂತೆಯರಾಗಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಅನುಭವಕ್ಕಿಂತ ಹೆಚ್ಚಾಗಿ ಸಂದೇಶ ರವಾನೆ

'ಶುದ್ಧಿ' ಚಿತ್ರ ಟ್ರೈಲರ್ ನೋಡಿಯೇ ಹಲವರು ಕಥೆ ಏನು ಗೊತ್ತಾಗಿದೆ ಎಂದು ತಿಳಿದುಕೊಂಡರೇ ಅದು ತಪ್ಪು. ಚಿತ್ರ ಮಹಿಳೆಯರ ಸಮಸ್ಯೆಗಳ ಕುರಿತ ಸೂಕ್ಷ್ಮ ವಿಚಾರಗಳನ್ನು ಹೊಂದಿದ್ದು, ಎಲ್ಲರೂ ಚಿತ್ರ ನೋಡಿದ ಅನುಭವಕ್ಕಿಂತ ಸಂದೇಶವನ್ನು ಹೊತ್ತು ತರುವಲ್ಲಿ ಯಾವುದೇ ಡೌಟ್ ಇಲ್ಲ.

ಉಳಿದವರ ಅಭಿನಯ

ಅಜಯ್ ರಾಜ್ ಮತ್ತು ಸಂಚಾರಿ ವಿಜಯ್ ತೆರೆಮೇಲೆ ಕಾಣಿಸಿಕೊಂಡಿದ್ದು ಕಡಿಮೆ ಆದರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ಪೆಷಲ್ ಕ್ರೈಂ ಬ್ರ್ಯಾಂಚ್ ಪೊಲೀಸ್ ಆಫೀಸರ್ ಗಳ ಪಾತ್ರದಲ್ಲಿ ನಟಿಸಿರುವ ಹಲವು ಹೊಸಬರು ನಟನೆಯಲ್ಲಿ ಇನ್ನಷ್ಟು ಪಳಗಬೇಕಿತ್ತು ಎಂಬುದು ಕಂಡುಬರುತ್ತದೆ.

ಜೆಸ್ಸಿ ಕ್ಲಿಂಟನ್ ಸಂಗೀತ

'ಶುದ್ಧಿ' ಚಿತ್ರವನ್ನು ಹೆಚ್ಚಾಗಿ ಕತ್ತಲೆಯಲ್ಲಿ ಚಿತ್ರೀಕರಣ ಮಾಡಿದ್ದು, ಅಪರಾಧ ದೃಶ್ಯಗಳಿಗೆ, ಥ್ರಿಲ್ಲಿಂಗ್ ಮತ್ತು ಸಸ್ಪೆನ್ಸ್ ಸನ್ನಿವೇಶಗಳಿಗೆ ಜೆಸ್ಸಿ ಕ್ಲಿಂಟನ್ ಹಿನ್ನಲೆ ಧ್ವನಿ ಸಂಯೋಜನೆ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ನೈಜತೆಗೆ ಇವರ ಧ್ವನಿ ವಿನ್ಯಾಸ ಪ್ರೇಕ್ಷಕನನ್ನು ಸದಾ ಎಚ್ಚರದಿಂದ ಕೂರುವಂತೆ ಸದ್ದು ಮಾಡಿದೆ.

ತಾಂತ್ರಿಕವಾಗಿ ಚಿತ್ರ

ಆಂಡ್ರು ಆಯಿಲೋ ತಮ್ಮ ಕ್ಯಾಮೆರಾ ಕೈಚಳಕದಲ್ಲಿ ಅಚ್ಚರಿದಾಯಕವಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಆದರೆ ಚಿತ್ರದಲ್ಲಿ ಲಾರೆನ್ ಸ್ಪಾರ್ಟನೋ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇಂಗ್ಲೀಷ್ ನಲ್ಲೇ ಮಾತನಾಡಿರುವುದು ಕನ್ನಡ ಪ್ರೇಕ್ಷಕರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಅವರ ಮಾತುಗಳಿಗೆ ಕನ್ನಡ ಸಬ್ ಟೈಟಲ್ ಅವಶ್ಯಕತೆ ಇತ್ತು.

ಫೈನಲ್ ಸ್ಟೇಟ್ಮೆಂಟ್

ನಿರ್ದೇಶಕ ಆದರ್ಶ್ ಎಚ್.ಈಶ್ವರಪ್ಪ ಕಳೆದ ಆರು ವರ್ಷಗಳಲ್ಲಿ ನಡೆದ ಗಂಭೀರ ವಿಷಯಗಳಿಗೆ ಕಾಲ್ಪನಿಕ ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿರುವ 'ಶುದ್ಧಿ' ಎಲ್ಲರಲ್ಲೂ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಅಲ್ಲದೇ ಒಂದು ಉತ್ತಮ ಸಂದೇಶ ಕೂಡ ಇದೆ. ಇಡೀ ಕುಟುಂಬ ಆರಾಮಾಗಿ ಕೂತು ನೋಡಬಹುದಾದ ಸಿನಿಮಾ 'ಶುದ್ಧಿ'.

English summary
Adarsh H Eshwarappa Directorial, Actress Niveditha Starrer Kannada Movie 'Shuddhi' has hit the screens today (March 17th). Here is the review of 'Shuddhi' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada