»   » ವಿಮರ್ಶೆ: ಹಳೆ ಜಾನಿಯ ಹೊಸ ಸ್ಟೈಲ್

ವಿಮರ್ಶೆ: ಹಳೆ ಜಾನಿಯ ಹೊಸ ಸ್ಟೈಲ್

Posted By:
Subscribe to Filmibeat Kannada

2011ರಲ್ಲಿ ಸೂಪರ್ ಹಿಟ್ ಆಗಿದ್ದ 'ಜಾನಿ' ಚಿತ್ರತಂಡದಿಂದಲೇ ಮೂಡಿ ಬಂದಿರುವ ಸಿನಿಮಾ 'ಜಾನಿ ಜಾನಿ ಎಸ್ ಪಪ್ಪಾ'. ಅದೇ ನಾಯಕ, ಅದೇ ನಿರ್ದೇಶಕ, ಅದೇ ಕಥೆ, ಬಹುತೇಕ ಅದೇ ಚಿತ್ರಕಥೆ, ಹೀರೋಯಿನ್ ಮಾತ್ರ ಚೇಂಜ್....ಒಂದೇ ಮಾತಿನಲ್ಲಿ ಹೇಳುವುದಾದರೇ ಹಳೆ ಜಾನಿಯ ಹೊಸ ಸ್ಟೈಲ್ ಇದು.

Rating:
3.5/5

ಚಿತ್ರ: ಜಾನಿ ಜಾನಿ ಎಸ್ ಪಪ್ಪಾ
ಕಥೆ-ಚಿತ್ರಕಥೆ-ನಿರ್ದೇಶನ: ಪ್ರೀತಮ್ ಗುಬ್ಬಿ
ನಿರ್ಮಾಣ: ದುನಿಯಾ ಟಾಕೀಸ್
ಸಂಗೀತ: ಅಜನೀಶ್ ಲೋಕನಾಥ್
ಕಲಾವಿದರು; ದುನಿಯಾ ವಿಜಯ್, ರಚಿತಾ ರಾಮ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸಾಧುಕೋಕಿಲಾ ಮತ್ತು ಇತರರು.
ಬಿಡುಗಡೆ: ಮಾರ್ಚ್ 30, 2018

ದುನಿಯಾ ವಿಜಿ-ರಚಿತಾ ಜೋಡಿಯ 'ಜಾನಿ' ನೋಡಲು 5 ಕಾರಣ.!

ಮನರಂಜನೆಯ ಜರ್ನಿ

'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಕಂಪ್ಲೀಟ್ ಮನರಂಜನೆ. ಆರಂಭದಿಂದ ಅಂತ್ಯದವರೆಗೂ ಪ್ರತಿಯೊಂದು ದೃಶ್ಯದಲ್ಲೂ ಪ್ರೇಕ್ಷಕರನ್ನ ರಂಜಿಸುವ ಸಾಹಸವನ್ನ ವಿಜಿ ಮತ್ತು ತಂಡ ಮಾಡಿದೆ. ಇದಕ್ಕಾಗಿ ದುನಿಯಾ ವಿಜಿ 100% ಪ್ರಯತ್ನ ಪಟ್ಟಿರೋದು ತೆರೆಮೇಲೆ ಕಾಣುತ್ತೆ. ಆದ್ರೆ, ಜಾನಿಯ ರಂಜನೆ ಪ್ರೇಕ್ಷಕರಿಗೆ ತಲುಪುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ.

ರೈನ್ ಬೋ ಕಾಲೋನಿಯ ಡೀಲ್ ಜಾನಿ.!

ರೈನ್ ಬೋ ಕಾಲೋನಿಯಲ್ಲಿ ಎಲ್ಲದಕ್ಕೂ ಜಾನಿಯೇ ಬೇಕು. ಪ್ರತಿಯೊಂದು ಕೆಲಸವನ್ನ ಡೀಲ್ ತಗೊಂಡು ಮಾಡುವುದೇ ಜಾನಿಯ ವೃತ್ತಿ. ಸ್ವತಃ ಪೊಲೀಸರೇ ಜಾನಿಗೆ ಡೀಲ್ ಕೊಟ್ಟು ಕೆಲಸ ಮಾಡಿಸುವುದು ಜಾನಿ ಪ್ರಾಮುಖ್ಯತೆ ಹೇಳುತ್ತೆ. ಈ ಜಾನಿ ಮಾಡೋದು ಎಲ್ಲವೂ ಉತ್ತಮ ಸಮಾಜಕ್ಕಾಗಿ. ಒಂದು ಹಾಡು ಮತ್ತು ಒಂದೆರೆಡು ದೃಶ್ಯಗಳನ್ನ ಬಿಟ್ಟರೇ ಇಡೀ ಸಿನಿಮಾ ಕಥೆ ನಡೆಯುವುದು ರೈನ್ ಬೋ ಕಾಲೋನಿಯಲ್ಲಿ.

ಜಾನಿ ಲವ್ಸ್ ಪ್ರಿಯಾ

'ಜಾನಿ ಜಾನಿ ಎಸ್ ಪಪ್ಪಾ' ಪಕ್ಕಾ ಲವ್ ಸ್ಟೋರಿ. ತಮ್ಮದೇ ಕಾಲೋನಿಗೆ ಬರುವ ಪ್ರಿಯಾ (ರಚಿತಾ ರಾಮ್) ಮೇಲೆ ಜಾನಿಗೆ ಲವ್ವು. ಪ್ರಿಯಾಗೆ ಯು.ಎಸ್ ಗೆ ಹೋಗ್ಬೇಕು ಎಂಬ ಕನಸು. ಇದಕ್ಕಾಗಿ ತಯಾರಿ ನಡೆಸುತ್ತಿರುತ್ತಾಳೆ. ಈ ಮಧ್ಯೆ ಡೀಲ್ ಮಾಡುವ ಜಾನಿಗೆ ಪ್ರಿಯಾ ಅವರ ಅಪ್ಪನೇ ಒಂದು ಡೀಲ್ ಕೊಡ್ತಾರೆ. ಪ್ರಿಯಾ ಪ್ರೀತಿಗಾಗಿ ಜಾನಿ ಏನೆಲ್ಲಾ ಆಕ್ಷನ್, ರಿಯಾಕ್ಷನ್ ಮಾಡ್ತಾರೆ ಎನ್ನುವುದು ಚಿತ್ರಕಥೆ. ಪ್ರಿಯಾ ಯು.ಎಸ್ ಗೆ ಹೋಗ್ತಾಳ.? ಜಾನಿ ಲವ್ವು ಏನಾಗುತ್ತೆ.? ಎಂಬುದನ್ನ ಸಿನಿಮಾದಲ್ಲಿ ನೋಡಿ ಎಂಜಾಯ್ ಮಾಡಬಹುದು.

ಜಬರ್ ದಸ್ತ್ 'ಜಾನಿ'

'ಜಾನಿ' ಚಿತ್ರಕ್ಕೆ ದುನಿಯಾ ವಿಜಯ್ ನಿಜವಾದ ಸಾರಥಿ. ವಿಜಿ ಇಲ್ಲದ ದೃಶ್ಯಗಳು ಸಿನಿಮಾದಲ್ಲಿ ಅಪರೂಪ. ಕಾಮಿಡಿ, ಪಂಚಿಂಗ್ ಡೈಲಾಗ್, ಆಕ್ಷನ್ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದಾರೆ. ಕಮರ್ಷಿಯಲ್ ಸಿನಿಮಾದ ನಾಯಕ ಎನ್ನುವುದನ್ನೇ ಮರೆತು ಒಬ್ಬ ನಟನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಶ್ರೀರಾಮನ ವೇಷ, ಅಂತಾರಾಷ್ಟ್ರೀಯ ಟಿವಿ ವರದಿಗಾರನ ಗೆಟಪ್ ಇದಕ್ಕೆ ಉತ್ತಮ ಸಾಕ್ಷಿ.

ಮೂರು ಭರ್ಜರಿ ಫೈಟ್

ದುನಿಯಾ ವಿಜಯ್ ಅಭಿಮಾನಿಗಳು ನಿರೀಕ್ಷೆ ಮಾಡುವ ಆಕ್ಷನ್ ಈ ಚಿತ್ರದಲ್ಲಿದೆ. ಮೂರು ಭರ್ಜರಿ ಫೈಟ್ ಚಿತ್ರದಲ್ಲಿ. ಅದರಲ್ಲೂ ಒಂದು ಫೈಟ್ ನಲ್ಲಿ ವಿಜಿ ಅವರ ಸಿಕ್ಸ್ ಫ್ಯಾಕ್ ದರ್ಶನ ಮಾಡಿಸುವುದರ ಜೊತೆಗೆ ಜಬರ್ ದಸ್ತ್ ಆಕ್ಷನ್ ನೋಡಬಹುದು.

ಹೊಸ ಪದ್ಮಾವತಿ

ಜಾನಿಗೆ ಉತ್ತಮ ಸಾಥ್ ನೀಡಿರುವ ರಚಿತಾ ರಾಮ್ ಚಿತ್ರಕ್ಕೆ ಗ್ಲಾಮರ್ ಹೆಚ್ಚಿಸಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ಅವರೇ ಡಬ್ ಮಾಡಿರುವುದು ಉತ್ತಮ ಬೆಳವಣಿಗೆ. ಇನ್ನುಳಿದಂತೆ ವಿಜಿ-ರಂಗಾಯಣ ಕಾಂಬಿನೇಷನ್ ಎಂದಿನಂತೆ ಮೋಡಿ ಮಾಡಿದೆ. ಎರಡು ದೃಶ್ಯದಲ್ಲಿ ಸಾಧು ಹಾಸ್ಯ ಕಚಕುಳಿ ಇಡುತ್ತೆ. ಅಚ್ಯುತ್ ಕುಮಾರ್, ಗಡ್ಡಪ್ಪ ಹಾಗೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಯೂರಿ ಇಷ್ಟವಾಗ್ತಾರೆ.

ತಾಂತ್ರಿಕವಾಗಿ ಸಿನಿಮಾ

ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಹೊಸತನ ಕಾಣಿಸುವುದು ಕಮ್ಮಿ. ಎಂದಿನಂತೆ ಅವರ ಸ್ಟೈಲ್ ನಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಸಾಥ್ ನೀಡಿದೆ. ಇನ್ನು ಕರುಣಾಕರ್ ಕ್ಯಾಮೆರಾ ವರ್ಕ್ ಹಾಗೂ ಗಣೇಶ್ ಮಲ್ಲಯ್ಯ ಅವರ ಸಂಕಲನವೂ ಗಮನ ಸೆಳೆಯುತ್ತೆ. ಆದ್ರೆ, ಕೆಲವೊಂದು ದೃಶ್ಯಗಳು ಹಗಲು ನಡೆಯುತ್ತಿದೆಯೋ ಅಥವಾ ರಾತ್ರಿ ನಡೆಯುತ್ತಿದೆಯೋ ಎಂಬ ಗೊಂದಲ ಉಂಟು ಮಾಡುತ್ತೆ. ಕಂಟ್ಯೂನಿಟಿ ಸಮಸ್ಯೆಯೂ ಕಾಡುತ್ತೆ.

ಕೊನೆಯ ಮಾತು

ಸಿನಿಮಾ ಉದ್ದಕ್ಕೂ ಪ್ರೇಕ್ಷಕರನ್ನ ರಂಜಿಸುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ಹೊಸದೇನು ಇಲ್ಲ. ಈ ಎಲ್ಲವನ್ನ ಈ ಹಿಂದೆಯೇ 'ಜಾನಿ' ಚಿತ್ರದಲ್ಲಿ ನೋಡಿ ಆಗಿದೆ. ನಾಯಕಿ ಬದಲಾಗಿದ್ದಾರೆ ಎಂಬುದು ಬಿಟ್ರೆ ಕಥೆಯಲ್ಲಿ ಹೊಸತನವಿಲ್ಲ. ಇನ್ನು ಇದು 'ಜಾನಿ' ಚಿತ್ರದ ಮುಂದುವರೆದ ಭಾಗವೂ ಅಲ್ಲ. ಇದನ್ನ ಹೊರತುಪಡಿಸಿದ್ರೆ, ಸಿನಿಮಾದಲ್ಲಿ ಎಂಟರ್ ಟೈನ್ ಮೆಂಟ್ ಇದೆ. ಪ್ರೇಕ್ಷಕರನ್ನ ನಿರಾಸೆ ಮಾಡಿಸಲ್ಲ. ಎಲ್ಲ ಕಲಾವಿದರು ನಗಿಸುವಲ್ಲಿ ಸಕ್ಸಸ್ ಆಗಿದ್ದಾರೆ. 'ಜಾನಿ' ನೋಡದೇ ಇದ್ದವರು ಫ್ರೆಶ್ ಆಗಿ 'ಜಾನಿ ಜಾನಿ ಎಸ್ ಪಪ್ಪಾ' ನೋಡಬಹುದು. ಜಾನಿ ನೋಡಿದ್ದವರು ಹೊಸ ಸ್ಟೈಲ್ ನಲ್ಲಿ ಜಾನಿ ಹೇಗಿದ್ದಾನೆ ಎಂದು ನೋಡಬಹುದು.

English summary
Kannada actor duniya vijay and actress rachita ram starrer johny jhony yes papa kannada movie review. the movie get mixed response from audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X