»   » 'ದೇವದಾಸ'ನಿಲ್ಲದ 'ಮುಂಗಾರು ಮಳೆ 2'ಗೆ ವಿಮರ್ಶಕರು ಹೇಳಿದ್ದೇನು.?

'ದೇವದಾಸ'ನಿಲ್ಲದ 'ಮುಂಗಾರು ಮಳೆ 2'ಗೆ ವಿಮರ್ಶಕರು ಹೇಳಿದ್ದೇನು.?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಮುಂಗಾರು ಮಳೆ 2' ಧೋ ಅಂತ ಸುರಿಯತ್ತೆ ಅಂದುಕೊಂಡಿದ್ದವರಿಗೆ ಕೊಂಚ ನಿರಾಸೆ ಆಗಿದೆ. ಯಾಕೆಂದರೆ 10 ವರ್ಷಕ್ಕೆ ಮುಂಚೆ ಸುರಿದಿದ್ದ 'ಮುಂಗಾರು ಮಳೆ' ಎಲ್ಲರನ್ನೂ ಕಾಡಿತ್ತು-ಪೀಡಿಸಿತ್ತು. ಆದರೆ ಈ ಬಾರಿ ಎಲ್ಲರ ಹೃದಯವನ್ನು ಮೆಚ್ಚಿಸುವಲ್ಲಿ ಶಶಾಂಕ್ ಅವರು ಕೊಂಚ ಎಡವಿದ್ದಾರೆ, ಎನ್ನುತ್ತಿದ್ದಾರೆ ಸಿನಿಮಾ ವಿಮರ್ಶಕರು.

  ಆ ಪ್ರೀತಂಗೂ, ಈ ಪ್ರೀತಂಗೂ ಅಜಗಜಾಂತರ ವ್ಯತ್ಯಾಸ ಇದೆ. ಜೊತೆಗೆ ನಂದಿನಿ ಕೂಡ ತುಂಬಾ ಬದಲಾಗಿದ್ದಾಳೆ. ಈ ಮುಂಗಾರು ಮಳೆಯಲ್ಲಿ 'ಪ್ರೀತಿ-ವಿರಸ-ದೇವದಾಸ್' ಯಾರಿಗೂ ಜಾಗವಿಲ್ಲ. ಹೀಗೆ ಇತ್ಯಾದಿ ಕಾಮೆಂಟ್ ಗಳು ಎಲ್ಲಾ ಕಡೆಯಿಂದ ಹರಿದು ಬರುತ್ತಿದೆ.


  ಸಿನಿಮಾ ನೋಡಿದ ಪ್ರೇಕ್ಷಕರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದರೆ, ಖ್ಯಾತ ವಿಮರ್ಶಕರು ಕೂಡ ವಿಭಿನ್ನ ಕಾಮೆಂಟ್ ಮಾಡಿದ್ದಾರೆ.[ವಿಮರ್ಶೆ: 'ಮುಂಗಾರು ಮಳೆ' ಅಮರ, 'ಮುಂಗಾರು ಮಳೆ-2' ಒಂಥರಾ.!]


  ಗೋಲ್ಡನ್ ಸ್ಟಾರ್ ಗಣೇಶ್, ನೇಹಾ ಶೆಟ್ಟಿ, ಸಾಧು ಕೋಕಿಲಾ, ರವಿಚಂದ್ರನ್, ರವಿಶಂಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಮುಂಗಾರು ಮಳೆ 2', ಇಡೀ ವಿಶ್ವದಾದ್ಯಂತ ಸೆಪ್ಟೆಂಬರ್ 10 ರಂದು ತೆರೆಕಂಡಿದೆ.


  ನಿರ್ದೇಶಕ ಶಶಾಂಕ್ ಆಕ್ಷನ್-ಕಟ್ ಹೇಳಿರುವ 'ಮುಂಗಾರು ಮಳೆ 2' ಚಿತ್ರಕ್ಕೆ ಕನ್ನಡ ಖ್ಯಾತ ವಿಮರ್ಶಕರು ವ್ಯಕ್ತಪಡಿಸಿರುವ ವಿಮರ್ಶೆಗಳ ಕಲೆಕ್ಷನ್ಸ್ ನೋಡಲು ಮುಂದೆ ಓದಿ...


