For Quick Alerts
  ALLOW NOTIFICATIONS  
  For Daily Alerts

  ACT 1978 ಚಿತ್ರ ವಿಮರ್ಶೆ: ಈ ಸಿನೆಮಾ ತಪ್ಪದೇ ನೋಡಿ

  By ಭಾಸ್ಕರ ಬಂಗೇರ
  |

  ''ನಾವು ಎರಡು ವ್ಯವಸ್ಥೆಯ ಒಳಗಡೆ ಬದುಕುತ್ತಿದ್ದೇವೆ ಸರ್''ಎನ್ನುತ್ತದೆ ಮುಖ್ಯ ಪಾತ್ರ. ಸಂಪೂರ್ಣ ಸಿನೆಮಾ ಈ ಒಂದು ಸಾಲಿನ ಮೇಲೆ ನಿಂತಿದೆ. ಹಲವು ಆಯಾಮಗಳಲ್ಲಿ ಟಿಸಿಲೊಡೆಯುತ್ತ ಆ ಒಂದು ಮಾತು ಎತ್ತುವ ಪ್ರಶ್ನೆಗಳು ನಮ್ಮದೇ ಆಗಿರುತ್ತವೆ, ಕೆಲವೊಮ್ಮೆ ಪ್ರಶ್ನೆ ನಮಗೆ ಆಗಿರುತ್ತದೆ.

  Recommended Video

  Act 1978 : ಮನಸಾರೆ ಒಪ್ಪಿಕೊಳ್ಳಬೇಕು ಮಂಸೋರೆ ಈ ಸಾಹಸ | Act 1978 Review | Filmibeat Kannada

  ''ಆಕ್ಟ್ 1978'' ಮನರಂಜನೆಯೇ ಪರಮೋದ್ದೇಶ ಎಂದುಕೊಂಡು ಮಾಡಿರುವ ಸಿನೆಮಾವಲ್ಲ. ಹಾಗಂತ ರಂಜನೆಯೇ ಇಲ್ಲದೆ ಬರಿ ಬೋಧನೆ ತುಂಬಿರುವ ಸಿನೆಮಾ ಕೂಡ ಇದಲ್ಲ. ಕಥೆಯೊಳಗೆ ಸ್ವಾಭಾವಿಕ ಎನಿಸುವಂತೆ ಒಂದು ಕಮರ್ಷಿಯಲ್ ಸಿನೆಮಾಗೆ ಬೇಕಾದ ಎಲ್ಲ ಭಾವಗಳನ್ನು ಪೋಣಿಸಿ ಚಿತ್ರಕಥೆಯನ್ನು ನೇಯಲಾಗಿದೆ.

  Rating:
  4.0/5

   ಮಾತು ಸೋತ ಈ ಸಮಾಜದ ಪ್ರತಿನಿಧಿ ಆ ಪಾತ್ರ

  ಮಾತು ಸೋತ ಈ ಸಮಾಜದ ಪ್ರತಿನಿಧಿ ಆ ಪಾತ್ರ

  ಸಿನೆಮಾದಲ್ಲಿ ಬೀಸು ಸುರೇಶ ಅಭಿನಯದ ಒಂದು ಪಾತ್ರವಿದೆ. ಮಾತು ಸೋತ ಈ ಸಮಾಜದ ಪ್ರತಿನಿಧಿ ಆ ಪಾತ್ರ. ಇಲ್ಲಿ ಸರ್ಕಾರೀ ಕಚೇರಿಯ ಅವ್ಯವಸ್ಥೆಯ ವಿರುದ್ದದ ಬಂಡಾಯ ಒಂದು ಪ್ರತಿಮೆಯಷ್ಟೇ. ನಾವು ಕಟ್ಟಿಕೊಂಡ ಸಮಾಜ ಎನ್ನುವ ನಂಬಿಕೆಯ ಒಳಗಡೆ ಎಲ್ಲ ಪದರಗಳಲ್ಲೂ ಹೀಗೆ ಮಾತು ಸೋತವರ ಹುಯಿಲಿದೆ.

  Act-1978 Review: ಹಲವು ಭಾವಗಳ ಹೋರಾಟದ ಕಥನAct-1978 Review: ಹಲವು ಭಾವಗಳ ಹೋರಾಟದ ಕಥನ

  ಮಾತು ಹಾಗು ಅದಕ್ಕೆ ಅಂಟಿಕೊಳ್ಳುವ ರಕ್ತದಾಹಿ ಚಪ್ಪಾಳೆಗಳ ಸದ್ದಿನ ನಡುವೆ ಅವೆಲ್ಲ ಕೇಳಿಸುತ್ತಿಲ್ಲವಷ್ಟೇ. ಕೇಳಿಸಿಕೊಳ್ಳುವ ಒಳಗಿವಿ ಇದ್ದರೆ "ಆಕ್ಟ್ 1978" ಸಿನೆಮಾದ ಬಹುತೇಕ ಪಾತ್ರಗಳು ಮಾತುಗಳನ್ನು ಎದೆಗೆ ಸಿಕ್ಕಿಸಿ ವ್ಯಂಗ್ಯದ ನಗೆಯಾಡುತ್ತವೆ.

   ಈ ಸಿನೆಮಾದ ಒಳಗಡೆ ಬಂಡಾಯವಿದೆ

  ಈ ಸಿನೆಮಾದ ಒಳಗಡೆ ಬಂಡಾಯವಿದೆ

  ವ್ಯವಸ್ಥೆಯ ವಿರುದ್ಧದ ಪ್ರಶ್ನೆಗಳಿಗೆ, ಲೇವಡಿಗೆ, ಬಂಡಾಯಕ್ಕೆ ಇತಿಹಾಸದುದ್ದಕ್ಕೂ ಕುರುಹುಗಳು ಸಿಗುತ್ತವೆ. ಶಿಷ್ಟಾಚಾರ, ಸಂಪ್ರದಾಯ, ಧರ್ಮ, ಕಾನೂನು ಎನ್ನುವ ಅಸ್ತ್ರ ಬಳಸಿ ಇವೆಲ್ಲವುಗಳನ್ನು ಹತ್ತಿಕ್ಕಲಾಯಿತು. ತನ್ನದೇ ಮಿತಿಯ ಒಳಗಡೆ ಈ ಸಿನೆಮಾದ ಒಳಗಡೆ ಬಂಡಾಯವಿದೆ. ಹಾಗು ಅದರ ಧ್ವನಿ ದೊಡ್ಡದು. ಕಣ್ಣ ರೆಪ್ಪೆಗಳ ನಾಲ್ಕು ಮಿಲನಕ್ಕಷ್ಟೇ ಸಿಗುವ ಗಾಂಧೀ ವೇಷದ ವ್ಯಕ್ತಿ ನಮ್ಮ ವ್ಯವಸ್ಥೆಯ ಗಲೀಜನ್ನು ಮಾತೆ ಆಡದೆ ಹೀಯಾಳಿಸುವುದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಗಟ್ಟಿ ನಿರ್ದೇಶಕರು ಮಾತ್ರ ಚಿತ್ರಕಥೆಯ ನಡುವಲ್ಲಿ ಇಂತಹ ಪಾತ್ರಗಳನ್ನು ನೆಡಬಲ್ಲರು.

   ಪ್ರೇಕ್ಷಕರ ನಿರೀಕ್ಷೆಗೆ ಯಾವುದೇ ಭಂಗ ಉಂಟಾಗಲ್ಲ

  ಪ್ರೇಕ್ಷಕರ ನಿರೀಕ್ಷೆಗೆ ಯಾವುದೇ ಭಂಗ ಉಂಟಾಗಲ್ಲ

  ಹರಿವು ಹಾಗು ನಾತಿಚರಾಮಿ ಸಿನೆಮಾಗಳ ಮೂಲಕ ರಾಷ್ಟ್ರಪ್ರಶಸ್ತಿಯ ಗೌರವ ಸ್ವೀಕರಿಸಿದ ನಿರ್ದೇಶಕ ಮಂಸೋರೆ ಪ್ರೇಕ್ಷಕರ ನಿರೀಕ್ಷೆಗೆ ಯಾವುದೇ ಭಂಗ ಉಂಟುಮಾಡುವುದಿಲ್ಲ. ವಸ್ತುವಿನ ಆಯ್ಕೆಯಿಂದ ಹಿಡಿದು ಕನ್ನಡ ಚಿತ್ರರಂಗದ ಬಹುತೇಕ ಪೋಷಕ ಪಾತ್ರವರ್ಗವನ್ನು ತೆರೆಯ ಮೇಲೆ ದುಡಿಸಿಕೊಂಡಿರುವ ರೀತಿ ಎಲ್ಲವು ಶ್ಲಾಘನೀಯ. ಚತುರ ಬರಹಗಾರರಾದ ಟಿಕೆ ದಯಾನಂದ್ ಹಾಗು ವೀರೇಂದ್ರ ಮಲ್ಲಣ್ಣ ಅವರ ಪಕ್ವ ಕೆಲಸ ಸಿನೆಮಾಡ ಬಿಗಿ ನಿರೂಪಣೆಗೆ ಸಹಾಯ ಮಾಡಿದೆ.

   ಯಜ್ಞ ಶೆಟ್ಟಿ ವೃತ್ತಿ ಬದುಕಿನ ಶ್ರೇಷ್ಠ ಸಿನೆಮಾ

  ಯಜ್ಞ ಶೆಟ್ಟಿ ವೃತ್ತಿ ಬದುಕಿನ ಶ್ರೇಷ್ಠ ಸಿನೆಮಾ

  ಯಜ್ಞ ಶೆಟ್ಟಿ ವೃತ್ತಿ ಬದುಕಿನ ಶ್ರೇಷ್ಠ ಸಿನೆಮಾವಿದು. ವ್ಯಂಗ್ಯದ ನಗೆ, ವ್ಯವಸ್ಥೆಯ ವಿರುದ್ಧದ ಸಿಟ್ಟು, ಹತಾಶೆ, ನೋವು ಹಾಗು ಅಸಹಾಯಕತೆ ಎಲ್ಲದರ ಭಾವಾಭಿವ್ಯಕ್ತಿಯಲ್ಲೂ ಯಜ್ಞ ಶೆಟ್ಟಿ ಗೆದ್ದು ಬೀಗುತ್ತಾರೆ. ಹೆಸರು ಬರೆಯುತ್ತ ಹೋದರೆ ಒಂದು ಪ್ಯಾರ ಆಗುವಷ್ಟು ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ.

   ಚಿತ್ರಮಂದಿರದಲ್ಲಿ ಸಿನೆಮಾ ನೋಡಲು ಒಳ್ಳೆಯ ಆಯ್ಕೆ

  ಚಿತ್ರಮಂದಿರದಲ್ಲಿ ಸಿನೆಮಾ ನೋಡಲು ಒಳ್ಳೆಯ ಆಯ್ಕೆ

  ಕೊರೊನ ಕಾಲದಲ್ಲಿ ಚಿತ್ರಮಂದಿರಕ್ಕೆ ಮತ್ತೆ ಪ್ರೇಕ್ಷಕರು ಬರುತ್ತಾರೋ ಇಲ್ಲವೋ ಎನ್ನುವ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಬಂದೆ ಬರುತ್ತಾರೆ ಎಂದು ಸಿನೆಮಾ ಬಿಡುಗಡೆ ಮಾಡಿರುವ ಚಿತ್ರತಂಡವನ್ನು ಬೆಂಬಲಿಸುವ ಅಗತ್ಯವಿದೆ. OTT ಗೆ ಸಿನೆಮಾ ಮಾರಿಕೊಂಡು ನಿರ್ಮಾಪಕರು ಸುಮ್ಮನಿರಬಹುದಿತ್ತು. ಆದರೆ ಅವರು ಬೆಳ್ಳಿಪರದೆಯ ಮೇಲೆ ತಮ್ಮ ಶ್ರಮವನ್ನು ತೋರಿಸಲು ಬಂದಿದ್ದಾರೆ. ಇದು ಕೇವಲ ಮನೆಯಲ್ಲೇ ಕುಳಿತು ತೋರಿಸುವ ನೈತಿಕ ಬೆಂಬಲವಷ್ಟೇ ಆಗಬಾರದು. ಕುಟುಂಬ ಸಮೇತರಾಗಿ ನೋಡಬಹುದಾದ ಈ ಸಿನೆಮಾ ಮತ್ತೆ ಚಿತ್ರಮಂದಿರದಲ್ಲಿ ಸಿನೆಮಾ ನೋಡಲು ಒಂದು ಒಳ್ಳೆಯ ಆಯ್ಕೆ.

  English summary
  Kannada Film Act 1978 review by Bhaskar Bhangera. Film Act 1978 is eye opener movie directed by Mansore.
  Saturday, November 21, 2020, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X