For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ತಳಮಳಗಳಿಗೆ ನಗೆಯ ಚೌಕಟ್ಟು 'ಇಕ್ಕಟ್'

  |

  ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿರುವ ಕನ್ನಡ ಸಿನಿಮಾ 'ಇಕ್ಕಟ್', ಸೀಮಿತ ಪಾತ್ರ, ಸೀಮಿತ ಬಜೆಟ್‌ನಲ್ಲಿಯೇ ಲಾಕ್‌ಡೌನ್‌ನಲ್ಲಿ ಕುಟುಂಬಗಳು ಅನುಭವಿಸಿದ ತಳಮಳವನ್ನು, ಸಂಕಷ್ಟವನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡುತ್ತದೆ.

  ನಗರದಲ್ಲಿ ವಾಸಿಸುವ ಮಧ್ಯಮ ವರ್ಗದ ಯುವ ದಂಪತಿ, ಲಾಕ್‌ಡೌನ್‌ನಲ್ಲಿ ಅನುಭವಿಸುವ ಕಷ್ಟಗಳು, ತಾಪತ್ರಯಗಳನ್ನೇ ಹಾಸ್ಯಮಯವಾಗಿ ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಇಶಾಮ್ ಮತ್ತು ಹಸೀನ್ ಖಾನ್. 'ಇಕ್ಕಟ್' ಲಾಕ್‌ಡೌನ್ ಕುರಿತಾಗಿ ಮಾಡಲಾಗಿರುವ ಕನ್ನಡದ ಮೊದಲ ಸಿನಿಮಾ ಸಹ ಹೌದು.

  Rating:
  3.0/5

  (ವಾಸು) ನಾಗಭೂಷಣ್ ಹಾಗೂ ಆತನ ಪತ್ನಿ (ಭೂಮಿ ಶೆಟ್ಟಿ) ಬೆಂಗಳೂರಿನಲ್ಲಿ ವಾಸಿಸುವ ಮಧ್ಯಮ ವರ್ಗದ ಯುವ ದಂಪತಿ. ಮದುವೆಯ ನಂತರದ ಸಿಹಿ ಸಮಯ ಕಳೆದು ಪರಸ್ಪರ ಜಗಳ, ಕಾಲೆಳೆತಕ್ಕೆ ಅವರ ದಾಂಪತ್ಯ ಕಾಲಿಟ್ಟಿದೆ. ಇಬ್ಬರಿಗೂ ಪರಸ್ಪರರ ಸಾಂಗತ್ಯ ಕಿರಿ-ಕಿರಿ ತರುತ್ತಿರುವ ಸಮಯದಲ್ಲಿಯೇ ಮೋದಿ ಲಾಕ್‌ಡೌನ್ ಘೋಷಿಸುತ್ತಾರೆ. ಇಬ್ಬರೂ ಕೊರೊನಾಕ್ಕೆ ಹೆದರಿ ದಿನ ಕಳೆಯಬೇಕಾದರೆ ಅವರ ಮನೆಗೆ ಒಬ್ಬ ಅಗಂತುಕ ಹಾಗೂ ಒಬ್ಬ ಅತಿಥಿಯ ಆಗಮನವಾಗುತ್ತದೆ. ಅಲ್ಲಿಂದ ಅವರ ಸಮಸ್ಯೆಗಳು ದ್ವಿಗುಣವಾಗುತ್ತಾ ಸಾಗುತ್ತದೆ. ಸಿನಿಮಾ ವೀಕ್ಷಕರಿಗೆ ನಗೆಯ ಡೋಸ್‌ ಸಹ ಹೆಚ್ಚಾಗುತ್ತಾ ಹೋಗುತ್ತದೆ.

  ಕೇವಲ ಐದು ಪಾತ್ರಗಳನ್ನಿಟ್ಟುಕೊಂಡು ಒಂದು ಸಣ್ಣ ಮನೆಯಲ್ಲಿಯೇ ಇಡೀ ಚಿತ್ರೀಕರಣ ಮಾಡಲಾಗಿದೆ. ಒಂದೇ ಮನೆಯಲ್ಲಿ ಚಿತ್ರೀಕರಣ ಮಾಡಿದ್ದರೂ ಏಕತಾನತೆ ಎನಿಸಿದಂತೆ ಪ್ರತಿ ದೃಶ್ಯವನ್ನು ಹಲವಾರು ಕೋನಗಳ ಮೂಲಕ ತೋರಿಸುವ ಪ್ರಯತ್ನ ಸಿನಿಮಾದ ಉದ್ದಕ್ಕೂ ಕಾಣುತ್ತದೆ.

  ನಕ್ಕು ಹಗುರಾಗಲು ಒಂದೊಳ್ಳೆ ಕನ್ನಡ ಸಿನಿಮಾ

  ನಕ್ಕು ಹಗುರಾಗಲು ಒಂದೊಳ್ಳೆ ಕನ್ನಡ ಸಿನಿಮಾ

  ''ಸಿನಿಮಾದಲ್ಲಿ ಮಹತ್ತರವಾದುದೇನನ್ನೂ ಹುಡುಕುವ ಪ್ರಯತ್ನ ಮಾಡಬೇಡಿ, ಸುಮ್ಮನೆ ಸಿನಿಮಾ ನೋಡಿ ಖುಷಿ ಪಡಿ'' ಎಂದು ಚಿತ್ರವನ್ನು ನಿರ್ಮಿಸಿದ್ದ ಪವನ್ ಕುಮಾರ್ ಹೇಳಿದ್ದರು. ಅದು ನಿಜವೂ ಹೌದು, ಸಿನಿಮಾದಲ್ಲಿ ಮಹತ್ತರವಾದ ಸಂದೇಶವನ್ನೊ, ಸಿನಿಮಾ ಕಲೆಗಾರಿಕೆಯನ್ನೊ ಹುಡುಕುವ ಬದಲಿಗೆ ಸುಮ್ಮನೆ ಸಿನಿಮಾ ನೋಡಿ ಮನಬಿಚ್ಚಿ ನಕ್ಕು ಹಗುರಾಗಲು ಇದು ಸೂಕ್ತ ಸಿನಿಮಾ.

  ನಿರ್ದೇಶಕರ ಸಾಹಸ ಮೆಚ್ಚಲೇ ಬೇಕು

  ನಿರ್ದೇಶಕರ ಸಾಹಸ ಮೆಚ್ಚಲೇ ಬೇಕು

  ಒಂದು ಮನೆಯ ಒಳಗೆ ಕೇವಲ ಐದು ಪಾತ್ರಗಳನ್ನು ಇಟ್ಟುಕೊಂಡು 2 ಗಂಟೆ 5 ನಿಮಿಷದ ಸಿನಿಮಾ ಕಟ್ಟುವ ಸಾಹವನ್ನು ನಿರ್ದೇಶಕರಿಬ್ಬರು ಚೆನ್ನಾಗಿ ನಿಭಾಯಿಸಿದ್ದಾರೆ. ಸಿನಿಮಾ ಎಲ್ಲೂ ಬೋರ್ ಹೊಡೆಸಬಾರದು ಎಂಬ ಎಚ್ಚರಿಕೆಯನ್ನಿಟ್ಟುಕೊಂಡು ಆಗಾಗ್ಗೆ ಪಾತ್ರಗಳ ವರ್ತನೆಯನ್ನು ಬದಲಾವಣೆ ಮಾಡುತ್ತಾ ಪ್ರೇಕ್ಷಕರು ಕುತೂಹಲವನ್ನು ಕೊನೆಯವರೆಗೆ ಉಳಿಸಿಕೊಂಡಿದ್ದಾರೆ. ದೃಶ್ಯಗಳ ನಡುವೆ 'ಜಾಣತನದ ಕಟ್‌ಗಳು', ಕಿರು ಫ್ಲಾಷ್‌ಬ್ಯಾಕ್‌ಗಳು ಇಂಥ ಟೆಕ್‌ನಿಕ್‌ಗಳನ್ನು ಬಳಸಿ ಕತೆಯ ನಿರೂಪಣೆ ಫ್ರೆಶ್ ಆಗಿರುವಂತೆ ನೋಡಿಕೊಂಡಿದ್ದಾರೆ.

  ಭೂಮಿ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ

  ಭೂಮಿ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ

  ಸಿನಿಮಾದಲ್ಲಿ ಇರುವುದು ಕೇವಲ ಐದೇ ಪಾತ್ರ. ಅದರಲ್ಲೂ ಮೂರು ಪಾತ್ರಗಳು ಮಾತ್ರವೇ ಹೆಚ್ಚು ಸಮಯ ತೆರೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಹಾಗಾಗಿಯೇ ಅಭಿನಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅದಕ್ಕೆ ತಕ್ಕಂತೆಯೇ ಸಿನಿಮಾದಲ್ಲಿರುವ ಎಲ್ಲರ ಅಭಿನಯವೂ ಚೆನ್ನಾಗಿದೆ. ಭೂಮಿ ಶೆಟ್ಟಿ ಅಭಿನಯಕ್ಕಂತೂ ಪೂರ್ಣ ಅಂಕ. ಮತ್ತೊಬ್ಬರ ಕೈಲಿ ಆ ಪಾತ್ರವನ್ನು ಅಷ್ಟು ಚೆನ್ನಾಗಿ ನಟಿಸಲು ಸಾಧ್ಯವಿಲ್ಲವೇನೋ ಅನ್ನಿಸುವ ಮಟ್ಟಿಗೆ ಪಾತ್ರವೇ ತಾನಾಗಿದ್ದಾರೆ ಭೂಮಿ. ಹಿರಿಯ ನಟ ಸುಂದರ್‌ಗೆ ಕರ್ಣನ ಪಾತ್ರ ಸವಾಲೇ ಅಲ್ಲ. ಅವರ ನಟನೆ ಸಿನಿಮಾಕ್ಕೆ ಹೊಸ ಕಳೆ ತಂದುಕೊಟ್ಟಿದೆ. ನಾಗಭೂಷಣ್ ನಟನೆಯೂ ಬಹಳ ಚೆನ್ನಾಗಿದೆ. ನಾಗಭೂಷಣ್‌ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದು.

  ಸರಳ, ಸುಂದರ ಸಿನಿಮಾ ಕೊಟ್ಟ ತಂಡ ಅಭಿನಂದನಾರ್ಹ

  ಸರಳ, ಸುಂದರ ಸಿನಿಮಾ ಕೊಟ್ಟ ತಂಡ ಅಭಿನಂದನಾರ್ಹ

  ಸಿನಿಮಾದ ಪ್ರಮುಖ ಅಂಶ ಚುರುಕಾದ ಸಂಭಾಷಣೆ. ಚುರುಕಾದ ಸಂಭಾಷಣೆಯೇ ಕತೆಯನ್ನು ಬೋರ್‌ ಹೊಡೆಸದೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಕಿರು ನಗು, ಜೋರು ನಗು ಎರಡನ್ನೂ ಮೂಡಿಸುವ ಸಂಭಾಷಣೆಗಳು ಸಿನಿಮಾದಲ್ಲಿವೆ. ಸಿನಿಮಾದ ಮತ್ತೊಂದು ಪ್ರಮುಖ ಅಂಶ ಕ್ಯಾಮೆರಾ ಕೆಲಸ. ಬಹಳ ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಚೆನ್ನಾಗಿಯೇ ದೃಶ್ಯಗಳಿಗೆ ಕ್ಯಾಮೆರಾ ಹಿಡಿದಿದ್ದಾರೆ ಲವಿತ್. ಒಂದೇ ಮನೆಯಲ್ಲಿ ಕತೆ ನಡೆದರೂ ಪ್ರತಿ ದೃಶ್ಯವೂ ಸಾಧ್ಯವಾದಷ್ಟೂ ಹೊಸದಾಗಿರುವಂತೆ ಭಿನ್ನ ಕೋನದಿಂದ ಕಾಣುವಂತೆ ಜಾಗೃತೆ ವಹಿಸಿದ್ದಾರೆ. ಅಷ್ಟು ಕಿರಿದಾದ ಜಾದಲ್ಲಿ ಸಿನಿಮಾ ಚಿತ್ರೀಕರಣ ಮಾಡಬೇಕೆಂದರೆ ಎಲ್ಲರೂ ಬಹಳವೇ ಶ್ರಮ ಹಾಕಬೇಕಾಗಿರುತ್ತದೆ. ಅಂಥಹಾ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲಸ ಮಾಡಿ ಸರಳವಾದ ಆದರೆ ಸುಂದರವಾದ ಸಿನಿಮಾ ಕೊಟ್ಟಿರುವ ತಂಡ ಅಭಿನಂದನಾರ್ಹ.

  English summary
  Kannada movie Ikkat released on Amazon prime recently. Here is the review of Kannada movie Ikkat.
  Thursday, July 22, 2021, 17:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X