  'ಮಳೆಯ ಉನ್ಮಾದದ ಲೀಲೆ' -ವಿಜಯ ಕರ್ನಾಟಕ

  ಯೋಗರಾಜ್ ಭಟ್ಟರ '...ಮಳೆ'ಯಲ್ಲಿ ಪ್ರೀತಿಯಿತ್ತು, ದೇವದಾಸನಿದ್ದ, ಪ್ರೀತಮ್ ಮತ್ತು ನಂದಿನಿಯ ಪ್ರೇಮವಿತ್ತು. ಜತೆಗೆ ಪ್ರೀತಮ್ ನ ಗಾಢ ವಿರಹವೂ ಪ್ರೇಮಿಗಳನ್ನು ಸೆಳೆದಿತ್ತು. ಇಂತಹ ಆದ್ರಗೊಳ್ಳುವ ದೃಶ್ಯಗಳು ಎರಡನೇ ಮಳೆಯಲ್ಲಿ ಕಡಿಮೆ. ಶಶಾಂಕ್ ಚಿತ್ರಕಥೆಗೆ ಪ್ರಾಮುಖ್ಯತೆ ಕೊಡುವ ನಿರ್ದೇಶಕ. ಕತೆಯನ್ನೇ ನಂಬಿಕೊಂಡವರು. ಆದರೆ, ಈ ಬಾರಿ ಸಿನಿಮಾ ಕಟ್ಟುವಿಕೆಯಲ್ಲಿ ಹೆಚ್ಚು ಶ್ರಮ ತೋರಿದ್ದಾರೆ. ಹೀಗಾಗಿ ಇಡೀ ಸಿನಿಮಾ ಕಲರ್‌ಫುಲ್‌ ಆಗಿದೆ. ಈ ಸೊಗಸಿನಲ್ಲಿ ಕತೆ ಮಂಜಾಗಿದೆ. ಶಶಾಂಕ್ ದೃಶ್ಯ ಕಟ್ಟುವಲ್ಲಿ ಇಷ್ಟವಾಗುತ್ತಾರೆ. ಅದಕ್ಕೆ ಸಿನಿಮಾಟೋಗ್ರಾಫರ್ ಶೇಖರ್‌ ಚಂದ್ರ ಸಾಥ್ ನೀಡಿದ್ದಾರೆ. ಮುಂಗಾರು ಮಳೆ-2 ಹೊಸ ರೀತಿಯಲ್ಲೇ ಹೇಳುವುದಕ್ಕೆ ಹೊರಟಿರುವ ಸಿನಿಮಾ. ಆದರೆ, ಮಳೆ ಯಾವಾಗ, ಹೇಗೆ ಕಾಡುತ್ತದೆಯೋ ಹೇಳುವುದಕ್ಕೆ ಆಗದು. ಆ ಮಳೆ ಅನುಭವ ನಿಮ್ಮದಾಗಬೇಕಿದ್ದರೆ, ಮಳೆಯಲ್ಲಿ ನೀವೇ ನೆನೆಯಬೇಕು. ರೇಟಿಂಗ್: 3/5.-ಶರಣು ಹುಲ್ಲೂರು.[ಮುಂಗಾರು ಮಳೆ-2 : ಟ್ವಿಟ್ಟರಲ್ಲಿ ಯಾರು ಏನು ಹೇಳಿದ್ದಾರೆ?]


  'ಮಳೆಯ ನೆನಪಿನ ಹಂಗು'-ಪ್ರಜಾವಾಣಿ

  ‘ಮುಂಗಾರು ಮಳೆ-2' ಹತ್ತು ವರ್ಷಗಳ ಹಿಂದೆ ಸುರಿದ ‘ಮುಂಗಾರು ಮಳೆ'ಯಂತೆ ಕಾಡುವುದಿಲ್ಲ. ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಮೋಡ ಬಿಸಿಲಿನ ನಡುವೆ ಒಂದೆರಡು ಹನಿಗಳನ್ನಷ್ಟೇ ಉದುರಿಸುತ್ತದೆ. ಮತ್ತೊಂದು ಮಳೆಗಾಗಿ ಕಾದ ಪ್ರೇಕ್ಷಕನಿಗೆ ಸಿಗುವುದು ಅಲ್ಪತೃಪ್ತಿಯಷ್ಟೇ. ‘ಮುಂಗಾರು ಮಳೆ'ಯ ಸ್ವರೂಪ ಮತ್ತು ಅದರ ಶೈಲಿ ಎರಡನ್ನೂ ಮರೆಸುವಂತೆ ಮರಳುಗಾಡಿನಲ್ಲಿ ಸುತ್ತು ಹೊಡೆಸಿದರೂ, ಮಳೆಯ ಅಬ್ಬರ ತೋರಿಸುವ ಅನಿವಾರ್ಯತೆಯಲ್ಲಿ, ಮಡಿಕೇರಿಯ ಮಂಜಿನೊಳಗೆ ಮತ್ತು ಜೋಗ ಜಲಪಾತದ ತುದಿಯಲ್ಲಿ ನಿಂತು ಪ್ರೀತಿಯನ್ನು ಕನವರಿಸುವ ಸುಳಿಯೊಳಗೆ ಸಿಲುಕಿರುವುದು ನಿರ್ದೇಶಕ ಶಶಾಂಕ್‌ ಅವರ ವೈಫಲ್ಯ ಎನ್ನಬಹುದು. ಮೊದಲ ಭಾಗದ ಪ್ರಭಾವ ಮತ್ತು ಅದರ ಹೋಲಿಕೆಗಳಿಂದ ತಪ್ಪಿಸಿಕೊಳ್ಳಲಾರದ ಸಂಕಟವನ್ನು ಸ್ವತಃ ನಿರ್ದೇಶಕರೇ ಸೃಷ್ಟಿಸಿಕೊಂಡಿದ್ದಾರೆ.-ಅಮಿತ್ ಎಂ.ಎಸ್.


  'ಮತ್ತೆ ಮಳೆ ಹೊಯ್ಯುತಿದೆ ಪ್ರೇಮ ಹಸಿಯಾಗುತಿದೆ' -ಉದಯವಾಣಿ

  'ಮುಂಗಾರು ಮಳೆ 2' ಸಿನಿಮಾವನ್ನು ನೋಡುವಾಗ ಹತ್ತು ವರುಷಗಳ ಮೊದಲು ಬಿಡುಗಡೆಯಾದ 'ಮುಂಗಾರು ಮಳೆ'ಯನ್ನು ನೆನಪಿಸಿಕೊಳ್ಳಬಾರದು ನಿಜ. ಆದರೆ ಶೀರ್ಷಿಕೆಯೇ ಆ ಚಿತ್ರವನ್ನು ನೆನಪಿಸುತ್ತದೆ. ಪಾತ್ರಗಳ ಹೆಸರೂ ಅದೇ ಇರುವುದರಿಂದ, ಒಂದೇ ಒಂದು ಸಲ ದೇವದಾಸ್ ಹೆಸರೂ ಬರುವುದರಿಂದ ಮನಸ್ಸು ಆಗಾಗ ಮೊದಲ ಮುಂಗಾರು ಮಳೆಗೆ ಹಾಯುತ್ತದೆ, ಆದ್ದರಿಂದ ಈ ಚಿತ್ರಾನುಭವಕ್ಕೆ ಅಂತ ತೊಂದರೆಯೇನೂ ಆಗುವುದಿಲ್ಲ. ಬದಲಾಗಿರುವ ಪ್ರೇಮೋದ್ಯೋಗದ ಪಲುಕುಗಳನ್ನು ಶಶಾಂಕ್ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಅಮಲೇರಿಸುವುದಕ್ಕೆ ಪ್ರೇಮ ಸಾಲದೇ ಹೋದರೆ ಮದ್ಯವೂ ಇದೆ. ಪ್ರೇಮಿಗಳ ನಡುವಿನ ಸಣ್ಣ-ಸಣ್ಣ ಸನ್ನಿವೇಶಗಳು ಗಾಢವಾಗಿವೆ. ತಂದೆ-ಮಗನ ಪ್ರೀತಿಯನ್ನು ಶಶಾಂಕ್ ಉತ್ತುಂಗಕ್ಕೆ ಒಯ್ಯುವ ಪರಿಯೂ ಸೊಗಸಾಗಿದೆ'. -ಜೋಗಿ


  'ಹೊಸ ಮಳೆಯಲ್ಲಿ ಹಳೇ ಹನಿಗಳ ಛಾಯೆ'-ವಿಜಯವಾಣಿ

  ನಿರ್ದೇಶಕರು ನಿರೂಪಣೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದರೆ ತಾಜಾತನ ಇರುತ್ತಿತ್ತು. ಕೆಲ ದೃಶ್ಯ, ಡೈಲಾಗ್ ಗಳ ಮೂಲಕ ಹಳೇ 'ಮುಂಗಾರು ಮಳೆ'ಯನ್ನು ನೆನಪಿಸುವುದು ನಿರ್ದೇಶಕರ ಹಿನ್ನಡೆ. ಚಿತ್ರಕಥೆ ಸಡಿಲಗೊಂಡಿರುವುದು '..ಮಳೆ 2'ರ ಮತ್ತೊಂದು ಮೈನಸ್, ಶೇಖರ್ ಚಂದ್ರು ಕ್ಯಾಮರಾ ಕೈ ಚಳಕ ಬೋನಸ್. ಮೆಲೋಡಿ ಹಾಡುಗಳ ಮೂಲಕ ಕಾಡುವ ಅರ್ಜುನ್ ಜನ್ಯ ಮಿಕ್ಕಂತೆ ಅಬ್ಬರಿಸುತ್ತಾರೆ. ಸ್ಟೈಲಿಶ್ ಆಗಿ ತೆರೆಮೇಲೆ ಗಣೇಶ್ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಪ್ರೇಕ್ಷಕನನ್ನು ಹಿಡಿದಿಡುತ್ತಾರೆ. ಮೊದಲ ಪ್ರಯತ್ನದಲ್ಲೇ ನೇಹಾ ಶೆಟ್ಟಿ ಪರವಾಗಿಲ್ಲ. ಐಂದ್ರಿತಾ ಕೊಂಚ ಹಾಟ್! ರಿಚ್ ಫಾದರ್ ಪಾತ್ರಕ್ಕೆ ರಿಚ್ ನೆಸ್ ತುಂಬಿದ್ದಾರೆ ರವಿಚಂದ್ರನ್.


  'ಮುಂಗಾರು ಮಳೆ ಬಂದು ಮನದ ಬಾಗಿಲು ತಟ್ಟಿತು'-ಕನ್ನಡ ಪ್ರಭ

  'ಇಲ್ಲಿ ಶಶಾಂಕ್ ತ್ಯಾಗದ ಹೊರತಾಗಿ ಪ್ರೀತಿ ವಿಷಯವನ್ನೇ ಇಟ್ಟುಕೊಂಡಿದ್ದಾರೆ. ಅಪ್ಪ-ಮಗನ ಬಾಂಧವ್ಯದ ಥೀಮ್ ಇಲ್ಲಿದೆ. ತಮ್ಮ ಈ ಪ್ರಯತ್ನವನ್ನು ಸಾಕಾರಗೊಳಿಸಬೇಕಾದ ಪಾತ್ರಗಳು ಅವರಿಗೆ ಕೈ ಕೊಟ್ಟಿವೆ. 25 ವರ್ಷಗಳ ನಂತರ ಮನೆಗೆ ಬರುವ ತಾಯಿ ಮುಖದಲ್ಲಿ ಭಾವನೆಗಳೇ ಕಾಣಲ್ಲ. ನೇಹಾ ಶೆಟ್ಟಿ ಮಳೆ ಹುಡುಗಿ ಅನಿಸುವುದಿಲ್ಲ. ಆದರೆ, ನಿರ್ದೇಶಕನ ಮಳೆ ಕನಸನ್ನು ಹೆಗಲ ಮೇಲೆ ಹೊತ್ತು ನಿಭಾಯಿಸಿರುವುದು ಮಾತ್ರ ಶೇಖರ್ ಚಂದ್ರ ಕ್ಯಾಮೆರಾ ಹಾಗೂ ಗಣೇಶ್ ನಟನೆ. ಮಳೆ ಹುಡ್ಗ ಆಕ್ಷನ್ ಸ್ಟಾರ್ ಆಗಬಲ್ಲ ಎನ್ನುವುದಕ್ಕೆ ಎರಡು ಸಾಹಸಗಳೇ ಸಾಕ್ಷಿ. ಶ್ರೀಮಂತ ಹುಡುಗನಿಗೆ ಸಂಬಂಧಗಳ ಮೇಲೆ ನಂಬಿಕೆ ಇಲ್ಲ. ಅಂಥವನ ಜೀವನದಲ್ಲಿ ಬಂದು ಹೋದ ಹುಡುಗಿಯರು ಎಷ್ಟೋ ಗೊತ್ತಿಲ್ಲ. ಆದರೂ ಅವನಿಗೆ ಅಪ್ಪನ ಹೊರತಾದ ಸಂಬಂಧಗಳ ಮಹತ್ವ ತಿಳಿಯುತ್ತದೆ. ಅವನಲ್ಲೂ ಪ್ರೀತಿ ಹುಟ್ಟಿಕೊಳ್ಳುತ್ತದೆ. ರೇಟಿಂಗ್ 3/5. -ಆರ್ ಕೇಶವಮೂರ್ತಿ.


  English summary
  Kannada movie 'Mungaru Male 2' Critics review. Kannada actor Ganesh, Kannada Actress Neha Shetty, Actress Aindrita Ray starrer 'Mungaru Male 2' has received mixed response from the critics. Here is the collection of reviews by Top News Papers of Karnataka. The movie is directed by Shashank.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more