For Quick Alerts
  ALLOW NOTIFICATIONS  
  For Daily Alerts

  ಪೂಜಾ ಗಾಂಧಿ ಅಮೋಘ ಅಭಿನಯದ 'ದಂಡ'ಪಾಳ್ಯ

  By * ಶ್ರೀರಾಮ್ ಭಟ್
  |

  ಸ್ಯಾಂಡಲ್ ವುಡ್ ಪ್ರೇಕ್ಷಕರಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿದ್ದ 'ದಂಡುಪಾಳ್ಯ' ಚಿತ್ರ ನಿರೀಕ್ಷೆ ತಲುಪುವಲ್ಲಿ ಸಂಪೂರ್ಣ ಸಫಲವಾಗಿಲ್ಲ. 'ರಿಯಲ್' ಕಥೆಯೊಂದನ್ನು 'ರೀಲ್' ಮೂಲಕ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡವಂತೆ ಮಾಡುವಲ್ಲಿ ನಿರ್ದೇಶಕ ಶ್ರೀನಿವಾಸ್ ರಾಜು ಪ್ರಯತ್ನಿಸಿದ್ದರೂ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. 'ಸಂಗಾತಿ', 'ಕೋಟೆ' ಹಾಗೂ 'ನನ್ನವನು' ಚಿತ್ರ ಮಾಡಿ ನಿರ್ದೇಶನದ ಅನುಭವವಿದ್ದರೂ ಸತ್ಯಕಥೆಯೊಂದನ್ನು ತೆರೆಗೆ ತರುವಲ್ಲಿ ಅವರ ಅನುಭವ ಸಾಥ್ ನೀಡಿಲ್ಲ.

  ಮೊದಲನೆಯದಾಗಿ, ನಿರ್ದೇಶಕ ಶ್ರೀನಿವಾಸ್ ರಾಜು ತುಂಬಾ ಮಂದಿಗೆ ಗೊತ್ತಿದ್ದ, ನಡೆದ ಘಟನೆಯೊಂದನ್ನು ಚಿತ್ರ ಮಾಡುವಾಗ ಮಾಡಲೇಬೇಕಾದ 'ಸ್ಟಡಿ' ಮಾಡಿಕೊಂಡಿಲ್ಲ. ಪೂರ್ವ ತಯಾರಿ ಕೊರತೆ ಹಾಗೂ ಘಟನೆ ಸಂಪೂರ್ಣ ವಿವರವನ್ನು ಕಲೆಹಾಕುವಲ್ಲಿ ಅವರು ಸಂಪೂರ್ಣ ಸೋತಿದ್ದಾರೆ (ಮರೆತಿದ್ದಾರೆ!) ಎಂಬುದು ಚಿತ್ರಕಥೆಯಲ್ಲೇ ಪ್ರೇಕ್ಷಕರ ಗಮನಕ್ಕೆ ಬರುತ್ತದೆ. ಚಿತ್ರಕಥೆಯಲ್ಲಿ ಸೋತಿದ್ದಲ್ಲದೇ ನಿರೂಪಣೆಯೂ ಹಿಡಿತ ತಪ್ಪಿದೆ. ದಂಡುಪಾಳ್ಯ ಚಿತ್ರ, ಪೂಜಾ ಗಾಂಧಿ ಅಮೋಘ ಅಭಿನಯದ 'ದಂಡ'ಪಾಳ್ಯವಾಗಿದೆ.

  ಭೀಕರ ಕೊಲೆ ಮಾಡಿರುವ ಕಾರಣಕ್ಕೇ ಅವರನ್ನು 'ದಂಡುಪಾಳ್ಯದ ಕೊಲೆಗಡುಕರು', 'ದಂಡುಪಾಳ್ಯದ ನಟೋರಿಯಸ್ ಗ್ಯಾಂಗ್'ಎಂದು ಕರೆದಿರುವುದು ಹಾಗೂ ಅವರು ಕುಖ್ಯಾತಿ ಗಳಿಸಿರುವುದು. ಅದನ್ನು ತೋರಿಸುವುದರ ಜೊತೆಗೆ ಅವರ ಹಿನ್ನೆಲೆ ಹಾಗೂ ಕೊಲೆಯ ಪ್ಲಾನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳ ಅಗತ್ಯವಿತ್ತು ಎನ್ನಿಸುತ್ತದೆ. 90ರ ದಶಕದಲ್ಲಿ ಅವರು ಮಾಡಿರುವ 82 ಕೊಲೆಗಳು, 300ಕ್ಕೂ ಹೆಚ್ಚು ದರೋಡೆಗಳು ಹಾಗೂ ಲೆಕ್ಕವಿಲ್ಲದಷ್ಟು ಕಳ್ಳತನಗಳ ಹಿಂದಿದ್ದ 'ಕಾಣದ ಕೈ' ಬಗ್ಗೆ ಸರಿಯಾದ ಮಾಹಿತಿಯ ಅಗತ್ಯವಿತ್ತು.

