For Quick Alerts
  ALLOW NOTIFICATIONS  
  For Daily Alerts

  'ಸೈಬರ್ ಯುಗದೊಳ್...ಪ್ರೇಮ ಕಾವ್ಯಂ' ಚಿತ್ರ ವಿಮರ್ಶೆ

  |

  Movie Iamge
  Rating:
  2.5/5
  ಕನ್ನಡದ 'ಸೂಪರ್' ಸ್ಟಾರ್ ಹಾಗೂ ನಿರ್ದೇಶಕ ಉಪೇಂದ್ರರ ಶಿಷ್ಯರಾದ ಮಧುಚಂದ್ರ ನಿರ್ದೇಶನದ 'ಸೈಬರ್ ಯುಗದೋಳ್ ನವಯುವ ಮಧುರ ಪ್ರೇಮ ಕಾವ್ಯಂ' ಎಂಬ ವಿಚಿತ್ರ ಹಾಗೂ ವಿಶಿಷ್ಟ ಶೀರ್ಷಿಕೆಯ ಚಿತ್ರ ಬಿಡುಗಡೆಗೂ ಮೊದಲು ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಕರ್ನಾಟಕದಾದ್ಯಂತ ತೆರೆಯ ಮೇಲೆ ಪ್ರೇಕ್ಷಕರಿಗೆ ದರ್ಶನ ನೀಡುತ್ತಿರುವ ಈ ಚಿತ್ರ, ಮೊದಲು ಮೂಡಿಸಿದ್ದ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿಲ್ಲ. ಆದರೆ, 'ಚಿತ್ರ ನೋಡುವುದು 'ವೇಸ್ಟ್' ಎಂಬಷ್ಟು ನಿರಾಸೆ ಮೂಡಿಸುವಂತೆಯೂ ಇಲ್ಲ.

  ನಿರ್ದೇಶಕ ಮಧುಚಂದ್ರರ ಹೊಸ ಕಲ್ಪನೆ, ಕಾನ್ಸೆಪ್ಟ್ ಚೆನ್ನಾಗಿದ್ದರೂ ಕಥೆ, ಚಿತ್ರಕಥೆಗೆ ಒತ್ತುಕೊಡುವ ಬದಲು ಹೊಸ ರೀತಿಯ ನಿರೂಪಣೆಗೆ ಜೋತುಬಿದ್ದಿರುವುದು ಚಿತ್ರಕ್ಕೆ ಹಿನ್ನಡೆಯಾಗಿದೆ. ಮಾತಿನಲ್ಲಿ ಕಟ್ಟಿರುವ ಮಧುಚಂದ್ರರ ಮಂಟಪ ಮದುವೆ ಮುಗಿಸಿಕೊಂಡು 'ಮಧುಚಂದ್ರ (ಹನಿಮೂನ್)' ಮಾಡಲಾಗದ ಪ್ರೇಮಿಗಳ ಪಾಡಿಗೆ ಹತ್ತಿರವಾಗಿದೆ. ನಿರೂಪಣೆಯ ಹೊಸ ರೀತಿ ಅಲ್ಲಲ್ಲಿ ಚೆನ್ನ, ವಿಭಿನ್ನ. ಆದರೆ ಇಡೀ ಚಿತ್ರ 'ಟೋಟಲ್ ಮಾಲ್' ಆಗದೇ ಪ್ರೇಕ್ಷಕರಿಗೆ ಚಿತ್ರ ನೋಡುತ್ತಿರುವಾಗಲೇ ತಮ್ಮ ಮನೆ ನೆನಪಾದರೆ ಅಚ್ಚರಿಯಿಲ್ಲ.

  ಮಾಮೂಲಿ ಪ್ರೇಮಕಥೆಯ ಚಿತ್ರ ಎನ್ನುವಂತಿಲ್ಲದೇ ಸೈಬರ್ ಯುಗ, ಸಾಮಾಜಿಕ ತಾಣಗಳ ಈ ಕಾಲದಲ್ಲಿ ಹೊಸ ರೀತಿಯ ಪ್ರೇಮ ಕಥೆ, ವ್ಯಥೆಗೆ ಹಿಡಿದ ಕನ್ನಡಿಯಾಗಿ ಈ ಚಿತ್ರ ಮನಸೆಳೆಯಬಹುದಿತ್ತು. ಆದರೆ, ಇಂಥ ಹೊಸ 'ಸೂಪರ್' ಕಲ್ಪನೆ, ಕಾನ್ಸೆಪ್ಟ್ ಗಳಿಗೆ ಬೇಕಾದ ಪೂರ್ವ ಸಿದ್ಧತೆ ಕೊರತೆಯೋ ಅಥವಾ ಅತಿಯಾದ ಆತ್ಮವಿಶ್ವಾಸವೋ, ಎರಡರಲ್ಲೊಂದು ನಿರ್ದೇಶಕರಿಗೆ ಕೈಕೊಟ್ಟಿದೆ. ಸಮಾಜ ಹಾಗೂ ಕನ್ನಡ ಪ್ರೇಕ್ಷಕರ ಸದ್ಯಕ್ಕೆ ಇರುವ ಮನಸ್ಥಿತಿ ಹಾಗೂ ಬದಲಾಗಬಹುದಾದ ಮನಸ್ಥಿತಿಗಳ ಮಧ್ಯೆಯ ಸಾಧ್ಯತೆಯನ್ನು ಅಳೆಯುವ 'ಸೂಕ್ತ ಮಾಪಕ' ನಿರ್ದೇಶಕರ ಕೈಗೆ ಸಿಕ್ಕಿಲ್ಲ.

  'ಮದುವೆ ನಂತರ ಜಗಳವಾಡಿಕೊಂಡು ಬೇರೆಬೇರೆಯಾಗುವ ಬದಲು ಅದಕ್ಕೂ ಮೊದಲೇ ಸ್ಪಲ್ಪಕಾಲ 'ಲಿವಿಂಗ್ ಟುಗೇದರ್ (ಲವಿಂಗ್ ಟುಗೆದರ್...!) ನಂತೆ ಅಥವಾ ಅದೇ ರೀತಿ ಒಟ್ಟಿಗಿದ್ದು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗಿ ಅನ್ಯೋನ್ಯತೆ ಕಂಡುಬಂದರೆ ಆಮೇಲೆ ಬೇಕೆಂದರೆ ಮದುವೆ ಆಗಬಹುದು, ಮದುವೆ ಆಗದಿದ್ದರೆ ಒಳ್ಳೆಯದು. ಅದಾಗದಿದ್ದರೆ 'ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ' ಎಂಬ ತತ್ವವನ್ನು ನವ ಪ್ರೇಮಿಗಳಿಗೆ ಈ ಚಿತ್ರದ ಕಥೆ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದರು. ಆದರೆ ಪ್ರಯತ್ನವನ್ನು ಫಲಿತಾಂಶಕ್ಕೆ ದಾಟಿಸುವಲ್ಲಿ ನಿರ್ದೇಶಕರು ಸ್ವಲ್ಪ ಎಡವಿದ್ದಾರೆ. ಕಾರಣ, ವಿಷಯವನ್ನು ನೇರ ಹೇಳಲು ಹೋಗಿ ಹಲವು ಪ್ರೇಕ್ಷಕರ ಅಸಹನೆಗೆ ಗುರಿಯಾಗಿದ್ದಾರೆ.

  ತಮ್ಮ ಕಲ್ಪನೆಯೇ (ಅನುಭವ..!) 'ಅಂತಿಮ ಸತ್ಯ' ಎಂಬಂತೆ ಹೇಳಹೊರಟ ನಿರ್ದೆಶಕರ ನಿರೂಪಣೆ ಧಾಟಿ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವುದು ಕಷ್ಟ. ಜಪಾನ್ ಹಾಗೂ ಅಮೆರಿಕಾಕ್ಕೆ ಹೋಗಿ ವಾಪಸ್ ಬಂದು ಸ್ನಾನಮಾಡಿ ಸೀದಾ ದೇವರ ಕೋಣೆ ಸೇರಿಕೊಳ್ಳುವ ಮಂದಿಯೇ ಹೆಚ್ಚಾಗಿರುವ ಇಂದಿನ ಪ್ರೇಕ್ಷಕವರ್ಗದಲ್ಲಿ ಈ ಚಿತ್ರವನ್ನು ಇಷ್ಟಪಡುವ ಬೆರಳೆಣಿಕೆ ಮಂದಿಯನ್ನು ನಂಬಿ ಸಿನಿಮಾ ಮಾಡಿದರೆ ಗತಿಯೇನು? ತಮಾಷೆಯಾಗಿಯೋ ಅಥವಾ 'ಕನಸು' ಎಂಬಂತೆ ಚಿತ್ರಿಸಿ ನಂತರ ವಾಸ್ತವವನ್ನು ಮನದಟ್ಟಾಗಿಸಿ ಸಿನಿಮಾಗೆ ಮಂಗಳ ಹಾಡಿದ್ದರೆ ಪ್ರೇಕ್ಷಕರು 'ಜೈ' ಎಂದುಬಿಡುತ್ತಿದ್ದರೇನೋ!

  ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ: ನಾಯಕ ಗುರುನಂದನ್ ನಟನೆ ಚೆನ್ನಾಗಿದೆ. ಆದರೆ ಗಣೇಶ್ ಹಾಗೂ ದಿಗಂತ್ ಅವರ 'ಆಪ್ತಮಿತ್ರ'ರೇನೋ ಎಂಬಷ್ಟು ಅವರಿಬ್ಬರ ಪ್ರಭಾವ ಅವರ ನಟನೆಯಲ್ಲಿ ಚಿತ್ರದ ತುಂಬಾ ಎದ್ದು ಕಾಣಿಸುತ್ತದೆ. ಇದನ್ನು ನಿರ್ದೇಶಕರ ಮೇಲಾಗಿರುವ ಅವರಿಬ್ಬರ ಪ್ರಭಾವ ನಾಯಕ ನಟ ಗುರುನಂದನ್ ರೂಪದಲ್ಲಿ ಮೂಡಿ ಬಂದಿದೆ ಎನ್ನಲೂಬಹುದೇನೋ!. ಹೇಳಿಕೊಟ್ಟಷ್ಟು ಮಾಡಿದಂತೆ ನಾಯಕಿ ಶ್ವೇತಾ ಶ್ರೀವಾಸ್ತವ್ ನಟನೆ ಮೂಡಿಬಂದಿದ್ದು 'ನಿರ್ದೇಶಕರ ನಟಿ' ಎನ್ನಿಸಿ ಸ್ವಲ್ಪ ಭರವಸೆ ಮೂಡಿಸಿದ್ದಾರೆ.

  ಇನ್ನು ಪೋಷಕ ಪಾತ್ರಗಳಲ್ಲಿ ನಟಿಸಿರುವ ಸುಂದರ್, ವೀಣಾ ಸುಂದರ್, ಶರತ್ ಲೋಹಿತಾಶ್ವ ಮುಂತಾದವರ ನಟನೆ ಓಕೆ. ತಾಂತ್ರಿಕ ವರ್ಗದಲ್ಲಿ, ವಾಸು ದೀಕ್ಷಿತ್ ಹಾಗೂ ಅಭಿಲಾಷ್ ಲಾಕ್ರ ಸಂಗೀತದಲ್ಲಿ ಮೂಡಿಬಂದಿರುವ ಎರಡು ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುವಂತಿದೆ. ಮನೋಹರ್ ಜೋಶಿ ಕ್ಯಾಮರಾ ಕೈಚಳಕ ಹಾಡುಗಳಲ್ಲಿ 'ಗುಡ್', ದೃಶ್ಯಗಳಲ್ಲಿ 'ನಾಟ್ ಬ್ಯಾಡ್'. ಮಿಕ್ಕಂತೆ ಚಿತ್ರದಲ್ಲಿ ಭರವಸೆ ಮೂಡಿಸುವಂತದ್ದು ಪ್ರೇಕ್ಷಕರು ಸಿಗುವುದು ಕಡಿಮೆ.

  ಒಟ್ಟಿನಲ್ಲಿ, 'ಲವ್ ಮಾಡಿರುವವರಿಗೆ, ಲವ್ ಮಾಡದೇ ಇರುವವರಿಗೆ, ಮದುವೆ ಆಗಿರುವವರಿಗೆ, ಮದುವೆ ಆಗದಿರುವವರಿಗೆ... ಎಲ್ಲರ ತಲೆಗೂ ಹುಳ ಬಿಡುತ್ತಿರುವ ಸಿನಿಮಾ' ಎಂಬ 'ತಲೆಬರಹ' ಹೊತ್ತ ಚಿತ್ರದ ಜಾಹೀರಾತನ್ನು ಸ್ವಲ್ಪ ಬದಲಾಯಿಸಿ 'ಹುಳ' ಎನ್ನುವ ಬದಲು 'ಜೇನು ಹುಳ (ಜೇನು ನೊಣ)' ಎನ್ನಬಹುದು. ಜೇನಿಗಾಗಿ ಹೋದ ಪ್ರೇಕ್ಷಕರಿಗೆ 'ಸವಿಯಾದ ಜೇನುತುಪ್ಪದ ಜೊತೆ ಕಚ್ಚುವ ಜೇನು ಹುಳವೂ ಸೇರಿಕೊಂಡಂತೆ ಇರುವ ಮಿಶ್ರಣ'ವನ್ನು ಸವಿಯಬೇಕಾದ ಅನಿವಾರ್ಯತೆಯ ಪಾಡನ್ನು 'ಏನೆಂದು ಹೆಸರಿಡಲಿ...' ಎಂದು ಹಾಡಬೇಕಷ್ಟೇ!

  'ತಮ್ಮ ಗುರು ಉಪೇಂದ್ರರ ಯಾವ ಚಿತ್ರವೂ ಇಲ್ಲದ ವೇಳೆಯಲ್ಲಿ ಬಿಡುಗಡೆ ಮಾಡಿ ಒಂದು ವಾರದ ನಂತರ ಬಿಡುಗಡೆಯಾಗಲಿರುವ ಅವರ 'ಕಲ್ಪನಾ' ಚಿತ್ರಕ್ಕೆ ಸ್ವಲ್ಪವೂ ತೊಂದರೆಯಾಗದಂತೆ ಒಂದೇ ವಾರದ ಚಿತ್ರವನ್ನು ನೀಡಲು ಮೊದಲೇ ನಿರ್ಧರಿಸಿದ್ದರೇ ಮಧುಚಂದ್ರ?' ಎಂಬ ಪ್ರಶ್ನೆ ಪ್ರೇಕ್ಷಕವಲಯದಲ್ಲಿ ಕೇಳಿಬರುತ್ತಿದೆ. ಅದಕ್ಕೆ, 'ಹೀಗೂ ಉಂಟೇ..?' ಎಂಬ ಉತ್ತರವೇ ಗತಿ!. 'ಶಿವ್ ಶಶಿ' ಸಹ ನಿರ್ದೇಶನ ಹಾಗೂ 'ಅಶ್ವಿನ್ ವಿಜಯಕುಮಾರ್' ನಿರ್ಮಾಣದ ಈ ಚಿತ್ರಕ್ಕೆ ಪ್ರೇಕ್ಷಕರು 'ಮುಂದಿನ ಸಾರಿ ಇನ್ನೂ ಒಳ್ಳೆಯ ಚಿತ್ರ ಕೊಡಿ' ಎನ್ನುತ್ತಿದ್ದಾರೆ' ಎಂಬ ಮಾತು ಗಾಂಧಿನಗರದ ಗಲ್ಲಿಯಲ್ಲಿ ಕೇಳಿಬರುತ್ತಿದೆ. ಅಂತೂ 'ಸೈಬರ್ ಯುಗದೋಳ್ ನವಯುವ ಮಧುರ ಪ್ರೇಮ ಕಾವ್ಯಂ' ಚಿತ್ರಕ್ಕೆ 'ಜೈ' ಎಂದು ಜೋರಾಗಿ ಕೂಗಬೇಕಿದ್ದ 'ಸೈಬರ್ ಪ್ರೇಮಿ'ಗಳ ಧ್ವನಿ ಯಾಕೋ ಜೋರಾಗಿ ಕೇಳಿಬರುತ್ತಿಲ್ಲ..!

  English summary
  Kannada Movie Cyber Yugadol Navayuva Madhura Premakaavyam is Screening all over Karnataka. Newcomer Madhuchandra Directed this movie for Ashwin Vijayakumar Production. Gurunandan and Shwetha Srivastav are in Lead Role. Read the Review for more...
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X