For Quick Alerts
ALLOW NOTIFICATIONS  
For Daily Alerts

  ಅಟ್ಟಹಾಸ : ನಿಸ್ಸಂದೇಹವಾಗಿ ಒಳ್ಳೆ ಸಿನಿಮಾ

  By Rajendra
  |

  Rating:
  4.0/5
  ಇತಿಹಾಸದ ಪುಟಗಳನ್ನಿಟ್ಟುಕೊಂಡು ಒಂದು ಸುಂದರ ದೃಶ್ಯಕಾವ್ಯ ಕಟ್ಟಿಕೊಡುವುದರಲ್ಲಿ ನಿರ್ದೇಶಕ ಎ.ಎಂ.ಆರ್. ರಮೇಶ್ ಪಳಗಿರುವುದು ಚಿತ್ರದ ಉದ್ದಕ್ಕೂ ಗೊತ್ತಾಗುತ್ತದೆ. ಹಾಡು, ಐಟಂ ಹಾಡು ಇದ್ದರೆ ಚಿತ್ರ ಪರಿಣಾಮಕಾರಿಗಾಗಿ ಮೂಡಿಬರಲ್ಲ ಎಂಬ ಕಾರಣಕ್ಕೋ ಏನೋ ಅವರು ಅವನ್ನು ಸತ್ಯಮಂಗಲ ಕಾಡಿಗೆ ಬಿಟ್ಟಿರುವುದು ಗಮನಾರ್ಹ ಸಂಗತಿ.

  ಚಿತ್ರದಲ್ಲಿ ಆದಷ್ಟು ಕಮರ್ಷಿಯಲ್ ಅಂಶಗಳನ್ನು ಬದಿಗಿಟ್ಟಿರುವುದು 'ಡಾಕ್ಯುಮೆಂಟರಿ'ಯಂತೆ ಭಾಸವಾಗುತ್ತದೆ. ಆದರೆ ಎಲ್ಲೂ ಪ್ರೇಕ್ಷಕರಿಗೆ ನಿರಾಸೆಯಾಗಲ್ಲ. ಬಿಗಿ ನಿರೂಪಣೆ, ಕಣ್ಣಿಗೆ ತಂಪೆರೆಯುವ ಕಾಡಿನ ರುದ್ರರಮಣೀಯ ದೃಶ್ಯಗಳು (ವಿಜಯ್ ಮಿಲ್ಟನ್ ಛಾಯಾಗ್ರಹಣ), ಸಂದೀಪ್ ಚೌಟ ಅವರ ಹಿನ್ನೆಲೆ ಸಂಗೀತ ಮೈನವಿರೇಳಿಸುತ್ತದೆ.

  ಚಿತ್ರದ ನಿರ್ದೇಶಕ: ಎ.ಎಂ.ಆರ್. ರಮೇಶ್
  ನಿರ್ಮಾಪಕರು: ಎ.ಎಂ.ಆರ್.ರಮೇಶ್, ವಿ.ಶ್ರೀನಿವಾಸ್, ಜಗದೀಶ್ ಕಪ್ಪಣ್ಣ
  ಸಂಗೀತ: ಸಂದೀಪ್ ಚೌಟ
  ಛಾಯಾಗ್ರಹಣ: ವಿಜಯ್ ಮಿಲ್ಟನ್
  ಸಂಕಲನ: ಆಂಟನಿ
  ಪಾತ್ರವರ್ಗ: ಕಿಶೋರ್, ಅರ್ಜುನ್ ಸರ್ಜಾ, ವಿಜಯಲಕ್ಷ್ಮಿ, ರವಿ ಕಾಳೆ, ಸುರೇಶ್ ಒಬೆರಾಯ್, ಶಿಖಾ, ಸುಲಕ್ಷಣಾ, ಸಿಪಿ ಯೋಗೇಶ್ವರ್ ಮುಂತಾದವರು.

  ತಾಂತ್ರಿಕವಾಗಿ ಚಿತ್ರ ಪ್ರೌಢವಾಗಿದೆ

  ಚಿತ್ರ ಸುದೀರ್ಘ ಅನ್ನಿಸಿದರೂ ಹೆಜ್ಜೆಹೆಜ್ಜೆಗೂ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಸಂಕಲನಕಾಲ ಆಂಟನಿ ಅವರ ಕೈಚಳಕಕ್ಕೆ ಮಾರುಹೋಗಲೇಬೇಕು. ವೀರಪ್ಪನ್ ಬಾಲ್ಯದಿನಗಳ ಪ್ರಮುಖ ಘಟನೆಗಳಿಂದ ಹಿಡಿದು ಅವನ ಅಂತ್ಯದವರೆಗೂ (ಜನವರಿ 18, 1952 - ಅಕ್ಟೋಬರ್ 18, 2004) ಚಿತ್ರ ರೋಚಕವಾಗಿ ಸಾಗಿಹೋಗುತ್ತದೆ.

  ಕಿಶೋರ್ ಅವರದು ಪರಕಾಯ ಪ್ರವೇಶ

  ನಟ ಕಿಶೋರ್ ಅವರ ವೃತ್ತಿಜೀವನದಲ್ಲಿ ವೀರಪ್ಪನ್ ಪಾತ್ರ ಒಂದು ಮೈಲುಗಲ್ಲಾಗಿ ನಿಲ್ಲುವ ಎಲ್ಲ ಲಕ್ಷಣಗಳು ಇವೆ. ವೀರಪ್ಪನ್ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಕವಡೆ ಹಾಕಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಡಾ.ರಾಜ್ ಅವರಿಗೆ ಕೊಳಲು ವಾದನ ಕೇಳಿಸುವುದು, ತನ್ನ ಸಾಹಸಗಳನ್ನು ಹೇಳಿ ಅವರಿಗೆ ಬೋರು ಹೊಡೆಸುವ ಸನ್ನಿವೇಶಗಳಲ್ಲಿ ಲೀಲಾಜಾಲ ಅಭಿನಯ ನೀಡಿದ್ದಾರೆ.

  ಮನಸ್ಸಿನಲ್ಲಿ ಅಚ್ಚೊತ್ತುವ ಸುರೇಶ್ ಒಬೆರಾಯ್

  ವರನಟ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ಪೋಷಿಸುವುದು ಯಾವುದೇ ಕಲಾವಿದನಿಗೂ ಸವಾಲು. ಆದರೆ ಅವರ ಆಂಗಿಕ ಅಭಿನಯ, ಅವರದೇ ಧ್ವನಿಯಲ್ಲಿ ಸುರೇಶ್ ಒಬೆರಾಯ್ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ರಾಜ್ ಅವರೊಂದಿಗೆ ಅಪಹರಣಕ್ಕೆ ಒಳಗಾಗಿದ್ದ ನಾಗಪ್ಪ ಮರಡಗಿ ಅವರೂ ಚಿತ್ರದಲ್ಲಿ ಸ್ವತಃ ಅಭಿನಯಿಸಿರುವುದು ಕಥೆಗೆ ಇನ್ನಷ್ಟು ನೈಜತೆಯನ್ನು ಕೊಡುತ್ತದೆ.

  ಅಟ್ಟಹಾಸ ಕಾಲ್ಪನಿಕವೋ ನೈಜವೋ

  ಚಿತ್ರದ ಆರಂಭದಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾರನ್ನೂ ಉದ್ದೇಶಿಸಿದ್ದಲ್ಲ ಎಂದು ಹೇಳಿದರೂ ಚಿತ್ರ ಎಲ್ಲೂ ಕಾಲ್ಪನಿಕ ಅನ್ನಿಸುವುದೇ ಇಲ್ಲ. ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ನೈಜ ಘಟನೆಗಳೇನೋ ಎಂದು ಭಾಸವಾಗುತ್ತದೆ. ಸ್ವತಃ ರಮೇಶ್ ಅವರು ಚಿತ್ರದಲ್ಲಿ ವೀರಪ್ಪನ್ ಬಲಗೈ ಬಂಟನಾಗಿ ಕಾಣಿಸಿಕೊಂಡು ಗಮನಸೆಳೆಯುತ್ತಾರೆ.

  ಮುತ್ತುಲಕ್ಷ್ಮಿ ಪಾತ್ರ ಬ್ಲರ್ ಮಾಡಿದ್ದೇಕೆ?

  ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪಾತ್ರವನ್ನು (ವಿಜಯಲಕ್ಷ್ಮಿ) ಕೆಲವು ಕಡೆ ಮಸುಕು ಮಾಡಿ ತೋರಿಸಲಾಗಿದೆ. ಆ ದೃಶ್ಯಗಳಲ್ಲಿ ಯಾವುದೇ ಅಶ್ಲೀಲತೆ ಕಾಣದಿದ್ದರೂ ಮಸುಕು ಮಾಡಿ ತೋರಿಸಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಕಡೆಗೂ ಸಿಗುವುದಿಲ್ಲ.

  ಮನಮಿಡಿಯುವ ಸುಚೇಂದ್ರ ಅಭಿನಯ

  ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸನ್ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅವರದು ಮನಮಿಡಿಯುವ ಅಭಿನಯ. ವೀರಪ್ಪನ್ ನನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ಅವನ ಗುಂಡಿಗೆ ಬಲಿಯಾಗುವ ದುರಂತ ಪಾತ್ರದಲ್ಲಿ ಮನಮಿಡಿಯುವ ಅಭಿನಯ ನೀಡಿದ್ದಾರೆ.

  ಅರ್ಜುನ್, ರವಿಕಾಳೆ ಅದ್ಭುತ ಅಭಿನಯ

  ಡಿಜಿಪಿ ವಿಜಯ್ ಕುಮಾರ್ ಆಗಿ ಅರ್ಜುನ್ ಸರ್ಜಾ ಪಾತ್ರದಲ್ಲಿ ಒಂದಾಗಿದ್ದಾರೆ. ಅವರಿಗೆ ಸಾಥ್ ನೀಡಿರುವ ರವಿಕಾಳೆ ಅವರು ಅಷ್ಟೇ ಅದ್ಭುತ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ಲಕ್ಷ್ಮಿ ರೈ ಅವರದು ಹಾಗೆ ಬಂದು ಕಾಣಿಸಿಕೊಳ್ಳುವ ಟಿವಿ ರಿಪೋರ್ಟರ್ ಪಾತ್ರ. ಸಿಪಿ ಯೋಗೇಶ್ವರ್ ಅವರು ಗಮನಸೆಳೆಯುತ್ತಾರೆ.

  'ಅಟ್ಟಹಾಸ', ಕಡೆಗೂ ಕಾಡುವ ಪ್ರಶ್ನೆಗಳು

  ಚಿತ್ರದ ನೋಡಿದ ಬಳಿಕ ಕಾಡುವ ಕೆಲವು ಪ್ರಶ್ನೆಗಳು. ವೀರಪ್ಪನ್ ಅಟ್ಟಹಾಸಕ್ಕೆ ತೆರೆ ಎಳೆಯುವಲ್ಲಿ ಕರ್ನಾಟಕಕ್ಕಿಂತಲೂ ತಮಿಳುನಾಡು ಸರ್ಕಾರವನ್ನೇ ಹೈಲೈಟ್ ಮಾಡಲಾಗಿದೆ. 'ಆಪರೇಷನ್ ಕಕೂನ್'ನಲ್ಲಿ ಆಗಿನ ಮುಖ್ಯಮಂತ್ರಿ ಜಯಲಲಿತಾ ಅವರು ನಿರ್ಣಾಯಕ ಪಾತ್ರವಹಿಸಿರುವುದು ಎದ್ದುಕಾಣುತ್ತದೆ. ಆದರೆ ಆಗಿನ ಕರ್ನಾಟಕ ಸರ್ಕಾರದ ಪಾತ್ರವೇನು ಇಲ್ಲವೇ?

  ಇದನ್ನು ಕಾಲ್ಪನಿಕ ಚಿತ್ರವೆನ್ನಲೂ ಸಾಧ್ಯವೆ?

  ಚಿತ್ರದಲ್ಲಿ ತಮಿಳುನಾಡು ಪೊಲೀಸರೇ ವೀರಪ್ಪನ್ ಅಟ್ಟಹಾಸಕ್ಕೆ ಅಂತ್ಯ ಹಾಡಿದ್ದು ಎಂಬಂತಿದೆ. ಆದರೆ ಕರ್ನಾಟಕದ ಪೊಲೀಸರ ಪಾತ್ರವೇನು ಇಲ್ಲವೇ? ಚಿತ್ರದಲ್ಲಿ ಸಮಯ, ಸಂದರ್ಭಗಳನ್ನು, ಸ್ಥಳ ಯಥಾವತ್ತಾಗಿ ಬಳಕೆಯಾಗಿವೆ. ಆದರೂ ಇದನ್ನು ಕಾಲ್ಪನಿಕ ಚಿತ್ರ ಎಂದು ಹೇಳಿರುವುದು ವಿಶೇಷ.

  ವೀರಪ್ಪನ್ ಪಾತ್ರವನ್ನು ವೈಭವೀಕರಿಸಿಲ್ಲ

  ಚಿತ್ರ ಕೇವಲ ಕಾಡುಗಳ್ಳ, ನರಹಂತಕ ವೀರಪ್ಪನ್ ಜೀವನ ಚರಿತ್ರೆಯ ಮೇಲಷ್ಟೇ ಬೆಳಕು ಚೆಲ್ಲಿಲ್ಲ, ಅವನ ಮತ್ತೊಂದು ಮುಖವನ್ನೂ ತೋರಿಸಲಾಗಿದೆ. ಚಿತ್ರದಲ್ಲಿ ವೀರಪ್ಪನ್ ಪಾತ್ರವನ್ನು ವೈಭವೀಕರಿಸಿಲ್ಲ. ಗನ್ ಹಿಡಿದವನು ಕಡೆಗೆ ಅದೇ ಗನ್ ಗೆ ತಲೆಕೊಡಬೇಕಾಗುತ್ತದೆ ಎಂಬ ಸಂದೇಶವನ್ನು ಚಿತ್ರ ಸಾರುತ್ತದೆ.

  ಮೈನವಿರೇಳಿಸುವ 'ಆಪರೇಷನ್ ಕಕೂನ್'

  'ಆಪರೇಷನ್ ಕಕೂನ್' ಚಿತ್ರಣವಂತೂ ಮೈನವಿರೇಳಿಸುತ್ತದೆ. ವೀರಪ್ಪನ್ ಆಂಬುಲೆನ್ಸ್ ನಲ್ಲಿ ಬರುವುದು. ಹೊಂಚು ಹಾಕಿ ಅವನ ಮೇಲೆ ಗುಂಡಿನ ಸುರಿಮಳೆ ಗರೆಯುವುದು ನಿಜಕ್ಕೂ ಅದ್ಭುತ. ಇದೇ ರೀತಿಯ ಸನ್ನಿವೇಶಗಳು ಚಿತ್ರದ ಉದ್ದಕ್ಕೂ ಇವೆ. ಇದೆಲ್ಲ ಕಾರಣಗಳಿಗೂ ಚಿತ್ರ ನೋಡಲೇಬೇಕು.

  English summary
  Kannada film Attahasa review. It is a must watch for suspense, thriling lovers. The story is based on the notorious forest brigand Veerappan. Kishore plays the role of Veerappan in the film, whilst featuring Arjun Sarja and Vijayalakshmi and vijayalakshmi in the lead roles.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more