For Quick Alerts
  ALLOW NOTIFICATIONS  
  For Daily Alerts

  Atrangi Re Movie Review: ಅಬ್ಬಾ! ಎನಿಸುವ ಭಿನ್ನ 'ತ್ರಿಕೋನ' ಪ್ರೇಮಕತೆ

  |

  ತೆರೆಯ ಮೇಲೆ ಸಾಧಾರಣವಾದ, ಸಾಮಾನ್ಯವಾದ ಕತೆಯೊಂದನ್ನು ನೋಡುತ್ತಿದ್ದೇವೆ ಎಂದು ಪ್ರೇಕ್ಷಕ ಮನಸಲ್ಲೇ ನಿರ್ದೇಶಕನಿಗೆ ಬೈದುಕೊಳ್ಳುತ್ತಿರುವಂತೆಯೇ ಕತೆಯಲ್ಲಿ ಬರುವ ಟ್ವಿಸ್ಟ್ ಅದಕ್ಕೆ ತಕ್ಕಂತೆ ಸುಂದರ ಕ್ಲೈಮ್ಯಾಕ್ಸ್‌ ನೋಡಿ ಅದೇ ನಿರ್ದೇಶಕನ ಸೃಜನಶೀಲತೆಗೆ, ಔಟ್‌ ಆಫ್‌ ದಿ ಬಾಕ್ಸ್ ಯೋಚನೆಗೆ ಚಪ್ಪಾಳೆ ತಟ್ಟದೇ ಇರಲಾರ ಪ್ರೇಕ್ಷಕ.

  ಹಿಂದಿಯ 'ಅತರಂಗಿ ರೇ' ಸಿನಿಮಾದ ಆರಂಭವನ್ನು ಬೇಕೆಂದೇ ಸಾಮಾನ್ಯಗೊಳಿಸಿ, ಇದೇನೂ ಹೊಸದಲ್ಲವಲ್ಲ ಎಂದುಕೊಳ್ಳುವಂತೆ ಮಾಡಿ ಆ ನಂತರ ಒಂದು ದೊಡ್ಡ ಟ್ವಿಸ್ಟ್‌ಗೆ ಪ್ರೇಕ್ಷಕನ್ನು ತಯಾರು ಮಾಡುತ್ತಾರೆ ನಿರ್ದೇಶಕ ಆನಂದ್ ಎಲ್ ರಾಯ್. ಸಿನಿಮಾ ಮುಗಿದ ಮೇ, 'ಓಹ್ ಆ ದೃಶ್ಯಕ್ಕೆ ಕಾರಣ ಇದು, ಈ ದೃಶ್ಯಕ್ಕೆ ಪೂರಕವಾಗಿ ಆ ದೃಶ್ಯ ಹೆಣೆಯಲಾಗಿದೆ' ಎಂದು ಪ್ರೇಕ್ಷಕ ಯೋಚಿಸಿ ನಿರ್ದೇಶಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ. ಇದು ನಿರ್ದೇಶಕ ಆನಂದ್ ಎಲ್ ರಾಯ್ ಗೆಲುವು.

  'ಅತರಂಗಿ ರೇ' ಸಿನಿಮಾ ಪ್ರಾರಂಭವಾಗುವುದು ಬಿಹಾರದಲ್ಲಿ. ನಾಯಕಿ ರಿಂಕು ಮನೆಯಿಂದ ಓಡಿಹೋಗುತ್ತಿದ್ದಾಳೆ ಅದು ಆಕೆಗೆ ಅಭ್ಯಾಸ. ತಾನು ಪ್ರೀತಿಸಿದವನ ಜೊತೆ ಸೇರಲು ಈಗಾಗಲೇ ಹಲವಾರು ಬಾರಿ ಮನೆಯಿಂದ ಓಡಿಹೋಗಿದ್ದಾಳೆ. ಕೊನೆಗೆ ಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಆಕೆಗೆ ಯಾರೊ ಯುವಕನೊಬ್ಬನ್ನನ್ನು ಅಪಹರಿಸಿ ತಂದು ವಿವಾಹ ಮಾಡಲಾಗುತ್ತದೆ. ಆ ಯುವಕನೇ ಧನುಶ್. ಇಬ್ಬರಿಗೂ ಮದುವೆ ಬೇಡ. ಇಬ್ಬರಿಗೂ ತಮ್ಮದೇ ಆದ ಪ್ರೇಮಿಗಳಿದ್ದಾರೆ. ಹಾಗಾಗಿ ಇಬ್ಬರೂ ಪರಸ್ಪರ ಬೇರಾಗಲು ನಿರ್ಣಯಿಸಿ ಬಿಹಾರದಿಂದ ದೆಹಲಿಗೆ ಬಂದಿಳಿಯುತ್ತಾರೆ ಆದರೆ ಆಗುವುದೇ ಬೇರೆ.

  ಶಾಕ್ ಕೊಡುತ್ತಾರೆ ನಿರ್ದೇಶಕ

  ಶಾಕ್ ಕೊಡುತ್ತಾರೆ ನಿರ್ದೇಶಕ

  ಸಿನಿಮಾದಲ್ಲಿ ಸಾರಾ ಅಲಿ ಖಾನ್ ಪ್ರೇಮಿಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಅಕ್ಷಯ್ ಕುಮಾರ್‌ ಆನೆಯ ಮೇಲೆ ಎಂಟ್ರಿ ಕೊಡುತ್ತಾರೆ! ಜಾದೂಗಾರನ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ತನ್ನ ಮೈಯನ್ನೆಲ್ಲ ಬೆಂಕಿಯಿಂದ ಸುಟ್ಟುಕೊಂಡು ಜಾದೂ ಮಾಡುವುದರಲ್ಲಿ ಪ್ರವೀಣ. ಖಾಲಿ ಸ್ಲೇಟ್‌ನಿಂದ ಪಾರಿವಾಳಗಳನ್ನು ಹಾರಿ ಬಿಡುತ್ತಾರೆ ಸಾಮಾನ್ಯ ಪ್ರೇಕ್ಷಕನಿಗೂ 'ಯಾಕೊ ಇದೆಲ್ಲ ಅತಿಯಾಯಿತು' ಎನಿಸುತ್ತದೆ. ಅದರಲ್ಲೂ ಸಾರಾ ಅಲಿ ಖಾನ್ ಹಾಗೂ ಅಕ್ಷಯ್ ಕುಮಾರ್‌ ನಡುವಿನ ವಯಸ್ಸಿನ ಅಂತರ 28 ವರ್ಷ. ಆದರೆ ಇವರಿಬ್ಬರ ನಡುವೆ ಪ್ರೇಮ ಹೇಗೆ ಸಾಧ್ಯ ಅದರಲ್ಲೂ ಅವರಿಬ್ಬರ ಧರ್ಮವೂ ಬೇರೆ-ಬೇರೆ ಎಂದೆಲ್ಲ ಪ್ರಶ್ನೆಗಳು ಏಳುತ್ತವೆ. ಒಬ್ಬನನ್ನು ಹದಿನೈದು ವರ್ಷದಿಂದ ಪ್ರೀತಿಸುತ್ತಿದ್ದೇನೆ ಎನ್ನುವ ಸಾರಾ ಪಾತ್ರ ರಿಂಕು ಏಕೆ ಧನುಶ್‌ ಅಲಿಯಾಸ್ ವಿಸುವನ್ನು ಕೆಣಕುತ್ತಿದ್ದಾಳೆ ಎನಿಸಿ ರಿಂಕುವಿನ ವ್ಯಕ್ತಿತ್ವದ ಮೇಲೂ ಅನುಮಾನ ಮೂಡುತ್ತದೆ. ಆದರೆ ಇವಕ್ಕೆಲ್ಲ ದ್ವೀತೀಯಾರ್ಧದಲ್ಲಿ ಅದ್ಭುತ 'ಜಸ್ಟಿಫಿಕೇಶನ್' ನೀಡಿ ಪ್ರೇಕ್ಷಕ ನಿರೀಕ್ಷೆ ಮಾಡದ ಶಾಕ್ ಒಂದನ್ನು ನೀಡುತ್ತಾರೆ ನಿರ್ದೇಶಕ ಆನಂದ್.

  ಕೊರತೆಯನ್ನು ಮರೆಸುವ ಟ್ವಿಸ್ಟ್‌ಗಳು

  ಕೊರತೆಯನ್ನು ಮರೆಸುವ ಟ್ವಿಸ್ಟ್‌ಗಳು

  ಸಿನಿಮಾದಲ್ಲಿ ಕೊರತೆ ಇಲ್ಲವೆಂದೇನೂ ಇಲ್ಲ. ಧನುಶ್‌ಗೆ ಸಾರಾ ಪಾತ್ರದ ಮೇಲೆ ಬಹಳ ಬೇಗ ಪ್ರೀತಿ ಮೂಡುತ್ತದೆ ಅದಕ್ಕೆ ಬಲವಾದ ಕಾರಣವೇ ಇಲ್ಲ. ಬಲವಂತದ ಮದುವೆಯಾಗಿ ದೆಹಲಿಗೆ ಬಂದ, ಡಾಕ್ಟರ್ ಕಲಿಯುತ್ತಿರುವ ವಿದ್ಯಾವಂತ ಧನುಶ್ ಅಲಿಯಾಸ್ ವಿಸು ಪೊಲೀಸರ ಬಳಿ ಏಕೆ ತೆರಳಲಿಲ್ಲ? ತಾನೊಬ್ಬ ಮನೋಶಾಸ್ತ್ರಜ್ಞ ಎಂದು ಪದೇ ಪದೇ ಹೇಳಿಕೊಳ್ಳುವ ವಿಸುವಿನ ಗೆಳೆಯ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಲು ಪದೇ-ಪದೇ ವಿಫಲನಾಗುವುದು ಏಕೆ? ಇಂತಹಾ ಲಾಜಿಕಲ್ ಪ್ರಶ್ನೆಗಳನ್ನು ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಕೇಳಬಹುದು. ಆದರೆ ಈ ತಪ್ಪುಗಳನ್ನು ಕ್ಷಮಿಸಿಬಿಡುವಂತೆ ಮಾಡುತ್ತದೆ ನಿರ್ದೇಶಕ ದ್ವಿತೀಯಾರ್ಧದಲ್ಲಿ ನೀಡಿರುವ ಟ್ವಿಸ್ಟ್‌ಗಳು.

  ಸಾರಾಳ ಪ್ರತಿಭೆ ಮೀರಿದ ಪಾತ್ರ

  ಸಾರಾಳ ಪ್ರತಿಭೆ ಮೀರಿದ ಪಾತ್ರ

  ಸಿನಿಮಾದ ಮತ್ತೊಂದು ಪ್ರಮುಖ ಕೊರತೆ ಸಾರಾ ಅಲಿ ಖಾನ್. ಅವರ ಅಭಿನಯ ಪ್ರತಿಭೆಯನ್ನು ಮೀರಿದ ಪಾತ್ರ ರಿಂಕುಳದ್ದು. ಬಹಳ ಕಷ್ಟಪಟ್ಟು ಸಿನಿಮಾದಲ್ಲಿ ರಿಂಕು ಆಗಿದ್ದಾರೆ ಸಾರಾ. ಬಹಳ ಭಾವುಕ ಅಭಿನಯ ಬೇಡುವ ಪಾತ್ರವನ್ನು ಬಹಳ ಕಷ್ಟಪಟ್ಟು ಅಭಿನಯಿಸಿದ್ದಾರೆ ಸಾರಾ. ಅವರ ಕಷ್ಟ ಮುಖದಲ್ಲಿ ಕಾಣುತ್ತದೆ. ಸಾರಾಳ ನಟನೆ ಒಮ್ಮೊಮ್ಮೆ ಓವರ್ ಆಕ್ಟಿಂಗ್ ಎನಿಸುತ್ತದೆ. ಅವರು ಸಂಭಾಷಣೆ ಹೇಳುವ ವಿಧಾನ ಸಹ ಸಹಜ ಎನಿಸುವುದಿಲ್ಲ. ಈ ಪಾತ್ರಕ್ಕೆ ಒಳ್ಳೆಯ ನಟಿಯನ್ನು ಆರಿಸಿಕೊಂಡಿದರೆ ಒಳ್ಳೆಯದಿತ್ತೆಂದು ಎನಿಸುತ್ತದೆ. ಆದರೆ ಸಾರಾರ ಅಭಿನಯ ಕೊರತೆಯನ್ನು ಮರೆಯುವಂತೆ ಮಾಡುವುದು ನಟ ಧನುಶ್.

  ಧನುಶ್ ನಟನೆ ಅದ್ಭುತ

  ಧನುಶ್ ನಟನೆ ಅದ್ಭುತ

  ಧನುಶ್‌ ಅದ್ಭುತವಾಗಿ ನಟಿಸಿದ್ದಾರೆ. ಸಿಟ್ಟು, ಹತಾಶೆ, ಪ್ರೀತಿ, ಭಗ್ನ ಪ್ರೇಮ ಎಲ್ಲ ಭಾವಗಳನ್ನೂ ತುಳುಕಿಸಿದ್ದಾರೆ. ಸಿನಿಮಾದಲ್ಲಿ ದೃಶ್ಯವೊಂದಿದೆ. ತಮಿಳು ಅರ್ಥವಾಗದ ನಾಯಕಿಗೆ ಧನುಶ್ ತಮಿಳಿನಲ್ಲಿ ತಾನು ಆಕೆಯನ್ನು ಎಷ್ಟು ಪ್ರೀತಿಸುತ್ತೇನೆಂದು, ತನನ್ನು ಬಿಟ್ಟು ಹೋಗಬೇಡವೆಂದು ಹೇಳುತ್ತಾನೆ. ಆ ದೃಶ್ಯಕ್ಕೆ ನಿರ್ದೇಶಕ ಬೇಕೆಂದೇ ಸಬ್‌ ಟೈಟಲ್ಸ್ ಸಹ ಹಾಕಿಲ್ಲ ಆದರೂ ಧನುಶ್‌ ಕಣ್ಣಲ್ಲೇ ಗೊತ್ತಾಗುತ್ತೆ ಆ ದೃಶ್ಯದ ಭಾವ, ವಿಸುವಿನ ಹತಾಶೆ. ಅಕ್ಷಯ್ ಕುಮಾರ್ ಪಾತ್ರಕ್ಕೆ ಸಿನಿಮಾದಲ್ಲಿ ಮಹತ್ವ ಹೆಚ್ಚು ಅವರು ಹೆಚ್ಚು ಸಮಯ ತೆರೆಯ ಮೇಲೆ ಕಾಣಿಸಿಕೊಳ್ಳದಿದ್ದರೂ ಅವರ ಪಾತ್ರ ನೆನಪಿನಲ್ಲಿರುತ್ತದೆ. ಧನುಶ್ ಗೆಳೆಯನ ಪಾತ್ರದಲ್ಲಿ ನಟಿಸಿರುವ ಆಶಿಶ್ ವರ್ಮಾ ನಟನೆಯು ಸಹ ಚೇತೋಹಾರಿಯಾಗಿದೆ.

  ಮತ್ತೊಬ್ಬ ಹೀರೋ ಎ.ಆರ್.ರೆಹಮಾನ್

  ಮತ್ತೊಬ್ಬ ಹೀರೋ ಎ.ಆರ್.ರೆಹಮಾನ್

  ಸಿನಿಮಾದ ಮತ್ತೊಬ್ಬ ಪ್ರಮುಖ ಹೀರೋ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್. ಸನ್ನಿವೇಶಗಳಿಗೆ ತಕ್ಕಂತೆ ಸಿನಿಮಾದ ಸಂಗೀತ ಮೂಡಿಬಂದಿದೆ. ಸಿನಿಮಾದ ಹಾಡುಗಳೂ ಸಹ ಸೆಳೆಯುತ್ತವೆ. ಇದೇ ಕಾರಣಕ್ಕೆ ಸಿನಿಮಾ ಮುಗಿದ ಮೇಲೆ ಟೈಟಲ್‌ ಕಾರ್ಡ್‌ನಲ್ಲಿ ಮೊದಲು ಕಾಣುವುದು 'ಎ ಫಿಲ್ಮ್ ಬೈ ಎ.ಆರ್.ರೆಹಮಾನ್' ಎಂದು. ಆ ನಂತರ ನಿರ್ದೇಶಕರ ಹೆಸರು ಬರುತ್ತದೆ. ನಿರ್ದೇಶಕ ಆನಂದ್, ರೆಹಮಾನ್ ಸಂಗೀತಕ್ಕೆ ನೀಡಿರುವ ಗೌರವ ಅದು. ಆದರೆ ರೆಹಮಾನ್ ಅವರು ಈ ಸಿನಿಮಾಕ್ಕೆ ನೀಡಿರುವ ಸಂಗೀತವನ್ನು ಆನಂದ್ ಎಲ್ ರಾಯ್ ಅವರೇ ನಿರ್ದೇಶಿಸಿ, ಧನುಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ರಾಂಝನಾ' ಸಿನಿಮಾದ ಸಂಗೀತದೊಂದಿಗೆ ಹೋಲಿಸುವಂತಿಲ್ಲ. 'ರಾಂಝನಾ'ದ ಸಂಗೀತ ಬಾಲಿವುಡ್‌ನ ಕ್ಲಾಸಿಕ್‌ಗಳಲ್ಲಿ ಒಂದು.

  'ರಾಂಝನಾ'ದೊಂದಿಗೆ ಹೋಲಿಸಿದರೆ?

  'ರಾಂಝನಾ'ದೊಂದಿಗೆ ಹೋಲಿಸಿದರೆ?

  ಈಗಾಗಲೇ ಒಂದು ಹಿಟ್ ಸಿನಿಮಾ ನೀಡಿರುವ ತಂಡ ಮತ್ತೊಂದು ಸಿನಿಮಾ ಮಾಡಿದಾಗ ಅದನ್ನು ಮೊದಲ ಸಿನಿಮಾದೊಂದಿಗೆ ಹೋಲಿಸಿ ನೋಡುವುದು ಸಾಮಾನ್ಯ. ಆನಂದ್ ಎಲ್ ರಾಯ್ ನಿರ್ದೇಶಿಸಿ, ಧನುಶ್ ನಟಿಸಿ, ಎ.ಆರ್.ರೆಹಮಾನ್ ಸಂಗೀತ ನೀಡಿದ್ದ 'ರಾಂಝನಾ' ಸಿನಿಮಾದೊಂದಿಗೆ 'ಅತರಂಗಿ ರೇ' ಅನ್ನು ಹೋಲಿಸಿ ನೋಡುವುದೇ ಆದರೆ, ಈ ಸಿನಿಮಾ ತುಸು ಹಿಂದೆಯೇ ನಿಲ್ಲುತ್ತದೆ. ಅಲ್ಲಿ ಹೃದಯ ಹಿಂಡುವ ಭಗ್ನ ಪ್ರೇಮಕತೆಯಿತ್ತು, ಆದರೆ 'ಅತರಂಗಿ ರೇ' ಸಿನಿಮಾದಲ್ಲಿ ಆ ರೀತಿಯ ತೀರಾ ಕಾಡುವ ದೃಶ್ಯಗಳು ಇಲ್ಲ. ಕಾಡುವ ದೃಶ್ಯವನ್ನು ಕಟ್ಟಿಕೊಡುವ ಶಕ್ತ ಕತೆಯಿದ್ದರೂ ಯಾಕೋ ನಿರ್ದೇಶಕರು ಅದಕ್ಕೆ ಮನಸ್ಸು ಮಾಡಿಲ್ಲ ಎನಿಸುತ್ತದೆ. 'ರಾಂಝನಾ'ದಂತೆ ನೆನಪುಳಿಯುವ ಪಂಚಿಂಗ್ ಸಂಭಾಷಣೆಗಳು ಈ ಸಿನಿಮಾದಲ್ಲಿ ಇಲ್ಲ. ಆದರೆ 'ಅತರಂಗಿ ರೇ' ತನ್ನದೇ ಮಾದರಿಯಲ್ಲಿ ಒಂದೊಳ್ಳೆ 'ತ್ರಿಕೋನ' ಪ್ರೇಮಕತೆ. ವಿಭಿನ್ನ ಪ್ರೇಮಕತೆಯ ಅನುಭವಕ್ಕೆ ನೊಡಬಹುದಾದ ಸಿನಿಮಾ. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

  English summary
  Dhanush, Akshay Kumar, Sara Ali Khan starer Atrangi Re Hindi movie review in Kannada. It is a different triangle love story.
  Saturday, December 25, 2021, 15:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X