»   » ವಿಮರ್ಶೆ: 'ಕುರುಡು' ಪ್ರೀತಿ ತೋರಿ ದುಡ್ಡು ಪೀಕುವ ರಾಕ್ಷಸಿಯ 'ಸಂಹಾರ'

ವಿಮರ್ಶೆ: 'ಕುರುಡು' ಪ್ರೀತಿ ತೋರಿ ದುಡ್ಡು ಪೀಕುವ ರಾಕ್ಷಸಿಯ 'ಸಂಹಾರ'

Posted By:
Subscribe to Filmibeat Kannada

ಮೂರು ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನ ಹಿಡಿದು ಕೂರಿಸುವುದು ಬಹಳ ಕಷ್ಟ. ಅಂಥದ್ರಲ್ಲಿ, ಒಂದು ಮರ್ಡರ್ ಮಿಸ್ಟ್ರಿ ಕಥೆಯನ್ನು ಹೊತ್ತು ಅದಕ್ಕೆ ಸ್ವಲ್ಪ ಸಸ್ಪೆನ್ಸ್, ಸ್ವಲ್ಪ ಪ್ರೀತಿ ಬೆರಿಸಿ ಒಂದೊಳ್ಳೆ ರೋಚಕ ಚಿತ್ರವನ್ನ ತೆರೆಗೆ ತಂದು ಸಿನಿ ಪ್ರಿಯರನ್ನು ರಂಜಿಸುವಲ್ಲಿ ನಿರ್ದೇಶಕ ಗುರು ದೇಶಪಾಂಡೆ ಯಶಸ್ವಿ ಆಗಿದ್ದಾರೆ.

Rating:
3.5/5

ಚಿತ್ರ: ಸಂಹಾರ

ನಿರ್ಮಾಣ: ಎ.ವೆಂಕಟೇಶ್, ಆರ್.ಸುಂದರ್ ಕಾಮರಾಜ್

ನಿರ್ದೇಶನ: ಗುರು ದೇಶಪಾಂಡೆ

ಸಂಗೀತ: ರವಿ ಬಸ್ರೂರ್

ಛಾಯಾಗ್ರಹಣ: ಜಗದೀಶ್ ವಾಲಿ

ಸಂಕಲನ: ಕೆ.ಎಂ.ಪ್ರಕಾಶ್

ತಾರಾಗಣ: ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯ ಶೆಟ್ಟಿ, ಚಿಕ್ಕಣ್ಣ ಮತ್ತು ಇತರರು.

ಬಿಡುಗಡೆ ದಿನಾಂಕ: ಫೆಬ್ರವರಿ, 9, 2018

'ಸಂಹಾರ' ನಡೆಯುವ ಮುನ್ನ....

'ಕುರುಡ'ನಾಗಿದ್ದರೂ ರುಚಿ ರುಚಿಯಾದ ಅಡುಗೆ ಮಾಡುವಲ್ಲಿ ಶ್ರೀಶೈಲ (ಚಿರಂಜೀವಿ ಸರ್ಜಾ) ಎತ್ತಿದ ಕೈ. ರೆಸ್ಟೋರೆಂಟ್ ನಡೆಸುವ ಶ್ರೀಶೈಲ ಕಂಡ್ರೆ ಮೀಡಿಯಾದಲ್ಲಿ ಕೆಲಸ ಮಾಡುವ ಜಾನಕಿ (ಕಾವ್ಯ ಶೆಟ್ಟಿ)ಗೆ ಪ್ರೀತಿ. ಇತ್ತ ಶ್ರೀಶೈಲಗೆ ನಿನ್ನೆ ಮೊನ್ನೆ ಪರಿಚಯ ಆದ ನಂದಿನಿ (ಹರಿಪ್ರಿಯಾ) ಮೇಲೆ ಪ್ರೀತಿ. ಹಾಗಾದ್ರೆ, ಇದು ತ್ರಿಕೋನ ಪ್ರೇಮ ಕಥೆ ಅಂತ ಭಾವಿಸುತ್ತಿದ್ದೀರಾ.? ಖಂಡಿತ ಇಲ್ಲ.!

ನಂದಿನಿ ಯಾರು.?

ಶ್ರೀಶೈಲರಿಂದ ಹಣ ಸಹಾಯ ಕೇಳುವ ನಂದಿನಿ (ಹರಿಪ್ರಿಯಾ) ಇದ್ದಕ್ಕಿದ್ದಂತೆ ನಾಪತ್ತೆ ಆಗುತ್ತಾಳೆ. ನಂದಿನಿ ತಂದೆ ಅಂತ ಹೇಳಿಕೊಂಡು ಬರುವ ಆಸಾಮಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಾನೆ. ಅಸಲಿಗೆ, ನಂದಿನಿ ಯಾರು.? ಹಣ ಸಹಾಯ ಕೇಳುವ ನಂದಿನಿ ನಾಪತ್ತೆ ಆಗುವುದು ಯಾಕೆ.? ಎಂಬುದೇ ಚಿತ್ರದ ಸಸ್ಪೆನ್ಸ್. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ...

'ಕುರುಡ' ಚಿರಂಜೀವಿ ಸರ್ಜಾ ಅಭಿನಯ ಹೇಗಿದೆ.?

'ಕುರುಡ'ನಾಗಿ ಚಿರಂಜೀವಿ ಸರ್ಜಾ ಅಭಿನಯ ಅಚ್ಚುಕಟ್ಟಾಗಿದೆ. ಚಿತ್ರದ ಮೊದಲಾರ್ಧದಲ್ಲಿ ಬರುವ ಫೈಟ್ ಸನ್ನಿವೇಶದಲ್ಲಿ ಚಿರಂಜೀವಿ ಸರ್ಜಾ ಟೈಮಿಂಗ್ ಚೆನ್ನಾಗಿದೆ.

'ರಾಕ್ಷಸಿ' ಹರಿಪ್ರಿಯಾ

ಮೊದಲಾರ್ಧದಲ್ಲಿ ಮುಗ್ಧ ಹುಡುಗಿಯಾಗಿ ಕಾಣುವ ಹರಿಪ್ರಿಯಾ, ದ್ವಿತೀಯಾರ್ಧದಲ್ಲಿ 'ರಾಕ್ಷಸಿ'. ನೆಗೆಟಿವ್ ಶೇಡ್ ನಲ್ಲಿ ಹರಿಪ್ರಿಯಾ ಅಭಿನಯ ಚೆನ್ನಾಗಿದೆ. ಹರಿಪ್ರಿಯಾ ಬಾಡಿ ಲ್ಯಾಂಗ್ವೇಜ್ ಕೂಡ ಮೆಚ್ಚುವಂಥದ್ದು.

ಗಮನ ಸೆಳೆಯುವ ಕಾವ್ಯ ಶೆಟ್ಟಿ

ಜರ್ನಲಿಸ್ಟ್ ಪಾತ್ರದಲ್ಲಿ ಕಾವ್ಯ ಶೆಟ್ಟಿ ಗಮನ ಸೆಳೆಯುತ್ತಾರೆ. ಇನ್ನೂ ಕೊಟ್ಟ ಪಾತ್ರಕ್ಕೆ ತಬಲ ನಾಣಿ ಕೂಡ ನ್ಯಾಯ ಒದಗಿಸಿದ್ದಾರೆ.

'ರಾಜಾಹುಲಿ' ಚಿಕ್ಕಣ್ಣ

ಕಾನ್ಸ್ ಸ್ಟೇಬಲ್ 'ರಾಜಾಹುಲಿ' ಆಗಿ ಚಿಕ್ಕಣ್ಣ ಎಂಟ್ರಿಕೊಡುತ್ತಿದ್ದಂತೆಯೇ ನೀವು ಹಲ್ಲು ಬಿಡುವುದು ಗ್ಯಾರೆಂಟಿ. 'ಸಂಹಾರ' ಚಿತ್ರದಲ್ಲಿ ಚಿಕ್ಕಣ್ಣ ಬರೀ ಕಾಮಿಡಿಗಷ್ಟೇ ಸೀಮಿತವಾಗಿಲ್ಲ. ಪ್ರಮುಖ ಪಾತ್ರ ನಿರ್ವಹಿಸಿರುವ ಚಿಕ್ಕಣ್ಣ ಆಗಾಗ 'ರಾಜಾಹುಲಿ' ರೇಂಜಿಗೆ ಪಂಚಿಂಗ್ ಡೈಲಾಗ್ ಹೊಡೆದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಾರೆ.

ರೀಮೇಕ್ ಸಿನಿಮಾ

'ಸಂಹಾರ' ತಮಿಳಿನ 'ಅದೇ ಕಂಗಳ್' ಚಿತ್ರದ ರೀಮೇಕ್. ಹೀಗಾಗಿ, ಚಿತ್ರಕಥೆಯಲ್ಲಿ ಅಷ್ಟು ವ್ಯತ್ಯಾಸ ಇಲ್ಲ. 'ಅದೇ ಕಂಗಳ್' ಚಿತ್ರವನ್ನ ಅದಾಗಲೇ ನೋಡಿರುವವರಿಗೆ 'ಸಂಹಾರ' ಚಿತ್ರದಲ್ಲಿ ಅಷ್ಟು ಥ್ರಿಲ್ಲಿಂಗ್ ಸಿಗಲ್ಲ. ಒಂದ್ವೇಳೆ ನೋಡಿಲ್ಲ ಅಂದ್ರೆ, 'ಸಂಹಾರ' ಉತ್ತಮ ಮನರಂಜನೆ ನೀಡುವುದು ಗ್ಯಾರೆಂಟಿ.

ಸಂಗೀತ ಹೇಗಿದೆ.?

ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಆದ್ದರಿಂದ 'ಸಂಹಾರ' ಚಿತ್ರದಲ್ಲಿ ಹೆಚ್ಚಾಗಿ ಹಾಡುಗಳು ತುರುಕಿಲ್ಲ. ಆದರೂ, ರವಿ ಬಸ್ರೂರ್ ಸಂಗೀತ ಸಂಯೋಜಿಸಿರುವ ಹಾಡುಗಳು ಇಂಪಾಗಿವೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಚಿತ್ರಕಥೆಗೆ ಪೂರಕವಾಗಿದೆ.

ಫೈನಲ್ ಸ್ಟೇಟ್ ಮೆಂಟ್

ರೋಚಕ ಕಥಾಹಂದರ ಹೊಂದಿರುವ 'ಸಂಹಾರ' ಸಿನಿಮಾ ಎಲ್ಲೂ ಬೋರ್ ಹೊಡೆಸುವುದಿಲ್ಲ. ಸಸ್ಪೆನ್ಸ್-ಥಿಲ್ಲರ್ ಚಿತ್ರಗಳನ್ನ ಇಷ್ಟ ಪಡುವವರು 'ಸಂಹಾರ' ಚಿತ್ರವನ್ನ ಆರಾಮಾಗಿ ಒಮ್ಮೆ ನೋಡಬಹುದು.

English summary
Read Chiranjeevi Sarja, Haripriya starrer Kannada Movie 'Samhara' review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada