»   » 'ತಿಥಿ' ಕನ್ನಡ ಚಿತ್ರರಂಗಕ್ಕೆ ಸಿಕ್ಕ ರಾಗಿಮುದ್ದೆ, ಹೊಟ್ಟೆಗೆ ಮೋಸವಿಲ್ಲ.!

'ತಿಥಿ' ಕನ್ನಡ ಚಿತ್ರರಂಗಕ್ಕೆ ಸಿಕ್ಕ ರಾಗಿಮುದ್ದೆ, ಹೊಟ್ಟೆಗೆ ಮೋಸವಿಲ್ಲ.!

By: ಮ.ಪ
Subscribe to Filmibeat Kannada

ಇಲ್ಲಿ ಅಬ್ಬರದ ಡೈಲಾಗ್ ಗಳಿಲ್ಲ, ನಾಯಕನ ಮೆರೆದಾಟವಿಲ್ಲ, ಐಟಂ ಸಾಂಗ್ ಇಲ್ಲ, ಗ್ಲಾಮರ್ ಮೊದಲೇ ಇಲ್ಲ. ಹೊಡೆದಾಟದ ದೃಶ್ಯಗಳನ್ನು ಕೇಳಲೇ ಬೇಡಿ...ಕಿವಿಯನ್ನು ಅಟ್ಟುವ ಸಂಗೀತವಿಲ್ಲ...ಯಾವ ಹೆಸರಾಂತ ಸ್ಟಾರ್ ನಟರಿಲ್ಲ..ಆದರೂ ಸಿನಿಮಾ ಇಷ್ಟವಾಗುತ್ತದೆ. ಮನಕ್ಕೆ ಹತ್ತಿರವಾಗುತ್ತದೆ.

ತಿಥಿಯ ನಿರೂಪಣೆಯೇ ಅಂಥದ್ದು. ಮೂರು ಪೀಳಿಗೆಗಳ ಕಥಾ ಹಂದರವನ್ನು ನಿರ್ದೇಶಕ ರಾಮ್ ರೆಡ್ಡಿ ಕಾಲಕ್ಕೆ ಹೊಂದುವಂತೆ ಕಟ್ಟಿಕೊಡುತ್ತಾ ಸಾಗುತ್ತಾರೆ. ಆಸ್ತಿ, ಮನೆ ಏನೂ ಬೇಡ ಎನ್ನುವ ಗಡ್ಡಪ್ಪ, ಹಣ ಬೇಕು ಅದಕ್ಕಾಗಿ ಬದುಕಿರುವ ಅಪ್ಪನನ್ನು ಸಾಯಿಸಲು ಹಿಂಜರಿಯದ ಮಗ. ತಮ್ಮಣ್ಣ, ಅಮಲು, ಜೂಜು, ಅಪ್ಪುಗೆ, ವಾಂಛೆ, ಎಲ್ಲ ಅರಿಷಡ್ವರ್ಗಗಳು ಬೇಕೆನ್ನುವ ಮೊಮ್ಮಗ ಅಭಿ. ['ಫಿಲ್ಮಿಬೀಟ್ ಕನ್ನಡ ವಿಶೇಷ'; 'ಅತ್ಯುತ್ತಮ ಪೋಷಕ ನಟಿ' ಪೂಜಾ ಸಂದರ್ಶನ]


Kannada Cinema 'Thithi' review opinion by Madhusoodhan Hegde

ಸೆಂಚುರಿ ಗೌಡರ ಕಾಮೆಂಟರಿ ಚಿತ್ರಕ್ಕೆ ನೀಡುವ ಆರಂಭವೇ ಪ್ರೇಕ್ಷಕರ ಮೇಲೆ ಪ್ರಭುತ್ವ ಸಾಧಿಸಿಬಿಡುತ್ತದೆ. ಗೌಡರ ಸಾವು ಮತ್ತು ಅವರ ತಿಥಿಯ ನಡುವಿನ ಕಥೆಯೇ ತಿಥಿ.


ಮಂಡ್ಯದ ಹಳ್ಳಿ ಸೊಗಡು, ಬೈಕ್ ಮೇಲೆ ನಾಲ್ಕು ಜನ ಹೋಗುವುದು, ಕೆಟ್ಟು ಹೋಗುವ ವಾಟರ್ ಪಂಪ್, ಜೂಜಾಟ, ಸಾರಾಯಿ ಗಮ್ಮತ್ತು, ಪುಡಿಗಾಸಿಗಾಗಿ ಮರಳು ಗಣಿಗಾರಿಕೆ, ನದಿಯ ಒಡಲು ಬರಿದು, ಮರ ಕಳ್ಳಸಾಗಾಟ, ಕಳ್ಳತನ, ಬಡತನ, ಮೀಟರ್ ಬಡ್ಡಿ ದಂಧೆ, ಮಳೆ ಕೊರತೆ, ಧಾರ್ಮಿಕ ಕಟ್ಟುಪಾಡಿಗೆ ಸಾಲ, ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ, ಹಣ ನೀಡಿದರೆ ಯಾವುದೆ ಪ್ರಮಾಣ ಪತ್ರ ಸಾಧ್ಯ ಎಂಬ ವಾಸ್ತವ, ಉಳ್ಳವರಿಗೆ ಮಾರಾಟವಾಗುತ್ತಿರುವ ರೈತರ ಭೂಮಿ, ಗ್ರಾಮೀಣ ಭಾಗದಲ್ಲಿ ಹೆಚ್ಚಿಕೊಂಡ ಮದ್ಯದ ಅಂಗಡಿಗಳು [ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]


ಇಷ್ಟೊಂದು ವಿಷಯಗಳನ್ನು ಎಲ್ಲಿಯೂ ಅಡಚಣೆ ಬಾರದಂತೆ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕತೆ ಹಣೆದ ಈರೇಗೌಡರಿಗೊಂದು ಸಲಾಂ...!


Kannada Cinema 'Thithi' review opinion by Madhusoodhan Hegde

ತನ್ನ ಜೀವನ ಮತ್ತು ಮದುವೆ ಕತೆಯನ್ನು ಗಡ್ಡಪ್ಪ ವಾಚನ ಮಾಡುವಾಗ ಚಿತ್ರಮಂದಿರದಲ್ಲಿ ನಿಶಬ್ಧ ಆವರಿಸುತ್ತದೆ. ಅಪ್ಪ ಮಗನ ಮಾತುಗಳು ವ್ಯಂಗ್ಯದ ಮುಖಾಂತರ ನಗೆ ಹರಿಸಿದರು ನಮ್ಮ ಜೀವನಕ್ಕೂ ಹತ್ತಿರ ಅಲ್ಲವೇ? ಎಂದನಿಸುತ್ತದೆ.


ಆರ್ಭಟಗಳಿಲ್ಲದೇ ಸಾಗುವ ಸಿನಿಮಾದ ಮಧ್ಯಂತರ ಬಂದಿದ್ದೆ ಗೊತ್ತಾಗುವುದಿಲ್ಲ. ಪ್ರೇಕ್ಷಕ ಪ್ರಭುವಿಗೆ ಇದು ನಮ್ಮ ಬದುಕಿನಲ್ಲಿ ಕಂಡ ಪಾತ್ರಗಳೆ, ನಾವು ಇದರಲ್ಲಿ ಯಾವ ಪಾತ್ರ ಎಂಬ ಅರಿಕೆ ಮತ್ತು ಪ್ರಶ್ನೆ ಏಕಕಾಲಕ್ಕೆ ಮೂಡುತ್ತದೆ.


ರೀಮೇಕ್, ಹೀರೋಯಿಸಂ, ಸ್ವಂತ ಕತೆಗಳಿಲ್ಲದೆ ಒದ್ದಾಡುತ್ತಿದ್ದ ಕನ್ನಡ ಚಿತ್ರರಂಗದಲ್ಲಿನ ಪ್ರಯತ್ನ ಸದಭಿರುಚಿಯ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.


ತಿಥಿ ಒಂಥರಾ ರಾಗಿ ಮುದ್ದೆ ಇದ್ದಂಗೆ. ಮಸಾಲೆಗಳಿಲ್ಲ, ಅಲಂಕಾರವಿಲ್ಲ. ಆದರೆ ಆರೋಗ್ಯಕ್ಕೆ ಉತ್ತಮ. ಮಂದಿರಕ್ಕೆ ಕಾಲಿಟ್ಟರೆ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಮೋಸವಿಲ್ಲ. ಕಡಿಮೆ ಹಣದಲ್ಲಿ ಆರೋಗ್ಯಯುಕ್ತ ಊಟ.

English summary
Kannada Cinema 'Thithi' is out and out entertainer. Even though it lacks commercial elements, 'Thithi' is engaging.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada