»   » ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

Posted By:
Subscribe to Filmibeat Kannada

'ಮುಗುಳುನಗೆ'... ಹೇಳಿ ಕೇಳಿ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನ ಹ್ಯಾಟ್ರಿಕ್ ಸಿನಿಮಾ. ಹಾಗಂತ ಮೊದಲೆರಡು ಸಿನಿಮಾಗಳಲ್ಲಿ ಇದ್ದಂತೆ ಇಲ್ಲೂ ಮಳೆ ಸುರಿಯಬಹುದು, ಜಲಪಾತದ ಸದ್ದು ಕೇಳಬಹುದು, ಮೊಲ-ಹಂದಿಯಂತೆ ಮೂಕ ಪ್ರಾಣಿಗಳೂ ಇಲ್ಲಿ ಮುಖ್ಯ ಪಾತ್ರ ವಹಿಸಬಹುದು ಎಂಬ ನಿರೀಕ್ಷೆ ತಲೆಯಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ. ಯಾಕಂದ್ರೆ, ಇಡೀ ಸಿನಿಮಾದಲ್ಲಿ ಬಿಟ್ಟೂಬಿಡದಂತೆ ಕಾಡುವುದು ನಾಯಕ ಗಣೇಶ್ ರವರ 'ಮುಗುಳುನಗೆ' ಮಾತ್ರ. ನಗು-ಅಳುವಿನ ಸುತ್ತ ಹೆಣೆದಿರುವ ಮಧುರ ಭಾವನೆಗಳ ಸರಮಾಲೆಯೇ ಈ 'ಮುಗುಳುನಗೆ'.

Rating:
3.5/5

ಚಿತ್ರ: ಮುಗುಳುನಗೆ
ನಿರ್ಮಾಣ: ಸೈಯದ್ ಸಲಾಂ, ಗಣೇಶ್, ಯೋಗರಾಜ್ ಭಟ್
ನಿರ್ದೇಶನ: ಯೋಗರಾಜ್ ಭಟ್
ಸಂಗೀತ: ವಿ.ಹರಿಕೃಷ್ಣ
ಛಾಯಾಗ್ರಹಣ: ಸುಜ್ಞಾನ್
ಸಂಕಲನ: ಸಚಿನ್
ತಾರಾಗಣ: ಗಣೇಶ್, ನಿಖಿತಾ ನಾರಾಯಣ್, ಅಪೂರ್ವ ಅರೋರ, ಆಶಿಕಾ ರಂಗನಾಥ್, ಅಮೂಲ್ಯ, ಅಚ್ಯುತ್ ಕುಮಾರ್, ಅನಂತ್ ನಾಗ್, ರಂಗಾಯಣ ರಘು, ಧರ್ಮಣ್ಣ ಕಡೂರ್ ಮತ್ತು ಇತರರು
ಬಿಡುಗಡೆ: ಸೆಪ್ಟೆಂಬರ್ 1, 2017

ಕಥಾಹಂದರ

ಕಥಾನಾಯಕ ಪುಲಕೇಶಿಯದ್ದು (ಗಣೇಶ್) ಒಂದೇ ಸಮಸ್ಯೆ. ಹುಟ್ಟಿದಾಗ ಎಲ್ಲ ಮಕ್ಕಳಂತೆ ಅಳದ ಪುಲಕೇಶಿಗೆ (ಗಣೇಶ್) ನೋವಿನಲ್ಲಿದ್ದಾಗಲೂ ನಗುವುದಷ್ಟೇ ಗೊತ್ತು. ಎಂದೂ ಕಣ್ಣೀರು ಹಾಕದ, ಸದಾ ಹಸನ್ಮುಖಿ ಆಗಿರುವ ಪುಲಕೇಶಿ ಕಣ್ಣಾಲಿಗಳು ಕೊನೆಗೆ ಒದ್ದೆ ಆಗುವ ಕಥೆಯೇ 'ಮುಗುಳುನಗೆ'.

ಮ್ಯೂಸಿಕಲ್ ಲವ್ ಸ್ಟೋರಿ

ಅಷ್ಟಕ್ಕೂ, ಪುಲಕೇಶಿಯ ಕಣ್ಣಲ್ಲಿ ನೀರು ತರಿಸುವವರು ಯಾರು.? ಪುಲಕೇಶಿ ಭಾವುಕನಾಗುವುದಾದರೂ ಯಾಕೆ ಎಂಬುದೇ ಕಥಾಹಂದರ. ಒಟ್ಟು ಮೂರು ಲವ್ ಸ್ಟೋರಿ ಹಾಗೂ ಇಂಪಾದ ಹಾಡುಗಳಿರುವ 'ಮುಗುಳುನಗೆ' ಚಿತ್ರದ ಕಥೆಯನ್ನ ನಾವು ಬಿಟ್ಟುಕೊಡುವುದಿಲ್ಲ. ಚಿತ್ರಮಂದಿರದಲ್ಲಿಯೇ ನೋಡಿರಿ...

'ಪುಳಕ'ಗೊಳಿಸುವ ಗಣೇಶ್

ಮಂದಹಾಸ ಬೀರುವ ಮುದ್ದು ಮುಖದ ಹುಡುಗನಾಗಿ ಗಣೇಶ್ ನಟನೆ ನೈಜವಾಗಿದೆ. ಕಣ್ಣಲ್ಲೇ ಮಾತನಾಡುವ ಗಣೇಶ್ ಗೆ ಎಲ್ಲರ ಕಣ್ಣಲ್ಲೂ ಜಲಪಾತ ತರಿಸುವಷ್ಟು ಶಕ್ತಿ ಇದೆ. ಸದಾ ನಗುತ್ತಾ ಎಲ್ಲರನ್ನೂ ನಗಿಸುವ ಗಣೇಶ್ ಕಾಮಿಡಿ ಟೈಮಿಂಗ್ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ.

ಮೂವರು ನಾಯಕಿಯರ ಕಾರುಬಾರು

ದೊಡ್ಡ ಕನಸು ಕಾಣುವ ಕಾಲೇಜು ಹುಡುಗಿಯ ಪಾತ್ರದಲ್ಲಿ ಆಶಿಕಾ ರಂಗನಾಥ್ ಇಷ್ಟವಾಗುತ್ತಾರೆ. ಗಿಟಾರ್ ನುಡಿಸುವ 'ಸಿರಿ'ಯಾಗಿ ನಿಖಿತಾ ನಾರಾಯಣ್ ಅಭಿನಯ ಅಚ್ಚುಕಟ್ಟಾಗಿದೆ. ಕರಾವಳಿ ಹುಡುಗಿಯಾಗಿ ಅಪೂರ್ವ ಅರೋರ ಗಮನ ಸೆಳೆಯುತ್ತಾರೆ. ನಟಿ ಅಮೂಲ್ಯ ಹೀಗೆ ಬಂದು ಹಾಗೆ ಹೋಗುತ್ತಾರೆ.

ವಿಶೇಷ ಪಾತ್ರಗಳು

ಗಣೇಶ್ ತಂದೆಯಾಗಿ ಅಚ್ಯುತ್ ಕುಮಾರ್ ನಟನೆ ಮೆಚ್ಚುವಂಥದ್ದು. ಸಣ್ಣ ಪಾತ್ರಗಳಲ್ಲಿ ಮಿಂಚಿದರೂ ಅನಂತ್ ನಾಗ್ ಹಾಗೂ ರಂಗಾಯಣ ರಘು ಮನಸ್ಸಲ್ಲಿ ಉಳಿಯುತ್ತಾರೆ. ಇನ್ನೂ ನಟ ಜಗ್ಗೇಶ್ ಒಂದು ಹಾಡಿಗೆ ಮಾತ್ರ ಸೀಮಿತ.

ಕಚಗುಳಿ ಇಡುವ ಧರ್ಮಣ್ಣ ಕಡೂರ್

ತೊದಲು ಭಾಷೆಯಲ್ಲಿ ಮಾತನಾಡುವ ಧರ್ಮಣ್ಣ ಕಡೂರ್ ಎಲ್ಲರನ್ನ ನಗೆಗಡಲಲ್ಲಿ ತೇಲಿಸುತ್ತಾರೆ.

ಕಥೆಯಲ್ಲಿ ಗಟ್ಟಿತನ ಬೇಕಿತ್ತು

ಇದು ಗಣೇಶ್-ಯೋಗರಾಜ್ ಭಟ್ ರವರ ಮೂರನೇ ಸಿನಿಮಾ ಆದರೂ, ಚಿತ್ರ ಫ್ರೆಶ್ ಆಗಿದೆ. ಹೊಸತನ ಪ್ರಯೋಗ ಮಾಡಿರುವ ಯೋಗರಾಜ್ ಭಟ್ ಚಿತ್ರಕಥೆ ಮೇಲೆ ಕೊಂಚ ಹಿಡಿತ ಸಾಧಿಸಿದ್ದರೆ, 'ಮುಗುಳುನಗೆ' ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿಸುವ ಸಾಧ್ಯತೆ ಇತ್ತು.

ಕಾಡುವ 'ರೂಪಸಿ'

ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡುಗಳು ಕೇಳುವಂತಿವೆ. ಅದರಲ್ಲೂ 'ರೂಪಸಿ..' ಹಾಡು ಪದೇ ಪದೇ ಕಾಡುತ್ತದೆ. 'ಮುಗುಳುನಗೆ' ಟೈಟಲ್ ಹಾಡು ತೆರೆಮೇಲೆ ಸದ್ಬಳಕೆ ಆಗಿಲ್ಲ. ಚಿತ್ರಕಥೆಗೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪೂರಕವಾಗಿದೆ.

ಕಣ್ಣಿಗೆ ತಂಪು ನೀಡುವ ಛಾಯಾಗ್ರಹಣ

ಸುಜ್ಞಾನ್ ರವರ ಕ್ಯಾಮರಾ ಕೈಚಳಕದಿಂದ ಪ್ರತಿ ಫ್ರೇಮ್ ಕೂಡ ರಿಚ್ ಆಗಿ ಕಾಣಿಸುತ್ತದೆ. ಸಚಿನ್ ಕತ್ರಿ ಕೆಲಸ ಸ್ವಲ್ಪ ಚುರುಕಾಗಿದಿದ್ರೆ, ಚಿತ್ರದ ವೇಗ ಇನ್ನೂ ಹೆಚ್ಚುತ್ತಿತ್ತು.

ಗಣೇಶ್ ಅಭಿಮಾನಿಗಳಿಗೆ ರಸದೌತಣ

ಗಣೇಶ್ ಅಭಿಮಾನಿಗಳಿಗೆ 'ಮುಗುಳುನಗೆ' ರಸದೌತಣ ನೀಡುವುದರಲ್ಲಿ ಡೌಟ್ ಬೇಡ. ಹೆಚ್ಚು ನಿರೀಕ್ಷೆ ಮಾಡದೆ, ಮುಕ್ತ ಮನಸ್ಸಿನಿಂದ ಥಿಯೇಟರ್ ಒಳಗೆ ಹೋದರೆ 'ಮುಗುಳುನಗೆ' ಮನರಂಜನೆ ನೀಡುತ್ತೆ.

English summary
Golden Star Ganesh starrer 'Mugulu Nage' has hit the screens today (September 1st). 'Mugulu Nage' is a decent entertainer. The review of the movie is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada