»   » ಜಾನು ಮಾಡಲು ಹೋಗಿ.. ಏನೋ ಮಾಡಿದೆ?

ಜಾನು ಮಾಡಲು ಹೋಗಿ.. ಏನೋ ಮಾಡಿದೆ?

By: ವಿನಾಯಕರಾಮ್ ಕಲಗಾರು
Subscribe to Filmibeat Kannada

ಒಂದಾನೊಂದು ಪೇಟೆಯಲ್ಲಿ ಒಬ್ಬ ನಾಯಕ ಇರುತ್ತಾನೆ. ಅವನು ಸಿನಿಮಾ ಆರಂಭದಲ್ಲಿ ಸಿಟಿಯಲ್ಲಿ ಇರುತ್ತಾನೆ. ತಂಟೆ ತರಲೆ ಮಾಡುತ್ತಿರುತ್ತಾನೆ. ಆಗ ಇದ್ದಕ್ಕಿದ್ದಂತೇ ಹಳ್ಳಿಯ ದಾರಿ ಕಾಣುತ್ತದೆ. ಪ್ಯಾಟೆಯಿಂದ ಹಳ್ಳಿ ಕಡೆಗೆ ಪ್ರಯಾಣ ಬೆಳೆಸುತ್ತಾನೆ...!

ಇದು ಯೋಗರಾಜ್ ಭಟ್ಟರ ಹೆಚ್ಚಿನ ಸಿನಿಮಾದಲ್ಲಿ ಬರುವ ಒನ್ ಲೈನ್ ಸ್ಟೋರಿ. ಅದು ಮುಂಗಾರುಮಳೆ, ಗಾಳಿಪಟ, ಪಂಚರಂಗಿ, ಪರಮಾತ್ಮ... ಹೀಗೆ ಹೆಚ್ಚಿನ ಭಟ್ಟರ ಚಿತ್ರಗಳಲ್ಲಿ ಇದೇ ಫಾರ್ಮುಲಾ. ಮನಸಾರೇ ಚಿತ್ರದಲ್ಲಿ ಸ್ವಲ್ಪ ಚೇಂಜು-ನಾಯಕ ಪ್ಯಾಟೆಯಿಂದ ಹಳ್ಳಿಯಲ್ಲಿರುವ ಹುಚ್ಚಾಸ್ಪತ್ರೆಗೆ ಹೋಗುತ್ತಾನೆ ಚೊಂಬೇಶ್ವರಾ!

ಅದೇ ಪ್ಯಾಟೇ ಹೀರೋ ಹಳ್ಳೀಗ್ ಬಂದ ಫಾರ್ಮುಲಾವನ್ನು ಜಾನು ಚಿತ್ರದಲ್ಲೂ ಮುಂದುವರೆಸಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಸಿನೆಮಾದಲ್ಲಿ ಏನೆಲ್ಲಾ ಮಸಾಲೆ-ಮಜ್ಜಿಗೆ-ಮ್ಯಾಜಿಕ್ ಇರಬೇಕೋ ಅವೆಲ್ಲವನ್ನೂ ಇಟ್ಟುಕೊಂಡು ಕತೆಯ ವಿಚಾರದಲ್ಲಿ ಅದೇ ಹಳೇ ಫಾರ್ಮುಲಾಗೆ ಹೊಸ ಬಣ್ಣ ಬಳಿದು ಅದಕ್ಕೆ ಜಾನು ರೂಪ ಕೊಟ್ಟಿದ್ದಾರೆ ಪ್ರೀತಂ.

ಮಜಾ ಎಂದರೆ, ಮಳೆಯಲಿ ಜೊತೆಯಲಿ ಚಿತ್ರದಲ್ಲೂ ಪ್ರೀತಂ ನಾಯಕನನ್ನು ಹಳ್ಳಿಗೆ ಕಳಿಸಿ, ಹೆಗಲು ಅಲ್ಲಾಡಿಸಿದ್ದು ಈಗ ಇತಿಹಾಸ ಮತ್ತು ಭೂಗೋಳ. ಅದನ್ನು ನಿಮಗೆ ಮತ್ತು ಕನ್ನಡ ಚಿತ್ರರಸಿಕರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಜಾನೂ ಮಾಡಲು ಹೋಗಿ, ಏನೋ ಮಾಡಿದೆ ನೀನು... ಎಂದರೆ ಎಲ್ಲವೂ ಅರ್ಥವಾದೀತು...

ಪ್ರೀತಂ ಅತ್ಯುತ್ತಮ ಚಿತ್ರಕಥೆಗಾರ. ಅದು ಮುಂಗಾರು ಮಳೆ ಚಿತ್ರದಲ್ಲೇ ಪ್ರೂವ್ ಆಗಿದೆ. ಅದೊಂದೇ ಪ್ರೀತಂ ಬಂಡವಾಳ. ಅದೊಂದನ್ನು ಅಚ್ಚುಕಟ್ಟಾಗಿ ಕೂರಿಸುತ್ತಾರೆ. ಅದೊಂದನ್ನು ಬಿಟ್ಟರೆ ನಿರ್ದೇಶನ ಮತ್ತು ಕಥೆಗೆ ತಕ್ಕ ದೃಶ್ಯ ಜೋಡಣೆ ಮಾಡುವುದರಲ್ಲಿ ಪ್ರೀತಂದು ಶೂನ್ಯ ಸಂಪಾದನೆ.

ಜಾನು ಚಿತ್ರವೂ ಅಷ್ಟೇ. ಒಬ್ಬ ಅಮಾಯಕ ಎನಿಸುವ ಲವರ್ ಬಾಯ್ ಹುಡುಗಿಯೊಬ್ಬಳನ್ನು ತನ್ನ ತವರಿಗೆ ಬಿಟ್ಟುಬರಲು ಪೇಟೆಯಿಂದ ಹಳ್ಳಿ ಹಾದಿ ಹಿಡಿಯುತ್ತಾನೆ. ಆ ಮಾರ್ಗ ಮಧ್ಯೆ ಒಂದಷ್ಟು ಮಾತು-ಕಥೆ-ಕಾಮಿಡಿ ಮಾಡುವ ಪ್ರಯತ್ನ. ಕಬಡ್ಡಿ, ಕೋಕೋ, ಲಗೋರಿ, ತಂಬೂರಿ...

ಯಶ್ ಮತ್ತು ದೀಪಾ ಸನ್ನಿಧಿಗೆ ಕೈ ತುಂಬಾ ಕೆಲಸ ಕೊಡಲಾಗಿದೆ. ಜೊತೆಗೆ ರಂಗಾಯಣ ರಘು ಅವರ ರಾಂಗ್ ರೂಟ್ ಡೈಲಾಗ್ ಡಿಲೆವರಿ. ರಘು ಮ್ಯಾನರಿಸಂ ಬದಲಾಗಿಲ್ಲ. ಸದ್ಯಕ್ಕೆ ಅದು ಬದಲಾಗುವ ಲಕ್ಷಣ ಕಾಣುತ್ತಿಲ್ಲ!

ಇನ್ನು ಯಶ್.ಅವರ ನಟನೆ ನೋಡುತ್ತಿದ್ದರೆ ಅಯ್ಯೋ ಪಾಪ ಎನಿಸುತ್ತದೆ. ಅಷ್ಟು ಬೆವರಿಳಿಸಿ ನಟಿಸಿದ್ದಾರೆ ಯಶ್. ಆದರೆ ಎಲ್ಲದಕ್ಕೂ ಲಕ್ಕಿ ಇರಬೇಕು ಅಲ್ವಾ? ದೀಪಾ ಸನ್ನಿಧಿ ಸೌಂದರ್ಯಕ್ಕೆ ಬೆಣ್ಣೆಯೇ ಬೆವರುತ್ತದೆ. ನಟನೆಯಲ್ಲೂ ದೀಪಾ ಯಶ್‌ಗೆ ಹೋಲಿಸಿದರೆ ಒಂದು ಕೈ ಮೇಲೆ. ಆಕೆ ಮುಂದೊಂದು ದಿನ ನಂಬರ್ ಒನ್ ನಾಯಕಿಯಾಗುವ ಸಾಧ್ಯತೆ ಇದೆ ಎಂದರೆ ಕೆಲ ರಮ್ಯ ನಟಿಯರು ಹೊಟ್ಟೆ ತಿಕ್ಕಿಕೊಳ್ಳಬಾರದು!

ಸಾಧುಕೋಕಿಲಾ ಅಲ್ಲಲ್ಲಿ ಎಂಟ್ರಿ ಕೊಟ್ಟು ರಿಲ್ಯಾಕ್ಸ್ ಮಾಡುತ್ತಾರೆ. ಸಾಧು ಇಲ್ಲದಿದ್ದರೆ ಜಾನು ಕಥೆ ಏನು ಏನು ಆಗುತ್ತಿತ್ತೋ ಗೊತ್ತಿಲ್ಲಾ ಗೋವಿಂದಾ... ನಟ ಶೋಭರಾಜ್ ಉತ್ತರ ಕರ್ನಾಟಕದ ಬ್ಯಾಡಗಿ ಭೀಮರಾಯ ಕಟ್ಟೀಮನಿಯಂತೇ ಕಾಣುತ್ತಾರೆ;ಕಂಗೊಳಿಸುತ್ತಾರೆ. ನಿರ್ದೇಶಕರ ಮರ್ಯಾದೆ ಉಳಿಸುತ್ತಾರೆ.

ಜಾನು ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯ ಬಳಕೆ ಮಾಡಲಾಗಿದೆ. ಆದರೆ, ಅದನ್ನು ಬಳಸಿಕೊಳ್ಳಲು ನಿರ್ದೇಶಕರಿಗೆ ಒಂದು ಗುಣಮಟ್ಟದ ತಯಾರಿ ಬೇಕು. ಎ.ಸಿ.ರೂಮಿನಲ್ಲಿ ಕೂತು ಕಥೆ ಬರೆಯುವ ಕಾರ್ಪರೇಟ್ ಸಂಸ್ಕೃತಿಯ ಪರಮಾವತಾರ ಪ್ರೀತಂ ಗುಬ್ಬಿ ಆ ಭಾಷೆಯನ್ನು ತಮ್ಮ ಚಿತ್ರದಲ್ಲಿ ಬಳಸಿಕೊಳ್ಳುವ ಮುನ್ನ ಕಡೇ ಪಕ್ಷ ಯೋಗರಾಜ್ ಭಟ್ಟರ ಸಲಹೆ-ಸೂಚನೆ ತೆಗೆದುಕೊಂಡಿದ್ದರೆ ಬಳಸಿದ ಆ ಭಾಷೆಗೆ ಒಂದು ಗೌರವ ಕೊಟ್ಟಂತಾಗುತ್ತಿತ್ತು!

ಇನ್ನುಳಿದಂತೇ ಹರಿಕೃಷ್ಣ ಸಂಗೀತದಲ್ಲಿ ಹೇಳುವಂಥ ಹೊಸತನ ಇಲ್ಲ. ಅದೇ ಟಪ್ಪಾಂಗೊಚ್ಚಿ, ಅದೇ ಮೆಲೋಡಿ, ಅದೇ ಸೋನು ನಿಗಮ್, ಅದೇ ಫೀಲ್ ಸಾಂಗು ಗುರು...ರಾಂಗು ಗುರೂ... ಕ್ಯಾಮರಾಮನ್ ಕೃಷ್ಣ ಬಗ್ಗೆ ಹೇಳೋದೇ ಬೇಡಾ ಕೃಷ್ಣ ರಂಗಿನಾಟಾ..

ಪ್ರೀತಂ ಮುಂದಿನ ಚಿತ್ರದಲ್ಲಿ ಕಥೆ ಮತ್ತು ಅದನ್ನು ಕಣ್ಣಿಗೆ ಕಟ್ಟಿಕೊಡುವ ವಿಚಾರದಲ್ಲಿ ಗಮನ ಹರಿಸಲಿ, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆಸಲಿ, ಹಾಗೇ ಸುಮ್ಮನೇ ಏನೇನೋ ಮಾಡಲು ಹೋಗಿ ಇನ್ನೇನೋ ಮಾಡದೇ ಒಳ್ಳೆ ಸಿನಿಮಾ ಮಾಡಲಿ ಗುಬ್ಬಿ ಗವಿಗಂಗಾಧರೇಶ್ವರಾ!

English summary
Preetham Gubbi movie Janoo Review. Rocking Star Yash and Deepa Sannidhi acted in main role. This movie had grand opening in all reteased theaters and getting miced response from odience.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada