»   » ಕಡ್ಡಿಪುಡಿ : ಶಿವಣ್ಣ ಎಕ್ಸೆಲೆಂಟ್, ಸೂರಿ ಬ್ರೀಲಿಯೆಂಟ್!

ಕಡ್ಡಿಪುಡಿ : ಶಿವಣ್ಣ ಎಕ್ಸೆಲೆಂಟ್, ಸೂರಿ ಬ್ರೀಲಿಯೆಂಟ್!

Posted By:
Subscribe to Filmibeat Kannada

'ದುನಿಯಾ' ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಬಹುದಾ? ರೌಡಿ ಪಾತ್ರದಲ್ಲಿ ನಟಿಸಿರುವ ಅವರ ಹಲವಾರು ಚಿತ್ರಗಳು ಅವರಿಗೆ ಜೀವವನ್ನು ನೀಡಿವೆ, ಹಲವಾರು ಚಿತ್ರಗಳು ಇನ್ನಿಲ್ಲದಂತೆ ನೆಲಕಚ್ಚಿವೆ. ಆದರೆ, ಈ ಚಿತ್ರ ರೌಡಿಸಂ ಸುತ್ತ ಹೆಣೆದಿರುವ ಚಿತ್ರವಾದರೂ ಆ ಚಿತ್ರಗಳಂತಿಲ್ಲ ಎಂದು ಸೂರಿ ಹೇಳಿರುವುದು ಭಾರೀ ಆಸಕ್ತಿ ಕೆರಳಿಸಿದೆ.

ಕರ್ನಾಟಕದಾದ್ಯಂತ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮೊದಲ ಶೋಗೆ ಭರ್ಜರಿ ಆರಂಭ ದೊರಕಿರುವುದಂತೂ ಸತ್ಯ. ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ ಎಂದು ವರದಿಗಳು ಎಲ್ಲೆಡೆಯಿಂದ ಹರಿದುಬರುತ್ತಿವೆ. ಲಾಂಗ್ ಹಿಡಿದು ಶಿವಣ್ಣ ಬರುವಾಗ ರೌಡಿಯೊಬ್ಬ "ನಿನ್ ಅಪ್ಪಂದಾ ಈ ರೋಡು" ಎಂಬ ಡೈಲಾಗಿಗೆ ಡಾ. ರಾಜ್ ಕುಮಾರ್ ರಸ್ತೆ ತೋರಿಸಿದಾಗ ಭರ್ಜರಿ ಶಿಳ್ಳೆಗಳ ಸುರಿಮಳೆ.

ಈ ಚಿತ್ರ ಕೂಡ ಟಿಪಿಕಲ್ ಸೂರಿ ಸ್ಟೈಲಿನಲ್ಲಿದೆ ಎಂಬ ಮಾತು ಚಿತ್ರಮಂದಿರಗಳಿಂದ ಟ್ವಿಟ್ಟರ್ ಮುಖಾಂತರ ಕೇಳಿಬಂದಿದ್ದು, ಐವತ್ತರ ಹರೆಯದ 'ಚಿರಯುವಕ' ಶಿವರಾಜ್ ಕುಮಾರ್ ಮತ್ತು ಇಪ್ಪತ್ತೊಂಬತ್ತರ 'ತರುಣಿ', ಪ್ರತಿಭಾವಂತ ನಟಿ ರಾಧಿಕಾ ಪಂಡಿತ್ ಇಬ್ಬರ ಜೋಡಿ ಯಾವ ರೀತಿ ಮೋಡಿ ಮಾಡಲಿದೆ ಎಂಬುದು ಮೊದಲ ದಿನವೇ ನಿರ್ಧಾರವಾಗಲಿದೆ.

ಟ್ವಿಟ್ಟರ್ ಮುಖಾಂತರ ಎಂಥ ಕಾಮೆಂಟುಗಳು ಹರಿದುಬರುತ್ತಿವೆ ಎಂಬುದರ ಕಡೆ ಒಮ್ಮೆ ನೋಟ ಹರಿಸೋಣ. [ಕಡ್ಡಿಪುಡಿ ಪೂರ್ಣ ಚಿತ್ರವಿಮರ್ಶೆ]

ಚಿತ್ರಮಂದಿರಗಳೆಲ್ಲ ಭರ್ತಿ

ಕೆಂಪೇಗೌಡ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ಕಿಕ್ಕಿರಿದು ತುಂಬಿದೆಯಂತೆ. ಹಾಗೆಯೆ, ಹೊಸಪೇಟೆ, ಹುಬ್ಬಳ್ಳಿ, ಮೈಸೂರು ಮುಂತಾದಕಡೆಯೆಲ್ಲ ಕೂಡ ಭಾರೀ ಜನಸ್ಪಂದನೆ ವ್ಯಕ್ತವಾಗಿದೆಯಂತೆ.

ಇಂಟರ್ವಲ್ ವರೆಗೆ ಸೂಪರ್ ಡೂಪರ್

ಇಂಟರ್ವಲ್ ವರೆಗೆ ಕಡ್ಡಿಪುಡಿ ಸೂಪರ್ ಡೂಪರ್ ಎಂಬ ಸಂದೇಶವನ್ನು ಚಿತ್ರಮಂದಿರದಿಂದಲೇ ಒನ್ಇಂಡಿಯಾ ಕನ್ನಡ ಪತ್ರಕರ್ತ ರವಾನಿಸಿದ್ದಾರೆ. ಕುರ್ಚಿಯಲ್ಲಿ ಕುಳಿತ ಪ್ರೇಕ್ಷಕರು ಅಲುಗಾಡದಂತೆ ಚಿತ್ರಕಥೆಯನ್ನು ಸೂರಿ ಹೆಣೆದಿದ್ದಾರೆ, ಚಿತ್ರಕಥೆಯಲ್ಲಿ ಸೂರಿ ಜೀವ ತುಂಬಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.

ರಾಧಿಕಾ, ರಂಗಾಯಣ ರಘು ಹಾಸ್ಯ

ರಾಧಿಕಾ ಪಂಡಿತ್ ಇಂಥ ಪಾತ್ರ ಬಹುಶಃ ಮಾಡಿರಲಿಕ್ಕಿಲ್ಲ. ಕೈಯಲ್ಲಿ ಲಾಂಗ್ ಹಿಡಿದು ಶಿವರಾಜ್ ಕುಮಾರ್ ರನ್ನು ಅಟ್ಟಿಸಿಕೊಂಡು ಬರುವ ಸನ್ನಿವೇಶ ಕೂಡ ನಗೆಯನ್ನು ಉಕ್ಕಿಸುತ್ತದೆ. ಇನ್ನು ರಂಗಾಯಣ ರಘು ಇದ್ದರಂತೂ ಹಾಸ್ಯಕ್ಕೆ ಕೊರತೆಯೇ ಇಲ್ಲ.

ಹಿನ್ನೆಲೆ ಸಂಗೀತವೇ ಹೈಲೈಟ್!

ವಿ. ಹರಿಕೃಷ್ಣ ನೀಡಿರುವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಮುಂಗಾರು ಮಳೆ ಚಿತ್ರದಲ್ಲಿ ಅದ್ಭುತ ಕ್ಯಾಮೆರಾ ಕೈಚಳಕ ತೋರಿದ್ದ ಎಸ್ ಕೃಷ್ಣ ಅವರ ಛಾಯಾಗ್ರಹಣ ಚಿತ್ರಕ್ಕೆ ಮಾಂತ್ರಿಕ ಸ್ಪರ್ಶ ನೀಡಿದೆ.

ಭಟ್ಟರ ಹಾಡಿಗೆ ಪ್ರೇಕ್ಷಕರು ದಿಲ್ ಖುಷ್

"ದಿಲ್ಲು ಫೂಲ್ ನಹಿ, ಫುಲ್ಲು ಖಾಲಿ ಹೈ, ಚಿಟ್ಟೆ ಸಿಗ್ತಾ ಇಲ್ಲ, ಐಸಾ ಕ್ಯೂ ಹೈ" ಹಾಡಿಗೆ ಪಡ್ಡೆಗಳು ಹುಚ್ಚೆದ್ದು ಕುಣಿದಿದ್ದಾರೆ. ತಮ್ಮದೇ ಆಗಲಿ, ಬೇರೆಯವರದೇ ಆಗಲಿ ಅಲ್ಲಿ ಭಟ್ಟರ ಸಾಹಿತ್ಯವಿದ್ದ ಮೇಲೆ ಕೇಳಬೇಕೆ?

ಪ್ರಣಯಾಭಿನಯದಲ್ಲೂ ಶಿವರಾಜ್ ಮಿಂಚಿಂಗ್

ಕೈಯಲ್ಲಿ ಲಾಂಗು ಹಿಡಿದರೆ ಶಿವಣ್ಣಗೆ ಶಿವಣ್ಣನೇ ಸಾಟಿ. ಆದರೆ, ಕೈಯಲ್ಲಿ ಗುಲಾಬಿ ಹಿಡಿದಾಗ ಕೂಡ ಶಿವರಾಜ್ ಕುಮಾರ್ ಅಷ್ಟೇ ತನ್ಮಯತೆಯಿಂದ ಅಭಿನಯಿಸಿದ್ದಾರೆ. ಶಿವ ಮತ್ತು ರಾಧಿಕಾ ನಡುವೆ ಪ್ರೇಮ ಅರಳುವ ದೃಶ್ಯ ಹೃದಯ ಬೆಚ್ಚಗಾಗುವಂತೆ ಮೂಡಿಬಂದಿದೆ.

ಮರಳಿದ ಶಿವರಾಜ್ ಕುಮಾರ್ ಮ್ಯಾಜಿಕ್

ಕಳೆದ ಕೆಲವರ್ಷಗಳಿಂದ ಕಳೆದುಕೊಂಡಿದ್ದ ಮ್ಯಾಜಿಕ್ಕನ್ನು ಶಿವರಾಜ್ ಕುಮಾರ್ ಅವರು ಕಡ್ಡಿಪುಡಿಯಿಂದ ಮರಳಿ ಪಡೆದಿದ್ದಾರೆ ಎಂಬ ಮಾತು ಚಿತ್ರಮಂದಿರಗಳಿಂದ ಕೇಳಿಬಂದಿದೆ. ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆಗಳಲ್ಲಿ ಟಿಕೆಟ್‌ಗಳು ಕಾಳದಂಧೆಯಲ್ಲಿ ಮಾರಾಟವಾಗುತ್ತಿವೆಯಂತೆ.

ಬೆಳಗಿನ ಆಟ ಬೆಳಿಗ್ಗೆ 4ಕ್ಕೇ ಶುರು!

ವೇಶ್ಯೆ ಪಾತ್ರದಲ್ಲಿ ನಟಿಸುತ್ತಿರುವ ಐಂದ್ರಿತಾ ರೇ ಮಾದಕವಾಗಿ ಕಂಡಿರುವುದು ಮತ್ತು ಬೆತ್ತಲೆ ಬೆನ್ನನ್ನು ಪ್ರದರ್ಶಿಸಿರುವುದು ಜನರ ಆಕರ್ಷಣೆಗೆ ಕಾರಣವಾಗಿದೆಯಾ? ಹೊಸಪೇಟೆಯಲ್ಲಿ ಬೆಳಗಿನ ಆಟ 4ಕ್ಕೆ ಆರಂಭವಾದರೆ, ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಟಿಕೆಟ್ ನೀಡಲು ಆರಂಭಿಸಿದ್ದಾರೆ.

English summary
Kaddipudi Kannada movie directed by Duniya Suri has received excellent response from the Shivarajkumar fans all over Karnataka. It has got big opening on first day morning show. Radhika Pandit, Rangayana Raghu and Ananth Nag are in the lead.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X