»   » ಚಿತ್ರ ವಿಮರ್ಶೆ : ಕಿಚ್ಚು ಹಚ್ಚದ 'ಬೆಂಕಿಪಟ್ಣ'

ಚಿತ್ರ ವಿಮರ್ಶೆ : ಕಿಚ್ಚು ಹಚ್ಚದ 'ಬೆಂಕಿಪಟ್ಣ'

Posted By:
Subscribe to Filmibeat Kannada

'ಬೆಂಕಿಪಟ್ಣ' ಹೆಸರು ಕೇಳುತ್ತಿದ್ದ ಹಾಗೆ, ಇದು ಕಿಚ್ಚಿನ ಕಥೆ. ಸೇಡು, ಹಗೆ, ದ್ವೇಷದ ಸಮರ ಅಂತ ನೀವು ಅಂದುಕೊಂಡು ಚಿತ್ರಮಂದಿರಕ್ಕೆ ಹೋದರೆ, ನಿಮಗೆ ನಿರಾಸೆ ಆಗುವುದು ಖಂಡಿತ. ಯಾಕಂದ್ರೆ, 'ಬೆಂಕಿಪಟ್ಣ'ದಲ್ಲಿ ಬೆಂಕಿಯೂ ಇಲ್ಲ, ಕಡ್ಡಿಯೂ ಇಲ್ಲ.


ಸಿನಿಮಾ ಶುರುವಾಗುತ್ತಿದ್ದ ಹಾಗೆ, ಲಾಂಗು-ಮಚ್ಚುಗಳು ಝಳಪಳಿಸುತ್ತವೆ. ಆದ್ರೆ, ರಕ್ತಪಾತ ಕಮ್ಮಿ. ಹೆಂಗಳೆಯರ ಮನಮುಟ್ಟುವ ಅದೆಷ್ಟೋ ಸೆಂಟಿಮೆಂಟ್ ದೃಶ್ಯಗಳು, ಎಲ್ಲರಿಗೆ ಕಚಗುಳಿ ಇಡುವ ಸಂಭಾಷಣೆ, ಮನಸ್ಸಿಗೆ ಮುದ ನೀಡುವ ಹಾಡುಗಳು, ನವಿರಾದ ಪ್ರೇಮ ಕಥೆ 'ಬೆಂಕಿಪಟ್ಣ' ಚಿತ್ರದಲ್ಲಿ ಹದವಾಗಿ ಬೆರೆತಿವೆ. ಆದ್ರೆ, ಸಿನಿಮಾ ಮುಕ್ತಾಯದ ಹೊತ್ತಿಗೆ ಎಲ್ಲಾ ಇದ್ದು ಏನೋ ಮಿಸ್ ಆದಂತೆ ಭಾಸವಾಗುತ್ತೆ.

Rating:
2.5/5

ಚಿತ್ರ - ಬೆಂಕಿಪಟ್ಣ
ನಿರ್ಮಾಣ - ಮಾಸ್ತಿ ಜಾಕೀರ್ ಅಲಿ ಖಾನ್, ಅಖಿಲ್ ಖಾನ್
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಟಿ.ಕೆ.ದಯಾನಂದ್
ಸಂಗೀತ - ಸ್ಟೀವ್ - ಕೌಶಿಕ್
ಛಾಯಾಗ್ರಹಣ - ನಿರಂಜನ್ ಬಾಬು
ಸಂಕಲನ - ಜೋ.ನಿ. ಹರ್ಷ
ಸಾಹಸ ನಿರ್ದೇಶನ - ಕೌರವ ವೆಂಕಟೇಶ್
ತಾರಾಗಣ - ಪ್ರತಾಪ್ ನಾರಾಯಣ್, ಅನುಶ್ರೀ, ಪ್ರಕಾಶ್ ಬೆಳವಾಡಿ, ಅರುಣ್ ಸಾಗರ್, ಜಹಾಂಗೀರ್, ಬಿ.ಸುರೇಶ್ ಮತ್ತು ಇತರರು


ಕಥಾಹಂದರ

ಪ್ರೀತಿಸಿದ ಹುಡುಗನೊಂದಿಗೆ ಯುವತಿಯೊಬ್ಬಳು ಓಡಿ ಬಂದು 'ಬೆಂಕಿಪಟ್ಣ' ಅನ್ನುವ ಪುಟ್ಟ ಹಳ್ಳಿಗೆ ಸೇರುತ್ತಾಳೆ. ದುರಾದೃಷ್ಟವಶಾತ್ ಆಕೆ ಗರ್ಭಿಣಿಯಾಗಿರುವಾಗಲೇ ಗಂಡ ತೀರಿಕೊಳ್ಳುತ್ತಾನೆ. ಕಷ್ಟ ಪಟ್ಟು ಮಗನನ್ನ ಸಾಕುವ ತಾಯಿ ಮುಂದೊಂದು ದಿನ ಕೊನೆಯುಸಿರೆಳೆಯುತ್ತಾಳೆ.


ಮುಗ್ಧ ಹುಡುಗ ಸೆಂಟ್ ಹನುಮಂತ

ಹುಟ್ಟುವ ಮುನ್ನವೇ ತಂದೆಯನ್ನ ಕಳೆದುಕೊಂಡಿರುವ ಸೆಂಟ್ ಹನುಮಂತನಿಗೆ (ಪ್ರತಾಪ್ ನಾರಾಯಣ್) ಸಾವು ಅಂದ್ರೇನು ಅನ್ನೋದೇ ಗೊತ್ತಿಲ್ಲದಷ್ಟು ಮುಗ್ಧತೆ. ಫೋಟೋ ಆಸೆಗಾಗಿ ಪೊಲೀಸ್ ಸ್ಟೇಷನ್ ನಲ್ಲಿ ಸ್ಲೇಟ್ ಹಿಡಿದು ನಿಲ್ಲುವ ಹನುಮಂತ, ಸಂಬಳಕ್ಕೋಸ್ಕರ ಇನ್ನೊಬ್ಬರ ಪಿತೂರಿಗೆ ಬಲಿಯಾಗಿ ಜೈಲುಪಾಲಾಗುತ್ತಾನೆ.


ಗಂಡು ಬೀರಿ ಪಾನಿ

'ಹೆಣ್ಮಕ್ಕಳಿಗೆ ಎರಡು ಗುಂಡಿಗೆ ಇದೆ' ಅಂತ ಎದೆ ಉಬ್ಬರಿಸಿ ಎಂಟ್ರಿಕೊಡುವ ಪಾನಿ (ಅನುಶ್ರೀ) ಅಪ್ಪಟ ಸುದೀಪ್ ಭಕ್ತೆ. ಗಂಡು ಮಕ್ಕಳಿಗೆ ಚಾಲೆಂಜ್ ಹಾಕಿ ನಿಲ್ಲುವ ಪಾನಿ, ತಾನು ಕೆಲಸ ಮಾಡುವ ಮಳಿಗೆಯ ಮೇಸ್ತ್ರಿಯೊಟ್ಟಿಗೆ ದ್ವೇಷ ಕಟ್ಟಿಕೊಳ್ಳುತ್ತಾಳೆ.


ಇಲಿ ಪಾಶಾಣ ಕೊಡುವ ತಲೆಪುರುಕ

ಇಬ್ಬರ ಮಧ್ಯೆ ಇಲಿ ಪಾಶಾಣ ಕೊಡುವ ತಲೆಪುರುಕ (ಅರುಣ್ ಸಾಗರ್), ತಮಾಷೆ (ಜಹಾಂಗೀರ್) ಅವರ ಅಲ್ಪ ಸ್ವಲ್ಪ ತಮಾಷೆ ಇದೆ. 'ಬೆಂಕಿಪಟ್ಣ'ದಲ್ಲಿ ನಡೆಯುವ ರಾಜಕೀಯ ಪಿತೂರಿಯಿಂದ ಜನಸಾಮಾನ್ಯರು ಹೇಗೆ ಬಲಿಯಾಗುತ್ತಾರೆ ಅನ್ನುವುದು ಬಾಕಿ ಕಥೆ. [ಬೆಂಕಿಪಟ್ಣ ಆಡಿಯೋ ವಿಮರ್ಶೆ: ತಪ್ಪದೇ ಕೇಳಿ ಆನಂದಿಸಿ]


ನಟನೆಯಲ್ಲಿ ಪ್ರತಾಪ್-ಅನುಶ್ರೀ ಪಾಸ್

ಸೆಂಟ್ ಹನುಮಂತನಾಗಿ ಪ್ರತಾಪ್ ನಾರಾಯಣ್ ಮುಗ್ಧ ಅಭಿನಯ ನೀಡಿದ್ದಾರೆ. ಹೊಡೆದಾಟದ ದೃಶ್ಯಗಳಲ್ಲಿ ಪ್ರತಾಪ್ ಲೀಲಾಜಾಲ. ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿರುವ ಅನುಶ್ರೀ ಅವರದ್ದು ಕೊಂಚ ಅಬ್ಬರದ ನಟನೆ. ಉಳಿದಂತೆ ಪ್ರೇಕ್ಷಕರನ್ನ ನಗಿಸುವುದರೊಂದಿಗೆ, ಕಣ್ಣಲ್ಲಿ ನೀರು ತರಿಸುವುದು ಅರುಣ್ ಸಾಗರ್ ಮಾತ್ರ. ಜಹಾಂಗೀರ್, ಹೊನ್ನವಳ್ಳಿ ಕೃಷ್ಣ ಕಾಮಿಡಿ ಅಚ್ಚುಕಟ್ಟಾಗಿದೆ. [ಬೆಂಕಿಪಟ್ಣ ಚಿತ್ರದ ಮೇಲೆ ಬಿತ್ತು ಕಾಲಿವುಡ್ ಚೇರನ್ ಕಣ್ಣು]


ನಿಧಾನಗತಿಯಲ್ಲಿ ಸಾಗುವ 'ಬೆಂಕಿಪಟ್ಣ'

'ಬೆಂಕಿಪಟ್ಣ' ಅನ್ನುವ ಊರು. ಒಂದು ಕುಟುಂಬ. ಎರಡು ಬಣ. ಇಷ್ಟರೊಳಗೆ ಕಥೆ ಸಾಗುವುದರಿಂದ ಇಡೀ ಸಿನಿಮಾ ಕುಂಟುತ್ತದೆ. ಅಲ್ಲಲ್ಲಿ ಬಿಡಿಬಿಡಿಯಾಗಿ ಕಥೆ ಹೇಳಿರುವ ಕಾರಣ, ಚಿತ್ರದ ಓಟಕ್ಕೆ ಆಗಾಗ ಬ್ರೇಕ್ ಬೀಳುತ್ತದೆ. ಸಿನಿಮಾ ಮುಗೀತು ಅನ್ನುವ ಹೊತ್ತಿಗೆ ಕ್ಲೈಮ್ಯಾಕ್ಸ್ ನಲ್ಲಿ ಮತ್ತೊಂದು ಫೈಟ್ ಇಟ್ಟಿರುವುದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. [ಬೆಂಕಿಪಟ್ಣ ಚಿತ್ರದ ರೈಟ್ಸ್ ತೂಗುದೀಪ ಡಿಸ್ಟ್ರಿಬ್ಯೂಷನಿಗೆ]


ಒಮ್ಮೆ ನೋಡಬಹುದು.....

ಕಡು ಬಡತನದಲ್ಲಿರುವ ಕುಟುಂಬಗಳು ಪಡುವ ಕಷ್ಟ, ಒಳಗಾಗುವ ಶೋಷಣೆಯನ್ನ 'ಬೆಂಕಿಪಟ್ಣ' ಚಿತ್ರದಲ್ಲಿ ತೋರಿಸಲಾಗಿದೆ. ಆದ್ರೆ, ನಿರ್ದೇಶಕರ ಆಶಯ, ಸಮಾಜಕ್ಕೆ ತಲುಪಬೇಕಾದ ಸಂದೇಶ ಚಿತ್ರದಲ್ಲಿ ಕ್ಲಿಯರ್ ಆಗಿಲ್ಲ. ಚಿತ್ರಮಂದಿರದಿಂದ ಹೊರಬಂದ ಮೇಲೆ 'ಬೆಂಕಿಪಟ್ಣ' ಕಾಡುವುದಿಲ್ಲ. ಪ್ರಯೋಗಾತ್ಮಕ ಚಿತ್ರಗಳನ್ನ ಇಷ್ಟಪಡುವವರು 'ಬೆಂಕಿಪಟ್ಣ' ಚಿತ್ರವನ್ನ ಒಮ್ಮೆ ನೋಡಬಹುದು.


English summary
Bigg Boss sensation Anushree and Arun Sagar starrer Kannada movie Benkipatna has hit the screens today (Feb 20th). Here is the complete review of the movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada