»   » 'ಉಡ್ತಾ ಪಂಜಾಬ್'ಗೆ ವಿಮರ್ಶಕರ ಮೆಚ್ಚುಗೆಯ ಕಾಮೆಂಟ್

'ಉಡ್ತಾ ಪಂಜಾಬ್'ಗೆ ವಿಮರ್ಶಕರ ಮೆಚ್ಚುಗೆಯ ಕಾಮೆಂಟ್

By: ಸೋನು ಗೌಡ
Subscribe to Filmibeat Kannada

ಇತ್ತೀಚೆಗೆ ಬರೀ ವಿವಾದದ ಸುಳಿಯಲ್ಲಿ ಸಿಲುಕಿದ್ದ ಹಿಂದಿ ಸಿನಿಮಾ 'ಉಡ್ತಾ ಪಂಜಾಬ್' ಅಂತಿಮವಾಗಿ ನಿನ್ನೆ (ಜೂನ್ 17) ಪರದೆ ಮೇಲೆ ರಾರಾಜಿಸಿದೆ. ಇನ್ನೇನು ಚಿತ್ರ ಬಿಡುಗಡೆ ಆಗಲು ದಿನಗಣನೆ ಶುರುವಾಗಿರುವಾಗಲೇ ಆನ್ ಲೈನ್ ನಲ್ಲಿ ಲೀಕ್ ಆಗಿ ಚಿತ್ರತಂಡವನ್ನು ಕಂಗೆಡಿಸಿದ್ದ 'ಉಡ್ತಾ ಪಂಜಾಬ್' ಕೊನೆಗೂ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ಈಗಿನ ದಿನಗಳಲ್ಲಿ ಡ್ರಗ್ಸ್, ಆಫೀಮಿನ ಕರಾಳ ಕೂಪಕ್ಕೆ ಬಿದ್ದವರ ಬಗ್ಗೆ ಹಾಗೂ ಆ ದಂಧೆಯ ಹಿಂದೆ ಯಾರ ಕೈವಾಡ ಇದೆ ಎಂಬಿತ್ಯಾದಿ ವಿಚಾರಗಳನ್ನು 'ಉಡ್ತಾ ಪಂಜಾಬ್' ಚಿತ್ರದ ಮೂಲಕ ನಿರ್ದೇಶಕ ಅಭಿಷೇಕ್ ಚೌಬೆ ಅವರು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.['ಉಡ್ತಾ ಪಂಜಾಬ್' ಚಿತ್ರತಂಡಕ್ಕೆ ಮತ್ತೆ ಆಘಾತ]

ನಟಿ ಆಲಿಯಾ ಭಟ್, ನಟ ಶಾಹಿದ್ ಕಪೂರ್ ಮತ್ತು ನಟಿ ಕರೀನಾ ಕಪೂರ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಉಡ್ತಾ ಪಂಜಾಬ್' ಚಿತ್ರದ ಬಗ್ಗೆ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಫ್ಯಾಂಟಮ್ ಫಿಲ್ಮ್ಸ್ ನಿರ್ಮಾಣ ಮಾಡಿರುವ 'ಉಡ್ತಾ ಪಂಜಾಬ್' ಚಿತ್ರಕ್ಕೆ ವಿಮರ್ಶಕರು ವ್ಯಕ್ತಪಡಿಸಿರುವ ವಿಮರ್ಶೆಗಳ ಕಲೆಕ್ಷನ್ಸ್ ನಿಮಗಾಗಿ ಹೊತ್ತು ತಂದಿದ್ದೇವೆ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

'ಅಲ್ಲಾಡಿಸುವ ಕ್ರೌರ್ಯ ಕಥಾನಕ' - ಪ್ರಜಾವಾಣಿ

ಕಥನದ ಉದ್ದೇಶಕ್ಕೆ ಅನಗತ್ಯ ಎನ್ನಹುದಾದ ಒಂದೂ ದೃಶ್ಯ ಸಿನಿಮಾದಲ್ಲಿ ಇಲ್ಲದಿರುವುದು ಚಿತ್ರಕಥಾ ನೇಯ್ಗೆಯ ಕಸುಬುದಾರಿಕೆಗೆ ಸಾಕ್ಷಿ. ಅಮಿತ್‌ ತ್ರಿವೇದಿ ಹಾಡುಗಳಿಗೆ ಮಾಡಿರುವ ಸ್ವರ ಸಂಯೋಜನೆ ಹಾಗೂ ಬೆನೆಡಿಕ್ಟ್ ಟೇಲರ್ ಹಿನ್ನೆಲೆ ಸಂಗೀತ ಸಿನಿಮಾದ ವೇಗವನ್ನು ಇನ್ನಷ್ಟು ಹೆಚ್ಚುಮಾಡಿದೆ. ಅಭಿನಯದಲ್ಲಿ ಅಲಿಯಾ ಭಟ್‌ ಆರೇಳು ಮೆಟ್ಟಿಲು ಮೇಲೇರಿದ್ದಾರೆ. ಮೇಕಪ್‌ ಇಲ್ಲದ ಪಾತ್ರದಲ್ಲಿ ಅವರು ಕಳೆದುಹೋಗಿರುವ ಪರಿಯಿಂದಲೇ ಎಲ್ಲರನ್ನೂ ಆವರಿಸಿಕೊಳ್ಳಬಲ್ಲರು. ಅವರ ನಂತರದ ಸ್ಥಾನ ಅಭಿನಯದಲ್ಲಿ ದಲ್ಜಿತ್ ಸಿಂಗ್‌ಗೆ ಸಲ್ಲಬೇಕು. ಹಾಗೆ ನೋಡಿದರೆ ಶಾಹಿದ್ ಕಪೂರ್ ಪಾತ್ರಕ್ಕಿಂತ ಅಲಿಯಾ ಭಟ್‌ ಪಾತ್ರವೇ ತೂಕದ್ದು. ಕರೀನಾ ಕಪೂರ್ ಅವರನ್ನು ಪಾತ್ರ ನಿಭಾವಣೆಯಲ್ಲಿ ನಿರ್ದೇಶಕರು ನಿಯಂತ್ರಿಸಿರುವುದನ್ನೂ ಮೆಚ್ಚಿಕೊಳ್ಳಬಹುದು. - ವಿಶಾಖ ಎನ್.['ಉಡ್ತಾ ಪಂಜಾಬ್' ಚಿತ್ರದ ವಿವಾದ ಎಲ್ಲಿಯವರೆಗೆ ಬಂತು?]

'ಉಡ್ತಾ ಪಂಜಾಬ್'ನ ಯಶಸ್ವಿ ಉಡಾವಣೆ' - ವಿಜಯ ಕರ್ನಾಟಕ

'ಉಡ್ತಾ ಪಂಜಾಬ್‌' ಎಂದು ಹೆಸರಿಡುವ ಮೂಲಕ ಇಡೀ ಪಂಜಾಬ್‌ ಹೇಗೆ ಅಫೀಮಿನ ನಶೆಯಲ್ಲಿ ತೇಲುತ್ತಿದೆ ಎನ್ನುವುದನ್ನು ಮಾರ್ಮಿಕವಾಗಿ ಹೇಳಿದ್ದಾರೆ ನಿರ್ದೇಶಕರು. ರಾಜಕೀಯ ಮತ್ತು ಅಫೀಮು ದಂಧೆ ಕೈಜೋಡಿಸಿದಾಗ ಸಮಾಜದ ಮೇಲೆ ಆಗಬಹುದಾದ ಭೀಕರ ಪರಿಣಾಮವನ್ನು ಚಿತ್ರದಲ್ಲಿ ನೋಡಬಹುದು. ಅಫೀಮು, ರಾಜಕೀಯ ಮತ್ತು ವ್ಯವಸ್ಥೆಯ ವಿರುದ್ಧದ ಹೋರಾಟವಾಗಿ ಸಿನಿಮಾ ಮೂಡಿ ಬಂದಿದೆ. - ಪದ್ಮಾ ಶಿವಮೊಗ್ಗ.

