twitter
    For Quick Alerts
    ALLOW NOTIFICATIONS  
    For Daily Alerts

    ನಾ ನೋಡಿದ ಕಸ್ತೂರಿ ನಿವಾಸ: ಕಾಡುವ ರಾಜ್ ಅಭಿನಯ

    By ಬಾಲರಾಜ್ ತಂತ್ರಿ
    |

    ಡಾ. ರಾಜಕುಮಾರ್ ಚಿತ್ರಗಳು ಬರೀ ಸಿನಿಮಾಗಿರದೇ, ಸಾಮಾಜಿಕ ಕಳಕಳಿ ಬೀರುವ ಚಿತ್ರವೂ ಆಗಿರುತ್ತಿತ್ತು ಎನ್ನುವುದು ಎಲ್ಲರ ಅಭಿಪ್ರಾಯ. ಅದಕ್ಕೇ ಇರಬಹುದು ರಾಜ್ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವುದು.

    ಈ ಮಾತಿಗೆ ಪುಷ್ಟಿ ನೀಡುವಂತೆ ನಾಲ್ಕು ದಶಕದ ಹಿಂದಿನ ಚಿತ್ರವೊಂದು ಬಣ್ಣದ ರೂಪ ಪಡೆದು ಮರು ಬಿಡುಗಡೆಯಾಗಿ ಅಭಿಮಾನಿಗಳಿಂದ ಅಭೂತಪೂರ್ವ ಮೆಚ್ಚುಗೆ ಪಡೆಯುತ್ತಿರುವುದು. ನವೆಂಬರ್ ಏಳನೇ ತಾರೀಕಿನಂದು ಬಿಡುಗಡೆಯಾದ ಬಣ್ಣದ 'ಕಸ್ತೂರಿ ನಿವಾಸ' ಚಿತ್ರಕ್ಕೆ ಜನ ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವುದು.

    ಬಿಡುಗಡೆಯಾದ ಹತ್ತು ದಿನದ ನಂತರ ಚಿತ್ರ ನೋಡೋಕೆ ಹೋಗಿದ್ದ ನಮಗೆ ಆಗಿದ್ದು ಒಂದು ವಿಶಿಷ್ಟ ಅನುಭವ. ಚಿತ್ರ ಉತ್ತಮ ಗಳಿಕೆ ಕಾಣುತ್ತಿದೆ ಎನ್ನುವುದು ತಿಳಿದಿದ್ದರೂ, ಅಭಿಮಾನಿಗಳ 'ಅಭಿಮಾನದ ಪರಾಕಾಷ್ಟೆ' ಈ ಮಟ್ಟಿಗೆ ಇರುತ್ತದೆ ಎನ್ನುವುದು ನಮಗಾದ ಮೊದಲ ಅನುಭವವಿದು.

    ಭೂಮಿಕಾ ಚಿತ್ರಮಂದಿರದಲ್ಲಿ ಭಾನುವಾರ (ನ 16) ಮೊದಲ ಶೋ ನೋಡೋಕೆ ಹೋಗಿದ್ದಾಗ, ಅಲ್ಲಿ ನಮಗೆ ಕಂಡಿದ್ದು ಚಿತ್ರಮಂದಿರದ ಮುಂದೆ ಜನಜಾತ್ರೆ. ಜೊತೆಗೆ ಬಿಬಿಎಂಪಿಯ ಮೂವತ್ತು ಸದಸ್ಯರೂ ಚಿತ್ರ ನೋಡಲು ಬಂದಿದ್ದರು. (ಅಣ್ಣಾವ್ರ ಕಸ್ತೂರಿ ನಿವಾಸ ಮನಮೋಹಕ ವಿಡಿಯೋ)

    4.30 ಶೋಗೆ ಒಂದು ಗಂಟೆ ಮುಂಚಿತವಾಗಿ ಭೂಮಿಕಾ ಚಿತ್ರಮಂದಿರಕ್ಕೆ ಹೋಗಿದ್ದರೂ, ಹೌಸ್ ಫುಲ್ ಬೋರ್ಡ್ ತಗಲಾಕಿತ್ತು, ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಪಾಲಿಕೆ ಸದಸ್ಯರಿಗಾಗಿ ಪುನೀತ್ ರಾಜಕುಮಾರ್ ಟಿಕೆಟ್ ವ್ಯವಸ್ಥೆ ಮಾಡಿದ್ದರು. ಪಾಲಿಗೆ ಸದಸ್ಯರು ಮಾಧ್ಯಮಗಳಿಗೆ ಬೈಟ್ ಕೊಡುತ್ತಿದ್ದರು.

    ಒಂದೆಡೆ ಅಭಿಮಾನಿಗಳ ಜೈಕಾರ, ಪಟಾಕಿಗಳ ಸದ್ದು, ಟ್ರಾಫಿಕ್ ಜಾಮ್ ನಿಂದಾಗಿ ಕೆಲವು ಕ್ಷಣ ಚಿತ್ರಮಂದಿರದ ಆವರಣ ಗೊಂದಲದ ಗೂಡಾಗಿತ್ತು. ಬ್ಲ್ಯಾಕ್ ಮಾರುವರಿಗಂತೂ ಸುಗ್ಗಿಯೋ, ಸುಗ್ಗಿ. ಟಿಕೆಟ್ ದರಕ್ಕಿಂತ ಮೂರು ಪಟ್ಟು ಹೆಚ್ಚು ದರದಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದರು. ಇವರ ಕೈಯಲ್ಲಿದ್ದ ಟಿಕೆಟುಗಳನ್ನು ನೋಡಿದರೆ ಬಹುಷ: ಅರ್ಧದಷ್ಟು ಟಿಕೆಟನ್ನು ಮಾತ್ರ ಕೌಂಟರ್ ನಲ್ಲಿ ವಿತರಿಸಿರಬಹುದೇನೋ?

    ನಲವತ್ತು ವರ್ಷದ ಹಳೆಯ ಚಿತ್ರ ಕಲರ್ ನಲ್ಲಿ ಬಿಡುಗಡೆಯಾಗುತ್ತಿದೆ. ಹೀಗೆ ಬ್ಲ್ಯಾಕ್ ನಲ್ಲಿ ಟಿಕೆಟ್ ಮಾರಾಟ ಮಾಡೋದು ತಪ್ಪಪ್ಪಾ ಎಂದು ಟಿಕೆಟ್ ಖರೀದಿಸಿದ ಹಿರಿಯರೊಬ್ಬರು ಬ್ಯ್ಲಾಕ್ ಮಾರುವವನಿಗೆ ಬುದ್ದಿಮಾತು ಹೇಳುತ್ತಿದ್ದರು. ಅವನು ಅದೆಷ್ಟು ಕೇಳಿದ್ನೋ, ಬಿಟ್ನೋ ದೇವರೇ ಬಲ್ಲ. ಮುಂದೆ ಓದಿ..

    ಚಿತ್ರಮಂದಿರದಲ್ಲಿ ಕರ್ಪೂರದ ಪರಿಮಳವೋ ಪರಿಮಳ

    ಚಿತ್ರಮಂದಿರದಲ್ಲಿ ಕರ್ಪೂರದ ಪರಿಮಳವೋ ಪರಿಮಳ

    ಚಿತ್ರದಲ್ಲಿ ರಾಜಕುಮಾರ್ ಎಂಟ್ರಿ ಕೊಡುತ್ತಿದ್ದಂತೆಯೇ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರತೀ ಹಾಡಿಗೂ ಅಭಿಮಾನಿಗಳು ಹೆಜ್ಜೆ ಹಾಕುತ್ತಿದ್ದರು. ಅದರಲ್ಲೂ 'ಆಡಿಸಿ ನೋಡು, ಬೀಳಿಸಿ ನೋಡು' ಹಾಡಿಗಂತೂ ಪ್ರೇಕ್ಷಕರು ಪರದೆಯ ಮುಂದೆ ನರ್ತಿಸಿ, ಮೇಣದ ಬತ್ತಿ ಹಚ್ಚಿ, ಕರ್ಪೂರದಾರತಿ ಮಾಡುತ್ತಿದ್ದರು. ಇಡೀ ಚಿತ್ರಮಂದಿರದಲ್ಲಿ ಕರ್ಪೂರದ ಪರಿಮಳವೋ ಪರಿಮಳ.

    ಕಳಪೆ ಮಟ್ಟದ ಸೌಂಡ್ ಸಿಸ್ಟಂ

    ಕಳಪೆ ಮಟ್ಟದ ಸೌಂಡ್ ಸಿಸ್ಟಂ

    ಈ ಕಸ್ತೂರಿ ನಿವಾಸದ ವಂಶಸ್ಥರ ಕೈ ಎಂದಿಗೂ ಭೂಮಿಯನ್ನು ನೋಡುತ್ತೇ ಹೊರತು ಆಕಾಶವನ್ನಲ್ಲ ಎನ್ನುವ ಡೈಲಾಗುಗಳಿಗೆ ಅಭಿಮಾನಿಗಳ ಜೈಕಾರ. ಸಿನಿಮಾದ ಮುಕ್ಕಾಲು ಭಾಗ ಡೈಲಾಗು ಕೇಳದಷ್ಟು ಅಭಿಮಾನಿಗಳ ಸಂಭ್ರಮ. ಆದರೆ ಭೂಮಿಕಾ ಚಿತ್ರಮಂದಿರದ ಸೌಂಡ್ ಸಿಸ್ಟಂ ಅತ್ಯಂತ ಕಳಪೆ ಮಟ್ಟದಾಗಿತ್ತು. ಇದು ಚಿತ್ರಮಂದಿರದ ಸಮಸ್ಯೆಯೋ ಅಥವಾ ಕಲರೀಕರಣಗೊಂಡಾಗ ಆದ ರೆಕಾರ್ಡಿಂಗ್ ತಪ್ಪೋ ಗೊತ್ತಾಗಲಿಲ್ಲ. ಪತ್ನಿಯ ಫೋಟೋದ ಮುಂದೆ ರಾಜ್ ಅಳುವ ಸನ್ನಿವೇಶದಲ್ಲಿ ಆರತಿ ಬದಲು ಭಾರತಿ ಫೋಟೋ ಹಾಕಿದ್ದು ಇನ್ನೊಂದು ಎಡವಟ್ಟು.

    ಪರಕಾಯ ಪ್ರವೇಶ ಮಾಡಿದ ರಾಜ್ ಅಭಿನಯ

    ಪರಕಾಯ ಪ್ರವೇಶ ಮಾಡಿದ ರಾಜ್ ಅಭಿನಯ

    ಅದೆಷ್ಟೋ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ್ದುಂಟು, ಆದರೆ ಈ ಸಿನಿಮಾ ನೋಡಿದಾಗಿನ ಅನುಭವವೇ ಬೇರೆ. ಪರಕಾಯ ಪ್ರವೇಶ ಮಾಡಿದ ರಾಜ್ ಅಭಿನಯ, ಸನ್ನಿವೇಶಕ್ಕೆ ತಕ್ಕಂತೆ ಅವರ ಬದಲಾಗುವ ಮುಖಾಭಿನಯ, ಎಲ್ಲಕ್ಕಿಂತ ಹೆಚ್ಚಾಗಿ ಕ್ಲೈಮ್ಯಾಕ್ಸ್ ನಲ್ಲಿ ರಾಜ್ ನಟನೆ ಕಣ್ಣೆದೆರುಗೆ ಬರುತ್ತದೆ.

    ಚಿತ್ರಕ್ಕೆ ಇಳಯರಾಜ ಸಹಾಯಕ ಸಂಗೀತ ನಿರ್ದೇಶಕರಾಗಿದ್ದರು

    ಚಿತ್ರಕ್ಕೆ ಇಳಯರಾಜ ಸಹಾಯಕ ಸಂಗೀತ ನಿರ್ದೇಶಕರಾಗಿದ್ದರು

    ಇನ್ನು ಜಿ ಕೆ ವೆಂಕಟೇಶ್ ಅವರ ಸಂಗೀತ (ಈ ಚಿತ್ರಕ್ಕೆ ಇಳಯರಾಜ ಸಹಾಯಕ ಸಂಗೀತ ನಿರ್ದೇಶಕರಾಗಿದ್ದರು), ದೊರೈ - ಭಗವನಾನ್ ನಿರ್ದೇಶನ, ಚಿ ಉದಯ್ ಶಂಕರ್ ಸಂಭಾಷಣೆ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಜಯಂತಿ, ನರಸಿಂಹರಾಜು, ಅಶ್ವಥ್, ಆರತಿ, ಬಾಲಕೃಷ್ಣ ಮುಂತಾದವರ ನಟನೆಯೂ ಅಷ್ಟೇ ಪೂರಕವಾಗಿದೆ.

    ಶಿವಾಜಿ ಗಣೇಶನ್ ಮಾಡಲೊಪ್ಪದ ಕಥೆ

    ಶಿವಾಜಿ ಗಣೇಶನ್ ಮಾಡಲೊಪ್ಪದ ಕಥೆ

    ತಮಿಳು ಚಿತ್ರರಂಗದ ದಿಗ್ಗಜ ಶಿವಾಜಿ ಗಣೇಶನ್ ಮಾಡಲೊಪ್ಪದ ಕಥೆಯನ್ನು, ಕನ್ನಡಕ್ಕೆ ತಂದಾಗ ಒಲ್ಲದ ಮನಸ್ಸಿನಿಂದಲೇ ನಟಿಸಿದ್ದ ರಾಜ್ ಅವರಿಗೆ ಕಪ್ಪು ಬಿಳುಪಿನಲ್ಲೇ (1971) ಚಿತ್ರ ಅಂದು ಆ ಮಟ್ಟಿಗೆ ಯಶಸ್ಸು ಪಡೆಯುತ್ತೆ ಎಂದು ಅನಿಸಿರದೇ ಇರಬಹುದು. ಆ ಚಿತ್ರಕ್ಕೆ ಬಣ್ಣ ಬಳೆದು ಕೆಸಿಎನ್ ಮೋಹನ್ ಮತ್ತೆ ಚಿತ್ರವನ್ನು ಮರು ಬಿಡುಗಡೆ ಮಾಡಿದ್ದಾರೆ.

    ಭಾರೀ ಕಲೆಕ್ಷನ್

    ಭಾರೀ ಕಲೆಕ್ಷನ್

    ಹೊಸ ಚಿತ್ರಗಳು ನಾಚಿಸುವಂತೆ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ಕಸ್ತೂರಿ ನಿವಾಸ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳ ಸಂಖ್ಯೆ, ಹೋದ ಶುಕ್ರವಾರಕ್ಕೆ ಮತ್ತೆ ಹತ್ತು ಹೊಸ ಸೇರ್ಪಡೆಯಾಗಿವೆ. ಎರಡು ಕೋಟಿ ರೂಪಾಯಿಗಳಲ್ಲಿ ಕಲರೀಕರಣಗೊಂಡಿದ್ದ ಈ ಚಿತ್ರ ಈಗಾಗಲೇ ಐದು ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಎನ್ನುವ ಸುದ್ದಿಯಿದೆ.

    ನೀವೂ ತಪ್ಪದೆ ನೋಡಿ

    ನೀವೂ ತಪ್ಪದೆ ನೋಡಿ

    ಇದ್ದಷ್ಟು ದಿನ ಕೈಲಾದಷ್ಟು ಸಹಾಯ ಮಾಡು ಎಂದು ಸ್ವಾಭಿಮಾನಿ ಮನುಷ್ಯನ ದುರಂತ ಕಥೆಯನ್ನು ಸಾರುವ ಕಸ್ತೂರಿ ನಿವಾಸ ಚಿತ್ರಕ್ಕೆ ರೇಟಿಂಗ್ ಕೊಡುವುದು ಕಷ್ಟ. ಕಪ್ಪುಬಿಳುಪು ಆವೃತ್ತಿ ನೋಡಿದ್ದರೂ, ಕಲರೀಕರಣ ಗೊಂಡಿರುವ ಕಸ್ತೂರಿ ನಿವಾಸವನ್ನು ಒಮ್ಮೆ ನೋಡಿ.. ತಪ್ಪದೇ ನೋಡಿ..

    English summary
    An experience watching Dr. Rajkumar's Kasturi Nivasa movie in Bhumika Theater in Majestic, Bangalore.
    Monday, November 17, 2014, 18:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X