  ಚಿತ್ರದಲ್ಲಿ 'ಎಂಎಲ್ ಎ' ಒಬ್ಬರ ಕುಟುಂಬದ ಕೊಲೆಗೆ ಸ್ಕೆಚ್ ಹಾಕಿದ್ದನ್ನು ಹಾಗೂ ಆ ಕುಟುಂಬದಲ್ಲಿ ಎರಡು ತಲೆಗಳು ಉರುಳಿದ್ದನ್ನು ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಹೊರಗೆಡಹುವ ನಿರ್ದೇಶಕರು ಆ ಘಟನೆಯ ನೈಜಚಿತ್ರಣವನ್ನು (ಉದ್ದೇಶಪೂರ್ವಕವಾಗಿ...?) ಬಿಚ್ಚಿಡುವ ಬದಲು ಬಚ್ಚಿಟ್ಟಿದ್ದು ಯಾಕೆಂಬುದನ್ನು ಅವರೇ ಹೇಳಬೇಕು. ಸತ್ಯ ಘಟನೆಯಾಧಾರಿತ ಚಿತ್ರವೆಂಬ ಹಣೆಪಟ್ಟಿ ಹೊತ್ತ ಈ ಚಿತ್ರದಲ್ಲಿ ಕಲ್ಪನೆಯ ಕಥೆಯಂತೆ ಅಲ್ಲಲ್ಲಿ ಉಹಾಪೋಹಕ್ಕೆ ಮೊರೆಹೋಗಬೇಕಾಗುವುದು ದುರಂತವೇ ಸರಿ!

  ಚಿತ್ರಕಥೆ ಹಾಗೂ ನಿರೂಪಣೆ ಸೊರಗಿದಂತೆ ಕಂಡುಬಂದರೂ ಚಿತ್ರದಲ್ಲಿ ನಟ-ನಟಿಯರನ್ನು ಹಾಗೂ ತಂತ್ರಜ್ಞರನ್ನು ಬಳಸಿಕೊಂಡ ರೀತಿ ತುಂಬಾ ಚೆನ್ನಾಗಿದೆ. ಅದಕ್ಕೆ ನಿರ್ದೇಶಕ ಶ್ರೀನಿವಾಸ್ ರಾಜುರನ್ನು ಮೆಚ್ಚಲೇಬೇಕು. ನಿರೂಪಣೆ ಅಲ್ಲಲ್ಲಿ ಹಾದಿತಪ್ಪಿರುವುದರಿಂದ ಪ್ರೇಕ್ಷಕರಿಗೆ ಬೋರಾಗುವಂತಿದೆ ಅಷ್ಟೇ. ಮುಂದಾಗುವ ಘಟನೆ ಪ್ರೇಕ್ಷಕರಿಗೆ ಮೊದಲೇ ತಿಳಿಯುತ್ತಾ ಹೋಗುವುದರಿಂದ ಚಿತ್ರವನ್ನು ಕುತೂಹಲದಿಂದ ಮುಂದೆ ನೋಡುವ ಆಸಕ್ತಿ ಪ್ರೇಕ್ಷಕರ ಪಾಲಿಗೆ ಇಲ್ಲವಾಗಿದೆ. ಕೆಲವೊಂದು ದೃಶ್ಯಗಳನ್ನು 'ಫ್ಲಾಶ್ ಬ್ಯಾಕ್' ರೀತಿಯಲ್ಲಿ ನಿರೂಪಿಸಿ ಸ್ವಲ್ಪ ರಹಸ್ಯ ಕಾಯ್ದುಕೊಳ್ಳಬಹುದಿತ್ತು.

  ನೈಜ ಘಟನೆಯೊಂದನ್ನು ಕಥೆಯ ರೂಪದಲ್ಲಿ ಕಟ್ಟಿಕೊಟ್ಟು, ಉತ್ತಮ ಚಿತ್ರಕಥೆ ಹಾಗೂ ನಿರೂಪಣೆಯ ಮೂಲಕ 'ಸೂಪರ್ ಹಿಟ್' ಸಿನಿಮಾವೊಂದನ್ನು ಪ್ರೇಕ್ಷಕರ ಮುಂದೆ ಇಡಬಹುದಾಗಿದ್ದ ಅವಕಾಶವನ್ನು ಸ್ವತಃ ಕಳೆದುಕೊಂಡಿದ್ದಾರೆ ನಿರ್ದೇಶಕ ಶ್ರೀನಿವಾಸ್ ರಾಜು. ಹರಿದ ಸೂತ್ರದಲ್ಲಿ ಎಲ್ಲೆಲ್ಲೋ ಹಾರಾಡುವ ಗಾಳಿಪಟವಾಗಿ ಗೋಚರಿಸುತ್ತದೆ ದಂಡುಪಾಳ್ಯ ಚಿತ್ರ. ಚಿತ್ರದ ಕೊನೆಯಲ್ಲಿ, ಈ ಚಿತ್ರದ ಮುಂದುವರಿದ ಭಾಗ 'ದಂಡುಪಾಳ್ಯ-2' ಬರಲಿದೆ ಎಂಬಲ್ಲಿಗೆ ಈ ಚಿತ್ರಕ್ಕೆ ಫುಲ್ ಸ್ಟಾಪ್ ನೀಡಿದ್ದಾರೆ ನಿರ್ದೇಶಕರು.

  ನಿರೀಕ್ಷೆಯನ್ನು ಮುಟ್ಟುವಲ್ಲಿ ಚಿತ್ರ ವಿಫಲವಾಗಿದ್ದರೂ ಮುಖ್ಯ ಪಾತ್ರಧಾರಿಗಳಲ್ಲೊಬ್ಬರಾಗಿ ನಟಿಸಿರುವ ನಟಿ ಪೂಜಾ ಗಾಂಧಿ ನಿರೀಕ್ಷೆ ಮೀರಿ ಚೆನ್ನಾಗಿ ಅಭಿನಯಿಸಿದ್ದಾರೆ. ಅವರು ನಿಂತುಕೊಳ್ಳುವ, ನಡೆಯುವ, ಕುಳಿತುಕೊಳ್ಳುವ ರೀತಿ, ಪ್ರತಿಯೊಂದು ಹಾವ-ಭಾವ, ಬೀಡಿ ಸೇದುವ, ಸೀರೆ ಧರಿಸಿರುವ ಜೊತೆಗೆ ಸೈಡಿಗೆ ಸರಿಸುವ ಸ್ಟೈಲ್ ಕೂಡ ಅಮೋಘವಾಗಿದೆ. 'ಘಾಟಿ' ಹೆಂಗಸೊಬ್ಬಳ ಪಾತ್ರದಲ್ಲಿ ಪೂಜಾ ನಟನೆ ಬೆಚ್ಚಬೀಳಿಸುವಂತಿದೆ, ಅಚ್ಚರಿಮೂಡಿಸುವಂತಿದೆ. ಈ ನಟಿ ಮಳೆಯ ಹುಡುಗಿ ಪೂಜಾ ಗಾಂಧಿ ಹೌದೇ ಎಂದು ಸಂಶಯ ಮೂಡುವಂತೆ ಪ್ರತಿ ದೃಶ್ಯದಲ್ಲಿ ಪರಿಪೂರ್ಣವಾಗಿ ಮಿಂಚಿದ್ದಾರೆ.

  ಈ ಚಿತ್ರದಲ್ಲಿ ಪೂಜಾ ಗಾಂಧಿಯ ಪಾತ್ರ 'ಲಕ್ಷ್ಮಿ'ಗೆ ಗಂಡನಾಗಿ ನಟಿಸಿರುವ ಮಕರಂದ್ ದೇಶಪಾಂಡೆ (ಬಾಲಿವುಡ್ ಚಿತ್ರ 'ಸ್ವದೇಸ್' ನಲ್ಲಿ ಶಾರುಖ್ ಖಾನ್ ಅವರೊಂದಿಗೆ ನಟಿಸಿದ್ದ ನಟ) ತಕ್ಕಮಟ್ಟಿಗೆ ಪೂಜಾ ಗಾಂಧಿಯ ಅಭಿನಯಕ್ಕೆ ಸ್ಪರ್ಧೆ ನೀಡಿದ್ದಾರೆ. ಉಳಿದಂತೆ, ದಂಡುಪಾಳ್ಯದ ಗ್ಯಾಂಗ್ ಮೆಂಬರ್ಸ್ ಆಗಿ ನಟಿಸಿರುವ ಕಲಾವಿದರಾದ ಪೆಟ್ರೋಲ್ ಪ್ರಸನ್ನ, ರವಿ ಕಾಳೆ, ಮುನಿ, ಶಿವಕುಮಾರ್, ಯತಿರಾಜ್, ಕರಿಸುಬ್ಬು, ಜಯದೇವ್ ಮುಂತಾದವರೆಲ್ಲರ ನಟನೆ ಮೆಚ್ಚುವಂತಿದೆ. ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ರವಿಶಂಕರ್ ನಟನೆ ಚೆನ್ನಾಗಿದೆ. ರಘು ಮುಖರ್ಜಿ, ಪ್ರಿಯಾಂಕಾ ಕೊಠಾರಿ ಜೋಡಿಗೆ ಚಿತ್ರದಲ್ಲಿ ಹೆಚ್ಚಿನ ಸ್ಕೋಪ್ ಇಲ್ಲ, ನಟನೆ ಪರವಾಗಿಲ್ಲ.

  ಪೋಷಕ ವರ್ಗದಲ್ಲಿ ನಟಿಸಿರುವ ಸುಧಾರಾಣಿ, ಭವ್ಯಾ, ಬುಲೆಟ್ ಪ್ರಕಾಶ್, ತಬಲಾ ನಾಣಿ, ಶ್ರೀನಿವಾಸ್ ಮೂರ್ತಿ, ದೊಡ್ಡಣ್ಣ, ಎಲ್ಲರ ಅಭಿನಯ ಅವರವರ ಪಾತ್ರಕ್ಕೆ ತಕ್ಕಂತಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಮೂಡಿಬಂದಿರುವ ಎರಡು ಹಾಡುಗಳು ಓಕೆ. ಚಿತ್ರದ ಸಂಗೀತವೂ ಪರವಾಗಿಲ್ಲ. ವೆಂಕಟ್ ಪ್ರಸಾದ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ, ಎಸ್ ಮನೋಹರ್ ಸಂಕಲನ ಚಿತ್ರಕ್ಕೆ ಪೂರಕವಾಗಿದೆ.

  ಒಟ್ಟಿನಲ್ಲಿ, ಪ್ರಶಾಂತ್ ಜಿ ಆರ್ ಹಾಗೂ ಗಿರೀಶ್ ಟಿ ನಿರ್ಮಾಣದ 'ದಂಡುಪಾಳ್ಯ ಚಿತ್ರವು ಪ್ರೇಕ್ಷಕರ ನಿರೀಕ್ಷೆಗೆ ನಿರಾಸೆ ಮೂಡಿಸುವಂತಿದೆ. ಚಿತ್ರದ ರೂವಾರಿ ಶ್ರೀನಿವಾಸ್ ರಾಜು ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ಬ್ಯಾಲೆನ್ಸ್ ಮಾಡಲಾಗದೇ ಸೋತು ಕೈಚೆಲ್ಲಿರುವುದರಿಂದ, ಚಿತ್ರವು ಚೆಲ್ಲಾಪಿಲ್ಲಿಯಾದ ದೃಶ್ಯಗಳು ತೆರೆಯಲ್ಲಿ ಓಡಾಡಿದಂತೆ ಭಾಸವಾಗುತ್ತದೆ. ಒಂದು ಒಳ್ಳೆಯ ಚಿತ್ರವಾಗಬಹುದಾಗಿದ್ದ ನೈಜಘಟನೆಯ ಆಧಾರಿತವಾದ 'ದಂಡುಪಾಳ್ಯ', ಈಗಾಗಲೇ ಬಂದುಹೋದ ಹತ್ತರಂತೆ 'ಹನ್ನೊಂದು' ಎಂಬಂತಾಗಿದೆ.

  English summary
  Most sensation created movie 'Dandupalya' review. Srinivas Raju directed in this movie, actress Pooja Gandhi is in lead role. This movie created lots of expectations and curiosity in Sandalwood audience. But, the director Srinivas Raju didn't fulfilled the expectations of the audience. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X