'ಸಮಸ್ಯೆ ಅಸಲಿ ಪರಿಹಾರ ನಕಲಿ' - ವಿಜಯವಾಣಿ

ಅವನೊಬ್ಬ ಪೊಲೀಸ್ ಅಧಿಕಾರಿ (ದಿಲ್​ಜೀತ್ ದೊಸಾಂಜ್), ಇನ್ನೊಬ್ಬ ರಾಕ್ ಸ್ಟಾರ್ (ಶಾಹಿದ್ ಕಪೂರ್), ಮತ್ತೊಬ್ಬಳು ಸಾಧಾರಣ ಹಳ್ಳಿ ಹುಡುಗಿ (ಆಲಿಯಾ ಭಟ್). ಈ ಮೂವರಿಗೂ ನೇರ ಸಂಬಂಧವಿಲ್ಲ. ಆದರೆ ಮೂವರಿಗೂ ಸಂಬಂಧಿಸುವ ವಿಷಯವೆಂದರೆ, ಅದು ಡ್ರಗ್ಸ್! ಹೀಗೆ ಮೂರು ಪ್ರತ್ಯೇಕ ಕಥೆಗಳನ್ನು ಒಟ್ಟಿಗೆ ಹೆಣೆದಿದ್ದಾರೆ ನಿರ್ದೇಶಕ ಅಭಿಷೇಕ್ ಚೌಬಿ. ಯುವಜನತೆಗೆ ಅಂಟಿರುವ ಮಾದಕ ದ್ರವ್ಯ ಸೇವನೆಯ ಗೀಳು ಎಷ್ಟೆಲ್ಲ ಅನಾಹುತಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ‘ಉಡ್ತಾ ಪಂಜಾಬ್' ಚಿತ್ರದಲ್ಲಿ ವಿವರಣೆ ಇದೆ.

'ಉಡ್ತಾ ಪಂಜಾಬ್ ಕೊಟ್ಟ ವಾಸ್ತವದ ಕಿಕ್' - ಕನ್ನಡ ಪ್ರಭ

ಉಡ್ತಾ ಪಂಜಾಬ್ ಡ್ರಗ್ಸ್ ರೀತಿಯಲ್ಲೇ ಆವರಿಸಿಕೊಳ್ಳುವ ಚಿತ್ರ. ಮತ್ತಿನಲ್ಲಿ ಎಲ್ಲಾ ಭಾವಗಳು ಉತ್ತುಂಗ ತಲುಪುವಂತೆ ಈ ಚಿತ್ರವನ್ನು ನೋಡುತ್ತಾ ಹೋದಂತೆ ಮಾದಕ ದ್ರವ್ಯಗಳ ಕಿಕ್ ನ ಅನುಭವವೇ ಆಗುತ್ತದೆ. ಪಂಜಾಬ್ ರಾಜ್ಯದ ಯುವಜನತೆ ಮಾದಕ ವ್ಯಸನೆಯೊಂದಿಗೆ ಹಾದಿ ತಪ್ಪುತ್ತಿರುವುದು ಹಾಗೂ ಯುವಜನತೆಯನ್ನು ಸರಿಯಾದ ದಾರಿಗೆ ತರಬೇಕಾದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯೇ ಡ್ರಗ್ಸ್ ಜಾಲವನ್ನು ಹುರಿದುಂಬಿಸುವುದನ್ನು ನಿರ್ದೇಶಕ ಅಭಿಷೇಕ್ ಚೌಬೆ ವಾಸ್ತವದ ಪಟ್ಟುಗಳನ್ನು ಬಳಸಿ ನಿರೂಪಣೆ ಮಾಡಿದ್ದಾರೆ. - ಕೆ ಚೇತನ್ ಕುಮಾರ್.

English summary
Hindi Movie 'Udta Punjab' Critics review. Hindi Actor Shahid Kapoor, Bollywood Actress Alia Bhatt, Bollywood Actress Kareena Kapoor starrer 'Udta Punjab' has received mixed response from the critics. Here is the collection of reviews by Top News Papers of Karnataka. The movie is directed by Abhishek Chaubey.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada