twitter
    For Quick Alerts
    ALLOW NOTIFICATIONS  
    For Daily Alerts

    Ram Setu Movie Review: ರಾಮ್ ಸೇತು ಸಿನಿಮಾ ಹೇಗಿದೆ?

    By ಮಾಧುರಿ ವಿ
    |

    ಕೆಲವು ಕಾರಣಗಳಿಗೆ ಚರ್ಚೆಯಲ್ಲಿದ್ದ ಹಿಂದಿ ಸಿನಿಮಾ ಅಕ್ಷಯ್ ಕುಮಾರ್ ನಟನೆಯ 'ರಾಮ್ ಸೇತು' ಬಿಡುಗಡೆ ಆಗಿದೆ. ಸಿನಿಮಾವನ್ನು ಅಭಿಷೇಕ್ ಶರ್ಮಾ ನಿರ್ದೇಶನ ಮಾಡಿದ್ದಾರೆ.

    ಸಿನಿಮಾ ಆರಂಭವಾಗುವುದು ಅಫ್ಘನಿಸ್ತಾನದಲ್ಲಿ. ಪುರಾತತ್ವಶಾಸ್ತ್ರಜ್ಞ ನಾಯಕ ಆರ್ಯನ್ ಕುಲಶ್ರೇಷ್ಠ (ಅಕ್ಷಯ್ ಕುಮಾರ್). ತಾಲಿಬಾನಿಗಳಿಂದ ಧ್ವಂಸ ಮಾಡಲ್ಪಟ್ಟ ಬುದ್ಧನ ವಿಗ್ರಹವಿದ್ದ ಸ್ಥಳದ ಅಧ್ಯಯನ ನಡೆಸುತ್ತಿರುತ್ತಾನೆ. ಅಲ್ಲಿ ಆತನಿಗೊಂದು ತಾಳೆಪತ್ರ ದೊರೆಯುತ್ತದೆ. ಅದೇನೆಂದು ಆತ ತೆರೆದು ನೋಡುವ ವೇಳೆಗೆ ತಾಲಿಬಾನಿಗಳ ದಾಳಿ ಆಗುತ್ತದೆ. ಆಗ ತಪ್ಪಿಸಿಕೊಳ್ಳಲು ನಾಯಕ ಹಾಗೂ ಆತನ ಪಾಕಿಸ್ತಾನಿ ಸಹೋದ್ಯೋಗಿ ಗುಹೆಯೊಂದರಲ್ಲಿ ಸೇರಿಕೊಳ್ಳುತ್ತಾರೆ. ನಂತರ ಅವರ ಸಂಶೋಧನೆಗಳಿಗೆ ಸಾಕಷ್ಟು ಗೌರವ ಲಭ್ಯವಾಗುತ್ತದೆ. 'ಧರ್ಮ ಮನುಷ್ಯರನ್ನು ಬೇರೆ ಮಾಡಿದರೆ ಸಂಸ್ಕೃತಿ ನಮ್ಮನ್ನು ಹತ್ತಿರ ಮಾಡುತ್ತದೆ' ಎಂಬ ಡೈಲಾಗ್ ಅನ್ನು ಸಹ ನಾಯಕ ಮಾಧ್ಯಮದವರ ಮುಂದೆ ಹೊಡೆಯುತ್ತಾರೆ.

    ಆರ್ಯನ್ ಮಾಡಿದ ಸಂಶೋಧನೆಯಿಂದಾಗಿ ಅವರಿಗೆ ಬಡ್ತಿ ದೊರೆತು, ಆರ್ಕಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಜಂಟಿ ನಿರ್ದೇಶಕರಾಗಿ ನೇಮಕಗೊಳ್ಳುತ್ತಾರೆ. ಅದೇ ಸಮಯಕ್ಕೆ ರಾಮೇಶ್ವರಂನಲ್ಲಿ ಶ್ರೀಮಂತನೊಬ್ಬ ರಾಮ ಸೇತುವನ್ನು ಒಡೆಯಲು ಮುಂದಾಗುತ್ತಾನೆ. ರಾಮ ಸೇತುವಿನಿಂದಾಗಿ ತನ್ನ ಹಡುಗುಗಳು ಬಳಸು ದಾರಿಯಲ್ಲಿ ಸಾಗಬೇಕಾಗಿದೆ ಎಂಬುದು ಅವನ ಸಮಸ್ಯೆ. ಹಡುಗುಗಳು ಪ್ರಯಾಣಿಸುವ ದೂರವನ್ನು ಕಡಿಮೆಗೊಳಿಸಲು ಆತ ರಾಮ ಸೇತು ಒಡೆಯುವ ಯೋಜನೆ ಮಾಡುತ್ತಾನೆ.

    ಸಿನಿಮಾದ ನಾಯಕ ಆರ್ಯನ್, ನಾಸ್ತಿಕ ಎಂದು ತಿಳಿದು, ರಾಮ್ ಸೇತು, ಮನುಷ್ಯ ನಿರ್ಮಿಸಿದ್ದಲ್ಲ, ಅದು ನೈಸರ್ಗಿಕವಾಗಿ ಜನ್ಮಿಸಿರುವುದು ಎಂದು ಸಾಬೀತುಪಡಿಸಿ ತನ್ನ ಯೋಜನೆ ಸರಳಗೊಳಿಸಲು ಆರ್ಯನ್ ಅನ್ನು ಆ ಕೆಲಸಕ್ಕೆ ನಿಯೋಜಿಸುತ್ತಾನೆ. ಅದಾದ ಬಳಿಕ ಸಮುದ್ರದಾಳದಲ್ಲಿ ಹಾಗೂ ಸಮುದ್ರದ ಹೊರಗೆ ಹಲವು ಘಟನೆಗಳು ಸಂಭವಿಸಿ, ನಾಯಕ ಆರ್ಯನ್‌ನ ಉದ್ದೇಶವೂ ಬದಲಾಗುತ್ತದೆ. ಈ ಪಯಣದಲ್ಲಿ ಆರ್ಯನ್‌ಗೆ ಪ್ರಕೃತಿ ವಿಜ್ಞಾನಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಪ್ರವಾಸಿಗರ ಗೈಡ್ ಸತ್ಯದೇವ್ ಸಹ ಜೊತೆಯಾಗುತ್ತಾರೆ. ಮೂವರು ಸೇರಿ ರಾಮ್ ಸೇತು ಮನುಷ್ಯ ನಿರ್ಮಿತ ಎಂದು ಸಾಬೀತುಪಡಿಸಲು ಯಶಸ್ವಿಯಾಗುತ್ತಾರೆ.

    Rating:
    2.5/5

    ಸೇತುಸಮುದ್ರಂ ಯೋಜನೆ ವಿವಾದವನ್ನು ನೆನಪಿಸುತ್ತದೆ

    ಸೇತುಸಮುದ್ರಂ ಯೋಜನೆ ವಿವಾದವನ್ನು ನೆನಪಿಸುತ್ತದೆ

    ಈ ಸಿನಿಮಾವು 2005 ರಲ್ಲಿ ವಿವಾದ ಎಬ್ಬಿಸಿದ್ದ ಸೇತುಸಮುದ್ರಂ ಯೋಜನೆಯನ್ನು ನೆನಪಿಸುತ್ತದೆ. ಆದರೆ ಈ ಸಿನಿಮಾ ಸಂಪೂರ್ಣವಾಗಿ ಅದರ ಮೇಲೆ ಆಧಾರಿತವಾಗಿಲ್ಲ. ಆ ವಿವಾದದ ಕೆಲವು ಅಂಶಗಳನ್ನಷ್ಟೆ ತೆಗೆದುಕೊಳ್ಳಲಾಗಿದೆ. ನಿರ್ದೇಶಕ-ಬರಹಗಾರ ಅಭಿಷೇಕ್ ಶರ್ಮಾ ಇತಿಹಾಸ, ಪುರಾಣ ಮತ್ತು ಫ್ಯಾಂಟಸಿಗಳ ಮಿಶ್ರಣ ಮಾಡಿ ನಿಜ ಜೀವನದ ಘಟನೆಯಿಂದಲೂ ಕೆಲವು ಎಳೆಗಳನ್ನು ತೆಗೆದುಕೊಂಡಿದ್ದಾರೆ. ದುರದೃಷ್ಟವಶಾತ್, ಅವರ ಚಿತ್ರಕತೆಯು ನಂಬಲರ್ಹವಾಗಿಲ್ಲ, ಬಹಳ ತ್ರಾಸದಾಯಕವಾಗಿ ಕಾಲ್ಪನಿಕ ಕತೆಯನ್ನು ಅಭಿಷೇಕ್ ಹೇಳಿದ್ದಾರೆ.

    ಬರವಣಿಗೆಯಲ್ಲಿ ಮೊನಚಿನ ಕೊರತೆ

    ಬರವಣಿಗೆಯಲ್ಲಿ ಮೊನಚಿನ ಕೊರತೆ

    ಬರವಣಿಗೆಯಲ್ಲಿ ಮೊನಚಿನ ಕೊರತೆಯಿಂದಾಗಿ 'ರಾಮಸೇತು' ಸಿನಿಮಾ ಪ್ರೇಕ್ಷಕನ ಮೇಲೆ ಪ್ರಭಾವ ಬೀರಲು ವಿಫಲವಾಗುತ್ತದೆ. ಅಕ್ಷಯ್ ಕುಮಾರ್ ಮತ್ತು ಅವರ ತಂಡವು ಮೊಸಳೆಯಿಂದ ತುಂಬಿರುವ ಕೊಳ, ದಟ್ಟವಾದ ಕಾಡುಗಳು, ಅಪಾಯಕಾರಿ ಗುಹೆಗಳು ಮತ್ತು ಧೂಳಿನ ಪರ್ವತ ಪ್ರದೇಶಗಳಂತಹ ವಿಲಕ್ಷಣ ಸ್ಥಳಗಳಿಗೆ ಬಹಳ ಸುಲಭವಾಗಿ ಹೋಗಿಬಿಡುತ್ತಾರೆ! ಚಿತ್ರದ ಕ್ಲೈಮ್ಯಾಕ್ಸ್‌ ಅಂತೂ ನಿರ್ದೇಶಕ ಅಭಿಷೇಕ್ ಶರ್ಮಾ, ಸುಪ್ರೀಂ ಕೋರ್ಟ್‌ನಲ್ಲಿ ನಾಯಕ ಅಕ್ಷಯ್ ಕುಮಾರ್ 'ಸಂಸ್ಕೃತಿ' ಕುರಿತು ಧರ್ಮೋಪದೇಶಗಳನ್ನು ನೀಡುವುದರ ಮೇಲೆ ಹೆಚ್ಚು ಗಮನವಹಿಸಿದ್ದಾರೆ. ಇದರಿಂದಾಗಿ ಚಿತ್ರದ ಅಂತ್ಯದಲ್ಲಿ ಸಿನಿಮಾದಲ್ಲಿ ಉಪದೇಶ ಹೆಚ್ಚಾಯಿತು ಎನಿಸುತ್ತದೆ.

    ಸಾಲ್ಟ್‌ ಆಂಡ್ ಪೆಪ್ಪರ್‌ ಲುಕ್‌ನಲ್ಲಿ ಅಕ್ಷಯ್ ಕುಮಾರ್

    ಸಾಲ್ಟ್‌ ಆಂಡ್ ಪೆಪ್ಪರ್‌ ಲುಕ್‌ನಲ್ಲಿ ಅಕ್ಷಯ್ ಕುಮಾರ್

    ಸಾಲ್ಟ್‌ ಆಂಡ್ ಪೆಪ್ಪರ್‌ ಲುಕ್‌ನಲ್ಲಿ ಅಕ್ಷಯ್ ಕುಮಾರ್ ಗಮನ ಸೆಳೆಯುತ್ತಾರೆ. ತಮ್ಮ ಸಾಹಸಗಳ ಮೂಲಕವೂ ಗಮನ ಸೆಳೆಯುತ್ತಾರೆ ಅಕ್ಷಯ್. ನಟ ಅಕ್ಷಯ್‌ರಿಗಿರುವ ಪುಟಿಯುವ ಉತ್ಸಾಹ ಚಿತ್ರಕತೆಗೂ ಇದ್ದಿದ್ದರೆ ಸಿನಿಮಾ ಚೆನ್ನಾಗಿರುತ್ತಿತ್ತೇನೋ. ಜಾಕ್ವೆಲಿನ್ ಫರ್ನಾಂಡೀಸ್, ಸಿನಿಮಾದಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ನಟಿ ನುಸ್ರತ್ ಬರೂಚಾರ ಕತೆಯೂ ಅಷ್ಟೆ. ಆದರೆ ತೆಲುಗು ನಟ ಸತ್ಯದೇವ್ ಸಿನಿಮಾದಲ್ಲಿ ನಿಜವಾಗಿಯೂ ಗಮನ ಸೆಳೆಯುತ್ತಾರೆ. ಸಿನಿಮಾಕ್ಕೆ ಕಾಮಿಕ್ ರಿಲೀಫ್ ನೀಡುವ ಜೊತೆಗೆ ಪರ್ಫಾಮೆನ್ಸ್‌ನಿಂದಲೂ ಗಮನ ಸೆಳೆಯುತ್ತಾರೆ.

    ಹಿನ್ನೆಲೆ ಸಂಗೀತ ಚೆನ್ನಾಗಿದೆ

    ಹಿನ್ನೆಲೆ ಸಂಗೀತ ಚೆನ್ನಾಗಿದೆ

    ಸಿನಿಮಾದ ಸಿನಿಮಾಟೊಗ್ರಫಿ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಸಿಜಿಐ ಸಹ ಗಮನ ಸೆಳೆಯುತ್ತದೆ. ಎಡಿಟಿಂಗ್ ಅಲ್ಲಲ್ಲಿ ಸಮಸ್ಯೆಯಾಗಿ ಕಾಣುತ್ತದೆ. ಸಿನಿಮಾದಲ್ಲಿ ಬರುವ 'ಜೈ ಶ್ರೀರಾಮ್' ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತ ಸಹ ದೃಶ್ಯಕ್ಕೆ ತಕ್ಕುದಾಗಿದೆ. ಒಂದೊಳ್ಳೆ ವಿಷಯ ಕೈಯ್ಯಲ್ಲಿದ್ದರೂ ಸಹ ಅದನ್ನು ಸರಿಯಾಗಿ ಹ್ಯಾಂಡಲ್ ಮಾಡುವಲ್ಲಿ ಚಿತ್ರದ ನಿರ್ದೇಶಕರು ಎಡವಿದ್ದಾರೆ.

    English summary
    Akshay Kumar starer Ram Setu movie review in Kannada. Movie fails to impress due to lack of good writing.
    Wednesday, October 26, 2022, 22:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X