»   » ಚಿತ್ರ ವಿಮರ್ಶೆ: 'ಚಡ್ಡಿದೋಸ್ತ್' ಸಿನಿಮಾ ಹೇಗಿದೆ?

ಚಿತ್ರ ವಿಮರ್ಶೆ: 'ಚಡ್ಡಿದೋಸ್ತ್' ಸಿನಿಮಾ ಹೇಗಿದೆ?

By: ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ರಂಗಾಯಣ ರಘು ಹಾಗೂ ಸಾಧು ಕೋಕಿಲಾ ಇದೇ ಮೊದಲ ಬಾರಿ ಒಟ್ಟಿಗೆ ನಟಿಸಿರುವ ಚಿತ್ರವಿದು. ಇಬ್ಬರು ಕಾಮಿಡಿ ಹೀರೋಗಳೆಂದರೆ ಪ್ರೇಕ್ಷಕರ ನಿರೀಕ್ಷೆಗಳು ಡಬಲ್ ಆಗಿರುತ್ತವೆ. ಆ ನಿರೀಕ್ಷೆಗಳಿಗೆ ನೀರಿಗಿಂತಲೂ ಹೆಚ್ಚಾಗಿ ಬೀರೆರೆದು ಕಿಕ್ ಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

ಇದು ಸಂಪೂರ್ಣ ಹಾಸ್ಯಪ್ರಧಾನ ಚಿತ್ರವಾದ ಕಾರಣ ಪ್ರೇಕ್ಷಕರು ಫುಲ್ ಊಟ ಬೆಂಕಿಪಟ್ಣ ನಿರೀಕ್ಷಿಸಿ ಹೋಗುವುದು ತಪ್ಪಾಗುತ್ತದೆ. ಇಲ್ಲಿ ಫುಲ್ ಊಟ ಇಲ್ಲದಿದ್ದರೇನಂತೆ ಎರಡು ತರಹದ ಉಪ್ಪಿನಕಾಯಿಗಳಂತೂ ಇವೆ. ಪ್ರೇಕ್ಷಕರಿಗೆ ಕೊಂಚ ಭಿನ್ನವಾದಂತಹ ರುಚಿ ಸಿಗುತ್ತದೆ.

ಉಪ್ಪಿನಕಾಯಿಯೇನೋ ರುಚಿಯಾಗಿದೆ. ಆದರೆ ಊಟದಂತೆ ಹೊಟ್ಟೆ ತುಂಬಲ್ಲವಲ್ಲಾ. ಇಲ್ಲೂ ಅದೇ ಆಗಿದೆ. ಚಿತ್ರದಲ್ಲಿ ಪುಷ್ಕಳವಾಗಿ ಹಾಸ್ಯರಸಾಯನ ಇದೆ. ಆದರೆ ಪ್ರೇಕ್ಷಕರಿಗೆ ಹೊಟ್ಟೆ ತುಂಬಿದ ಅನುಭವ ಆಗಲ್ಲ. ಚಿತ್ರದಲ್ಲಿ ಸಂಭಾಷಣೆ ಪಾಲು ಜಾಸ್ತಿಯಾಗಿದ್ದು ಬಹುತೇಕ ಕಥೆಯ ಪಾಲನ್ನು ಕಬಳಿಸಿದೆ. ಕಡೆಕಡೆಗೆ ಚಿತ್ರ ಹಾಸ್ಯೋತ್ಸವದಂತೆ ಭಾಸವಾಗುತ್ತದೆ.

Rating:
2.5/5

ಚಿತ್ರ: ಚಡ್ಡಿದೋಸ್ತ್
ನಿರ್ಮಾಣ: ಎಸ್ಆರ್ಎಸ್ ಮೀಡಿಯಾ ವಿಷನ್
ಕಥೆ, ಚಿತ್ರಕಥೆ, ನಿರ್ದೇಶನ: ಪಿ.ಸಿ.ಶೇಖರ್
ಸಂಭಾಷಣೆ: ಜಿ.ನಟರಾಜ್
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಕುಮಾರನ್
ಸಂಕಲನ: ಶರವಣನ್
ಪಾತ್ರವರ್ಗ: ರಂಗಾಯಣ ರಘು, ಸಾಧುಕೋಕಿಲ, ಅಶ್ವಿನಿಗೌಡ, ರೂಪಶ್ರೀ, ಅವಿನಾಶ್, ಮಿಮಿಕ್ರಿ ದಯಾನಂದ್, ಮಿತ್ರ, ಅಮಿತ್, ಅಶೋಕ್ ಮುಂತಾದವರು.

ಕಥೆಗೆ ಎಳ್ಳುನೀರು ಬಿಟ್ಟ ನಿರ್ದೇಶಕರು

ಇನ್ನು ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್ ಅವರಿಗೆ ಇದು ಮೂರನೇ ಚಿತ್ರ. ಮೊದಲೆರಡು ಚಿತ್ರಗಳಿಗೆ (ನಾಯಕ, ರೋಮಿಯೋ) ಹೋಲಿಸಿದರೆ ಈ ಬಾರಿ ಅವರು ಸಂಪೂರ್ಣ ಹಾಸ್ಯಕ್ಕೆ ತಮ್ಮ ಒತ್ತನ್ನು ಕೊಟ್ಟಿದ್ದು ಕಥೆಗೆ ಎಳ್ಳುನೀರು ಬಿಟ್ಟಿದ್ದಾರೆ.

ಅಷ್ಟ ದಿಕ್ಕುಗಳಲ್ಲೂ ಸಾಗುವ ಕಥೆ

ಇಬ್ಬರು 'ಚಡ್ಡಿದೋಸ್ತ್'ಗಳು ಬಹಳ ಸುದೀರ್ಘ ಸಮಯದ ಬಳಿಕ ಭೇಟಿಯಾದಾಗ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು. ಬೆಂಗಳೂರಿನಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿರುವ ಖದೀಮ್ ಗೆ (ಸಾಧು ಕೋಕಿಲಾ) ತನ್ನ ಚಡ್ಡಿದೋಸ್ತ್ ರಂಗಣ್ಣ (ರಂಗಾಯಣ ರಘು) ಸಿಕ್ಕು ಅಲ್ಲಿಂದ ಕಥೆ ಅಷ್ಟ ದಿಕ್ಕುಗಳಲ್ಲೂ ಸಾಗುತ್ತದೆ.

ಚಾಕೋಲೇಟ್ ಹೀರೋಗಳಲ್ಲದಿದ್ದರೂ...

ಇಬ್ಬರೂ ಚಾಕೊಲೇಟ್ ಹೀರೋಗಳಲ್ಲದಿದ್ದರೂ ಇಬ್ಬರಿಗೂ ಹುಡುಗಿಯರು ಸಿಗ್ತಾರೆ. ಒಬ್ಬ ಕಳ್ಳ, ಇನ್ನೊಬ್ಬ ಧಡಿಯ. ಇಂಥಹರ ಬುಟ್ಟಿಗೆ ಇಬ್ಬರು ಹುಡುಗಿಯರು ಹೇಗೆ ಬೀಳುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಿ ಸಾಧ್ಯವಾದರೆ ಆನಂದಿಸಿ.

ಸೆಂಟಿಮೆಂಟ್ ನಲ್ಲೂ ಹೃದಯ ಕದಿಯುತ್ತಾರೆ

ಸಾಧು ಕೋಕಿಲಾಗೆ ಜೋಡಿಯಾಗಿ ರೂಪಶ್ರೀ ಇದ್ದರೆ, ರಂಗಾಯಣ ರಘುಗೆ ಅಶ್ವಿನಿಗೌಡ ಜೋಡಿ. ಬಡ್ದಿ ವಸೂಲಿ ಮಾಡುವ ಬಡ್ಡಿ ಮಗಳೂ ಸಂಧ್ಯಾ ಪಾತ್ರಕ್ಕೆ ರೂಪಶ್ರೀ ಅಸಲು ಬಡ್ಡಿ ಸಮೇತ ನ್ಯಾಯ ಸಲ್ಲಿಸಿದ್ದಾರೆ. ವಿಚ್ಛೇದಿತೆಯಾಗಿ ಭಗ್ನ ಪ್ರೇಮಿಯಾಗಿ ಅಶ್ವಿನಿಗೌಡ ಅವರು ಕಣ್ಮನ ಸೆಳೆಯುತ್ತಾರೆ. ಅಲ್ಲಲ್ಲಿ ರಂಗಣ್ಣ, ಖದೀಮ್ ಸೆಂಟಿಮೆಂಟ್ ನಲ್ಲೂ ಹೃದಯ ಕದಿಯುತ್ತಾರೆ.

ಉಳಿದ ಕಲಾವಿದರ ಆಟ ನಡೆದಿಲ್ಲ

ಇನ್ನು ರಂಗಣ್ಣನ ಮಾವ ವೆಂಕಟೇಶ್ ಪಾತ್ರದಲ್ಲಿ ಅವಿನಾಶ್ ಅವರದು ಕೇವಲ ಅರಚುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಉಳಿದಂತೆ ಮಿತ್ರ, ಅಮಿತ್, ಅಶೋಕ್ ಶರ್ಮಾ ಕಾಮಿಡಿ ಇದ್ದರೂ ರಂಗಣ್ಣ, ಖದೀಮ್ ಹಾಸ್ಯದ ಮುಂದೆ ಅವರ ಆಟ ನಡೆದಿಲ್ಲ. ಸುಗಂಧರಾಜ್ ಪಾತ್ರದಲ್ಲಿ ದುರ್ಗಂಧ ಬೀರುತ್ತಾ ಮಿಮಿಕ್ರಿ ದಯಾನಂದ್ ನಗಿಸುತ್ತಾರೆ.

ಅರ್ಜುನ್ ಜನ್ಯ ಸಂಗೀತ ಪರ್ವಾಗಿಲ್ಲ

ಅರ್ಜುನ್ ಜನ್ಯ ಅವರ ಸಂಗೀತದ ಒಂದು ಹಾಡು "ಲವ್ ಒಂದ್ಸರಿ ಆಗೋಗ್ಬಿಟ್ರೆ ಕ್ಯಾನ್ಸರ್ ಬಂದಂಗೆ..." ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ನಟರಾಜ್ ಅವರ ಸಂಭಾಷಣೆಯಲ್ಲಿ ಸಾಕಷ್ಟು ಡಬಲ್ ಮೀನಿಂಗ್ ಇಣಿಕಿ ಅಲ್ಲಲ್ಲಿ ಕೆಲವು ಪದಗಳು ಮ್ಯೂಟ್ ಆಗಿವೆ.

ಚಿತ್ರದ ಒಂದೆರಡು ಡೈಲಾಗ್ ಗಳು

ಸ್ಯಾಂಪಲ್ ಗೆ ಕೆಲವು ಡೈಲಾಗ್ ಗಳು...ಎದೆಯಲ್ಲಿ ಹಾಲಿಟ್ಟುಕೊಂಡು ನಂದಿನಿ ಹಾಲು ಹುಡುಕೋ ಹಂಗಾಯ್ತಲ್ಲಪ್ಪಾ ನನ್ನ ಪಾಡು...ನಾನ್ ಹೊಡೆದಾ ಅಂದ್ರೆ ಗೂಗಲ್ ಸರ್ಚ್ ನಲ್ಲಿ ಹುಡುಕಿದ್ರೂ ಕೂದಲೂ ಸಿಗಲ್ಲ.

ನೋಡುವ ಆಯ್ಕೆ ನಿಮಗೇ ಬಿಟ್ಟದ್ದು

ಕುಮಾರನ್ ಅವರ ಛಾಯಾಗ್ರಹಣ ಹಾಗೂ ಶರವಣನ್ ಅವರ ಸಂಕಲನ ಓಕೆ. ಒಟ್ಟಾರೆಯಾಗಿ ಟೈಂ ಪಾಸ್ ಸಿನಿಮಾ. ಮನರಂಜನೆ ನಿರೀಕ್ಷಿಸಿ ಹೋದವರಿಗೆ ಸಂಪೂರ್ಣ ಸಮಾಧಾನ ಸಿಗದಿದ್ದರೂ ಒಂದಷ್ಟು ರಿಲ್ಯಾಕ್ಸ್ ಅಂತೂ ಆಗುತ್ತಾರೆ. ನೋಡುವ ಆಯ್ಕೆ ನಿಮಗೇ ಬಿಟ್ಟಿದ್ದು.

English summary
Kananda film Chaddi Dosth review. This movie is definitely for those who want a change in their routine life by laughing for a couple of minutes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada